ದೇವಸ್ಥಾನ ನಿರ್ಮಾಣಕ್ಕೆ 12.5 ಲಕ್ಷ ರೂಪಾಯಿ ದೇಣಿಗೆ ನೀಡಿದ ಜೂ. ಎನ್ಟಿಆರ್
ಪ್ರತಿ ಸಿನಿಮಾಗೆ ಜೂನಿಯರ್ ಎನ್ಟಿಆರ್ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದರಲ್ಲಿ ಒಂದಷ್ಟು ಹಣವನ್ನು ಅವರು ಸಮಾಜಮುಖಿ ಕೆಲಸಗಳಿಗೆ ನೀಡುತ್ತಾರೆ. ಈಗ ಆಂಧ್ರ ಪ್ರದೇಶದಲ್ಲಿ ದೇವಸ್ಥಾನವೊಂದರ ನಿರ್ಮಾಣಕ್ಕಾಗಿ ಜೂನಿಯರ್ ಎನ್ಟಿಆರ್ ಅವರು 12.5 ಲಕ್ಷ ರೂಪಾಯಿ ದೇಣಿಗೆ ನೀಡಿರುವುದು ಗೊತ್ತಾಗಿದೆ.
ಟಾಲಿವುಡ್ನ ಸ್ಟಾರ್ ನಟ ಜೂನಿಯರ್ ಎನ್ಟಿಆರ್ (Jr NTR) ಅವರು ಸಿನಿಮಾಗಳಿಂದ ಮಾತ್ರವಲ್ಲದೇ ಸಮಾಜಮುಖಿ ಕಾರ್ಯಗಳಿಂದ ಜನರಿಗೆ ಆಪ್ತರಾಗಿದ್ದಾರೆ. ಈಗ ಅವರು ದೇವಸ್ಥಾನವೊಂದರ ನಿರ್ಮಾಣಕ್ಕಾಗಿ 12.5 ಲಕ್ಷ ರೂಪಾಯಿ ದೇಣಿಗೆ (Jr NTR Donation) ನೀಡಿ ಸುದ್ದಿ ಆಗಿದ್ದಾರೆ. ಆಂಧ್ರ ಪ್ರದೇಶದ ಚೆಯ್ಯೆರುನಲ್ಲಿರುವ ‘ಶ್ರೀ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ’ ದೇವಸ್ಥಾನಕ್ಕೆ ಅವರು ಈ ಹಣವನ್ನು ನೀಡಿದ್ದಾರೆ. ತಮ್ಮ ಕುಟುಂಬದವರ ಹೆಸರಿನಲ್ಲಿ ಜೂನಿಯರ್ ಎನ್ಟಿಆರ್ ಅವರು ದೇಣಿಗೆ ಕೊಟ್ಟಿದ್ದಾರೆ. ಅದರ ಫೋಟೋ ವೈರಲ್ ಆಗಿದೆ.
ಮೇ 20ರಂದು ಜೂನಿಯರ್ ಎನ್ಟಿಆರ್ ಅವರು ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಅವರು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ತಾಯಿ ಶಾಲಿನಿ, ಪತ್ನಿ ಲಕ್ಷ್ಮಿ ಪ್ರಣತಿ ಹಾಗೂ ಮಕ್ಕಳಾದ ಅಭಯ್, ಭಾರ್ಗವ್ ಹೆಸರಿನಲ್ಲಿ ಜೂನಿಯರ್ ಎನ್ಟಿಆರ್ ಅವರು ದೇಣಿಗೆ ನೀಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಈ ದೇಣಿಗೆ ಬಗ್ಗೆ ಮಾಹಿತಿ ಇದೆ.
‘ದೇವಸ್ಥಾನಕ್ಕೆ ನೀಡಿದ ದೇಣಿಗೆಯ ಕುರಿತು ಪ್ರಚಾರ ಆಗುವುದು ಜೂನಿಯರ್ ಎನ್ಟಿಆರ್ ಅವರಿಗೆ ಇಷ್ಟ ಇಲ್ಲ. ಆದರೆ ಪೂರ್ವ ಗೋದಾವರಿ ಭಾಗದ ಅಭಿಮಾನಿಗಳು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಇದು ಸುದ್ದಿ ಆಗಿದೆ’ ಎಂದು ಮೂಲಗಳು ಹೇಳಿರುವುದಾಗಿ ‘ಹಿಂದುಸ್ತಾನ್ ಟೈಮ್ಸ್’ ವರದಿ ಪ್ರಕಟಿಸಿದೆ.
.@tarak9999 Anna Family Donated 12.5 Lakhs for Sri Bhadrakali Veerabhadra Swamy Temple, Jaggannapeta, East Godavari! 🫶♥️#Devara #DevaraFirstSingle pic.twitter.com/heJYeR6cpA
— jrntr_abhimani9999 (@JrNTRAbhimani99) May 15, 2024
ಅಂದಹಾಗೆ, ಜೂನಿಯರ್ ಎನ್ಟಿಆರ್ ಅವರು ದೇಣಿಗೆ ನೀಡಿದ್ದು ಇದೇ ಮೊದಲೇನಲ್ಲ. ಪ್ರವಾಹ ಸಂತ್ರಸ್ತರಿಗೆ ಸಹಾಯವಾಗಲಿ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜೂನಿಯರ್ ಎನ್ಟಿಆರ್ ಅವರು 25 ಲಕ್ಷ ರೂಪಾಯಿ ನೀಡಿದ್ದರು. ಚಿತ್ರರಂಗದಲ್ಲಿನ ದಿನಗೂಲಿ ನೌಕರರಿಗೆ ಅನುಕೂಲ ಆಗಲಿ ಎಂದು ಕೊರೊನಾ ಲಾಕ್ಡೌನ್ ಸಮಯದಲ್ಲಿ ಕೂಡ ಅವರು 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.
ಇದನ್ನೂ ಓದಿ: ಒಂದು ಕೋಟಿ ರೂಪಾಯಿ ದೇಣಿಗೆಯನ್ನು ಕಾರ್ತಿ ಕೈಗೆ ನೀಡಿದ ನಟ ಧನುಷ್
ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ‘ವಾರ್ 2’, ‘ದೇವರ’ ಚಿತ್ರಗಳಲ್ಲಿ ಜೂನಿಯರ್ ಎನ್ಟಿಆರ್ ನಟಿಸುತ್ತಿದ್ದಾರೆ. ‘ದೇವರ’ ಸಿನಿಮಾದಲ್ಲಿ ಅವರಿಗೆ ಜಾನ್ವಿ ಕಪೂರ್ ಜೋಡಿ ಆಗಿದ್ದಾರೆ. ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ಜೂನಿಯರ್ ಎನ್ಟಿಆರ್ ತೆರೆಹಂಚಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಇದರ ಶೂಟಿಂಗ್ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.