ಭಾರಿ ದೊಡ್ಡ ಮೊತ್ತಕ್ಕೆ ಮಾರಾಟ ಆಯ್ತು ‘ಧುರಂಧರ್’ ಒಟಿಟಿ ಹಕ್ಕು
ಹಲವು ವಿಘ್ನಗಳನ್ನು ದಾಟಿಕೊಂಡು ಬಿಡುಗಡೆ ಆದ ‘ಧುರಂಧರ್’ ಸಿನಿಮಾ ಜನರ ಮೆಚ್ಚುಗೆ ಗಳಿಸಿದೆ. ಚಿತ್ರಮಂದಿರಗಳಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡುತ್ತಿರುವಾಗಲೇ ಈ ಚಿತ್ರದ ಒಟಿಟಿ ವ್ಯವಹಾರ ನಡೆದಿದೆ. ಬರೋಬ್ಬರಿ 130 ಕೋಟಿ ರೂಪಾಯಿಗೆ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಸೇಲ್ ಆಗಿವೆ ಎನ್ನಲಾಗಿದೆ.

ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರ ಖಾತೆಗೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಸೇರ್ಪಡೆ ಆಗಿದೆ. ಅವರು ನಟಿಸಿರುವ ‘ಧುರಂಧರ್’ (Dhurandhar) ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಡಿಸೆಂಬರ್ 5ರಂದು ಈ ಸಿನಿಮಾ ಬಿಡುಗಡೆ ಆಯಿತು. ಪ್ರತಿ ದಿನವೂ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಗಳಿಕೆ ಆಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಈ ಪರಿ ಕಲೆಕ್ಷನ್ ಆಗುತ್ತಿರುವಾಗಲೇ ಸಿನಿಮಾದ ಒಟಿಟಿ (OTT) ವ್ಯವಹಾರ ಕುದುರಿದೆ. ವರದಿಗಳ ಪ್ರಕಾರ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದೆ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಅವರು ಈಗ ‘ಧುರಂಧರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನೈಜ ಘಟನೆ ಆಧಾರಿತ ಕಥೆ ಇದೆ. ರಣವೀರ್ ಸಿಂಗ್ ಅವರು ತುಂಬ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಮ್ಪಾಲ್ ಮುಂತಾದ ಕಲಾವಿದರ ನಟನೆಗೆ ಪ್ರಶಂಸೆ ಸಿಗುತ್ತಿದೆ.
ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾದ 2ನೇ ಪಾರ್ಟ್ ಕೂಡ ಬರಲಿದೆ. ಮೊದಲ ಮತ್ತು ಎರಡನೇ ಪಾರ್ಟ್ ಸೇರಿ ಒಟ್ಟು 130 ಕೋಟಿ ರೂಪಾಯಿಗೆ ಡೀಲ್ ಮಾಡಿಕೊಳ್ಳಲಾಗಿದೆ. ಸದ್ಯದ ಮಾರುಕಟ್ಟೆ ದೃಷ್ಟಿಯಿಂದ ಇದು ಅತ್ಯುತ್ತಮ ದರ ಎಂದು ವ್ಯವಹಾರ ಬಲ್ಲವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾದಿಂದ ರಣವೀರ್ ಸಿಂಗ್ ಅವರ ಖ್ಯಾತಿ ಹೆಚ್ಚಾಗಿದೆ.
5 ದಿನಕ್ಕೆ ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್’ ಸಿನಿಮಾದ ಒಟ್ಟು ಕಲೆಕ್ಷನ್ 148 ಕೋಟಿ ರೂಪಾಯಿ ಆಗಿದೆ. ಮೊದಲ ದಿನ ಈ ಚಿತ್ರ 28 ಕೋಟಿ ರೂಪಾಯಿ ಗಳಿಸಿತ್ತು. 2ನೇ ದಿನ 32 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಮೂರನೇ ದಿನವಾದ ಭಾನುವಾರ ಬರೋಬ್ಬರಿ 43 ಕೋಟಿ ರೂಪಾಯಿ ಗಳಿಸುವ ಮೂಲಕ ಬಂಪರ್ ಬೆಳೆ ತೆಗೆಯಿತು. 4ನೇ ದಿನ 23.25 ಕೋಟಿ ರೂಪಾಯಿ ಗಳಿಸಿತು. 5ನೇ ದಿನ ಅಂದಾಜು 22.66 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ‘ಧುರಂಧರ್’ ನಟನೆಗೆ ಅಕ್ಷಯ್ ಖನ್ನಾಗೆ ಆಸ್ಕರ್ ಸಿಗಬೇಕು ಎಂದ ಖ್ಯಾತ ನಿರ್ದೇಶಕಿ
ಚಿತ್ರಮಂದಿರಗಳಲ್ಲಿ ‘ಧುರಂಧರ್’ ಸಿನಿಮಾ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿರುವುದರಿಂದ ಶೀಘ್ರದಲ್ಲೇ ಈ ಸಿನಿಮಾ ಒಟಿಟಿಗೆ ಬರುವುದಿಲ್ಲ. ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ತಗ್ಗಿದ ಬಳಿಕ ಒಟಿಟಿಯಲ್ಲಿ ಪ್ರಸಾರ ಆಗುತ್ತದೆ. ಈಗ ನಡೆದಿರುವ ಒಟಿಟಿ ವ್ಯವಹಾರದ ಬಗ್ಗೆ ಚಿತ್ರತಂಡದವರಾಗಲಿ, ಒಟಿಟಿ ಸಂಸ್ಥೆಯ ಕಡೆಯಿಂದಾಗಿ ಅಧಿಕೃತ ಮಾಹಿತಿ ಹೊರಬಂದಿಲ್ಲ. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




