ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಕೆಲವು ದಿನಗಳಿಂದ ಸುದ್ದಿ ಕೇಳಿಬರುತ್ತಲೇ ಇದೆ. ಆದರೆ ಈ ವಿಚಾರವನ್ನು ಅನುಷ್ಕಾ ಶರ್ಮಾ (Anushka Sharma) ಅವರಾಗಲೀ, ವಿರಾಟ್ ಅವರಾಗಲೀ ಸ್ಪಷ್ಟಪಡಿಸಿಲ್ಲ. ಹಾಗಿದ್ದರೂ ಕೂಡ ಗಾಸಿಪ್ ಜೋರಾಗಿದೆ. ಅದರ ಜೊತೆಗೆ ಕೆಲವು ಫೋಟೋಗಳು ಕೂಡ ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶರ್ಮಾ ಅವರ ಬೇಬಿ ಬಂಪ್ (Baby Bump) ಫೋಟೋ ಹರಿದಾಡುತ್ತಿದೆ. ಅದನ್ನು ಕೆಲವರು ನಿಜವೆಂದು ನಂಬಿದ್ದಾರೆ.
ಅನುಷ್ಕಾ ಶರ್ಮಾ ಎರಡನೇ ಬಾರಿ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಗಾಸಿಪ್ ಹಬ್ಬಲು ಅನೇಕ ಕಾರಣಗಳು ಇವೆ. ‘ಜೀರೋ’ ಸಿನಿಮಾ ತೆರೆಕಂಡ ಬಳಿಕ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಒಪ್ಪಿಕೊಂಡ ‘ಚಕ್ದಾ ಎಕ್ಸ್ಪ್ರೆಸ್’ ಸಿನಿಮಾದ ಬಿಡುಗಡೆ ತಡವಾಗುತ್ತಿದೆ. ಎರಡನೇ ಮಗು ಪಡೆಯುವ ಉದ್ದೇಶದಿಂದಲೇ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ ಎಂಬುದು ಹಲವರ ಊಹೆ.
ಈ ಫೋಟೋದಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಖುಷಿ ಖುಷಿಯಾಗಿ ಪೋಸ್ ನೀಡಿದ್ದಾರೆ. ಆದರೆ ಇದು ಹೊಸ ಫೋಟೋ ಅಲ್ಲ ಎಂಬುದು ಅಷ್ಟೇ ಸ್ಪಷ್ಟ. 2018ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋ ಇದು. ಅದನ್ನೇ ಈಗ ತಿರುಚಿದ ರೀತಿಯಲ್ಲಿ ಎಡಿಟ್ ಮಾಡಿ ಮತ್ತೊಮ್ಮೆ ವೈರಲ್ ಮಾಡುವ ಮೂಲಕ ಗಾಸಿಪ್ ಹಬ್ಬಿಸಲಾಗಿದೆ. ಅನೇಕರು ಅದನ್ನು ನಿಜ ಎಂದು ನಂಬಿಕೊಂಡಿದ್ದಾರೆ.
ಇದನ್ನೂ ಓದಿ: 2ನೇ ಮಗು ಆದ ಬಳಿಕ ನಟನೆಗೆ ಗುಡ್ಬೈ ಹೇಳ್ತಾರಾ ಅನುಷ್ಕಾ ಶರ್ಮಾ? ಗುಮಾನಿಗೆ ಕಾರಣ ಆಗಿದೆ ಈ ವಿಡಿಯೋ
ಮದುವೆ ಬಳಿಕ ಕೆಲವು ನಟಿಯರು ಸಿನಿಮಾಗಳಿಂದ ದೂರ ಉಳಿದುಕೊಳ್ಳುತ್ತಾರೆ. ಮಗು ಪಡೆದ ನಂತರ ಸಿನಿಮಾ ಕೆಲಸಗಳಿಗೆ ಸಮಯ ನೀಡಲು ಕಷ್ಟವಾಗುತ್ತದೆ. ಅನುಷ್ಕಾ ಶರ್ಮಾ ಅವರು 2021ರ ಜನವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗಳ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ಹಾಗಾಗಿ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರ ಕಡೆಯಿಂದ ಆದಷ್ಟು ಬೇಗ ಗುಡ್ನ್ಯೂಸ್ ಸಿಗಲಿ ಎಂದು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.