ಮತ್ತೆ ವಿವಾದದಲ್ಲಿ ‘ಇಂಡಿಯಾಸ್ ಗಾಟ್ ಲೇಟೆಂಟ್ 2’; ಮತ್ತೆ ಬ್ಯಾನ್ ಭೀತಿ

ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲೇಟೆಂಟ್ ಸೀಸನ್-2' ಕಾರ್ಯಕ್ರಮದಲ್ಲಿ ಎಪ್ಸ್ಟೀನ್ ಐಲ್ಯಾಂಡ್ ಕುರಿತಾದ ಜೋಕ್ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು 'ಇದು ಅಸಹ್ಯಕರ' ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊದಲ ಸೀಸನ್‌ನ ನೈಜತೆ ಮಿಸ್ ಆಗಿದೆ, ಎಲ್ಲವೂ ಸ್ಕ್ರಿಪ್ಟ್‌ನಂತೆ ಕಾಣುತ್ತಿದೆ ಎಂದು ವೀಕ್ಷಕರು ಬೇಸರಗೊಂಡಿದ್ದಾರೆ. ಸೀಸನ್ 1 ವಿವಾದದ ಬೆನ್ನಲ್ಲೇ ಹೊಸ ತಲೆನೋವು ಶುರುವಾಗಿದೆ.

ಮತ್ತೆ ವಿವಾದದಲ್ಲಿ ‘ಇಂಡಿಯಾಸ್ ಗಾಟ್ ಲೇಟೆಂಟ್ 2’; ಮತ್ತೆ ಬ್ಯಾನ್ ಭೀತಿ
ಸಮಯ್ ರೈನಾ
Edited By:

Updated on: Jun 22, 2026 | 7:43 AM

ಖ್ಯಾತ ಸ್ಟ್ಯಾಂಡ್‌ಅಪ್ ಕಮಿಡಿಯನ್ ಸಮಯ್ ರೈನಾ ಸಾರಥ್ಯದ ‘ಇಂಡಿಯಾಸ್ ಗಾಟ್ ಲೇಟೆಂಟ್’ ಸೀಸನ್-2 ಭಾರಿ ನಿರೀಕ್ಷೆಯೊಂದಿಗೆ ನೆಟ್‌ಫ್ಲಿಕ್ಸ್ ಹಾಗೂ ಯೂಟ್ಯೂಬ್‌ನಲ್ಲಿ ಶನಿವಾರ ಪ್ರಸಾರ ಕಂಡಿದೆ. ಆದರೆ, ಮೊದಲ ಎಪಿಸೋಡ್ ರಿಲೀಸ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಶೋ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಒಂದು ಜೋಕ್ ವಿವಾದದ ಕಿಡಿ ಹೊತ್ತಿಸಿದೆ.

ಮೊದಲ ಎಪಿಸೋಡ್‌ನಲ್ಲಿ ಬಾಲಿವುಡ್ ಸ್ಟಾರ್ ನಟಿಯರಾದ ಆಲಿಯಾ ಭಟ್ ಮತ್ತು ಶರ್ವರಿ ವಾಘ್ ಹಾಗೂ ಕಮಿಡಿಯನ್‌ಗಳಾದ ಆಶಿಶ್ ಸೋಲಂಕಿ ಮತ್ತು ಬಲರಾಜ್ ಘಾಯ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಆದರೆ ಶೋ ವೇಳೆ ಸ್ಪರ್ಧಿಯೊಬ್ಬರು ಮಾಡಿದ ಹಾಸ್ಯವೇ ಈಗ ವಿವಾದಕ್ಕೆ ಕಾರಣವಾಗಿದೆ.

ಸ್ಪರ್ಧಿ ಅವಿನಾಶ್ ಅಗರ್ವಾಲ್ ಅವರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೆ ನಟಿಸುತ್ತಿದ್ದರು. ಆಗ ಸಮಯ್ ಅವರು ‘ಆಯಿಲ್’ ಬೇಕು ಎಂದರು. ಇದಕ್ಕೆ ಉತ್ತರಿಸಿದ ಅವಿನಾಶ್, ‘ಕಮ್ ಟು ದಿ ಐಲ್ಯಾಂಡ್ ಮೈ ಫ್ರೆಂಡ್, ದೇರ್ ಇಸ್ ಎ ಲಾಟ್ ಆಫ್ ಆಯಿಲ್ ದೇರ್’ (ಆ ದ್ವೀಪಕ್ಕೆ ಬನ್ನಿ ಗೆಳೆಯಾ, ಅಲ್ಲಿ ಸಾಕಷ್ಟು ತೈಲವಿದೆ) ಎಂದು ‘ಎಪ್ಸ್ಟೀನ್ ಐಲ್ಯಾಂಡ್’ ಬಗ್ಗೆ ಜೋಕ್ ಮಾಡಿದರು.

ಏನಿದು ಎಪ್ಸ್ಟೀನ್ ಐಲ್ಯಾಂಡ್ ವಿವಾದ?

ಅಮೆರಿಕಾದ ಕೋಟ್ಯಧಿಪತಿ ಜೆಫ್ರಿ ಎಪ್ಸ್ಟೀನ್ ಎಂಬಾತ ಅಪ್ರಾಪ್ತ ಬಾಲಕಿಯರನ್ನು ಇಲ್ಲಿಗೆ ಸಾಗಿಸಿ ದೌರ್ಜನ್ಯ ಎಸಗುತ್ತಿದ್ದ ಆರೋಪದ ಮೇಲೆ ಜೈಲು ಸೇರಿದ್ದ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಇಂತಹ ಸೂಕ್ಷ್ಮ ವಿಷಯವನ್ನು ಹಾಸ್ಯಕ್ಕೆ ಬಳಸಿದ್ದನ್ನು ಕಂಡು ಎಕ್ಸ್ (ಟ್ವಿಟರ್)ನಲ್ಲಿ ನೆಟ್ಟಿಗರು ತೀವ್ರ ಕಿಡಿಕಾರಿದ್ದಾರೆ. ‘ಇದು ಅತ್ಯಂತ ಅಸಹ್ಯಕರ ಮತ್ತು ವಿಕೃತ ಮನಸ್ಥಿತಿ’ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

‘ಸೀಸನ್ 1 ರ ಗಮ್ಮತ್ತೇ ಇಲ್ಲ’ ಎಂದ ಫ್ಯಾನ್ಸ್

ಕೇವಲ ವಿವಾದ ಮಾತ್ರವಲ್ಲದೆ, ಈ ಬಾರಿ ಶೋನ ಕಾಮಿಡಿ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಮೊದಲ ಸೀಸನ್‌ನಲ್ಲಿದ್ದ ನೈಜತೆ ಮತ್ತು ಯಾರಿಗೂ ಹೆದರದ ಮುಕ್ತ ವಾತಾವರಣ ಈ ಬಾರಿ ಮಿಸ್ ಆಗಿದೆ. ಎಲ್ಲವೂ ಬಿಗ್ ಬಾಸ್ ಅಥವಾ ರೋಡೀಸ್ ಶೋಗಳಂತೆ ಮೊದಲೇ ಬರೆದಿಟ್ಟ ಸ್ಕ್ರಿಪ್ಟ್‌ನಂತೆ ಕಾಣುತ್ತಿದೆ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಸೆಲೆಬ್ರಿಟಿಗಳನ್ನು ಕರೆತಂದು ಶೋನ ಅಸಲಿ ಮಜಾವನ್ನು ಹಾಳು ಮಾಡಬೇಡಿ ಎಂದು ಸಮಯ್ ರೈನಾಗೆ ಅಭಿಮಾನಿಗಳು ಸಲಹೆ ನೀಡಿದ್ದಾರೆ. ಆದಾಗ್ಯೂ, ನಟ ಸುಕೃತ್ ದೇವ್ ಅವರ ಪ್ರದರ್ಶನ ಮಾತ್ರ ಕೊಂಚ ಮಟ್ಟಿಗೆ ವೀಕ್ಷಕರಿಗೆ ಇಷ್ಟವಾಗಿದೆ.

ಹಳೇ ವಿವಾದದ ಬೆನ್ನಲ್ಲೇ ಹೊಸ ತಲೆನೋವು

ಇತ್ತೀಚೆಗಷ್ಟೇ ಈ ಶೋನ ಮೊದಲ ಸೀಸನ್ ದೊಡ್ಡ ವಿವಾದಕ್ಕೆ ಸಿಲುಕಿತ್ತು. ಯೂಟ್ಯೂಬರ್ ರಣವೀರ್ ಅಲಾಬಾದಿಯಾ ಅವರು ಪೋಷಕರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದಾಗಿ ಶೋ ವಿರುದ್ಧ ಪೊಲೀಸ್ ದೂರು ಹಾಗೂ ಎಫ್‌ಐಆರ್ ದಾಖಲಾಗಿದ್ದವು. ಇದರಿಂದಾಗಿ ಸಮಯ್ ರೈನಾ ಸೀಸನ್-1ರ ಎಲ್ಲಾ ಎಪಿಸೋಡ್‌ಗಳನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಬೇಕಾಗಿ ಬಂದಿತ್ತು. ಆ ವಿವಾದದ ಬಿಸಿ ಆರುವ ಮುನ್ನವೇ ಸೀಸನ್-2 ಆರಂಭದಲ್ಲೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us