ನಿರ್ದೇಶಕ ಅಟ್ಲಿ (Atlee) ಅವರು ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದಾರೆ. ಬಾಲಿವುಡ್ನಲ್ಲಿ ‘ಜವಾನ್’ ಸಿನಿಮಾ ಮಾಡಿ ದೊಡ್ಡ ಗೆಲುವು ಕಂಡಿದ್ದಾರೆ. ಇವರ ಸಿನಿಮಾಗಳ ಹಲವು ದೃಶ್ಯಗಳಿಗೆ ಚೌರ್ಯದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಿರ್ದೇಶಕ ಅಟ್ಲಿ ಅವರು ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ‘ಜವಾನ್’ ಸಿನಿಮಾ (Jawan Movie) ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಬೆನ್ನಲ್ಲೇ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಅಟ್ಲಿ ಮೊದಲು ನಿರ್ದೇಶನ ಮಾಡಿದ ಸಿನಿಮಾ ‘ರಾಜ ರಾಣಿ’. ಮಣಿರತ್ನಂ ನಿರ್ದೇನದ ‘ಮೌನ ರಾಗಂ’ (1986) ಚಿತ್ರದ ರಿಮೇಕ್ ಇದು ಎಂದು ಅನೇಕರು ಟೀಕೆ ಮಾಡಿದರು. ನಂತರ ಬಂದ ‘ತೇರಿ’ ಸಿನಿಮಾ ‘ಭಾಷಾ’ ಮೊದಲಾದ ಚಿತ್ರಗಳಿಗೆ ಹೋಲಿಕೆ ಇದೆ ಎನ್ನಲಾಯಿತು. ‘ಮೆರ್ಸಲ್’ ಹಾಗೂ ‘ಬಿಗಿಲ್’ ಸಿನಿಮಾಗಳು ಇದೇ ರೀತಿಯ ಟೀಕೆ ಎದುರಿಸಿದವು. ‘ಜವಾನ್’ ಚಿತ್ರ ‘ತಾಯಿ ನಾಡು’, ‘ಅಣ್ಣಯ್ಯ’, ‘ಮಾಸ್ಟರ್’, ‘ರಮಣ’ ಸಿನಿಮಾಗಳಿಗೆ ಹೋಲಿಕೆ ಇದೆ ಎಂದು ಹೇಳಲಾಯಿತು. ಈ ಆರೋಪಗಳ ಬಗ್ಗೆ ಅವರು ಮಾತನಾಡಿದ್ದಾರೆ.
‘ನಾನು ರಾಜ ರಾಣಿ ಚಿತ್ರ ಮಾಡುವಾಗಲೇ ಬೇರೆ ಆಗುತ್ತಿರುವ ಕುಟುಂಬಗಳ ಬಗ್ಗೆ ಸಿನಿಮಾ ಮಾಡಬೇಕೆಂದು ಬಯಸಿದ್ದೆ. ಆಗಲೇ ‘ಮೌನ ರಾಗಂ’ ಸಿನಿಮಾ ಬಂದಿತ್ತು. ನನ್ನ ಸಿನಿಮಾ ಕಥೆಗೆ ಹೋಲಿಕೆ ಇತ್ತು. ಹೀಗಾಗಿ, ನಾನು ಮಾಡಿದ ಕಥೆ ಕೈಬಿಟ್ಟೆ. ನನ್ನ ಸ್ಕ್ರಿಪ್ಟ್‌ಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನದನ್ನು ಇತರ ಸಿನಿಮಾಗಳಿಗೆ ಹೋಲಿಸಿ ಯಾರಾದರೂ ಎರಡು ಸೆಕೆಂಡ್ಗಳಲ್ಲಿ ಕಾಮೆಂಟ್ ಮಾಡಿದರೆ ನನ್ನ ಶ್ರಮ, ಪ್ರಯತ್ನ ವ್ಯರ್ಥ ಎಂದು ನಾನು ಎಂದಿಗೂ ಭಾವಿಸುವುದಿಲ್ಲ. ಇದು ಅವರ ಅಭಿಪ್ರಾಯ’ ಎಂದಿದ್ದಾರೆ ಅಟ್ಲಿ.
ಇದನ್ನೂ ಓದಿ: ‘ಜವಾನ್’ ಚಿತ್ರದಿಂದ ಬದಲಾಯ್ತು ಸಾನ್ಯಾ ಮಲ್ಹೋತ್ರಾ ವೃತ್ತಿ ಬದುಕು; ಅಟ್ಲಿ ಸಿನಿಮಾದಲ್ಲಿ ಚಾನ್ಸ್
‘ನೀವು ಹೊಲಿಕೆಯುಳ್ಳ ಕಥೆ ಮಾಡಬಹುದು. ಹಾಗಂದ ಮಾತ್ರಕ್ಕೆ ಅದು ಕದ್ದ ಕಥೆ ಎಂದು ಅರ್ಥ ಅಲ್ಲ. ಎಲ್ಲಾ ವಿಚಾರ ಸ್ಫೂರ್ತಿಯಾಗಬಹುದು. ನಾನು ಎಂಜಿಆರ್ ಹಾಡುಗಳಿಂದ ಸ್ಫೂರ್ತಿ ಪಡೆದಿದ್ದೇನೆ. ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ. 30 ವರ್ಷಗಳಲ್ಲಿ ಶಾರುಖ್ ಖಾನ್ ಅವರಿಗೆ ನನ್ನ ಬಳಿ ಇದ್ದ ರೀತಿಯ ಕಥೆಯನ್ನು ಯಾರೂ ಹೇಳಿರಲಿಲ್ಲ. ಸಿನಿಮಾ ಜಗತ್ತಿನಲ್ಲಿ ನಾನು ಮಾತ್ರ ಇಂತಹ ಟೀಕೆಗಳನ್ನು ಎದುರಿಸುತ್ತೇನೆ ಎಂಬುದು ನಿಮ್ಮ ಭಾವನೆಯೇ? ಅನೇಕ ಶ್ರೇಷ್ಠ ನಿರ್ದೇಶಕರು ಇದನ್ನು ಎದುರಿಸಿದ್ದಾರೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:01 am, Wed, 15 November 23