20 ಸಾವಿರ ಅಭಿಮಾನಿಗಳಿಗೆ ನಿರಾಸೆ; ‘ದೇವರ’ ಬಿಡುಗಡೆಗೂ ಮುನ್ನವೇ ಕೆಟ್ಟ ಸುದ್ದಿ

ಜೂನಿಯರ್​ ಎನ್​ಟಿಆರ್​ ಅವರನ್ನು ನೋಡಲು ಸುಮಾರು 15ರಿಂದ 20 ಸಾವಿರ ಅಭಿಮಾನಿಗಳು ಬಂದಿದ್ದರು. ಅವರಿಗೆಲ್ಲ ನಿರಾಸೆಯಾಗಿದೆ. ಅಂತಿಮ ಹಂತದಲ್ಲಿ ‘ದೇವರ’ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಸರಿಯಾದ ಪ್ಲ್ಯಾನಿಂಗ್​ ಇಲ್ಲದೇ ಪ್ರೀ-ರಿಲೀಸ್​ ಇವೆಂಟ್​ ಆಯೋಜನೆ ಮಾಡಿದ್ದರಿಂದ ಈ ಪ್ರಮಾದ ನಡೆದಿದೆ.

20 ಸಾವಿರ ಅಭಿಮಾನಿಗಳಿಗೆ ನಿರಾಸೆ; ‘ದೇವರ’ ಬಿಡುಗಡೆಗೂ ಮುನ್ನವೇ ಕೆಟ್ಟ ಸುದ್ದಿ
ಜೂ. ಎನ್​ಟಿಆರ್​ ಫ್ಯಾನ್ಸ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Sep 23, 2024 | 10:06 AM

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ದೇವರ’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ಇಂದು (ಸೆಪ್ಟೆಂಬರ್​ 22) ಅದ್ದೂರಿಯಾಗಿ ನಡೆಯಬೇಕಿತ್ತು. ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾದಿದ್ದರು. ಆದರೆ ಕೊನೇ ಕ್ಷಣದಲ್ಲಿ ಇವೆಂಟ್​ ರದ್ದಾಗಿದೆ. ಇದರಿಂದಾಗಿ ಜೂನಿಯರ್​ ಎನ್​ಟಿಆರ್​ ಅಭಿಮಾನಿಗಳಿಗೆ ತೀವ್ರ ನಿರಾಸೆ ಆಗಿದೆ. ಸರಿಯಾದ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡದೇ ಇರುವ ಕಾರಣದಿಂದ ಈ ರೀತಿ ಆಗಿದೆ. ‘ದೇವರ’ ಪ್ರೀ-ರಿಲೀಸ್​ ಇವೆಂಟ್​ ನೋಡಬೇಕು ಎಂದು ಬಂದಿದ್ದ ಅಂದಾಜು 20 ಸಾವಿರ ಅಭಿಮಾನಿಗಳಿಗೆ ಬೇಸರ ಆಗಿದೆ.

ಕೆಲವೇ ಸಾವಿರ ಜನರು ಸೇರಬಹುದಾದ ಸ್ಥಳದಲ್ಲಿ ‘ದೇವರ’ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದು ಚಿತ್ರತಂಡದಿಂದ ಆದ ಮೊದಲ ತಪ್ಪು. ಇವೆಂಟ್​ ನಡೆಯಬೇಕಿದ್ದ ಸ್ಥಳದಲ್ಲಿ ಅಂದಾಜು 15ರಿಂದ 20 ಸಾವಿರ ಜನರು ಜಮಾಯಿಸಿದ್ದರು. ಎಲ್ಲರಿಗೂ ಜಾಗ ಸಿಗದ ಕಾರಣ ವಿಐಪಿ ಅತಿಥಿಗಳಿಗೆ ಮೀಸಲಾಗಿದ್ದ ಕುರ್ಚಿಗಳತ್ತ ಕೆಲವರು ನುಗ್ಗಿದರು.

ಪ್ರತಿ ನಿಮಿಷವೂ ಜನ ದಟ್ಟಣೆ ಹೆಚ್ಚುತ್ತಲೇ ಹೋಯಿತು. ಕೆಲವರು ಅಲ್ಲಿದ್ದ ವಸ್ತುಗಳಿಗೆ ಹಾನಿ ಕೂಡ ಮಾಡಿದರು. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂಬುದನ್ನು ತಿಳಿದ ಬಳಿಕ ಕೆಲವು ಸೆಲೆಬ್ರಿಟಿಗಳು ಅಲ್ಲಿಂದ ಕಾಲ್ಕಿತ್ತರು. ಇನ್ನೇನು ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ತಯಾರಾಗಿದ್ದ ಸೆಲೆಬ್ರಿಟಿಗಳಿಗೆ ಚಿತ್ರತಂಡದವರೇ ಕರೆ ಮಾಡಿ ‘ನೀವು ಬರುವುದು ಬೇಡ’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಕೂಡ ಕೇಳಿಬಂದಿದೆ. ಒಟ್ಟಿನಲ್ಲಿ ಪ್ರೀ-ರಿಲೀಸ್​ ಕಾರ್ಯಕ್ರಮ ರದ್ದಾಗಿರುವುದು ಖಚಿತ.

ಇದನ್ನೂ ಓದಿ: ಇನ್ನೊಂದು ಟ್ರೇಲರ್​ ಬಿಡುಗಡೆ ಮಾಡಿದ ‘ದೇವರ’ ಚಿತ್ರತಂಡ; ಜನರಿಗೆ ಇಷ್ಟ ಆಯ್ತಾ?

‘ದೇವರ: ಪಾರ್ಟ್​ 1’ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್​, ಜಾನ್ವಿ ಕಪೂರ್​, ಸೈಫ್​ ಅಲಿ ಖಾನ್​ ಮುಂತಾದವರು ನಟಿಸಿದ್ದು, ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಇದು ಬಹುನಿರೀಕ್ಷಿತ ಸಿನಿಮಾ ಆದ್ದರಿಂದ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ. ಆದರೆ ಎಲ್ಲರಿಗೂ ಅಲ್ಲಿ ಸ್ಥಳಾವಕಾಶ ಇಲ್ಲ. ಮಿತಿ ಮೀರಿದ ಜನದಟ್ಟಣೆಯಿಂದಾಗಿ ಕಾರ್ಯಕ್ರಮವನ್ನು ಕ್ಯಾನ್ಸಲ್​ ಮಾಡುವುದು ಅನಿವಾರ್ಯ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:00 pm, Sun, 22 September 24