ಸಿನಿಮಾ ತೊರೆದು ರಾಜಕೀಯಕ್ಕೆ ಹೊರಳಲಿದ್ದಾರೆ ಜೂ.ಎನ್‌ಟಿಆರ್? ನಟನಿಗೆ ಬಂತು ಆಹ್ವಾನ
Jr. NTR: ಜೂ.ಎನ್‌ಟಿಆರ್ ಸೋದರ ಸಂಬಂಧಿ, ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಜೂ.ಎನ್‌ಟಿಆರ್ ಚುನಾವಣೆಗೆ ಬರಬೇಕು ಎನ್ನುವ ಆಹ್ವಾನ ನೀಡಿದ್ದಾರೆ.
ರಾಜಕೀಯಕ್ಕೂ ಸಿನಿಮಾ ರಂಗಕ್ಕೂ ಎಲ್ಲಿಲ್ಲದ ನಂಟು. ಅನೇಕ ಹೀರೋಗಳು ಸಿನಿಮಾದಲ್ಲಿ ಖ್ಯಾತಿ ಪಡೆದ ನಂತರ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ. ಅದೇ ರೀತಿ ರಾಜಕಾರಣಿಗಳ ಮಕ್ಕಳು ಚಿತ್ರರಂಗದಲ್ಲಿ ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗುತ್ತಾರೆ. ಈಗ ಜೂ.ಎನ್‌ಟಿಆರ್ (Jr. NTR) ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ಅವರಿಗೆ ಹಲವು ರಾಜಕೀಯ ಮುಖಂಡರಿಂದ ಆಹ್ವಾನ ಬಂದಿರೋದು ಈ ಅನುಮಾನ ಹುಟ್ಟಿಕೊಳ್ಳಲು ಕಾರಣ. ಒಂದೊಮ್ಮೆ ಅವರು ಸಿನಿಮಾ ರಂಗ (Cinema Industry) ತೊರೆದರೆ ಸಿನಿಪ್ರಿಯರಿಗೆ ಬೇಸರ ಆಗೋದು ಗ್ಯಾರಂಟಿ.
ಜೂ.ಎನ್ಟಿಆರ್ಗೂ ರಾಜಕೀಯಕ್ಕೂ ಮೊದಲಿನಿಂದಲೂ ನಂಟಿದೆ. 2009ರಲ್ಲಿ ಅವರು ರಾಜಕೀಯದ ಕಡೆ ಒಲವು ತೋರಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಜೂ.ಎನ್‌ಟಿಆರ್ ಆಂಧ್ರಪ್ರದೇಶದಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ಜೂ.ಎನ್‌ಟಿಆರ್ ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಎಂದು ಟಿಡಿಪಿ ಬೆಂಬಲಿಗರು ಹಾಗೂ ಫ್ಯಾನ್ಸ್ ಕೋರಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಈಗ ಮತ್ತೆ ಈ ಕೂಗು ಜೋರಾಗಿದೆ.
ಜೂ.ಎನ್‌ಟಿಆರ್ ಸೋದರ ಸಂಬಂಧಿ, ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಜೂ.ಎನ್‌ಟಿಆರ್ ಚುನಾವಣೆಗೆ ಬರಬೇಕು ಎನ್ನುವ ಆಹ್ವಾನ ನೀಡಿದ್ದಾರೆ. ತಿರುಪತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಜೂ.ಎನ್ಟಿಆರ್ಗೆ ಆಹ್ವಾನ ನೀಡಿದ್ದಾರೆ.
‘ಆಂಧ್ರಪ್ರದೇಶದ ರಾಜಕೀಯದಲ್ಲಿ ಬದಲಾವಣೆಯನ್ನು ನೋಡಲು ಬಯಸುವ ಹಾಗೂ ದೇಶದ ರಾಜಕೀಯದಲ್ಲಿ ನಮ್ಮ ರಾಜ್ಯವೇ ಪ್ರಮುಖವಾಗಬೇಕು ಎಂದು ಬಯಸುವ ಯಾರನ್ನಾದರೂ ನಾನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಜೂ. ಎನ್‌ಟಿಆರ್ ಅವರನ್ನು ಸಕ್ರಿಯ ರಾಜಕೀಯಕ್ಕೆ ಸ್ವಾಗತಿಸುತ್ತೇನೆ’ ಎಂದು ನಾರಾ ಲೋಕೇಶ್ ಹೇಳುತ್ತಿದ್ದಂತೆ ಜನರಿಂದ ಚಪ್ಪಾಳೆಗಳು ಬಂದವು.
ಇದನ್ನೂ ಓದಿ: ನಂದಮೂರಿ ಕುಟುಂಬದಲ್ಲಿ ಸೂತಕದ ಛಾಯೆ; ಆಸ್ಕರ್ಗಾಗಿ ಜೂ.ಎನ್‌ಟಿಆರ್ ಅಮೆರಿಕಕ್ಕೆ ತೆರಳುವುದು ಮತ್ತಷ್ಟು ವಿಳಂಬ
2022ರಲ್ಲಿ ರಿಲೀಸ್ ಆದ ‘ಆರ್ಆರ್ಆರ್’ ಚಿತ್ರದ ಗೆಲುವಿನ ಖುಷಿ ಜೂ.ಎನ್ಟಿಆರ್ಗೆ ಇನ್ನೂ ಕಡಿಮೆ ಆಗಿಲ್ಲ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ರೇಸ್ನಲ್ಲಿದೆ. ಇದಕ್ಕಾಗಿ ರಾಮ್ ಚರಣ್ ಹಾಗೂ ಎಸ್.ಎಸ್. ರಾಜಮೌಳಿ ಅವರು ಅಮೆರಿಕಕ್ಕೆ ತೆರಳಿದ್ದಾರೆ. ನಂದಮೂರಿ ತಾರಕ ರತ್ನ ನಿಧನ ಹಿನ್ನೆಲೆಯಲ್ಲಿ ಜೂ.ಎನ್‌ಟಿಆರ್ ಅವರು ಅಮೆರಿಕ ತೆರಳೋದು ವಿಳಂಬ ಆಗುತ್ತಿದೆ. ಜೂ.ಎನ್‌ಟಿಆರ್ ಅವರ ಮುಂದಿನ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಕೆಲಸಗಳು ಪೂರ್ಣಗೊಳ್ಳುತ್ತಿದ್ದಂತೆ ಜೂ.ಎನ್‌ಟಿಆರ್ ಅವರು ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಲಿದ್ದಾರೆ. ಎರಡೂ ಚಿತ್ರಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:12 am, Sat, 25 February 23