ಈ ಬಾರಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ (Oscar Awards) ಬಂದೇ ಬರುತ್ತದೆ ಎಂದು ಸಿನಿಪ್ರಿಯರು ನಿರೀಕ್ಷಿಸಿದ್ದಾರೆ. ‘ಆರ್ಆರ್ಆರ್’ ಸಿನಿಮಾದ (RRR Movie) ‘ನಾಟು ನಾಟು..’ ಹಾಡು ಆಸ್ಕರ್ಗೆ ನಾಮಿನೇಟ್ ಆಗಿದೆ. ಈಗಾಗಲೇ ‘ಗೋಲ್ಡನ್ ಗ್ಲೋಬ್’ ಮುಂತಾದ ಪ್ರಶಸ್ತಿಗಳನ್ನು ಗೆದ್ದಿರುವ ಈ ಹಾಡು 95ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲೂ ಮೋಡಿ ಮಾಡಲಿದೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇದೆ. ಆದರೆ ಕೆಲವರು ಈ ಚಿತ್ರದ ಬಗ್ಗೆ ತಕರಾರು ತೆಗೆದಿದ್ದಾರೆ. 80 ಕೋಟಿ ರೂಪಾಯಿ ಸುರಿದು ಪ್ರಚಾರ ಮಾಡುವ ಮೂಲಕ ಆಸ್ಕರ್ ಪಡೆಯಲು ರಾಜಮೌಳಿ ಪ್ರಯತ್ನಿಸುತ್ತಿದ್ದಾರೆ ಎಂದು ತೆಲುಗಿನ ನಿರ್ಮಾಪಕ ತಮ್ಮಾರೆಡ್ಡಿ ಭಾರಧ್ವಜ (Tammareddy Bharadwaja) ಅವರು ಆರೋಪಿಸಿದ್ದಾರೆ. ಆದರೆ ಅವರ ಮಾತನ್ನು ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ತಳ್ಳಿಹಾಕಿದ್ದಾರೆ.
ಆಸ್ಕರ್ನಲ್ಲಿ ‘ಆರ್ಆರ್ಆರ್’ ಚಿತ್ರವನ್ನು ಪ್ರಚಾರ ಮಾಡಲು 80 ಕೋಟಿ ರೂಪಾಯಿ ಖರ್ಚಾಗಿದೆ ಹಾಗೂ ಆ ದುಡ್ಡಿನಲ್ಲಿ 8 ಸಿನಿಮಾ ಮಾಡಬಹುದಿತ್ತು ಎಂಬುದು ತಮ್ಮಾರೆಡ್ಡಿ ಭಾರಧ್ವಜ ಅವರ ವಾದ. ಇದನ್ನು ಕೇಳಿ ಎಸ್.ಎಸ್. ರಾಜಮೌಳಿ ಅವರ ಗುರು ಕೆ. ರಾಘವೇಂದ್ರ ರಾವ್ ಅವರಿಗೆ ಸಿಟ್ಟು ಬಂದಿದೆ. ಹಾಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮಾರೆಡ್ಡಿಗೆ ತಿರುಗೇಟು ನೀಡಿದ್ದಾರೆ.
‘ನಲ್ಮೆಯ ಸ್ನೇಹಿತ ಭಾರದ್ವಜ ಅವರೇ.. ತೆಲುಗು ಸಿನಿಮಾ, ಸಾಹಿತ್ಯ, ನಟರು ಮತ್ತು ನಿರ್ದೇಶಕರಿಗೆ ಆರ್ಆರ್ಆರ್ ಚಿತ್ರವು ಕೀರ್ತಿ ತಂದುಕೊಟ್ಟಿದ್ದಕ್ಕಾಗಿ ನಾವೆಲ್ಲರೂ ಹೆಮ್ಮೆಪಡಬೇಕು. ಖರ್ಚು ಮಾಡಿದ ಹಣದ ಬಗ್ಗೆ ನಿಮ್ಮ ಬಳಿ ಲೆಕ್ಕ ಇದೆಯಾ? ಲೆಜೆಂಡರಿ ನಿರ್ದೇಶಕರಾದ ಜೇಮ್ಸ್ ಕ್ಯಾಮೆರಾನ್ ಮತ್ತು ಸ್ಟೀವಲ್ ಸ್ಪೀಲ್ಬರ್ಗ್ ಅವರು ಹಣ ತೆಗೆದುಕೊಂಡು ಆರ್ಆರ್ಆರ್ ಸಿನಿಮಾವನ್ನು ಹೊಗಳಿದರು ಎಂಬುದು ನಿಮ್ಮ ಅಭಿಪ್ರಾಯವೇ?’ ಎಂದು ಕೆ. ರಾಘವೇಂದ್ರ ರಾವ್ ಅವರು ಟ್ವೀಟ್ ಮಾಡಿದ್ದಾರೆ.
— Raghavendra Rao K (@Ragavendraraoba) March 9, 2023
ವಾದ-ವಿವಾದ ಏನೇ ಇರಲಿ, ಆಸ್ಕರ್ಗೆ ನಾಮಿನೇಟ್ ಆಗುವ ಮೂಲಕ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಸಖತ್ ಕ್ರೇಜ್ ಹುಟ್ಟುಹಾಕಿದೆ. ಈ ಹಾಡಿಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರು ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ: RGV Twitter: ‘ರಾಜಮೌಳಿ ಹತ್ಯೆಗೆ ಸಂಚು ನಡೆದಿದೆ, ತಂಡ ಸಿದ್ಧವಾಗಿದೆ’; ರಾಮ್ ಗೋಪಾಲ್ ವರ್ಮಾ ಹೇಳಿಕೆ
ಭಾರತದಲ್ಲಿ ಮಾರ್ಚ್ 13ರಂದು ಮುಂಜಾನೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಸಾರ ಆಗಲಿದೆ. ‘ಆರ್ಆರ್ಆರ್’ ತಂಡದವರು ಈಗಾಗಲೇ ಲಾಸ್ ಏಂಜಲಿಸ್ಗೆ ತೆರಳಿದ್ದಾರೆ. ಈ ಬಾರಿ ಆಸ್ಕರ್ ಟ್ರೋಫಿ ನೀಡಲು ದೀಪಿಕಾ ಪಡುಕೋಣೆ ಅವರಿಗೆ ಅವಕಾಶ ಸಿಕ್ಕಿದೆ. ಅವರು ಕೂಡ ಈಗಾಗಲೇ ಅಮೆರಿಕಕ್ಕೆ ತೆರಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:45 am, Fri, 10 March 23