ಮತ್ತೊಂದು ತೆಲುಗು ಚಿತ್ರಕ್ಕೆ ಕೈಹಾಕಿದ ಹೊಂಬಾಳೆ: ಪ್ರಶಾಂತ್ ಬದಲು ಬೇರೆ ನಿರ್ದೇಶಕ
Hombale Films: ಪರ ರಾಜ್ಯಗಳಲ್ಲಿಯೂ ಸಿನಿಮಾಗಳನ್ನು ಮಾಡುತ್ತಿರುವ ಹೊಂಬಾಳೆ ಇದೀಗ ಹೊಸದೊಂದು ತೆಲುಗು ಸಿನಿಮಾದ ಮೇಲೆ ಬಂಡವಾಳ ಹೂಡಲು ಮುಂದಾಗಿದೆ.
ನಾಡಿನ ಹೆಮ್ಮೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲಮ್ಸ್ (Hombale Films) ಕೆಲವೇ ವರ್ಷಗಳಲ್ಲಿ ರಾಷ್ಟ್ರದ ಅತ್ಯುತ್ತಮ ನಿರ್ಮಾಣ ಸಂಸ್ಥೆಗಳಲ್ಲಿ (Production House) ಒಂದಾಗಿ ಗುರುತಿಸಿಕೊಂಡಿದೆ. ಪುನೀತ್ ರಾಜ್ಕುಮಾರ್, ಯಶ್ ಅವರ ಸಿನಿಮಾಗಳನ್ನು ಮಾಡಿ ದೊಡ್ಡ ಹಿಟ್ ನೀಡಿದ ಹೊಂಬಾಳೆ ಫಿಲಮ್ಸ್ ಕನ್ನಡದ ಗಡಿ ದಾಟಿ ಬೇರೆ ಬೇರೆ ಭಾಷೆಗಳಲ್ಲಿ ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿದೆ. ತಮಿಳು, ಮಲಯಾಳಂ ಸಿನಿಮಾಗಳ ಮೇಲೆ ಬಂಡವಾಳ ಹೂಡಿರುವ ಹೊಂಬಾಳೆ ತೆಲುಗಿನಲ್ಲಿ ಸಲಾರ್ (Salaar) ನಿರ್ಮಾಣ ಮಾಡುತ್ತಿದೆ. ಇದರ ಜೊತೆಗೆ ಈಗ ಮತ್ತೊಂದು ತೆಲುಗು ಸಿನಿಮಾಕ್ಕೂ ಬಂಡವಾಳ ಹೂಡಲು ಮುಂದಾಗಿದೆ.
ಸಲಾರ್ ಅಂಥಹಾ ಭಾರಿ ಬಜೆಟ್ ಸಿನಿಮಾವನ್ನು ತೆಲುಗಿನಲ್ಲಿ ಮಾಡುತ್ತಿರುವ ಹೊಂಬಾಳೆ ಇದೀಗ ಮತ್ತೊಂದು ತೆಲುಗು ಸಿನಿಮಾದ ಮೇಲೆ ಬಂಡವಾಳ ಹೂಡಲು ಸಜ್ಜಾಗಿದೆ ಆದರೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಪ್ರಶಾಂತ್ ನೀಲ್ ಅಲ್ಲ ಬದಲಿಗೆ ಲೋ ಬಜೆಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ತಕ್ಕ ಮಟ್ಟಿಗೆ ಹೆಸರು ಮಾಡಿರುವ ನಿರ್ದೇಶಕ ಶ್ರೀನಿವಾಸ ಗವಿರೆಡ್ಡಿ.
ತೆಲುಗಿನಲ್ಲಿ ಹಾಸ್ಯ ಪ್ರಧಾನ, ಲೋ ಬಜೆಟ್ ಸಿನಿಮಾಗಳನ್ನು ಮಾಡಿರುವ ಶ್ರೀನಿವಾಸ ಗವಿರೆಡ್ಡಿಯ ಮುಂದಿನ ಸಿನಿಮಾವನ್ನು ಹೊಂಬಾಳೆ ನಿರ್ಮಿಸಲಿದೆ ಎನ್ನಲಾಗುತ್ತಿದೆ. ಈ ಹಿಂದೆ ‘ಸೀತಮ್ಮ ಅಂದಾಲು ರಾಮಯ್ಯ ಸಿತ್ರಾಲು’ ಹಾಗೂ ಅನುಭವಿಂಚು ರಾಜಾ ಸಿನಿಮಾಗಳನ್ನು ಶ್ರೀನಿವಾಸ ಗವಿರೆಡ್ಡಿ ನಿರ್ದೇಶನ ಮಾಡಿದ್ದಾರೆ. ಇದೀಗ ಒಂದು ಐತಿಹಾಸಿಕ ಕತೆಯುಳ್ಳ ಸಿನಿಮಾ ಮಾಡಲು ಮುಂದಾಗಿದ್ದು ಈ ಸಿನಿಮಾದ ಬಹುಪಾಲು ಚಿತ್ರೀಕರಣ ಅಡವಿಯಲ್ಲೇ ನಡೆಯುತ್ತದೆಯಂತೆ. ಈ ಸಿನಿಮಾಕ್ಕೆ ಬಂಡವಾಳವನ್ನು ಹೊಂಬಾಳೆ ಹೂಡಲಿದೆ ಎಂಬ ಮಾತುಗಳು ಟಾಲಿವುಡ್ನಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:‘ಕೆಜಿಎಫ್ 3’ ಬಗ್ಗೆ ದೊಡ್ಡ ಸುಳಿವು ನೀಡಿದ ‘ಹೊಂಬಾಳೆ’; 1978ರಿಂದ 1981 ತನಕ ರಾಕಿ ಎಲ್ಲಿದ್ದ?
ನೆರೆ-ಹೊರೆಯ ಚಿತ್ರರಂಗಗಳಲ್ಲಿ ಹೊಂಬಾಳೆ ಬಂಡವಾಳ ಹೂಡಿದೆ. ಹೊಂಬಾಳೆ ಫಿಲಮ್ಸ್ನ ಮಲಯಾಳಂನ ಧೂಮಂ ನಾಳೆ (ಜೂನ್ 22) ಬಿಡುಗಡೆ ಆಗಲಿದೆ. ಅದರ ಜೊತೆಗೆ ಟೈಸನ್ ಹೆಸರಿನ ಸಿನಿಮಾಕ್ಕೂ ಬಂಡವಾಳ ಹೂಡಿದೆ. ಈ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಲಿದ್ದಾರೆ. ಇನ್ನು ತಮಿಳಿನಲ್ಲಿ ರಘು ತಾತ ಹೆಸರಿನ ಸಿನಿಮಾ ಘೋಷಿಸಿದ್ದು ಸಿನಿಮಾಕ್ಕೆ ಕೀರ್ತಿ ಸುರೇಶ್ ನಾಯಕಿ, ಪೃಥ್ವಿರಾಜ್ ಸುಕುಮಾರನ್ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತೆಲುಗಿನಲ್ಲಿ ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಈಗಾಗಲೇ ಚಾಲ್ತಿಯಲ್ಲಿದ್ದು ಈ ಸಿನಿಮಾದ ಮೇಲೆ ಭಾರಿ ಮೊತ್ತದ ಬಂಡವಾಳ ಹೂಡಲಾಗಿದೆ.
ಇನ್ನು ಕನ್ನಡದಲ್ಲಿ ಶ್ರೀಮುರಳಿ ನಟನೆಯ ಬಘೀರ ಸಿನಿಮಾವನ್ನು ಹೊಂಬಾಳೆ ನಿರ್ಮಿಸುತ್ತಿದೆ ಸಿನಿಮಾದ ಚಿತ್ರೀಕರಣ ಬಹುತೇಕ ಅಂತಿಮ ಹಂತದಲ್ಲಿದೆ. ಇದರ ಜೊತೆಗೆ ಯುವ ರಾಜ್ಕುಮಾರ್ ನಟನೆಯ ಯುವ ಸಿನಿಮಾಕ್ಕೆ ಬಂಡವಾಳ ಹೂಡಿದೆ ಈ ಸಿನಿಮಾವನ್ನು ಸಂತೋಶ್ ಆನಂದ್ರಾಮ್ ನಿರ್ದೇಶನ ಮಾಡುತ್ತಿದ್ದು ಸಿನಿಮಾದ ಬಿಡುಗಡೆ ಡಿಸೆಂಬರ್ನಲ್ಲಿ ಆಗಲಿದೆ. ಇನ್ನು ರಕ್ಷಿತ್ ಶೆಟ್ಟಿ ನಿರ್ದೇಶನದ ರಿಚರ್ಡ್ ಆಂಟನಿ ಸಿನಿಮಾಕ್ಕೂ ಸಹ ಹೊಂಬಾಳೆ ಬಂಡವಾಳ ಹೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ