ಬೆಚ್ಚಿ ಬೀಳಿಸಿದ ನಿರ್ದೇಶಕನ ಕೊಲೆ; ಮದುವೆ ಆಗದೇ ಇರುವುದಕ್ಕೆ ಮಗನನ್ನು ಕತ್ತರಿಸಿ ಕೊಂದ ತಂದೆ
ಬಾಬಕ್ ಖೊರಮ್ದಿನ್ ಅವರ ಕೊಲೆಯನ್ನು ಮರ್ಯಾದಾ ಹತ್ಯೆ ಎಂದು ಪರಿಗಣಿಸಲಾಗುತ್ತಿದೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಬಾಬಕ್ ಜನಪ್ರಿಯರಾಗಿದ್ದರು. ಆದರೆ ಅವರ ಜೀವನ ದುರಂತ ಅಂತ್ಯ ಕಂಡಿದೆ.
ಹಲವು ಕಾರಣಗಳಿಗಾಗಿ ಕೊಲೆಗಳು ನಡೆಯುತ್ತವೆ. ಆದರೆ ಈ ಕೊಲೆ ನಿಜಕ್ಕೂ ವಿಚಿತ್ರ. ಮಗ ಮದುವೆ ಆಗಿಲ್ಲ ಎನ್ನುವ ಕಾರಣಕ್ಕೆ ಪೋಷಕರೇ ಸೇರಿಕೊಂಡು ಸ್ವಂತ ಮಗನನ್ನು ಹತ್ಯೆ ಮಾಡಿದ್ದಾರೆ. ಈ ಸುದ್ದಿ ಕೇಳಿ ಎಲ್ಲರೂ ಬೆಚ್ಚಿ ಬೀಳುವಂತಾಗಿದೆ. ಹೀಗೆ ಅಮಾನುಷವಾಗಿ ಕೊಲೆ ಆಗಿರುವುದು ಇರಾನಿನ ಸಿನಿಮಾ ನಿರ್ದೇಶಕ ಬಾಬಕ್ ಖೊರಮ್ದಿನ್. ತಾವು ಮಗನ ಕೊಲೆ ಮಾಡಿರುವುದು ನಿಜ ಎಂದು ತಂದೆ-ತಾಯಿ ಒಪ್ಪಿಕೊಂಡಿದ್ದಾರೆ. ಹತ್ಯೆ ಮಾಡಿದ ಬಳಿಕ ಶವವನ್ನು ತುಂಡುತುಂಡಾಗಿ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ!
ಇರಾನ್ ಮೂಲದ ಬಾಬಕ್ ಖೊರಮ್ದಿನ್ ಲಂಡನ್ನಲ್ಲಿ ವಾಸಿಸುತ್ತಿದ್ದರು. ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ಫಿಲ್ಮ್ ಮೇಕಿಂಗ್ನಲ್ಲಿ ಅವರು ಸ್ನಾತಕೋತ್ತರ ಪದವಿ ಪಡೆದಿದ್ದರು. 47 ವರ್ಷವಾಗಿದ್ದರೂ ಬಾಬಕ್ ಅವರಿಗೆ ಮದುವೆ ಆಗಿರಲಿಲ್ಲ. ಅದೇ ಅವರ ಸಾವಿಗೆ ಕಾರಣ ಆಗಿದೆ! ಮದುವೆ ವಿಚಾರದಲ್ಲಿ ಬಾಬಕ್ ಅವರು ತಂದೆ ಜೊತೆ ವಾಗ್ವಾದ ಮಾಡಿಕೊಂಡಿದ್ದರು. ಮಗನಿಗೆ ಮದುವೆ ಆಗಿಲ್ಲ ಎಂಬ ವಿಷಯದಲ್ಲಿ ಪೋಷಕರಿಗೆ ತುಂಬ ಅವಮಾನ ಆಗುತ್ತಿತ್ತು. ಅದೇ ಕಾರಣಕ್ಕೆ ಕೊಲೆ ಮಾಡುವ ಕೆಟ್ಟ ನಿರ್ಧಾರವನ್ನು ಅವರು ತೆಗೆದುಕೊಂಡರು ಎಂದು ವರದಿ ಆಗಿದೆ.
ಇಂಥ ಘೋರ ಕೃತ್ಯ ಎಸಗಿರುವ ಪೋಷಕರನ್ನು ವಶಕ್ಕೆ ಪಡೆಯಲಾಗಿದೆ. ತಂದೆ-ತಾಯಿಯೇ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಮನೆಯಲ್ಲಿ ಸಾಕ್ಷಿಗಳು ದೊರೆತಿವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. 2010ರಲ್ಲಿ ಬಾಬಕ್ ಲಂಡನ್ಗೆ ತೆರಳಿದ್ದರು. ನಂತರ ಇರಾನ್ಗೆ ವಾಪಸ್ ಬಂದು ಸಿನಿಮಾ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಬಾಬಕ್ ಕೊಲೆಯನ್ನು ಮರ್ಯಾದಾ ಹತ್ಯೆ ಎಂದು ಪರಿಗಣಿಸಲಾಗುತ್ತಿದೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಬಾಬಕ್ ಜನಪ್ರಿಯರಾಗಿದ್ದರು. ಆದರೆ ಅವರ ಜೀವನ ದುರಂತ ಅಂತ್ಯ ಕಂಡಿದೆ.
‘ನನ್ನ ಮಗನಿಗೆ ಮದುವೆ ಆಗಿರಲಿಲ್ಲ. ಅವನು ಒಂಟಿಯಾಗಿ ಇದ್ದ. ನಮಗೆ ಕಿರುಕುಳ ನೀಡುತ್ತಿದ್ದ. ನಮ್ಮ ಪ್ರಾಣಕ್ಕೆ ಅಪಾಯವಿತ್ತು. ನಾವು ಸುರಕ್ಷಿತವಾಗಿ ಇರಲಿಲ್ಲ. ಆತ ತನ್ನ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದ. ಅದಕ್ಕಾಗಿ ನಾನು ಮತ್ತು ನನ್ನ ಹೆಂಡತಿ ಈ ನಿರ್ಧಾರಕ್ಕೆ ಬಂದೆವು. ನಮ್ಮ ಗೌರವವನ್ನು ನಾವು ಇನ್ನಷ್ಟು ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಹಾಗಾಗಿ ಅವನನ್ನು ಮುಗಿಸಿದೆವು. ಇದರಲ್ಲಿ ನಮಗೆ ಯಾವುದೇ ಪಶ್ಚಾತಾಪ ಇಲ್ಲ’ ಎಂದು ಬಾಬಕ್ ಪೋಷಕರು ಹೇಳಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:
ಮರ್ಯಾದಾ ಹತ್ಯೆ: ಪ್ರೀತಿಸಿ ವಿವಾಹವಾಗಿದ್ದಕ್ಕೆ ಪ್ರಿಯಕರನ ಹತ್ಯೆ, ಪ್ರಿಯತಮೆ ಬಚಾವ್