ಚಿತ್ರರಂಗದಲ್ಲಿ ಬೆಳೆಯಬೇಕಿದ್ದ ಬಾಲ ನಟ ರಾಹುಲ್ ಕೊಲಿ (Rahul Koli) ಬದುಕು ಅಂತ್ಯವಾಗಿದೆ. ಕ್ಯಾನ್ಸರ್ನಿಂದ ಆತ ಮೃತಪಟ್ಟಿದ್ದಾನೆ. ಈ ನೋವಿನ ಸುದ್ದಿ ತಿಳಿದು ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಭಾರತದಿಂದ ಈ ವರ್ಷ ಆಸ್ಕರ್ (Oscar) ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಆಗಿರುವ ‘ಚೆಲ್ಲೋ ಶೋ’ (Chhello Show) ಸಿನಿಮಾದಲ್ಲಿ ರಾಹುಲ್ ಕೊಲಿ ನಟಿಸಿದ್ದ. ಆದರೆ ಆ ಚಿತ್ರ ಬಿಡುಗಡೆ ಆಗಲು ಇನ್ನು ಕೆಲವೇ ದಿನಗಳ ಇರುವಾಗ ಆತ ಇಹಲೋಕ ತ್ಯಜಿಸಿದ್ದಾನೆ. ಆತನ ನಿಧನಕ್ಕೆ ಚಿತ್ರತಂಡದವರು ಸಂತಾಪ ಸೂಚಿಸಿದ್ದಾರೆ. ಮೂಲಗಳ ಪ್ರಕಾರ, ಅ.2ರಂದು ರಾಹುಲ್ ಕೊಲಿ ರಕ್ತ ವಾಂತಿ ಮಾಡಿಕೊಂಡಿದ್ದ. ನಂತರ ಜ್ವರ ಕೂಡ ಬಂದಿತ್ತು. ಬಳಿಕ ಆತ ಕೊನೆಯುಸಿರೆಳೆದ. ಆತನ ನಿಧನದಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅ.14ರಂದು ‘ಚೆಲ್ಲೋ ಶೋ’ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನವೇ ರಾಹುಲ್ ಕೊಲಿ ನಿಧನ ಹೊಂದಿದ್ದಾನೆ.
ಮಗನನ್ನು ಕಳೆದುಕೊಂಡ ನೋವಿನಲ್ಲೇ ರಾಹುಲ್ ಕೊಲಿ ಕುಟುಂಬದವರು ಅ.14ರಂದು ‘ಚೆಲ್ಲೋ ಶೋ’ ಚಿತ್ರ ನೋಡುವುದಾಗಿ ತಿಳಿಸಿದ್ದಾರೆ. ರಾಹುಲ್ ತಂದೆ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ‘ಈ ಸಿನಿಮಾ ರಿಲೀಸ್ ಆದ ಬಳಿಕ ನಮ್ಮ ಬದುಕು ಬದಲಾಗುತ್ತದೆ’ ಎಂದು ಮಗ ಹೇಳಿದ್ದ ಮಾತನ್ನು ನೆನಪಿಸಿಕೊಂಡು ಈಗ ತಂದೆ ಕಣ್ಣೀರು ಹಾಕುತ್ತಿದ್ದಾರೆ.
‘ಚೆಲ್ಲೋ ಶೋ’ ಸಿನಿಮಾ ಕುರಿತು:
ಪ್ಯಾನ್ ನಳಿನ್ ಅವರು ‘ಚೆಲ್ಲೋ ಶೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಕೊನೆಯ ಸಿನಿಮಾ ಶೋ’ ಎಂಬುದು ಈ ಶೀರ್ಷಿಕೆಯ ಅರ್ಥ. ನಿರ್ದೇಶಕರ ಬಾಲ್ಯದ ಅನುಭವಗಳನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎಂಬುದು ವಿಶೇಷ. ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿರುವ 9ರ ಪ್ರಾಯದ ಬಾಲಕನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ‘ಚೆಲ್ಲೋ ಶೋ’ ಸಿನಿಮಾ ಪ್ರದರ್ಶನ ಕಂಡಿದೆ. ಆ ಮೂಲಕ ಹಲವರ ಗಮನ ಸೆಳೆದಿದೆ.
ಡಿಫರೆಂಟ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಪ್ಯಾನ್ ನಳಿನ್ ಅವರಿಂದ ‘ಚೆಲ್ಲೋ ಶೋ’ ಚಿತ್ರ ಮೂಡಿಬಂದಿದೆ. ಹಳ್ಳಿ ಮತ್ತು ರೈಲ್ವೇ ಜಂಕ್ಷನ್ನಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸ್ಥಳೀಯ ಬಾಲಕರೇ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. 2020ರಲ್ಲಿ ಲಾಕ್ಡೌನ್ ಶುರುವಾಗುವುದಕ್ಕೂ ಮುನ್ನ ‘ಚೆಲ್ಲೋ ಶೋ’ ಶೂಟಿಂಗ್ ಪೂರ್ಣಗೊಂಡಿತ್ತು. ಲಾಕ್ ಡೌನ್ ಸಮಯದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಲಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:44 am, Tue, 11 October 22