ಭಾರತದ ಯಾವ ಸಿನಿಮಾಗೂ ಆಸ್ಕರ್ ಪ್ರಶಸ್ತಿ ಅಥವಾ ಅಕಾಡೆಮಿ ಅವಾರ್ಡ್ (Academy Awards) ಸಿಕ್ಕಿಲ್ಲ. ಇದನ್ನು ಪಡೆಯಬೇಕು ಎಂದು ಅನೇಕ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ, ಅದು ಯಶಸ್ವಿ ಆಗಿಲ್ಲ. ‘ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ’ ವಿಭಾಗದಲ್ಲಿ ಬೇರೆ ಭಾಷೆಯ ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ನೀಡಲಾಗುತ್ತದೆ. ಈ ವಿಭಾಗಕ್ಕೆ ಭಾರತದ ಸಿನಿಮಾ ನಾಮಿನೇಟ್ ಆಗಿದ್ದು 21 ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಸಿನಿಮಾ ಕೂಡ ಆಸ್ಕರ್ಗೆ ನಾಮಿನೇಟ್ ಆಗಿಲ್ಲ. ಈ ಬಾರಿ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರ (RRR Movie) ಈ ವಿಭಾಗಕ್ಕೆ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ. ರಾಜಮೌಳಿ ಹೋದಲ್ಲಿ ಬಂದಲ್ಲಿ ಆಸ್ಕರ್ಗಾಗಿ ಪ್ರಚಾರ ಮಾಡುತ್ತಿದ್ದಾರೆ.
‘ಆರ್ಆರ್ಆರ್’ ಸಿನಿಮಾ ನೋಡಿ ಭಾರತೀಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ವಿದೇಶದ ಮಂದಿ ಕೂಡ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬರುವ ಎರಡು ಪಾತ್ರಗಳನ್ನು ಇಟ್ಟುಕೊಂಡು ರಾಜಮೌಳಿ ಅವರು ಈ ಕಥೆ ಹೆಣೆದಿದ್ದಾರೆ. ಈ ಸಿನಿಮಾ ವಿಶ್ವ ಬಾಕ್ಸ್ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಚಿದೆ. ಈ ಸಿನಿಮಾ ಆಸ್ಕರ್ಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡುತ್ತಿದೆ. ಹೀಗಿರುವಾಗಲೇ ರಾಜಮೌಳಿ ಅವರು ಈ ಚಿತ್ರಕ್ಕೆ ಆಸ್ಕರ್ ಸಿಗಲೇಬೇಕು ಎಂದು ಪ್ರಚಾರ ಆರಂಭಿಸಿದ್ದಾರೆ.
ಕೆಲವು ದಿನಗಳ ಹಿಂದೆ ರಾಜಮೌಳಿ ಅವರು ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ‘ಆರ್ಆರ್ಆರ್’ ಚಿತ್ರಕ್ಕೆ ಆಸ್ಕರ್ ಸಿಗಬೇಕು ಎಂದು ಪ್ರತಿಪಾದಿಸಿದ್ದಾರೆ. ‘ಆಸ್ಕರ್ ಗೆದ್ದರೆ ಆರ್ಆರ್ಆರ್ ತಂಡಕ್ಕೆ ಹಾಗೂ ನಮ್ಮ ಭಾರತದ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಬೂಸ್ಟ್ ಸಿಗಲಿದೆ. ಆಸ್ಕರ್ ಗೆಲ್ಲಲಿ ಅಥವಾ ಬಿಡಲಿ ಅದು ನನ್ನ ಮುಂದಿನ ಸಿನಿಮಾ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ನಾನು ಹೇಗೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದೀನೋ ಹಾಗೆಯೇ ಮಾಡುತ್ತೇನೆ’ ಎಂದಿದ್ದಾರೆ ರಾಜಮೌಳಿ.
ಇದನ್ನೂ ಓದಿ: ನಿಂತೇ ಹೋಯ್ತು ರಾಮ್ ಚರಣ್ ಹೊಸ ಸಿನಿಮಾ?; ರಾಜಮೌಳಿ ಎಫೆಕ್ಟ್ ಎಂದು ದೂಷಿಸಿದ ಫ್ಯಾನ್ಸ್
ರಾಜಮೌಳಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ನಿರ್ದೇಶನದ ‘ಬಾಹುಬಲಿ’, ‘ಬಾಹುಬಲಿ 2’, ‘ಆರ್ಆರ್ಆರ್’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಿದೆ. ‘ಆರ್ಆರ್ಆರ್’ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ಆಸ್ಕರ್ ಕೂಡ ಗೆಲ್ಲಲಿ ಎಂಬುದು ಅನೇಕರ ಆಶಯ. ಒಂದೊಮ್ಮೆ ಈ ಸಿನಿಮಾ ಅಕಾಡೆಮಿ ಅವಾರ್ಡ್ಸ್ ಗೆದ್ದರೆ ಹೊಸ ದಾಖಲೆ ಸೃಷ್ಟಿ ಆಗಲಿದೆ.