ಪಿವಿಆರ್ ಹಣ ಗಳಿಸುವುದು ಹೇಗೆ? ಟಿಕೆಟ್ನಿಂದ ಸಿಗುವುದೆಷ್ಟು? ನಿರ್ಮಾಪಕರಿಗೆ ತಲುಪುವುದೆಷ್ಟು? ವ್ಯವಹಾರ ಹೇಗೆ?
PVR Cinemas: ಪಿವಿಆರ್ ಸೇರಿದಂತೆ ಭಾರತದಲ್ಲಿ ಮಲ್ಟಿಪ್ಲೆಕ್ಸ್ಗಳು ಕೆಲಸ ಮಾಡುವುದು ಹೇಗೆ? ಸಿನಿಮಾ ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್ಗಳ ನಡುವೆ ಆದಾಯ ಹಂಚಿಕೆ ಹೇಗೆ ನಡೆಯುತ್ತದೆ? ಪಿವಿಆರ್ಗೆ ಹೆಚ್ಚಿನ ಲಾಭ ಬರುವುದು ಎಲ್ಲಿಂದ? ಇನ್ನಿತರೆ ವಿಷಯಗಳ ಬಗ್ಗೆ ಪಿವಿಆರ್ ಚೇರ್ಮ್ಯಾನ್ ಮಾತನಾಡಿದ್ದಾರೆ.
ಪಿವಿಆರ್ (PVR) ಭಾರತದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಚೈನ್ (Multiplex), ತನ್ನ ಉದ್ಯಮ ಎದುರಾಳಿ ಐನಾಕ್ಸ್ ಅನ್ನೂ ಖರೀದಿ ಮಾಡಿದ ಬಳಿಕವಂತೂ ಸಿನಿಮಾ ಪ್ರದರ್ಶನ ಉದ್ಯಮದಲ್ಲಿ ಏಕಮೇವಾಧಿಪತ್ಯವನ್ನು ಪಿವಿಆರ್ ಸಾಧಿಸಿದೆ. ಮಲ್ಟಿಪ್ಲೆಕ್ಸ್ಗಳ ಬ್ಯುಸಿನೆಸ್ (Business) ಮಾಡೆಲ್ ಅಥವಾ ವ್ಯವಹಾರ ಮಾದರಿ ಸರಳವಾದದ್ದಲ್ಲ. ಪಿವಿಆರ್ ಕೇವಲ ಸಿನಿಮಾ ಪ್ರದರ್ಶಿಸಿ ಹಣ ಗಳಿಸುವುದಿಲ್ಲ ಬದಲಿಗೆ ಹಲವು ಮೂಲಗಳಿಂದ ಆದಾಯ ಹರಿದು ಬರುತ್ತದೆ. ಜೊತೆಗೆ ಸಿನಿಮಾ ನಿರ್ಮಾಪಕರು ಹಾಗೂ ಪಿವಿಆರ್ ನಡುವೆ ಒಪ್ಪಂದವೂ ತುಸು ಸಂಕೀರ್ಣವಾದುದೆ. ಇವುಗಳ ಬಗ್ಗೆ ಸ್ವತಃ ಪಿವಿಆರ್ ಚೇರ್ಮ್ಯಾನ್ ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅಜಯ್ ಬಿಜ್ಲಿ ಮಾತನಾಡಿದ್ದಾರೆ.
ಬೆಂಗಳೂರಿನ ಯಶಸ್ವಿ ಯುವ ಉದ್ಯಮಿ, ಜಿರೋದಾ ಸಂಸ್ಥಾಪಕ ನಿಖಿಲ್ ಕಾಮತ್ ನಡೆಸಿರುವ ಸಂವಾದದಲ್ಲಿ ಪಿವಿಆರ್ ಬ್ಯುಸಿನೆಸ್ ಮಾಡೆಲ್ ಬಗ್ಗೆ ಹಲವು ವಿಷಯಗಳನ್ನು ಅಜಯ್ ಹಂಚಿಕೊಂಡಿದ್ದಾರೆ. ಅಜಯ್ ಹೇಳಿರುವ ಪ್ರಕಾರ ಭಾರತದಲ್ಲಿ ಸುಮಾರು 9000 ಚಿತ್ರಮಂದಿರಗಳಿವೆ, ಅದರಲ್ಲಿ 3500 ಮಲ್ಟಿಪ್ಲೆಕ್ಸ್ಗಳಿವೆ. ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಇಂದಿಗೂ ಲಾಭದಾಯಕವಾಗಿ ಕೆಲಸ ಮಾಡುತ್ತಿವೆ. ತಮ್ಮ ಪಿವಿಆರ್ ಸೇರಿದಂತೆ ಮಲ್ಟಿಪ್ಲೆಕ್ಸ್ಗಳು ದಕ್ಷಿಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿವೆ.
ಪಿವಿಆರ್ನ ಈಗಿನ ಸರಾಸರಿ ಟಿಕೆಟ್ ದರ 239ರೂಪಾಯಿಗಳಂತೆ. ಅದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸರಾಸರಿ ಟಿಕೆಟ್ ದರ 80-90 ರೂಪಾಯಿಗಳು ಎನ್ನುತ್ತಾರೆ ಅಜಯ್. ಪಿವಿಆರ್ನ ಲಾಭದ ಅರ್ಧಕ್ಕಿಂತಲೂ ಹೆಚ್ಚಿನ ಭಾಗ ಟಿಕೆಟ್ ಮಾರಾಟದಿಂದ ಬರುತ್ತದೆ. ಪಿವಿಆರ್ ವಾರ್ಷಿಕವಾಗಿ ಗಳಿಸುವ ಲಾಭದ 66% ಭಾಗ ಟಿಕೆಟ್ ಮಾರಾಟದಿಂದಲೇ ಬರುತ್ತದೆ. ಉಳಿದ ಮೊತ್ತ ಜಾಹೀರಾತು, ಪಾಪ್ಕಾರ್ನ್ ಇತರೆ ತಿನಿಸುಗಳ ಮಾರಾಟ, ಬಾಡಿಗೆ ಇನ್ನಿತರೆಗಳಿಂದ ಬರುತ್ತದೆ.
ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿದ್ದರೂ ಸಹ ಸಿನಿಮಾ ಒಂದು ಯಶಸ್ವಿಯಾದರೆ ಅದು ಗಳಿಸುವ ಹಣದಲ್ಲಿ ಹೆಚ್ಚಿನ ಪಾಲು ಮಲ್ಟಿಪ್ಲೆಕ್ಸ್ಗಳಿಂದ ಬರುತ್ತದೆ. ಭಾರತದ ಒಟ್ಟು ಬಾಕ್ಸ್ ಆಫೀಸ್ ಮೊತ್ತದ 70% ಮಲ್ಟಿಪ್ಲೆಕ್ಸ್ಗಳಿಂದ ಬರುತ್ತದೆ, 30% ಮಾತ್ರವೇ ಸಿಂಗಲ್ ಸ್ಕ್ರೀನ್ಗಳಿಂದ ಬರುತ್ತದೆ. ಮುಂದಿನ ದಿನಗಳಲ್ಲಿ ಸಣ್ಣ ಪಟ್ಟಣಗಳಲ್ಲಿಯೂ ಮಲ್ಟಿಪ್ಲೆಕ್ಸ್ಗಳು ಓಪನ್ ಆಗಲಿವೆ. ಪಿವಿಆರ್ ತನ್ನ ಬ್ರ್ಯಾಂಚ್ ತೆರೆದಿರುವ ಅತ್ಯಂತ ಸಣ್ಣ ನಗರ ಲಟ್ಟೂರ್, ಅಲ್ಲಿನ ಜನಸಂಖ್ಯೆ 5 ಲಕ್ಷ.
ಇನ್ನು ಸಿನಿಮಾ ನಿರ್ಮಾಪಕರೊಟ್ಟಿಗೆ ಮಲ್ಟಿಪ್ಲೆಕ್ಸ್ಗಳ ಹಣದ ಹಂಚಿಕೆ ಪ್ರಮಾಣ ಪ್ರತಿ ವಾರವೂ ಬದಲಾಗುತ್ತದೆ. ಮೊದಲ ವಾರ ಬಂದ ಹಣದಲ್ಲಿ 50-50 ಹಂಚಿಕೆ ಆಗುತ್ತದೆ. ಮುಂದಿನ ವಾರ ಅದು 37-63 ಆಗುತ್ತದೆ ಅದರ ಮುಂದಿನ ವಾರ 30-70 ಆಗುತ್ತದೆ. ಒಂದೊಮ್ಮೆ ಸಿನಿಮಾ ಸಖತ್ ಯಶಸ್ವಿ ಆಗಿ ಬಾಕ್ಸ್ ಆಫೀಸ್ನಲ್ಲಿ ಒಂದು ನಿರ್ದಿಷ್ಟ ಮೊತ್ತ ಮುಟ್ಟಿದರೆ ನಿರ್ಮಾಪಕನಿಗೆ ಪಿವಿಆರ್ 2.50% ಬೋನಸ್ ಬಿಟ್ಟುಕೊಡುತ್ತದೆ. ಒಂದೊಮ್ಮೆ ಆ ನಿರ್ದಿಷ್ಟ ಮೊತ್ತ ತಲುಪಲಿಲ್ಲವೆಂದರೆ ಎಂದಿನ ಹಂಚಿಕೆ ಮಾದರಿ ಮುಂದುವರೆಯುತ್ತದೆ.
ಪಿವಿಆರ್ ರಿಸರ್ಚ್ ಪ್ರಕಾರ ಯಾವ ಸಿನಿಮಾ ನೋಡಬೇಕೆಂಬುದನ್ನು ಮಹಿಳೆಯರು ನಿಶ್ಚಯಿಸುತ್ತಾರೆ. ಹಾಗಾಗಿ ನಮ್ಮಲ್ಲಿ ನಾವು ಮಹಿಳೆಯರನ್ನು ಮಕ್ಕಳನ್ನು ಸೆಳೆಯುವಂತೆ ಬಣ್ಣಗಳು, ಥೀಮ್ಗಳನ್ನು ಬಳಸುತ್ತೇವೆ. ಟಾಯ್ಲೆಟ್ ಸ್ವಚ್ಛತೆಯನ್ನು ಅತ್ಯುತ್ತಮ ಎಂಬ ರೀತಿಯಲ್ಲಿ ಕಾಪಾಡುತ್ತೇವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಅವರೊಟ್ಟಿಗೆ ಕುಟುಂಬವೂ ಬರುತ್ತದೆ. ಇನ್ನು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆ ಆಗುತ್ತವೆ ಮತ್ತು ಅತಿ ಹೆಚ್ಚು ಜನ ಸಿನಿಮಾ ನೋಡಲು ಹೋಗುತ್ತಾರೆ. ಹಿಂದಿಗೆ ಅಥವಾ ಉತ್ತರ ಭಾರತಕ್ಕೆ ಹೋಲಿಸಿದರೆ 12 ಪಟ್ಟು ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತವೆ ಮತ್ತು 12 ಪಟ್ಟು ಹೆಚ್ಚು ಜನ ಸಿನಿಮಾ ನೋಡಲು ಹೋಗುತ್ತಾರೆ ಎಂದಿದ್ದಾರೆ ಪಿವಿಆರ್ ಚೇರ್ಮ್ಯಾನ್ ಅಜಯ್ ಬಿಜಲಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:07 pm, Wed, 23 August 23