ಇಲಿಯಾನಾ ಡಿ ಕ್ರೂಜ್ ಮುಂಬೈನವರಾದರೂ ಅತಿ ಹೆಚ್ಚು ಮಿಂಚಿದ್ದು ತೆಲುಗು ಚಿತ್ರರಂಗದಲ್ಲಿ. 2006 ರಲ್ಲಿ ‘ದೇವದಾಸು’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇಲಿಯಾನಾ, ಆ ನಂತರ ದಶಕದ ಕಾಲ ಹಿಂತಿರುಗಿ ನೋಡಿದ್ದೇ ಇಲ್ಲ. ಮಹೇಶ್ ಬಾಬು, ಜೂ ಎನ್ಟಿಆರ್, ಅಲ್ಲು ಅರ್ಜುನ್, ಪ್ರಭಾಸ್, ರವಿತೇಜ ಹೀಗೆ ತೆಲುಗಿನ ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದರು ಇಲಿಯಾನಾ. ಆದರೆ ಬಹಳ ಬೇಡಿಕೆಯಲ್ಲಿರುವಾಗಲೇ ಇಲಿಯಾನಾ ಹಠಾತ್ತನೆ ತೆಲುಗು ಚಿತ್ರರಂಗದಿಂದ ದೂರಾದರು. ಅವರಿಗೆ ಅವಕಾಶ ಕಡಿಮೆಯಾಗಲಿಲ್ಲ ಬದಲಿಗೆ ಕಡಿಮೆ ಮಾಡಿಸಲಾಯ್ತು. ಆ ವಿಷಯವನ್ನು ನಿರ್ಮಾಪಕರೊಬ್ಬರು ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಚಿತ್ರರಂಗಗಳಲ್ಲಿ ಈ ನಿರ್ಮಾಪಕರ ಸಂಘಗಳು ಬಲು ಗಟ್ಟಿಯಾಗಿವೆ. ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ. ದೊಡ್ಡ-ದೊಡ್ಡ ನಟ-ನಟಿಯರ ಮೇಲೆ ಬ್ಯಾನ್ಗಳನ್ನು ಹೇರುವುದು, ಪರೋಕ್ಷವಾಗಿ ಕೆಲಸ ಸಿಗದಂತೆ ಮಾಡುವ ಚಟುವಟಿಕೆಗಳನ್ನು ಅಲ್ಲಿನ ಕೆಲವರು ಮಾಡುತ್ತಲೇ ಬಂದಿದ್ದಾರೆ. ಹಾಗೆಯೇ ಇಲಿಯಾನಾ ಮಾಡಿದ ಒಂದು ಕೆಲಸದಿಂದ ಅವರನ್ನು ತೆಲುಗು ಮಾತ್ರವಲ್ಲ, ತಮಿಳು ಚಿತ್ರರಂಗದಿಂದಲೂ ಬ್ಯಾನ್ ಮಾಡಲಾಯ್ತಂತೆ.
ನಿರ್ಮಾಪಕರ ಸಂಘದ ಸದಸ್ಯರೊಬ್ಬರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ನಟಿ ಇಲಿಯಾನ ತಮಿಳು ಸಿನಿಮಾ ನಿರ್ಮಾಪಕರೊಬ್ಬರಿಂದ 40 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದುಕೊಂಡಿದ್ದರಂತೆ. ಆದರೆ ಡೇಟ್ಸ್ ಕೊಟ್ಟಿಲ್ಲ. ಕೊಟ್ಟ ಹಣವನ್ನೂ ವಾಪಸ್ ಕೊಟ್ಟಿಲ್ಲ. ಆ ನಿರ್ಮಾಪಕ ನಮಗೆ ದೂರು ನೀಡಿದರು. ನಾವು ಕರೆದು ವಿಚಾರಣೆ ನಡೆಸಿದೆವು. ಆಗ ಇಲಿಯಾನ, ‘ನಾನು ಡೇಟ್ಸ್ ಕೊಟ್ಟಿದ್ದೆ, ಆದರೆ ನನ್ನ ಡೇಟ್ಸ್ ಅನ್ನು ಅವರೇ ಬಳಸಿಕೊಳ್ಳಲಿಲ್ಲ’ ಎಂದರಂತೆ.
ಇದನ್ನೂ ಓದಿ:ಮಗುವಿನ ಆರೈಕೆಯಲ್ಲಿ ಬ್ಯುಸಿ ಆದ ನಟಿ ಇಲಿಯಾನಾ
ಬಳಿಕ ನಿರ್ಮಾಪಕ ಸಂಘದವರು ಲಾಗ್ ಶೀಟ್ಗಳೆನ್ನೆಲ್ಲ ತೆಗೆದು ನೋಡಿದರೆ, ಅಡ್ವಾನ್ಸ್ ಪಡೆದ ನಿರ್ಮಾಪಕರಿಗೆ ಕೊಟ್ಟಿದ್ದ ಡೇಟ್ಸ್ನಲ್ಲಿಯೇ ಇಲಿಯಾನ ಬೇರೊಂದು ಸಿನಿಮಾದಲ್ಲಿ ನಟಿಸಿರುವುದು ತಿಳಿದು ಬಂತು. ಕೂಡಲೇ ಆ ನಟಿಯನ್ನು ನಾವು ಬ್ಯಾನ್ ಮಾಡಿದೆವು’ ಎಂದಿದ್ದಾರೆ. ನಮ್ಮ ನಿಯಮದ ಪ್ರಕಾರ, ಅಡ್ವಾನ್ಸ್ ಪಡೆದ ಮೇಲೆ ಸಿನಿಮಾ ಸೆಟ್ಗೆ ಬಂದು ಮೇಕಪ್ ಹಾಕಿಕೊಳ್ಳಬೇಕು. ಆಗ ಮಾತ್ರ ನಟಿಸಿದಂತೆ. ಆದರೆ ಅಡ್ವಾನ್ಸ್ ಪಡೆದ ಬಳಿಕ ಸಿನಿಮಾ ಪ್ರಾರಂಭವೇ ಆಗಿಲ್ಲ, ಸಿನಿಮಾ ಸೆಟ್ಗೂ ಕಲಾವಿದರು ಬಂದಿಲ್ಲವೆಂದರೆ ಪಡೆದ ಅಡ್ವಾನ್ಸ್ ಹಣ ವಾಪಸ್ ನೀಡಬೇಕು ಇದು ನಿಯಮ’ ಎಂದಿದ್ದಾರೆ. ಒಂದೊಮ್ಮೆ ಅಡ್ವಾನ್ಸ್ ಪಡೆದು ಡೇಟ್ಸ್ ಕೊಟ್ಟು, ಅದೇ ಡೇಟ್ನಲ್ಲಿ ಬೇರೆ ಸಿನಿಮಾದಲ್ಲಿ ನಟಿಸಿದರೆ ಅದು ಅಪರಾಧ ಎಂದಿದ್ದಾರೆ ಆ ನಿರ್ಮಾಪಕ.
ಇಲಿಯಾನಾ, ಬ್ಯಾನ್ ಆದಾಗ ಅವರು ತಮಿಳಿನಲ್ಲಿ ವಿಜಯ್ ನಟನೆಯ ‘ನನ್ಬನ್’ ಸಿನಿಮಾದಲ್ಲಿ ನಟಿಸುತ್ತಿದ್ದರಂತೆ. ತಮಿಳಿನಲ್ಲಿ ಅದೇ ಅವರಿಗೆ ಕೊನೆಯ ಸಿನಿಮಾ ಆಯ್ತು, ನಾವು ಅವರ ಮೇಲೆ ಬ್ಯಾನ್ ವಿಧಿಸಿದೆವು ಎಂದಿದ್ದಾರೆ ಆ ನಿರ್ಮಾಪಕ. 2012 ರ ಬಳಿಕ ಇಲಿಯಾನ ಯಾವುದೇ ತಮಿಳು ಸಿನಿಮಾದಲ್ಲಿ ನಟಿಸಲಿಲ್ಲ, 2012ರ ಬಳಿಕ ಆರು ವರ್ಷಗಳ ಕಾಲ ಯಾವುದೇ ತೆಲುಗು ಸಿನಿಮಾದಲ್ಲಿಯೂ ಇಲಿಯಾನ ನಟಿಸಲಿಲ್ಲ. ಅದಾದ ಬಳಿಕ 2018 ರಲ್ಲಿ ರವಿತೇಜ ನಟನೆಯ ‘ಅಮರ್ ಅಕ್ಬಲ್ ಆಂಟೊನಿ’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ಈವರೆಗೆ ಯಾವುದೇ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿಲ್ಲ.
ಇಲಿಯಾನ 2014ರಲ್ಲಿ ಭಾರತದ ನಾಗರೀಕತೆಯನ್ನು ತ್ಯಜಿಸಿ ಪೋರ್ಚುಗೀಸ್ ನಾಗರೀಕರಾದರು ಇಲಿಯಾನ. 2023 ರಲ್ಲಿ ಮೈಖಲ್ ಡೋಲನ್ ಎಂಬ ಅಮೆರಿಕದ ನಟರೊಬ್ಬರನ್ನು ಇಲಿಯಾನ ವಿವಾಹವಾದರು. ಅವರಿಗೆ ಒಂದು ಮಗು ಸಹ ಇದೆ. ಪ್ರಸ್ತುತ ಹಿಂದಿ ಸಿನಿಮಾಗಳಲ್ಲಿ ಮಾತ್ರವೇ ಇಲಿಯಾನ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:40 am, Thu, 22 August 24