
ಸಿನಿಮಾ (Cinema) ನಾಯಕ ಪ್ರಧಾನವಾದುದು, ನಾಯಕಿಯರು ಕೇವಲ ನಾಮ್ಕೆವಾಸ್ತೆ ಅಷ್ಟೆ. ಇದೀಗ ಅದು ಮತ್ತೊಮ್ಮೆ ಸಾಬೀತಾಗಿದೆ. ತಮಿಳಿನ ‘ಡಿಸಿ’ ಸಿನಿಮಾ ಆಗಸ್ಟ್ 7 ರಂದು ಬಿಡುಗಡೆ ಆಗಿತ್ತು. ಸಿನಿಮಾ ದೊಡ್ಡ ಹಿಟ್ ಆಯ್ತು. ಅರುಣ್ ಮಟ್ಟೇಶ್ವರನ್ ನಿರ್ದೇಶನ ಮಾಡಿದ್ದ ಸಿನಿಮಾನಲ್ಲಿ ಲೋಕೇಶ್ ಕನಗರಾಜ್ ನಾಯಕ, ವಾಮಿಕಾ ಗಬ್ಬಿ ನಾಯಕಿ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಿನಿಮಾಕ್ಕೆ ಇತ್ತು. ಸಿನಿಮಾ ದೊಡ್ಡ ಹಿಟ್ ಆಗಿದೆ. ಸೀಮಿತ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಸಿನಿಮಾ ಸುಮಾರು 200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಇದೇ ಖುಷಿಯಲ್ಲಿ ಸಿನಿಮಾದ ನಿರ್ಮಾಪಕರು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ಬೆನ್ನಲ್ಲೆ ಸಿನಿಮಾ ಪ್ರೇಮಿಗಳ ಟೀಕೆಗೂ ಗುರಿ ಆಗಿದ್ದಾರೆ.
‘ಡಿಸಿ’ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿತ್ತು. ಸಿನಿಮಾದ ನಿರ್ಮಾಪಕ ಕಲಾನಿಧಿ ಮಾರನ್ ಅವರು ‘ಡಿಸಿ’ ಸಿನಿಮಾದ ಕಲೆಕ್ಷನ್ ಇಂದ ಬಹಳ ಖುಷಿಯಾಗಿದ್ದು, ಸಿನಿಮಾದ ನಾಯಕ ಲೋಕೇಶ್ ಕನಗರಾಜ್, ಸಿನಿಮಾದ ನಿರ್ದೇಶಕ ಅರುಣ್ ಮಟ್ಟೇಶ್ವರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದ್ರನ್ ಅವರುಗಳಿಗೆ ಐಶಾರಾಮಿ ಬಿಎಂಡಬ್ಲು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರುಗಳನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಆದರೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಲಾನಿಧಿ ಮಾರನ್ ಅವರಿಗೆ ಟೀಕೆ ಸಹ ವ್ಯಕ್ತವಾಗಿದೆ.
ಸಿನಿಮಾನಲ್ಲಿ ವಾಮಿಕಾ ಗಬ್ಬಿ ನಾಯಕಿಯಾಗಿ ನಟಿಸಿದ್ದು, ಅವರ ನಟನೆಯೂ ಅದ್ಭುತವಾಗಿದೆ. ಸಿನಿಮಾನಲ್ಲಿ ಲೋಕೇಶ್ ಕನಗರಾಜ್ ನಾಯಕ, ‘ಡಿಸಿ’ ಅವರಿಗೆ ಮೊದಲ ಸಿನಿಮಾ, ವಾಮಿಕಾ ಅವರು ಅನುಭವಿ ನಟಿ, ಸಿನಿಮಾದ ಗೆಲುವಿನಲ್ಲಿ ಅವರ ನಟನೆ ಮತ್ತು ಗ್ಲಾಮರ್ನ ಪಾತ್ರವೂ ಸಾಕಷ್ಟಿದೆ. ಅಸಲಿಗೆ ಸಿನಿಮಾದ ಕತೆ ಕೇಂದ್ರಿತವಾಗಿರುವುದೇ ಸಿನಿಮಾದ ನಾಯಕಿಯ ಮೇಲೆ. ಆದರೆ ಉಡುಗೊರೆ ಕೊಡುವಾಗ ನಾಯಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕನನ್ನಷ್ಟೆ ಆಯ್ಕೆ ಮಾಡಿರುವ ನಿರ್ಮಾಪಕರು ನಾಯಕಿಯನ್ನು ನಿರ್ಲಕ್ಷಿಸಿದ್ದಾರೆ. ಇದು ಸಹಜವಾಗಿಯೇ ವಾಮಿಕಾ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಜೊತೆಗೆ ಸಿನಿಮಾ ಪ್ರಿಯರ ಟೀಕೆಗೂ ಕಾರಣವಾಗಿದೆ.
ಇದನ್ನೂ ಓದಿ:ವೀರಭದ್ರ ಸ್ವಾಮಿ ಭಕ್ತರಿಗಾಗಿ ವಿಶೇಷ ಸಿನಿಮಾ ‘ರುದ್ರಾಭಿಷೇಕಂ’
ಕಲಾನಿಧಿ ಮಾರನ್ ಅವರು, ತಮ್ಮ ನಿರ್ಮಾಣದ ಸಿನಿಮಾ ಹಿಟ್ ಆದರೆ ಸಿನಿಮಾದ ನಾಯಕ, ನಿರ್ದೇಶಕ ಇನ್ನಿತರರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ಹಿಂದೆ ‘ಜೈಲರ್’ ಸಿನಿಮಾ ಹಿಟ್ ಆಗಿದ್ದಾಗ ಆ ಸಿನಿಮಾದ ನಾಯಕ ರಜನೀಕಾಂತ್ ಅವರಿಗೆ ಐಶಾರಾಮಿ ಕಾರು ಉಡುಗೊರೆ ಕೊಟ್ಟಿದ್ದರು, ಜೊತೆಗೆ ಸಿನಿಮಾದ ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ಗೆ ಕಾರು ಕೊಟ್ಟಿದ್ದರು. ಆಗಲೂ ಸಹ ಟೀಕೆ ವ್ಯಕ್ತವಾಗಿತ್ತು. ಆ ಸಿನಿಮಾನಲ್ಲಿ ವಿಲನ್ ಪಾತ್ರ ಮಾಡಿರುವ ವಿನಾಯಗನ್ ಅದ್ಭುತವಾಗಿ ನಟಿಸುವ ಮೂಲಕ ಸಿನಿಮಾಕ್ಕೆ ಕಳೆ ತಂದಿದ್ದರು. ಅವರಿಗೆ ಕಾರು ನೀಡದೆ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಈಗ ಸಿನಿಮಾದ ನಾಯಕಿಯನ್ನೇ ನಿರ್ಲಕ್ಷಿಸಿದ್ದಾರೆ ನಿರ್ದೇಶಕರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Fri, 11 September 26