ಎನ್​ಟಿಆರ್ ಪ್ರತಿಮೆಗೆ ಸೋಕಿದ ಜಾತಿ: ಪ್ರತಿಷ್ಠಾಪನೆಗೆ ಹೈಕೋರ್ಟ್ ತಡೆ

NTR: ಎನ್​ಟಿಆರ್ ಶತ ಜನ್ಮೋತ್ಸವದ ಪ್ರಯುಕ್ತ ತೆಲಂಗಾಣದ ಖಮ್ಮಮ್​ನಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದ್ದ ಎನ್​ಟಿಆರ್ ಪ್ರತಿಮೆ ಅನಾವರಣಕ್ಕೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದೆ.

ಎನ್​ಟಿಆರ್ ಪ್ರತಿಮೆಗೆ ಸೋಕಿದ ಜಾತಿ: ಪ್ರತಿಷ್ಠಾಪನೆಗೆ ಹೈಕೋರ್ಟ್ ತಡೆ
ಎನ್​ಟಿಆರ್
Follow us
|

Updated on: May 25, 2023 | 11:05 PM

ಆಂಧ್ರದಲ್ಲಿ ಈಗ ಎನ್​ಟಿಆರ್ (NTR) ರಾಜಕೀಯ ನಡೆಯುತ್ತಿದೆ. ಅವಿಭಜಿತ ಆಂಧ್ರಪ್ರದೇಶದ ಮಾಜಿ ಸಿಎಂ, ಹಾಗೂ ತೆಲುಗು ಚಿತ್ರರಂಗದ ದಂತಕತೆ ಎಂದೇ ಕರೆಸಿಕೊಳ್ಳುವ ಎನ್​ಟಿಆರ್ ಅವರ ಶತಮಾನೋತ್ಸವ ವರ್ಷ ಇದಾಗಿದ್ದು, ನಂದಮೂರಿ ಕುಟುಂಬ ಈಗಾಗಲೇ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದೆ ಎರಡು ಅದ್ಧೂರಿ ಕಾರ್ಯಕ್ರಮಗಳನ್ನು ಸಹ ಮಾಡಿದೆ. ಇದೀಗ ಸಂಘಟನೆಯೊಂದು ತೆಲಂಗಾಣದ ಖಮ್ಮಮ್​ನಲ್ಲಿ ಎನ್​ಟಿಆರ್​ ಅವರ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸಲು ಮುಂದಾಗಿತ್ತು ಆದರೆ ಯಾದವ ಸಮುದಾಯ ಹಾಗೂ ಇತರೆ ಕೆಲವು ಸಂಘಟನೆಗಳ ವಿರೋಧದಿಂದಾಗಿ ಪ್ರತಿಮೆ ಪ್ರತಿಷ್ಠಾಪನೆಗೆ ಹೈಕೋರ್ಟ್ ತಡೆ ನೀಡಿದೆ.

ಎನ್​ಟಿಆರ್​ ಕೃಷ್ಣನ ವೇಷದಲ್ಲಿರುವ ಪ್ರತಿಮೆಯನ್ನು ಖಮ್ಮಮ್​ನ ಲಕ್ಕಾರಂ ಕೆರೆಯ ಬಳಿ ಪ್ರತಿಷ್ಟಾಪಿಸಲು ನಿರ್ಣಯಿಸಲಾಗಿತ್ತು. ಆದರೆ ಇದಕ್ಕೆ ಯಾದವ ಸಮುದಾಯದವರು ಆಕ್ಷೇಪಣೆ ಸಲ್ಲಿಸಿದ್ದು ಕೃಷ್ಣನ ವೇಷದಲ್ಲಿ ಎನ್​ಟಿಆರ್ ಪ್ರತಿಮೆಯನ್ನು ಪ್ರತಿಷ್ಟಾಪಿಸಲು ಅವಕಾಶ ನೀಡಬಾರದೆಂದು ಮನವಿ ಸಲ್ಲಿಸಿದ್ದರು. ಶ್ರೀಕೃಷ್ಣ ಜೆಎಸಿ ಹೆಸರಿನ ಸಂಘವೂ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

ಎನ್​ಟಿಆರ್​ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಕೃಷ್ಣನ ವೇಷದಲ್ಲಿಯೇ ಪ್ರತಿಮೆ ಏಕೆ ನಿರ್ಮಿಸಬೇಕು ಎಂದು ಯಾದವರ ಹಾಗೂ ಶ್ರೀಕೃಷ್ಣ ಎಜೆಸಿ ಪರ ವಕೀಲರು ವಾದಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿವಾದಿ ವಕೀಲರು, ಶ್ರೀಕೃಷ್ಣನನ್ನು ಒಂದು ಜಾತಿಗೆ ಸೀಮಿತಪಡಿಸಬೇಡಿ, ಆತ ವಿಶ್ವಕ್ಕೆ ದೇವರು ಜಾತಿಗೆ ದೇವರಲ್ಲ ಎಂದಿದ್ದಾರೆ. ಮಾತ್ರವಲ್ಲದೆ ಎನ್​ಟಿಆರ್ ಅನ್ನು ಸಹ ಒಂದು ಜಾತಿಗೆ ಸೀಮಿತಪಡಿಸುವುದು ಸರಿಯಲ್ಲವೆಂದು ಹೇಳಿದ್ದಾರೆ. ಎರಡೂ ಪಕ್ಷಗಳ ವಾದ ಆಲಿಸಿದ ಹೈಕೋರ್ಟ್ ಪ್ರತಿಮೆ ಪ್ರತಿಷ್ಠಾಪನೆಗೆ ನೀಡಲಾಗಿದ್ದ ತಡೆಯನ್ನು ವಿಸ್ತರಿಸಿದ್ದು ಜೂನ್ 6 ಕ್ಕೆ ವಿಚಾರಣೆ ಮುಂದೂಡಿದೆ.

ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಪ್ರತಿಮೆ ರಾಜಕೀಯ ಹಳೆಯದ್ದು. ಚಂದ್ರಬಾಬು ನಾಯ್ಡು ಸರ್ಕಾರ ಬಂದಾಗ ಎನ್​ಟಿಆರ್ ಪ್ರತಿಮೆಗಳು ಎಲ್ಲೆಂದರಲ್ಲಿ ರಾರಾಜಿಸಿದ್ದವು. ಆಂಧ್ರದಲ್ಲಿ ಜಗನ್ ಸರ್ಕಾರ ಬಂದ ಬಳಿಕ ಅವರ ತಂದೆ ರಾಜಶೇಖರ ರೆಡ್ಡಿ ಪ್ರತಿಮೆಗಳು ರಾರಾಜಿಸಿದವು. ಈಗ ಎನ್​ಟಿಆರ್​ ಕೃಷ್ಣನ ಪ್ರತಿಮೆಗೆ ಇದೇ ರಾಜಕೀಯ ಕಾರಣದಿಂದಲೇ ವಿರೋಧ ವ್ಯಕ್ತವಾಗುತ್ತಿದೆ ಎಂಬ ಮಾತುಗಳಿವೆ. ಇನ್ನು ಎನ್​ಟಿಆರ್ ಅವರ ಪೌರಾಣಿಕ ಪಾತ್ರಗಳು ಬಹಳ ಜನಪ್ರಿಯ, ಅದರಲ್ಲಿಯೂ ಕೃಷ್ಣನ ಪಾತ್ರ ಜನರಿಗೆ ಅಚ್ಚು-ಮೆಚ್ವಚು, ಎನ್​ಟಿಆರ್ ಕೃಷ್ಣನ ವೇಷದಲ್ಲಿರುವ ಹಲವು ಚಿತ್ರಗಳು, ಕ್ಯಾಲೆಂಡರ್​ಗಳು ಆಂಧ್ರ-ತೆಲಂಗಾಣದಲ್ಲಿ ನೋಡಲು ಸಿಗುತ್ತವೆ.

ಮೇ 28, 1923 ರಲ್ಲಿ ಜನಿಸಿದ ಎನ್​ಟಿಆರ್ ಅವರ ಜನ್ಮಶತಮಾನೋತ್ಸವ. ಹಾಗಾಗಿ ಎನ್​ಟಿಆರ್ ಅಭಿಮಾನಿಗಳು, ನಂದಮೂರಿ ಕುಟುಂಬ ಅದ್ಧೂರಿಯಾಗಿ ಶತಮಾನೋತ್ಸವ ಆಚರಿಸುತ್ತಿದೆ. ಎನ್​ಟಿಆರ್ ಪುತ್ರ ನಂದಮೂರಿ ಬಾಲಕೃಷ್ಣ ಹಾಗೂ ಅಳಿಯ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಎನ್​ಟಿಆರ್ ಶತಮಾನೋತ್ಸವದ ಎರಡು ಅದ್ಧೂರಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸಹ ಭಾಗವಹಿಸಿದ್ದರು. ಆದರೆ ಈ ಎರಡೂ ಕಾರ್ಯಕ್ರಮಗಳಿಂದ ನಟ ಜೂ ಎನ್​ಟಿಆರ್ ದೂರ ಉಳಿದಿದ್ದರು. ಅವರಿಗೆ ಆಹ್ವಾನವಿರಲಿಲ್ಲ ಎನ್ನಲಾಗುತ್ತಿದೆ.

ಇನ್ನು ನಂದಮೂರಿ ಬಾಲಕೃಷ್ಣ ಹಾಗೂ ಚಂದ್ರಬಾಬು ನಾಯ್ಡು ಅವರು ಈ ಕಾರ್ಯಕ್ರಮಗಳನ್ನು ಆಡಳಿತ ಪಕ್ಷದ ಸದಸ್ಯರು ಟೀಕಿಸಿದ್ದು, ಅಧಿಕಾರ ಕಳೆದುಕೊಂಡಿರುವ ಚಂದ್ರಬಾಬು ನಾಯ್ಡು ಮತ್ತೆ ಅಧಿಕಾರಕ್ಕೆ ಬರಲು ಮತ್ತೊಮ್ಮೆ ಎನ್​ಟಿಆರ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ