ದಕ್ಷಿಣ ಭಾರತದ ಮೇಲೆ 4 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಜಿಯೋ ಹಾಟ್ಸ್ಟಾರ್
Jiohotstar Investment: ಜಿಯೋ ಹಾಟ್ಸ್ಟಾರ್ ಭಾರತದ ಬಹುದೊಡ್ಡ ಒಟಿಟಿ ಸಂಸ್ಥೆ. ಸುಮಾರು ನಾಲ್ಕು ಕೋಟಿಗೂ ಹೆಚ್ಚು ಚಂದಾದಾರರನ್ನು ಜಿಯೋಹಾಟ್ಸ್ಟಾರ್ ಭಾರತದಲ್ಲಿ ಹೊಂದಿದೆ. ಇದೀಗ ಜಿಯೋ ಹಾಟ್ಸ್ಟಾರ್ ದಕ್ಷಿಣ ಭಾರತದ ಮೇಲೆ ಭಾರಿ ದೊಡ್ಡ ಹೂಡಿಕೆ ಮಾಡಲು ಮುಂದಾಗಿದೆ. ಸುಮಾರು 4000 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡುತ್ತಿದೆ.

ದಕ್ಷಿಣ ಭಾರತ ಚಿತ್ರರಂಗದ (South movie industry) ಮೇಲೆ ಈಗ ವಿಶ್ವದ ಕಣ್ಣು ಬಿದ್ದಿದೆ. ಭಾರತೀಯ ಸಿನಿಮಾ ಎಂದರೆ ಅದು ಬಾಲಿವುಡ್ ಎಂಬ ಕಾಲವೊಂದಿತ್ತು, ಆದರೆ ಈಗ ಭಾರತೀಯ ಸಿನಿಮಾ ಎಂದರೆ ಅದು ದಕ್ಷಿಣ ಭಾರತದ ಸಿನಿಮಾ ಎಂಬಂತಾಗಿದೆ. ಒಂದಕ್ಕಿಂತಲೂ ಒಂದು ಅದ್ಭುತವಾದ ಸಿನಿಮಾ, ಒಟಿಟಿ ಕಂಟೆಂಟ್ ಬರುತ್ತಿರುವುದು ದಕ್ಷಿಣ ಭಾರತದಿಂದಲೇ. ಇದೇ ಕಾರಣಕ್ಕೆ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಲು ಈಗ ಬೃಹತ್ ಒಟಿಟಿಗಳು ಸಹ ದಕ್ಷಿಣ ಭಾರತ ಚಿತ್ರರಂಗದ ಮೇಲೆ ಹೂಡಿಕೆ ಮಾಡಲು ಮುಂದಾಗಿವೆ. ಇತ್ತೀಚೆಗಷ್ಟೆ ನೆಟ್ಪ್ಲಿಕ್ಸ್, ತಾನು ಭಾರಿ ದೊಡ್ಡ ಮೊತ್ತವನ್ನು ದಕ್ಷಿಣ ಭಾಷೆಯ ವೆಬ್ ಸೀರೀಸ್ ಕಂಟೆಂಟ್ ಮೇಲೆ ಹೂಡಿಕೆ ಮಾಡುತ್ತಿರುವುದಾಗಿ ಘೋಷಿಸಿತ್ತು, ಅದರ ಬೆನ್ನಲ್ಲೆ ಈಗ ಅದೇ ರೀತಿಯ ಘೋಷಣೆಯನ್ನು ಜಿಯೋ ಹಾಟ್ಸ್ಟಾರ್ ಮಾಡಿದೆ.
ಜಿಯೋ ಹಾಟ್ಸ್ಟಾರ್ ವತಿಯಿಂದ ಚೆನ್ನೈನಲ್ಲಿ ಇಂದು ‘ಸೌಥ್ ಅನ್ಬೌಂಡ್’ ಹೆಸರಿನ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ತಮಿಳುನಾಡಿನ ಉಪ ಮುಖ್ಯಮಂತ್ರಿ, ನಟ ಉದಯನಿಧಿ ಸ್ಟಾಲಿನ್, ರಾಜ್ಯಸಭಾ ಸದಸ್ಯ ಮತ್ತು ನಟ ಕಮಲ್ ಹಾಸನ್, ನಾಗಾರ್ಜುನ, ಮೋಹನ್ಲಾಲ್, ವಿಜಯ್ ಸೇತುಪತಿ ಅವರುಗಳು ಭಾಗಿ ಆಗಿದ್ದರು. ಇದೇ ಕಾರ್ಯಕ್ರಮದಲ್ಲಿ ಜಿಯೋ ಹಾಟ್ಸ್ಟಾರ್, ದಕ್ಷಿಣದ ಕಂಟೆಂಟ್ ಮೇಲೆ 4 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಲ್ಲದೆ, ತಮಿಳುನಾಡು ಸರ್ಕಾರದೊಂದಿಗೆ ಲೆಟರ್ ಆಫ್ ಇಂಟೆಂಟ್ (ಉದ್ದೇಶಿತ ಒಪ್ಪಂದ) ಮಾಡಿಕೊಂಡಿತು.
ಇದೇ ಸಮಯದಲ್ಲಿ 25 ಹೊಸ ಸಿನಿಮಾ, ಒಟಿಟಿ ಕಂಟೆಂಟ್ಗಳ ಶೀರ್ಷಿಕೆಯನ್ನು ಸಹ ಜಿಯೋ ಹಾಟ್ಸ್ಟಾರ್ ಅನಾವರಣ ಮಾಡಿತು. ದಕ್ಷಿಣ ಭಾರತದ ಭಾಷೆಗಳಲ್ಲಿ ವೆಬ್ ಸರಣಿಗಳು, ಒರಿಜಿನಲ್ ಕಂಟೆಂಟ್ ಮಿನಿ ಸರಣಿಗಳು, ಸಿನಿಮಾಗಳನ್ನು ನಿರ್ಮಿಸಿಲು, ಹಕ್ಕು ಖರೀದಿಸಿ ಬಿಡುಗಡೆ ಮಾಡಲು ಜಿಯೋ ಹಾಟ್ಸ್ಟಾರ್ ಯೋಜನೆ ಹಾಕಿಕೊಂಡಿದೆ. ಜೊತೆಗೆ ಪ್ರತಿಭಾ ಪ್ರೋತ್ಸಾಹಕ್ಕೂ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ:ಭಾರಿ ದೊಡ್ಡ ಮೊತ್ತಕ್ಕೆ ಮಾರಾಟ ಆಯ್ತು ‘ಧುರಂಧರ್’ ಒಟಿಟಿ ಹಕ್ಕು
ಮುಂದಿನ ಒಂದು ವರ್ಷದಲ್ಲಿ 1500 ಗಂಟೆಗಳ ಹೊಸ ದಕ್ಷಿಣ ಭಾರತ ಕಂಟೆಂಟ್ ಅನ್ನು ನಿರ್ಮಾಣ ಮಾಡಿ ಪ್ರಸಾರ ಮಾಡುವ ಗುರಿ ಹೊಂದಿರುವುದಾಗಿ ಜಿಯೋ ಹಾಟ್ಸ್ಟಾರ್ ಘೋಷಣೆ ಮಾಡಿದೆ. ಜಿಯೋ ಹಾಟ್ಸ್ಟಾರ್ ಪ್ರಸ್ತುತ ಭಾರತದ ಎಲ್ಲ ಪ್ರದೇಶಗಳಲ್ಲಿಯೂ ಚಂದಾದಾರರನ್ನು ಹೊಂದಿದೆ. ಸುಮಾರು ನಾಲ್ಕು ಕೋಟಿ ಭಾರತೀಯ ಚಂದಾದಾರರನ್ನು ಜಿಯೋ ಹಾಟ್ಸ್ಟಾರ್ ಹೊಂದಿದೆಯಂತೆ. ಮುಂದಿನ ಐದು ತಿಂಗಳಲ್ಲಿ 500 ಹೊಸ ಕ್ರಿಯೇಟರ್ಗಳು, ನಿರ್ದೇಶಕರು, ನಟರುಗಳನ್ನು ಒಟ್ಟು ಮಾಡಿ ಹೊಸ ಕಂಟೆಂಟ್ ಸೃಷ್ಟಿಮಾಡುವುದಾಗಿ ಜಿಯೋ ಹಾಟ್ಸ್ಟಾರ್ ಹೇಳಿದೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಮಲ್ ಹಾಸನ್, ‘ಈಗ ಪ್ರಾದೇಶಿಕ ಸಿನಿಮಾ ಎಂಬುದು ವಿಶ್ವ ಸಿನಿಮಾ ಆಗಿದೆ. ಮಧುರೈ, ಮಲ್ಲಪುರಂ, ಮಚಲೀಪಟ್ಟಣಂ, ಮಂಡ್ಯದಲ್ಲಿ ಜನಿಸಿದ ಕತೆ ಅಲ್ಲಿಗೇ ಸೀಮಿತವಾಗಿಲ್ಲ ಅದು ಈಗ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಆ ಕತೆಗಳು ಈಗ ದೇಶದ ಸಾಂಸ್ಕೃತಿಕ ಪ್ರತಿನಿಧಿಗಳಾಗಿವೆ’ ಎಂದರು. ಅಲ್ಲದೆ ಜಿಯೋ ಹಾಟ್ಸ್ಟಾರ್ನ ಹೊಸ ಪ್ರಯತ್ನಕ್ಕೆ ಶುಭಾಶಯ ತಿಳಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




