ವ್ಯಾಲಂಟೈನ್ಸ್ ಡೇಯನ್ನು ವಿಶೇಷವಾಗಿ ಆಚರಿಸಿದ ಸಮಂತಾ; ಇಲ್ಲಿದೆ ಸ್ಯಾಮ್ ಹಂಚಿಕೊಂಡ ಫೋಟೋ
Samantha | Valentine's Day: ನಿನ್ನೆ (ಸೋಮವಾರ) ಪ್ರೇಮಿಗಳ ದಿನ. ಚಿತ್ರರಂಗದ ಹಲವು ತಾರೆಯರು ತಮ್ಮ ಕುಟುಂಬದೊಂದಿಗೆ ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ಬಹುಭಾಷಾ ನಟಿ ಸಮಂತಾ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಫೆಬ್ರವರಿ 14ರಂದು ವ್ಯಾಲಂಟೈನ್ಸ್ ಡೇ (Valentine’s Day) ಆಚರಿಸಲಾಯಿತು. ಚಿತ್ರರಂಗದ ವಿವಿಧ ಸೆಲೆಬ್ರಿಟಿಗಳು ತಮ್ಮ ಪ್ರೀತಿಪಾತ್ರರೊಂದಿಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಹಲವು ತಾರೆಯರು ವಿದೇಶಗಳಿಗೂ ತೆರಳಿ ವಿಶೇಷವಾಗಿ ಸಂಭ್ರಮವನ್ನು ಆಚರಿಸಿದರು. ಬಹುಭಾಷಾ ನಟಿ ಸಮಂತಾ (Samantha) ಕೂಡ ವಿಭಿನ್ನವಾಗಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ನಟಿ ಇತ್ತೀಚೆಗೆ ವಿವಿಧ ಕಾರಣಗಳಿಂದ ವೈಯಕ್ತಿಕ ಜೀವನದ ಕುರಿತು ಸುದ್ದಿಯಲ್ಲಿದ್ದರು. ನಾಗ ಚೈತನ್ಯ ಹಾಗೂ ಸ್ಯಾಮ್ ಕೆಲ ಸಮಯದ ಹಿಂದಷ್ಟೇ ಬೇರೆಯಾಗಿದ್ದರು. ವೈವಾಹಿಕ ಜೀವನದಿಂದ ಹೊರನಡೆದ ಬಳಿಕ ಸಮಂತಾಗೆ ಇದು ಮೊದಲ ಪ್ರೇಮಿಗಳ ದಿನ. ಇದನ್ನು ನಟಿ ಅರ್ಥಪೂರ್ಣವಾಗಿ ಆಚರಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ಫೋಟೋ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸಮಂತಾ ವ್ಯಾಲಂಟೈನ್ಸ್ ಡೇಯ ಶುಭಾಶಯ ಕೋರಿದ್ದಾರೆ. ಜತೆಗೆ ತಾವು ವಿಶೇಷ ದಿನವನ್ನು ಸಂಭ್ರಮಿಸುತ್ತಿರುವ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಬೀದಿ ನಾಯಿಯೊಂದಿಗೆ ಆಟವಾಡುತ್ತಿರುವ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದು, ‘ಪಪ್ಪಿ ಲವ್’ ಎಂದು ಬರೆದುಕೊಂಡಿದ್ದಾರೆ. ಸಮಂತಾಗೆ ಶ್ವಾನಗಳೆಂದರೆ ಪ್ರೀತಿ. ತಮ್ಮ ನಿವಾಸದಲ್ಲಿ ಅವರು ಎರಡು ಶ್ವಾನಗಳನ್ನು ಸಾಕಿದ್ದಾರೆ. ಆಗಾಗ ಅವುಗಳ ಚಿತ್ರಗಳನ್ನು ನಟಿ ಹಂಚಿಕೊಳ್ಳುತ್ತಿರುತ್ತಾರೆ.
ಶ್ವಾನಗಳು, ಅವುಗಳ ರಕ್ಷಣೆಯ ಬಗ್ಗೆಯೂ ಸಮಂತಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುವುದುಂಟು. ಇದೀಗ ನಟಿ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು, ಪ್ರಾಣಿ ಪ್ರೇಮದ ಅರಿವು ಮೂಡಿಸಲು ಯತ್ನಿಸಿದ್ದಾರೆ. ಸಮಂತಾ ಪೋಸ್ಟ್ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದಲ್ಲದೇ ಸಮಂತಾ ತಮ್ಮ ಸ್ನೇಹಿತರಿಗೆ ಪ್ರೇಮಿಗಳ ದಿನದ ಶುಭಾಶಯ ಕಳುಹಿಸಿರುವ ಫೋಟೋಗಳನ್ನೂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಹಂಚಿಕೊಂಡಿರುವ ಫೋಟೋ:

ಪ್ರೇಮಿಗಳ ದಿನಕ್ಕೆ ಸಮಂತಾ ಹಂಚಿಕೊಂಡಿರುವ ಪೋಸ್ಟ್
ಸಮಂತಾ ಕಳೆದ ಕೆಲವು ವರ್ಷಗಳಿಂದ ಮಾಜಿ ಪತಿ ನಾಗ ಚೈತನ್ಯ ಜತೆ ಸಂಭ್ರಮದಲ್ಲಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದರು. ಈ ತಾರಾ ಜೋಡಿ 2009ರಲ್ಲಿ ‘ಏ ಮಾಯೆ ಚೇಸಾವೆ’ ಚಿತ್ರದ ಶೂಟಿಂಗ್ನಲ್ಲಿ ಭೇಟಿಯಾಗಿದ್ದರು. 2014ರಲ್ಲಿ ‘ಆಟೋನಗರ್ ಸೂರ್ಯ’ ಚಿತ್ರದ ಶೂಟಿಂಗ್ ಸಮಯದಲ್ಲಿ ಹತ್ತಿರುವಾಗಿ, ಡೇಟಿಂಗ್ ಹೋಗಲು ಆರಂಭಿಸಿದ್ದರು. 2017ರಲ್ಲಿ ವಿವಾಹವಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಈರ್ವರೂ ಬೇರೆಯಾಗಲು ನಿರ್ಧರಿಸಿ, 2021ರ ಅಕ್ಟೋಬರ್ನಲ್ಲಿ ಅದನ್ನು ಘೋಷಿಸಿದ್ದರು.
ಇದೀಗ ಸಮಂತಾ ಪ್ರವಾಸ ಹಾಗೂ ವಿವಿಧ ಚಿತ್ರಗಳಲ್ಲಿ ತಮ್ಮನ್ನು ಸಕ್ರಿಯರಾಗಿಟ್ಟುಕೊಂಡಿದ್ದಾರೆ. ಪ್ರೇಮಿಗಳ ದಿನದಂದು ನಟಿ ಹಂಚಿಕೊಂಡಿರುವ ಪೋಸ್ಟ್ ಸದ್ಯ ವೈರಲ್ ಆಗಿದೆ. ಚಿತ್ರಗಳ ವಿಷಯಕ್ಕೆ ಬಂದರೆ ಸಮಂತಾ ಕೊನೆಯದಾಗಿ ‘ಪುಷ್ಪ: ದಿ ರೈಸ್’ ಚಿತ್ರದ ಐಟಂ ಸಾಂಗ್ನಲ್ಲಿ ಹೆಜ್ಜೆ ಹಾಕಿದ್ದರು. ನಟಿಯ ಬತ್ತಳಿಕೆಯಲ್ಲಿ ‘ಶಾಕುಂತಲಮ್’ ಸೇರಿ ಹಲವು ಚಿತ್ರಗಳಿವೆ.
ಇದನ್ನೂ ಓದಿ:
ನೆಟ್ಫ್ಲಿಕ್ಸ್ ಜತೆ ಕೈ ಜೋಡಿಸಲಿರುವ ರಾಮ್ ಚರಣ್? ಹೊಸ ಡೀಲ್ ಸಲುವಾಗಿ ಮುಂಬೈನಲ್ಲಿ ಮಾತುಕತೆ
Published On - 9:59 am, Tue, 15 February 22




