‘ನನ್ನಿಂದ ದೊಡ್ಡ ತಪ್ಪಾಯಿತು’: ‘ಪೆದ್ದಿ’ ಸಿನಿಮಾದ ಪಾತ್ರದ ಬಗ್ಗೆ ಜಾನ್ವಿ ಕಪೂರ್ ಬೇಸರ

‘ಪೆದ್ದಿ’ ಸಿನಿಮಾ ಬಿಡುಗಡೆಯಾಗಿ ತಿಂಗಳುಗಳು ಕಳೆದರೂ ಆ ಚಿತ್ರದ ಬಗೆಗಿನ ಚರ್ಚೆಗಳು ನಿಂತಿಲ್ಲ. ಸಿನಿಮಾದ ನಟಿ ಜಾನ್ವಿ ಕಪೂರ್ ಅವರ ‘ಕಾಫಿ ವಿತ್ ಕರಣ್’ ಶೋನಲ್ಲಿ ‘ಪೆದ್ದಿ’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆ ಚಿತ್ರದಲ್ಲಿ ತಮ್ಮ ಪಾತ್ರವನ್ನು ತೋರಿಸಿರುವ ರೀತಿ ಸರಿ ಇರಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

‘ನನ್ನಿಂದ ದೊಡ್ಡ ತಪ್ಪಾಯಿತು’: ‘ಪೆದ್ದಿ’ ಸಿನಿಮಾದ ಪಾತ್ರದ ಬಗ್ಗೆ ಜಾನ್ವಿ ಕಪೂರ್ ಬೇಸರ
Janhvi Kapoor

Updated on: Oct 28, 2026 | 10:17 PM

ಬುಚ್ಚಿ ಬಾಬು ಸನಾ ನಿರ್ದೇಶನದ, ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಚಿತ್ರೀಕರಿಸಿದ ಶೈಲಿಯ ಕುರಿತು ಬಾಲಿವುಡ್ ನಟಿ ಜಾನ್ವಿ ಕಪೂರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ಅತಿ ಗ್ಲಾಮರಸ್ ಆಗಿ ತೋರಿಸಲಾಗಿತ್ತು ಎಂಬ ತೀವ್ರ ಟೀಕೆಗಳು ಎದುರಾಗಿದ್ದವು. ಈಗ ಕರಣ್ ಜೋಹರ್ ನಡೆಸಿಕೊಡುವ ಪ್ರಸಿದ್ಧ ‘ಕಾಫಿ ವಿತ್ ಕರಣ್’ ಟಾಕ್ ಶೋನಲ್ಲಿ ಭಾಗವಹಿಸಿ ಜಾನ್ವಿ ಕಪೂರ್ ಅವರು ಆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಕರಣ್ ಜೋಹರ್ ಅವರ ಪ್ರಶ್ನೆಗೆ ಭಾವುಕರಾಗಿ ಉತ್ತರಿಸಿದ ಜಾನ್ವಿ, ‘ಆ ಸಿನಿಮಾಗಾಗಿ ಅನೇಕರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆದರೆ, ಅಂತಹ ಒಂದು ಪಾತ್ರವು ನಮ್ಮ ಸಮಾಜದ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ಬೀರಬಹುದಾದ ನಕಾರಾತ್ಮಕ ಪರಿಣಾಮವು ನನ್ನ ಮನಸಾಕ್ಷಿಯನ್ನು ತೀವ್ರವಾಗಿ ಕಾಡುತ್ತಿದೆ. ಆ ಗಿಲ್ಟ್ ನನ್ನಲ್ಲಿ ಸದಾ ಇರುತ್ತದೆ. ನಾನು ಈ ವಿಷಯದಲ್ಲಿ ಇನ್ನಷ್ಟು ಜಾಗರೂಕರಾಗಿರಬೇಕಿತ್ತೇ? ಖಂಡಿತವಾಗಿಯೂ ಹೌದು. ಅದು ಸಮಸ್ಯಾತ್ಮಕವಾಗಿತ್ತೇ? ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ ನೀಡುವಂತಿತ್ತೇ? ಹೌದು. ಆದರೆ, ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವುದೊಂದೇ ನಾನು ಮಾಡಬಹುದಾದ ಕೆಲಸ’ ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಜಾನ್ವಿ ಕಪೂರ್ ಅವರು, ‘ನನ್ನಿಂದ ತಪ್ಪಾಯಿತು ಎಂದು ನಾನೇ ಶಿಕ್ಷಿಸಿಕೊಳ್ಳುವ ಮಟ್ಟಕ್ಕೆ ಹೋದಾಗ, ಬ್ಲೇಮ್ ಶೇರ್ ಮಾಡುತ್ತಿದ್ದೇನೆ ಎನಿಸಬಹುದು. ಆದರೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಪೂರ್ಣ ಪ್ರಮಾಣದ ಬೌಂಡ್ ಸ್ಕ್ರಿಪ್ಟ್ ಸಿಗುವುದು ಅಪರೂಪ. ಅಲ್ಲದೆ ಯಾವ ಆ್ಯಂಗಲ್‌ನಲ್ಲಿ ಕ್ಯಾಮೆರಾ ಇಡುತ್ತಾರೆ ಎಂಬುದು ತಿಳಿಯುವುದಿಲ್ಲ. ನಿರ್ದೇಶಕರು ಹೇಳಿದಂತೆ ಕೇಳಬೇಕಾಗುತ್ತದೆ. ಆದರೂ, ನನ್ನಲ್ಲಿರುವ ಪ್ರಭಾವ ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ನಾನು ಇದನ್ನು ತಡೆಯಬೇಕಿತ್ತು. ಇದೊಂದು ರೀತಿಯಲ್ಲಿ ವೈಯಕ್ತಿಕವಾಗಿ ಆಘಾತಕಾರಿ ಅನುಭವ. ಆದರೆ, ಈ ಘಟನೆಯಿಂದ ಆದ ಒಂದು ಒಳ್ಳೆಯ ವಿಷಯವೆಂದರೆ, ಮುಂದಿನ ಬಾರಿ ಒಬ್ಬ ನಿರ್ದೇಶಕ ನಾಯಕಿಯನ್ನು ಈ ರೀತಿ ತೆರೆಯ ಮೇಲೆ ತೋರಿಸುವ ಮುನ್ನ ನೂರು ಬಾರಿ ಯೋಚಿಸುತ್ತಾನೆ’ ಎಂದಿದ್ದಾರೆ.

‘ಪೆದ್ದಿ’ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರು ಅಚ್ಚಿಯಮ್ಮ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು. ಸಿನಿಮಾ ಬಿಡುಗಡೆಯಾದ ತಕ್ಷಣ, ನಾಯಕಿಯನ್ನು ಪರಿಚಯಿಸುವ ದೃಶ್ಯಗಳಲ್ಲಿ ಅವರ ಕಥೆಗಿಂತ ಹೆಚ್ಚಾಗಿ ಅವರ ದೇಹದ ಭಾಗಗಳನ್ನೇ ಹೈಲೈಟ್ ಮಾಡಲಾಗಿದೆ ಎಂದು ಪ್ರೇಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜೊತೆಗೆ, ನಾಯಕಿಗೆ ಇಷ್ಟವಿಲ್ಲದಿದ್ದರೂ ನಾಯಕ ಆಕೆಯನ್ನು ಬಲವಂತವಾಗಿ ಮುಟ್ಟುವ ಮತ್ತು ವಿದ್ಯುತ್ ಕಡಿತಗೊಂಡಾಗ ಅನುಮತಿಯಿಲ್ಲದೆ ಕಿಸ್ ಮಾಡುವ ದೃಶ್ಯಗಳು ತೀವ್ರ ಟೀಕೆಗೆ ಗುರಿಯಾಗಿದ್ದವು.

ಇದನ್ನೂ ಓದಿ: ನೆಟ್‌ಫ್ಲಿಕ್ಸ್‌ನಲ್ಲಿ ‘ಪೆದ್ದಿ’ ಬಿಡುಗಡೆ: ಜಾನ್ವಿ ಕಪೂರ್ ನಟನೆಯ ವಿವಾದಾತ್ಮಕ ದೃಶ್ಯಕ್ಕೆ ಕತ್ತರಿ

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ನಿರ್ದೇಶಕ ಬುಚಿ ಬಾಬು ಸನಾ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಕ್ಷಮೆಯಾಚಿಸಿದ್ದರು. ‘ಮಹಿಳೆಯರ ಮೇಲೆ ನಮಗೆ ಅಪಾರ ಗೌರವವಿದೆ. ಯಾವುದೇ ಪಾತ್ರವನ್ನು ಕೆಟ್ಟದಾಗಿ ತೋರಿಸುವ ಉದ್ದೇಶ ನಮಗಿರಲಿಲ್ಲ. ಪ್ರೇಕ್ಷಕರ ಭಾವನೆಗಳಿಗೆ ಗೌರವ ನೀಡಿ, ಚಿತ್ರದಲ್ಲಿದ್ದ ಆ ಸಮಸ್ಯಾತ್ಮಕ ದೃಶ್ಯಗಳನ್ನು ತೆಗೆದುಹಾಕುತ್ತಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us