
ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ನಟನೆ ಮಾಡಿರುವ ‘ವಾರಣಾಸಿ’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದ್ದು, ಸಿನಿಮಾ ಅನ್ನು ವಿಶ್ವದ ಹಲವು ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಜೊತೆಗೆ ವಿಶ್ವ ಗುಣಮಟ್ಟದ ವಿಎಫ್ಎಕ್ಸ್ ಮತ್ತು ಇನ್ನಿತರೆ ತಂತ್ರಜ್ಞಾನಗಳನ್ನು ಸಿನಿಮಾಕ್ಕೆ ಸೇರಿಸಲಾಗುತ್ತಿದೆ. ಇದೆಲ್ಲದರ ಜೊತೆಗೆ ಸಿನಿಮಾದ ವಿತರಣೆ ಹಾಗೂ ಇನ್ನಿತರೆ ಮಾರುಕಟ್ಟೆ ಪ್ರಕ್ರಿಯೆಗಳು ಆರಂಭವಾಗಿದ್ದು, ವಿಶ್ವ ಸಿನಿಮಾ ರಂಗದ ದೈತ್ಯ ಸಂಸ್ಥೆಯೊಂದು ‘ವಾರಣಾಸಿ’ ಸಿನಿಮಾದ ಬಿಡುಗಡೆ ಹಕ್ಕು ಖರೀದಿಗೆ ಹಿಂದೆ ಬಿದ್ದಿದೆ ಎನ್ನಲಾಗುತ್ತಿದೆ.
‘ವಾರಣಾಸಿ’ ಸಿನಿಮಾ ವಿಶ್ವ ಸಿನಿಮಾ ಪ್ರೇಕ್ಷಕರ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಈ ಸಿನಿಮಾಕ್ಕಾಗಿ ಭಾರತೀಯರು ಮಾತ್ರವಲ್ಲ ವಿಶ್ವದಾದ್ಯಂತ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಭಾರತದಲ್ಲಿ ಎಷ್ಟು ಅದ್ಧೂರಿ ಪ್ರದರ್ಶನ ಕಾಣಲಿದೆಯೋ ಅಷ್ಟೇ ಅದ್ಧೂರಿ ಪ್ರದರ್ಶನವನ್ನು ವಿದೇಶಗಳಲ್ಲೂ ಕಾಣುವುದು ಸುಸ್ಪಷ್ಟ. ಹಾಗಾಗಿ ಸಿನಿಮಾದ ಬಿಡುಗಡೆ ಹಕ್ಕು ಖರೀದಿಗೆ ದೊಡ್ಡ-ದೊಡ್ಡ ಸಂಸ್ಥೆಗಳೇ ಸಾಲುಗಟ್ಟಿವೆ. ಅದರಲ್ಲೂ ವಿಶ್ವ ಸಿನಿಮಾರಂಗದಲ್ಲಿ ಭಾರಿ ಹೆಸರು ಮಾಡಿರುವ ಅತಿ ದೊಡ್ಡ ನಿರ್ಮಾಣ ಮತ್ತು ವಿತರಣೆ ಸಂಸ್ಥೆ ಸಹ ಸರತಿ ಸಾಲಿನಲ್ಲಿದೆ, ಅದುವೇ ಸೋನಿ.
ವಿಶ್ವ ಚಿತ್ರರಂಗದಲ್ಲಿ ಅತಿ ದೊಡ್ಡ ಸಿನಿಮಾ ನಿರ್ಮಾಣ, ವಿತರಣೆ ಮತ್ತು ಆಡಿಯೋ ಸಂಸ್ಥೆಯಾಗಿರುವ ಸೋನಿ ಇದೀಗ ‘ವಾರಣಾಸಿ’ ಸಿನಿಮಾದ ವಿದೇಶಿ ಬಿಡುಗಡೆ ಹಕ್ಕು ಖರೀದಿಗೆ ಆಸಕ್ತಿ ತೋರಿಸಿದೆ. ಇತ್ತೀಚೆಗಷ್ಟೆ ಇದೇ ಸೋನಿ ಸಂಸ್ಥೆಯು ಭಾರತದ ‘ರಾಮಾಯಣ’ ಸಿನಿಮಾವನ್ನು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಮಾಡಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಸುಮಾರು 50 ಸಾವಿರ ಸ್ಕ್ರೀನ್ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಇದಕ್ಕೆ ಮುಖ್ಯ ಕಾರಣ ಸೋನಿಯ ವಿತರಣೆ.
ಇದನ್ನೂ ಓದಿ:‘ವಾರಣಾಸಿ’ ಸಿನಿಮಾದ ಒಳಗಿದೆ ಹಲವು ಸಿನಿಮಾ, ರಾಜಮೌಳಿ ಹೇಳಿದ್ದೇನು?
ಇದೀಗ ಇದೇ ಸೋನಿ, ‘ವಾರಣಾಸಿ’ ಸಿನಿಮಾ ಅನ್ನು ಸಹ ವಿತರಣೆ ಮಾಡಲು ಮುಂದಾಗಿದ್ದು, ಖುದ್ದು ಸಿನಿಮಾದ ನಿರ್ಮಾಪಕರೊಟ್ಟಿಗೆ ಮಾತುಕತೆ ನಡೆಸಿ ವಿತರಣೆ ಹಕ್ಕು ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದೆ. ಒಂದೊಮ್ಮೆ ‘ವಾರಣಾಸಿ’ ಸಿನಿಮಾವನ್ನು ಸೋನಿ ಸಂಸ್ಥೆಯು ವಿತರಣೆ ಮಾಡಿದ್ದೇ ಆದಲ್ಲಿ, ಭಾರತದ ಇನ್ಯಾವ ಸಿನಿಮಾ ಸಹ ರಿಲೀಸ್ ಆಗದಷ್ಟು ಅದ್ಧೂರಿಯಾಗಿ ‘ವಾರಣಾಸಿ’ ಸಿನಿಮಾ ರಿಲೀಸ್ ಆಗಲಿದೆ.
‘ವಾರಣಾಸಿ’ ಸಿನಿಮಾ ಭಾರತದ ಮಾತ್ರವಲ್ಲ ವಿಶ್ವದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಅನ್ನು ಭಾರತ, ಅಂಟಾರ್ಟಿಕಾ, ಆಫ್ರಿಕಾ, ಯೂರೋಪ್ ಇನ್ನೂ ಹಲವು ಕಡೆಗಳಲ್ಲಿ ಚಿತ್ರೀರಕಣ ಮಾಡಲಾಗಿದೆ. ರಾಜಮೌಳಿ ನಿರ್ದೇಶನದ ಈ ವರೆಗಿನ ಅತಿ ದೊಡ್ಡ ಆಕ್ಷನ್ ಸಿನಿಮಾ ಇದಾಗಿದೆ. ಸಿನಿಮಾ ಮುಂದಿನ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Sun, 8 November 26