ಘೋಷಣೆ ಆಗಿಯೇ ಬಿಡ್ತು ರಜನಿ-ಕಮಲ್ ಸಿನಿಮಾ, ಆದರೆ ಒಂದು ಟ್ವಿಸ್ಟ್
Kamal Haasan-Rajinikanth: ಕಮಲ್ ಹಾಸನ್ ಹಾಗೂ ರಜನೀಕಾಂತ್ ಅವರುಗಳು ಭಾರತದ ಟಾಪ್ ಸೂಪರ್ ಸ್ಟಾರ್ಗಳು, ದಶಕಗಳ ಹಿಂದೆ ಈ ಇಬ್ಬರೂ ಒಟ್ಟಿಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಈ ಇಬ್ಬರು ಸೂಪರ್ ಸ್ಟಾರ್ಗಳು ಮತ್ತೊಮ್ಮೆ ಸಿನಿಮಾಕ್ಕಾಗಿ ಪರಸ್ಪರ ಕೈ ಜೋಡಿಸಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಸಹ ಇದೆ. ಇಲ್ಲಿದೆ ನೋಡಿ ಇಬ್ಬರು ದಿಗ್ಗಜರ ಸಿನಿಮಾ ಬಗ್ಗೆ ಮಾಹಿತಿ...

ರಜನೀಕಾಂತ್ (Rajinikanth) ಮತ್ತು ಕಮಲ್ ಹಾಸನ್ ತಮಿಳು ಚಿತ್ರರಂಗದ ಮಾತ್ರವಲ್ಲ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳು. ದಶಕಗಳಿಂದಲೂ ಇವರು ಸ್ಟಾರ್ಗಳಾಗಿ ಮೆರೆಯುತ್ತಾ ಬಂದಿದ್ದಾರೆ. ಇಬ್ಬರಿಗೂ ಸಹ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇದೀಗ ಈ ಇಬ್ಬರೂ ಸೂಪರ್ ಸ್ಟಾರ್ಗಳು ಒಂದೇ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ. ರಜನಿ-ಕಮಲ್ ಅವರುಗಳು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಲು ಆರಂಭವಾಗಿ ತಿಂಗಳುಗಳೇ ಆಗಿದ್ದವು, ಆದರೆ ನಿನ್ನೆ (ನವೆಂಬರ್ 05) ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಆದರೆ ಒಂದು ಟ್ವಿಸ್ಟ್ ಇದೆ.
ರಜನೀಕಾಂತ್ ಮತ್ತು ಕಮಲ್ ಹಾಸನ್ ಸಿನಿಮಾವನ್ನು ‘ವಿಕ್ರಂ’, ‘ಖೈದಿ’, ‘ಕೂಲಿ’ ಇನ್ನೂ ಕೆಲ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಟ್ರೆಂಡಿಂಗ್ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದ್ದು, ಹಿರಿಯ ನಿರ್ದೇಶಕರೊಬ್ಬರನ್ನು, ಇಬ್ಬರು ಸೂಪರ್ ಸ್ಟಾರ್ಗಳ ಸಿನಿಮಾ ನಿರ್ದೇಶಿಸಿಲು ಕರೆ ತರಲಾಗಿದೆ. ಮತ್ತೊಂದು ವಿಶೇಷವೆಂದರೆ ರಜನೀಕಾಂತ್-ಕಮಲ್ ಅವರ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಸ್ವತಃ ಕಮಲ್ ಹಾಸನ್ ಅವರೇ ಆಗಿದ್ದಾರೆ.
ಇನ್ನು ಇಬ್ಬರು ಸೂಪರ್ ಸ್ಟಾರ್ ಗಳ ಈ ಸಿನಿಮಾವನ್ನು ಸುಂದರ್ ಸಿ ಅವರು ನಿರ್ದೇಶನ ಮಾಡಲಿದ್ದಾರೆ. 28 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ರಜನೀಕಾಂತ್ ಅವರ ‘ಅರುಣಾಚಲಂ’ ಸಿನಿಮಾವನ್ನು ಇವರೇ ನಿರ್ದೇಶಿಸಿದ್ದರು. ಇನ್ನು ಕಮಲ್ ಹಾಸನ್ ಅವರ ಸೂಪರ್ ಹಿಟ್ ಸಿನಿಮಾ ‘ಅನ್ಬೆ ಶಿವಂ’ ಅನ್ನು ಸಹ ಸುಂದರ್ ಸಿ ಅವರೇ ನಿರ್ದೇಶನ ಮಾಡಿದ್ದಾರೆ. ಈಗ ಇವರು ‘ಮೂಕುತ್ತಿ ಅಮ್ಮನ್ 2’ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಸಿನಿಮಾನಲ್ಲಿ ದುನಿಯಾ ವಿಜಿ ಸಹ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲಮ್ಸ್ ವತಿಯಿಂದ ಸಿನಿಮಾದ ನಿರ್ಮಾಣ ಮಾಡಲಾಗುತ್ತಿದೆ. ಇದು ಈ ನಿರ್ಮಾಣ ಸಂಸ್ಥೆಯ 44ನೇ ವರ್ಷವಾಗಿದ್ದು, ಸಿನಿಮಾವನ್ನು ಮಹೇಂದ್ರನ್ ಎಂಬುವರ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ ಕಮಲ್ ಹಾಸನ್.
ಇದನ್ನೂ ಓದಿ:ರಜನೀಕಾಂತ್ಗೆ ಹೆಸರಿಟ್ಟಿದ್ಯಾರು? ಅದೇ ಹೆಸರು ಆಯ್ಕೆ ಮಾಡಿದ್ದೇಕೆ?
ಸಿನಿಮಾದ ಘೋಷಣೆಯನ್ನು ನಿನ್ನೆಯಷ್ಟೆ ರಾಜ್ ಕಮಲ್ ಫಿಲಮ್ಸ್ ವತಿಯಿಂದ ಮಾಡಲಾಗಿದೆ. ಆದರೆ ಸಿನಿಮಾದ ಘೋಷಣೆ ಸಂದೇಶ ಓದಿದ ಕೆಲವರಿಗೆ ಅನುಮಾನವೂ ಮೂಡಿದೆ. ಘೋಷಣೆಯಲ್ಲಿ ರಜನೀಕಾಂತ್ ಅವರ 173ನೇ ಸಿನಿಮಾ ಎಂದು ಹೇಳಲಾಗಿದೆ ಆದರೆ ಕಮಲ್ ಹಾಸನ್ ಅವರ ಸಿನಿಮಾ ಸಂಖ್ಯೆಯ ನಮೂದು ಇಲ್ಲ. ಇದು ಕೆಲ ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದ್ದು, ಈ ಸಿನಿಮಾನಲ್ಲಿ ಕಮಲ್ ಹಾಸನ್ ನಟಿಸುತ್ತಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಬದಲಿಗೆ ಕಮಲ್ ಹಾಸನ್ ಕೇವಲ ನಿರ್ಮಾಣ ಅಷ್ಟೆ ಮಾಡಲಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




