ಆಸ್ಕರ್ ಸಮಾರಂಭದಲ್ಲಿ (Oscar Award) ಪತ್ನಿಯ ಬಗ್ಗೆ ಜೋಕ್ ಮಾಡಿದ ಕಾಮಿಡಿ ನಟ ಕ್ರಿಸ್ ರಾಕ್ (Chris Rock) ಕೆನ್ನೆಗೆ ಬಾರಿಸಿದ್ದರು ವಿಲ್ ಸ್ಮಿತ್. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ನಂತರ ಅಕಾಡೆಮಿ ಈ ವಿಚಾರವಾಗಿ ಸಭೆ ನಡೆಸಿ, 10 ವರ್ಷ ವಿಲ್ ಸ್ಮಿತ್ ಅವರನ್ನು ಅಕಾಡೆಮಿಯಿಂದ ಹೊರಗೆ ಇಡುವ ನಿರ್ಧಾರಕ್ಕೆ ಬಂದಿದೆ. ಅವರ ವೃತ್ತಿ ಜೀವನಕ್ಕೆ ಇದು ಕಪ್ಪು ಚುಕ್ಕೆ ಆಗಿದೆ. ಕಳೆದ ತಿಂಗಳು ವಿಲ್ ಸ್ಮಿತ್ ಅವರು (Will Smith) ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ನಗುನಗುತ್ತಾ ಕಾರಿನಿಂದ ಇಳಿಯುತ್ತಿರುವ ಫೋಟೋ ವೈರಲ್ ಆಗಿತ್ತು . ಅವರು ಭಾರತಕ್ಕೆ ಬಂದಿದ್ದು ಏಕೆ ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆದಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ.
ವಿಲ್ ಸ್ಮಿತ್ಗೂ ಭಾರತಕ್ಕೂ ಮೊದಲಿನಿಂದಲೂ ಒಳ್ಳೆಯ ನಂಟಿದೆ. 2019ರಲ್ಲಿ ಅವರು ಭಾರತಕ್ಕೆ ಆಗಮಿಸಿದ್ದರು. ಇದಾದ ಬಳಿಕ ಕೊವಿಡ್ ಕಾಣಿಸಿಕೊಂಡಿತು. ಎರಡು ವರ್ಷಗಳ ಕಾಲ ಜನರ ಜೀವನ ಅಸ್ತವ್ಯಸ್ಥವಾಗಿತ್ತು. ಈಗ ಎಲ್ಲವೂ ಸರಿಹಾದಿಗೆ ಬರುತ್ತಿದೆ. ಆದರೆ, ವಿಲ್ ಸ್ಮಿತ್ ಜೀವನದಲ್ಲಿ ಸಂಕಷ್ಟ ಎದುರಾಗಿದೆ. ಆಸ್ಕರ್ ಸಮಾರಂಭದಲ್ಲಿ ಅವರು ಮಾಡಿಕೊಂಡ ವಿವಾದದಿಂದ 10 ವರ್ಷ ಬ್ಯಾನ್ಗೆ ಒಳಗಾಗಿದ್ದಾರೆ. ಇದಾದ ಬಳಿಕ ವಿಲ್ ಸ್ಮಿತ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಅವರು ಭಾರತಕ್ಕೆ ಬಂದಿಳಿದಿದ್ದರು. ಥೆರಪಿಗೆ ಒಳಗಾಗಲು ಅವರು ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ.
ಆಸ್ಕರ್ ವೇಳೆ ನಡೆದ ಘಟನೆಯಿಂದ ವಿಲ್ ಸ್ಮಿತ್ ವಿಚಲಿತಗೊಂಡಿದ್ದಾರೆ. ಹೀಗಾಗಿ, ಅವರು ಭಾರತದಲ್ಲಿ ಥೆರಪಿಗೆ ಒಳಗಾಗಲು ಬಂದಿದ್ದಾರೆ. ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ವಿಲ್ ಸ್ಮಿತ್ ಭಾರತಕ್ಕೆ ಬಂದಿದ್ದು ಇದೇ ಮೊದಲೇನಲ್ಲ. 2019ರಲ್ಲಿ ವಿಲ್ ಸ್ಮಿತ್ ಅವರು ಹರಿದ್ವಾರಕ್ಕೆ ಭೇಟಿ ನೀಡಿದ್ದರು. ‘ಫೇಸ್ಬುಕ್ ವಾಚ್ ಸೀರಿಸ್’ ಉದ್ದೇಶದಿಂದ ಅವರು ಇಲ್ಲಿಗೇ ಭೇಟಿ ನೀಡಿದ್ದರು. ‘ದೇವರು ಅನುಭವದ ಮೂಲಕ ಕಲಿಸುತ್ತಾನೆ ಎಂದು ನನ್ನ ಅಜ್ಜಿ ಯಾವಾಗಲೂ ಹೇಳುತ್ತಿದ್ದರು. ಭಾರತಕ್ಕೆ ಭೇಟಿ ನೀಡುವುದು ಮತ್ತು ಇಲ್ಲಿನ ಬಣ್ಣಗಳು, ಜನರು ಮತ್ತು ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವುದರಿಂದ ನನ್ನ, ನನ್ನ ಕಲೆಯ ಹೊಸ ತಿಳುವಳಿಕೆಯು ಜಾಗೃತಗೊಂಡಿದೆ ಎಂದು’ ಅವರು ಹೇಳಿದ್ದರು. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದಲ್ಲಿ ಅವರು ಅತಿಥಿ ಮಾಡಿದ್ದರು. ಇದರ ಶೂಟಿಂಗ್ಗಾಗಿ ಅವರು ಮುಂಬೈಗೆ ಬಂದಿದ್ದರು. ಭಾರತದ ಹಲವು ಸ್ಟಾರ್ಗಳು ವಿಲ್ ಸ್ಮಿತ್ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ವಿವಾದದ ಬಳಿಕ ಈ ಫೋಟೋಗಳು ವೈರಲ್ ಆಗಿದ್ದವು.
ವಿಲ್ ಸ್ಮಿತ್ ಕ್ಷಮೆ ಕೇಳಿದರೂ ಶಿಕ್ಷೆ ತಪ್ಪಲಿಲ್ಲ:
ಈ ಬಾರಿಯ ಆಸ್ಕರ್ ವೇದಿಕೆಯಲ್ಲಿ ವಿಲ್ ಸ್ಮಿತ್ ಅವರಿಗೆ ಸಿಹಿ ಮತ್ತು ಕಹಿ ಎರಡೂ ಅನುಭವ ಆಯಿತು. ಪತ್ನಿಯ ಬಗ್ಗೆ ಕಾಮಿಡಿ ಮಾಡಿದ ಕ್ರಿಸ್ ರಾಕ್ಗೆ ಕಪಾಳಮೋಕ್ಷ ಮಾಡಿದ ನಂತರ ವಿಲ್ ಸ್ಮಿತ್ ಅವರು ವೇದಿಕೆ ಏರಿ ‘ಅತ್ಯುತ್ತಮ ನಟ’ ಆಸ್ಕರ್ ಪ್ರಶಸ್ತಿ ಪಡೆದುಕೊಂಡರು. ‘ಕಿಂಗ್ ರಿಚರ್ಡ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಿಕ್ಕಿತು. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದ ಅವರು ಎಲ್ಲರಲ್ಲೂ ಕ್ಷಮೆ ಕೇಳಿದರು. ಕೆನ್ನೆಗೆ ಹೊಡೆದಿದ್ದಕ್ಕೆ ಅವರು ಪಶ್ಚಾತ್ತಾಪದಿಂದ ಕಣ್ಣೀರು ಹಾಕಿದರು. ನಂತರ ಅಕಾಡೆಮಿ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದರು. ಆದರೂ ಕೂಡ ವಿಲ್ ಸ್ಮಿತ್ ಅವರಿಗೆ ಶಿಕ್ಷೆ ತಪ್ಪಲಿಲ್ಲ.