ಬಾಲಿವುಡ್ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮಾಧುರಿ ದೀಕ್ಷಿತ್ ಅವರಿಗೆ ಇಂದು (ಮೇ 15) ಜನ್ಮದಿನ. ರೆಟ್ರೋ ಕಾಲದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಈ ಚೆಲುವೆಗೆ ಬೇರೆ ಯಾರೂ ಸಾಟಿ ಇಲ್ಲ. ‘ಏಕ್ ದೋ ತೀನ್..’ ಎಂದು ಕುಣಿದು, ಪಡ್ಡೆಗಳ ನಿದ್ದೆ ಕೆಡಿಸಿದ ಮಾಧುರಿ ದೀಕ್ಷಿತ್ ಅಂದು ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿದ್ದರು. ಇಂದು ಅವರು 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಎವರ್ಗ್ರೀನ್ ಸುಂದರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.
1984ರಲ್ಲಿ ಅಬೋದ್ ಸಿನಿಮಾ ಮೂಲಕ ಮಾಧುರಿ ದೀಕ್ಷಿತ್ ಅವರು ಬಾಲಿವುಡ್ಗೆ ಕಾಲಿಟ್ಟರು. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದರು. ಆಗ ಮಾಧುರಿ ವಯಸ್ಸು ಕೇವಲ 17. ನಂತರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ‘ತೇಜಾಬ್’ ಸಿನಿಮಾ ಮೂಲಕ. ಆ ಚಿತ್ರದ ‘ಏಕ್ ದೋ ತೀನ್..’ ಹಾಡು ಸೂಪರ್ ಹಿಟ್ ಆಯಿತು. ಆ ಮೂಲಕ ಮಾಧುರಿ ದೀಕ್ಷಿತ್ ದೇಶಾದ್ಯಂತ ಖ್ಯಾತಿ ಗಳಿಸಿದರು. ಸಿನಿಪ್ರೇಮಿಗಳಿಗೆ ಇಂದಿಗೂ ಆ ಹಾಡು ಫೇವರಿಟ್ ಆಗಿ ಉಳಿದುಕೊಂಡಿದೆ. ತೇಜಾಬ್ ಚಿತ್ರದ ನಂತರ ಮಾಧುರಿ ದೀಕ್ಷಿತ್ ಅವರ ಸ್ಟಾರ್ಗಿರಿ ದೊಡ್ಡ ಮಟ್ಟಕ್ಕೆ ಏರಿತು. ಸ್ಟಾರ್ ನಟರಿಗಿಂತಲೂ ಅವರು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎಂಬುದು ಅಚ್ಚರಿಯ ವಿಷಯ.
ಆ ಸಮಯಕ್ಕಾಗಲೇ ನಟಿ ಶ್ರೀದೇವಿ ಸ್ಟಾರ್ ಕಲಾವಿದೆಯಾಗಿ ಮಿಂಚುತ್ತಿದ್ದರು. ಅವರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಮಾಧುರಿ ಕೂಡ ಅಪಾರ ಜನಪ್ರಿಯತೆ ಗಳಿಸಿದರು. ಸುಮ್ಮನೆ ಹೀರೋ ಜೊತೆ ಮರ ಸುತ್ತುವ ಪಾತ್ರಗಳ ಬದಲಿಗೆ ತಮ್ಮ ನಟನೆಗೆ ಮಹತ್ವ ಇರುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡ ಕಾರಣಕ್ಕಾಗಿ ಮಾಧುರಿ ಬೇರೆ ಎಲ್ಲ ನಟಿಯರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತಾ ಬಂದರು. ಆಜ ನಚಲೇ ಮತ್ತು ಗುಲಾಬ್ ಗ್ಯಾಂಗ್ ಸಿನಿಮಾಗಳವರೆಗೂ ಅವರು ಇದೇ ಸೂತ್ರವನ್ನು ಅನುಸರಿಸಿಕೊಂಡು ಬಂದರು.
1994ರಲ್ಲಿ ಬಂದ ಹಮ್ ಆಪ್ಕೆ ಹೈ ಕೌನ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಮತ್ತು ಸಲ್ಮಾನ್ ಖಾನ್ ಜೋಡಿ ಆಗಿದ್ದರು. ಆ ಚಿತ್ರ ಬರುವ ವೇಳೆಗೆ ಮಾಧುರಿ ಧೀಕ್ಷಿತ್ಗೆ ಸ್ಟಾರ್ ಪಟ್ಟ ಸಿಕ್ಕಿತ್ತು. ಆಗ ಸಲ್ಮಾನ್ ಖಾನ್ ಕೂಡ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಆದರೂ ಹಮ್ ಆಪ್ಕೆ ಹೈ ಕೌನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ಗಿಂತಲೂ ಹೆಚ್ಚು ಸಂಭಾವನೆಯನ್ನು ಮಾಧುರಿಗೆ ನೀಡಲಾಗಿತ್ತು. ಅದು ಅಂದು ಮಾಧುರಿಗೆ ಇದ್ದ ಬೇಡಿಕೆಗೆ ಸಾಕ್ಷಿ ಒದಗಿಸುವಂತಹ ಸಂಗತಿ. ಇಂದಿಗೂ ಡ್ಯಾನ್ಸ್ ಸಂಬಂಧಿತ ಟಿವಿ ಕಾರ್ಯಕ್ರಮಗಳ ಜಡ್ಜ್ ಆಗಿ ಅವರು ಸಕ್ರಿಯರಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಮಾಧುರಿಗೆ ಇಂದು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.
ಇದನ್ನೂ ಓದಿ:
ನಟಿ ಮಾಧುರಿ ದೀಕ್ಷಿತ್ ಮಾಲ್ಡೀವ್ಸ್ ನಲ್ಲಿ ತಮ್ಮ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ
ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್ನ ಸ್ಟಾರ್ ಕಲಾವಿದೆ!