ಮುನಿಸು ಮರೆತು ಚಿಕ್ಕಪ್ಪನ ಮಗನಿಗೆ ಶುಭ ಹಾರೈಸಿದ ಜೂ ಎನ್ಟಿಆರ್
ನಂದಮೂರಿ ಬಾಲಕೃಷ್ಣ ಮತ್ತು ಜೂ ಎನ್ಟಿಆರ್ ನಡುವೆ ಶೀಥಲ ಸಮರ ಜಾರಿಯಲ್ಲಿದೆ. ಬಾಲಯ್ಯ ಹಲವು ಬಾರಿ ಬಹಿರಂಗವಾಗಿಯೇ ಜೂ ಎನ್ಟಿಆರ್ ವಿರುದ್ಧ ಮಾತನಾಡಿದ್ದಾರೆ. ಆದರೆ ಅದನ್ನೆಲ್ಲ ಮರೆತು ಜೂ ಎನ್ಟಿಆರ್, ಬಾಲಯ್ಯ ಮಗ ಮೋಕ್ಷಜ್ಞರ ಮೊದಲ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.
ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ಅರ್ಧ ಶತಮಾನದಿಂದಲೂ ಹಿಡಿತ ಸಾಧಿಸಿಕೊಂಡು ಬಂದಿರುವ ನಂದಮೂರಿ ಕುಟುಂಬದಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಬಿರುಕು ಮೂಡಿರುವುದು ಗುಟ್ಟೇನೂ ಅಲ್ಲ. ನಂದಮೂರಿ ಕುಟುಂಬದ ಜೂ ಎನ್ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್ ಅನ್ನು ನಂದಮೂರಿ ಬಾಲಕೃಷ್ಣ, ಚಂದ್ರಬಾಬು ನಾಯ್ಡು ಇನ್ನಿತರರು ಕುಟುಂಬದಿಂದ ದೂರವೇ ಇಟ್ಟಿದ್ದಾರೆ. ನಂದಮೂರಿ ಬಾಲಕೃಷ್ಣ ಅಂತೂ ಕೆಲವು ಸಂದರ್ಭದಲ್ಲಿ ನೇರವಾಗಿಯೇ ಜೂ ಎನ್ಟಿಆರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದೂ ಇದೆ. ಆದರೆ ಈ ಮುನಿಸುಗಳನ್ನು ಬದಿಗಿಟ್ಟು ಜೂ ಎನ್ಟಿಆರ್ ಈಗ ನಂದಮೂರಿ ಬಾಲಕೃಷ್ಣ ಪುತ್ರನಿಗೆ ಶುಭಾಶಯ ತಿಳಿಸಿದ್ದಾರೆ.
ನಂದಮೂರಿ ಬಾಲಕೃಷ್ಣ ಪುತ್ರ ನಂದಮೂರಿ ಮೋಕ್ಷಾಜ್ಞ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಆ ಮೂಲಕ ನಂದಮೂರಿ ಕುಟುಂಬದಿಂದ ಮತ್ತೊಬ್ಬ ನಟ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ನಂದಮೂರಿ ಕುಟುಂಬದ ಅಭಿಮಾನಿಗಳು ಮೋಕ್ಷಾಜ್ಞ ಎಂಟ್ರಿಯನ್ನು ಸ್ವಾಗತಿಸಿದ್ದಾರೆ. ಕುಟುಂಬ ಸದಸ್ಯರು ಸಹ ಟ್ವೀಟ್ ಮಾಡಿ ಮೋಕ್ಷಾಜ್ಞಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ:ಆಂಧ್ರ-ತೆಲಂಗಾಣ ಪ್ರವಾಹ: ಸಹಾಯ ಹಸ್ತ ಚಾಚಿದ ಜೂ ಎನ್ಟಿಆರ್
ಜೂ ಎನ್ಟಿಆರ್ ವಿರುದ್ಧ ಬಾಲಯ್ಯ ದ್ವೇಷ ಸಾಧಿಸಿದ್ದರೂ ಸಹ ಜೂ ಎನ್ಟಿಆರ್ ಅದನ್ನೆಲ್ಲ ಮನಸ್ಸಿಗೆ ತೆಗೆದುಕೊಳ್ಳದೆ ತಮ್ಮ ಚಿಕ್ಕಪ್ಪನ ಮಗನ ಸಿನಿಮಾ ರಂಗದ ಎಂಟ್ರಿಗೆ ಶುಭ ಹಾರೈಸಿದ್ದಾರೆ. ಮೋಕ್ಷಾಜ್ಞಗೆ ಟ್ವೀಟ್ ಮಾಡಿರುವ ಜೂ ಎನ್ಟಿಆರ್, ‘ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ನಿನಗೆ ಶುಭವಾಗಲಿ. ಹೊಸ ಜೀವನವನ್ನು ಪ್ರಾರಂಭ ಮಾಡುತ್ತಿದ್ದೀಯ. ತಾತ ತಾರಕ ರಾಮಾರಾವ್ ಸೇರಿದಂತೆ ಎಲ್ಲ ಅಗೋಚರ ಶಕ್ತಿಗಳು ನಿನ್ನ ಈ ಹೊಸ ಜರ್ನಿಗೆ ಶುಭ ಹಾರೈಸಲಿ. ನಿನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳು’ ಎಂದಿದ್ದಾರೆ.
ಮೋಕ್ಷಾಜ್ಞರ ಹೊಸ ಸಿನಿಮಾವನ್ನು ‘ಹನುಮ್ಯಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಯೂಥ್ ಕತೆಯ ಜೊತೆಗೆ ಆಕ್ಷನ್ ಅಂಶವನ್ನು ಸಹ ಒಳಗೊಂಡಿದೆಯಂತೆ. ಸಿನಿಮಾವನ್ನು ಬಾಲಕೃಷ್ಣ ಪತ್ನಿ ತೇಜಸ್ವಿನಿ ಬಾಲಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ, ಇತರೆ ತಂತ್ರಜ್ಞರ ಘೋಷಣೆ ಇನ್ನಷ್ಟೆ ಆಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ