ಗಾಯಕ ಜಸ್ಟಿನ್ ಬೀಬರ್ (Justin Bieber) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಂಗೀತ ಕಾರ್ಯಕ್ರಮಗಳಿಗೆ ಲಕ್ಷಾಂತರ ಜನರು ಸೇರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 240 ಮಿಲಿಯನ್ಗಿಂತಲೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಇಷ್ಟೆಲ್ಲ ಜನಪ್ರಿಯತೆ ಇರುವ ಜಸ್ಟಿನ್ ಬೀಬರ್ ಅವರಿಗೆ ಈಗ ಗಂಭೀರ ಆರೋಗ್ಯ ಸಮಸ್ಯೆ ಕಾಣುತ್ತಿದೆ. ಅವರ ಮುಖಕ್ಕೆ ಪಾರ್ಶ್ವವಾಯು (Facial Paralysis) ಆಗಿದೆ! ಹಾಗಂತ ಇದು ಗಾಸಿಪ್ ಅಲ್ಲವೇ ಅಲ್ಲ. ಈ ವಿಚಾರವನ್ನು ಖುದ್ದು ಜಸ್ಟಿನ್ ಬೀಬರ್ ಅವರೇ ಖಚಿತ ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಸಿದ್ದಾರೆ. ತಮ್ಮ ನೆಚ್ಚಿನ ಗಾಯಕನಿಗೆ ಈ ರೀತಿ ಆಗಿರುವುದು ಕೇಳಿ ಅಭಿಮಾನಿಗಳಿಗೆ ತೀವ್ರ ಬೇಸರ ಆಗಿದೆ. ತಮಗೆ ಮುಖದ ಪಾರ್ಶ್ವವಾಯು (Paralysis) ಆಗಲು ಒಂದು ವೈರಸ್ ಕಾರಣ ಎಂದು ಜಸ್ಟಿನ್ ಬೀಬರ್ ವಿವರಿಸಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೊವಿಡ್ ಕಾರಣದಿಂದ ಜಸ್ಟಿನ್ ಬೀಬರ್ ಅವರ ಹಲವು ಶೋ ರದ್ದಾಗಿದ್ದವು. ಈಗ ಅನಾರೋಗ್ಯದ ಕಾರಣದಿಂದ ಸಂಗೀತ ಸಮಾರಂಭ ಮತ್ತೆ ಕ್ಯಾನ್ಸಲ್ ಆಗಿದೆ. ಅದಕ್ಕೆ ಮುಖದ ಪಾರ್ಶ್ವವಾಯು ಕಾರಣ ಎಂದು ಅವರು ಹೇಳಿದ್ದಾರೆ. ಒಂದು ವೈರಸ್ ಅವರ ಕಿವಿಯನ್ನು ಹೊಕ್ಕಿದೆ. ಅದರಿಂದ ಅವರಿಗೆ ಹಲವು ಸಮಸ್ಯೆಗಳು ಉಂಟಾಗಿವೆ. ಒಂದು ಕಡೆಗೆ ಕಣ್ಣನ್ನು ಮುಚ್ಚಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಕ್ಕರೆ ಒಂದು ಕಡೆಯ ತುಟಿಗಳು ಮಾತ್ರ ಸ್ಪಂದಿಸುತ್ತವೆ. ಪಾರ್ಶ್ವವಾಯು ಆಗಿರುವ ಭಾಗ ನಿಷ್ಕ್ರಿಯ ಆದಂತೆ ಆಗಿದೆ.
ಜಸ್ಟಿನ್ ಬೀಬರ್ ಅವರ ಈ ಪರಿಸ್ಥಿತಿ ಕಂಡು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 1.5 ಕೋಟಿಗೂ ಅಧಿಕ ಜನರು ನೋಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ‘ನಾವೆಲ್ಲರೂ ನಿಮಗಾಗಿ ಪ್ರಾರ್ಥಿಸುತ್ತೇನೆ’ ಎಂದು ಕಮೆಂಟ್ ಮಾಡಿದ್ದಾರೆ.
ಅನೇಕ ಸೂಪರ್ ಹಿಟ್ ಇಂಗ್ಲಿಷ್ ಗೀತೆಗಳಿಗೆ ಜಸ್ಟಿನ್ ಬೀಬರ್ ಧ್ವನಿ ನೀಡಿದ್ದಾರೆ. ಅವರ ಮ್ಯೂಸಿಕ್ ವಿಡಿಯೋಗಳಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಜಗತ್ತಿನ ಹಲವು ಕಡೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಸದ್ಯ ಅನಾರೋಗ್ಯದ ಕಾರಣದಿಂದ ಜಸ್ಟಿನ್ ಬೀಬರ್ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Sat, 11 June 22