ಗಾಯಕ ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಅವರು ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಸದ್ಯ, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ. ಆಗಸ್ಟ್ 28ರಂದು ಶಾಲಿನಿ ತಲ್ವಾರ್ ಅವರು ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಅವರು ನ್ಯಾಯಾಧೀಶೆ ಮುಂದೆ ಗಳಗಳನೆ ಅತ್ತಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿ ಸಿಂಗ್ಗೆ ಸೆಪ್ಟೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.
ಹನಿ ಸಿಂಗ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ, ಆತ ತನ್ನ ಮೇಲೆ ನಿರಂತರವಾಗಿ ಹಲ್ಲೆ ಮಾಡಿದ್ದಾನೆ ಎಂದು ಶಾಲಿನಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪವನ್ನು ಹನಿ ಸಿಂಗ್ ಅಲ್ಲಗಳೆದಿದ್ದಾರೆ. ಸದ್ಯ, ಈ ವಿಚಾರ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆಗಸ್ಟ್ 28ರಂದು ಕೋರ್ಟ್ನಲ್ಲಿಯೇ ಶಾಲಿನಿ ಕಣ್ಣೀರು ಹಾಕಿದ್ದಾರೆ. ‘ಜೀವನದ ಯಾವ ಘಟ್ಟದಲ್ಲಿ ಮದುವೆ ಆಗಿತ್ತು? ಪ್ರೀತಿ ಮುರಿದು ಬಿದ್ದಿದ್ದು ಯಾವಾಗ’ ಎಂಬಿತ್ಯಾದಿ ಪ್ರಶ್ನೆಗಳನ್ನು ನ್ಯಾಯಾಧೀಶೆ ತನಿಯಾ ಸಿಂಗ್ ಅವರು ಶಾಲಿನಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ಹೇಳುವಾಗ ಶಾಲಿನಿ ಅತ್ತಿದ್ದಾರೆ.
ಅನಾರೋಗ್ಯದ ಕಾರಣ ನೀಡಿ ಹನಿ ಸಿಂಗ್ ಕೋರ್ಟ್ಗೆ ಹಾಜರಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಧೀಶೆ ತನಿಯಾ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ. ‘ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ. ಈ ಪ್ರಕರಣವನ್ನು ಅವರು ಹಗುರವಾಗಿ ತೆಗೆದುಕೊಂಡಿದ್ದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ’ ಎಂದಿದ್ದಾರೆ ನ್ಯಾಯಾಧೀಶೆ ತನಿಯಾ ಅವರು.
ಇತ್ತೀಚೆಗೆ ಹನಿ ಸಿಂಗ್ ಈ ಪ್ರಕರಣದಲ್ಲಿ ಮೌನ ಮುರಿದಿದ್ದರು. ‘20 ವರ್ಷಗಳಿಂದ ನನ್ನ ಬಾಳ ಸಂಗಾತಿ ಆಗಿರುವ ಶಾಲಿನಿ ತಲ್ವಾರ್ ಅವರು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ಈ ನನ್ನ ಆರೋಗ್ಯದ ಬಗ್ಗೆ ಊಹಾಪೋಹ ಹಬ್ಬಿದ್ದಾಗ, ನನ್ನ ಸಾಹಿತ್ಯದ ಬಗ್ಗೆ ಕಟು ಟೀಕೆ ಕೇಳಿಬಂದಾಗ, ಮಾಧ್ಯಮಗಳಲ್ಲಿ ನೆಗೆಟಿವ್ ಪ್ರಚಾರ ಮಾಡಿದಾಗ ನಾನು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿರಲಿಲ್ಲ. ಆದರೆ ಇಂದು ನನ್ನ ಸಹೋದರಿ, ತಂದೆ-ತಾಯಿ ಮೇಲೆ ಆರೋಪ ಕೇಳಿ ಬಂದಿರುವುದರಿಂದ ನಾನು ಮೌನವಾಗಿರುವುದು ಸೂಕ್ತವಲ್ಲ. ದೇಶದ ಕಾನೂನಿನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಸತ್ಯ ಹೊರಗೆ ಬರಲಿದೆ ಎಂಬ ಭರವಸೆ ಇದೆ. ನ್ಯಾಯಾಲಯ ತೀರ್ಪು ನೀಡುವುದಕ್ಕಿಂತ ಮುನ್ನವೇ ಜನರು ಮತ್ತು ಅಭಿಮಾನಿಗಳು ತೀರ್ಮಾನಕ್ಕೆ ಬರಬಾರದ ಅಂತ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಹನಿ ಸಿಂಗ್ ಹೇಳಿದ್ದರು.
ಇದನ್ನೂ ಓದಿ: ಕೌಟುಂಬಿಕ ದೌರ್ಜನ್ಯ ಆರೋಪದ ನಂತರ ಮೊದಲ ಬಾರಿಗೆ ಹೊಸ ಹಾಡಿನ ಪೋಸ್ಟ್ ಹಂಚಿಕೊಂಡ ಯೋ ಯೋ ಹನಿ ಸಿಂಗ್
Published On - 2:59 pm, Sun, 29 August 21