ನಟ ಕಮಲ್ ಹಾಸನ್ (Kamal Haasan) ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ಬ್ಯುಸಿ ಆಗಿದೆ. ಕಮಲ್ ಹಾಸನ್ ಅವರ ಎರಡನೇ ಹಾಗೂ ಮಾಜಿ ಪತ್ನಿ ಸಾರಿಕಾ (Sarika) ಅವರು ಕೂಡ ಫೇಮಸ್ ನಟಿ. ಅದೇ ರೀತಿ, ಸಾರಿಕಾ ಮಕ್ಕಳಾದ ಅಕ್ಷರಾ ಹಾಸನ್ ಹಾಗೂ ಶ್ರುತಿ ಹಾಸನ್ ಅವರು ಸಹ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಅಚ್ಚರಿ ಎಂದರೆ ಸಾರಿಕಾ ಅವರು ತೀವ್ರ ಆರ್ಧಿಕ ಸಂಕಷ್ಟ ಎದುರಿಸಿದ್ದಾರೆ. ಲಾಕ್ ಡೌನ್ (Lockdown) ಸಂದರ್ಭದಲ್ಲಿ ಅನೇಕ ಕಲಾವಿದರ ಜೀವನ ಕಷ್ಟ ಆಗಿತ್ತು. ಸಾರಿಕಾ ಕೂಡ ಜೀವನ ಸಾಗಿಸಲು ಪ್ರತಿ ದಿನ ಕಷ್ಟಪಟ್ಟಿದ್ದರು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. ಕೇವಲ 3 ಸಾವಿರ ರೂಪಾಯಿ ದುಡಿಯುವ ಮೂಲಕ ಲಾಕ್ಡೌನ್ನಲ್ಲಿ ತೀವ್ರ ಸಂಕಷ್ಟದ ದಿನಗಳನ್ನು ಎದುರಿಸಿದ್ದರು ಎಂಬುದನ್ನು ಅವರು ವಿವರಿಸಿದ್ದಾರೆ.
ಬಾಲ ನಟಿಯಾಗಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟವರು ಸಾರಿಕಾ. ನಂತರ ಅವರು ಅನೇಕ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಮಿಂಚಿದರು. ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಪ್ರತಿಭಾವಂತೆ ಅವರು. ಆದರೆ ಲಾಕ್ಡೌನ್ ಆಗುವುದಕ್ಕಿಂತಲೂ ಮುನ್ನ ಒಂದು ವರ್ಷ ಬ್ರೇಕ್ ತೆಗೆದುಕೊಳ್ಳೋಣ ಎಂದು ಅವರು ನಿರ್ಧರಿಸಿದ್ದರು. ಹಾಗಾಗಿ ಅವರು ರಂಗಭೂಮಿಯಲ್ಲಿ ತೊಡಗಿಕೊಂಡರು. ಆದರೆ ಅದು 5 ವರ್ಷಗಳಿಗೆ ಮುಂದುವರಿಯಿತು. ಅದೇ ಸಮಯಕ್ಕೆ ಲಾಕ್ಡೌನ್ ಆರಂಭ ಆಗಿದ್ದರಿಂದ ಪರಿಸ್ಥಿತಿ ಕಷ್ಟ ಆಯಿತು. ಆಗ ಅವರು ಹಣವಿಲ್ಲದೇ ಒದ್ದಾಡಬೇಕಾಯಿತು.
ಇದನ್ನೂ ಓದಿ: ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದ ಶಂಕೆ; ಕಿರುತೆರೆ ನಟ ಆತ್ಮಹತ್ಯೆ: ಅನುಮಾನ ಮೂಡಿಸಿದ ಸಾವು
ಸಾರಿಕಾ ಅವರು ಕೊನೆಯದಾಗಿ ನಟಿಸಿದ್ದು ‘ಬಾರ್ ಬಾರ್ ದೇಖೋ’ ಸಿನಿಮಾದಲ್ಲಿ. ಆ ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ, ಕತ್ರಿನಾ ಕೈಫ್ ಕೂಡ ನಟಿಸಿದ್ದರು. ಆ ಸಿನಿಮಾ ಬಳಿಕ ಸಾರಿಕಾ ಯಾವುದೇ ಹೊಸ ಚಿತ್ರದಲ್ಲಿ ನಟಿಸಲಿಲ್ಲ. ಒಳ್ಳೆಯ ಪಾತ್ರಗಳು ಸಿಗದ ಕಾರಣ ಅವರು ರಂಗಭೂಮಿ ಕಡೆಗೆ ಹೊರಳಿದರು. ಆದರೆ ರಂಗಭೂಮಿಯಲ್ಲಿ ಅವರಿಗೆ ಸಿಗುತ್ತಿದ್ದ ಸಂಭಾವನೆ ತುಂಬ ಕಡಿಮೆ. ಕೇವಲ 3 ಸಾವಿರ ರೂಪಾಯಿ ಪಡೆಯುವುದರಿಂದ ಜೀವನ ನಡೆಸುವುದು ಕಷ್ಟ ಎಂಬುದು ಅವರಿಗೆ ಅರಿವಾಯಿತು. ನಂತರ ಅವರು ಸಿನಿಮಾಗೆ ಮರಳುವ ನಿರ್ಧಾರ ಮಾಡಿದರು.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್: ಬಣ್ಣದ ಲೋಕ ತೊರೆದು ಮೀನು ಮಾರಾಟಕ್ಕೆ ಇಳಿದ ಕಿರುತೆರೆ ನಟ, ಫೋಟೋ ವೈರಲ್
ಈಗ ಸಾರಿಕಾ ಅವರು ಅನೇಕ ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿದ್ದಾರೆ. ಅವರು ನಟಿಸಿರುವ ‘ಮಾಡರ್ನ್ ಲವ್: ಮುಂಬೈ’ ವೆಬ್ ಸಿರೀಸ್ ಮೇ 13ರಂದು ಬಿಡುಗಡೆ ಆಗಿದೆ. ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಇದು ಪ್ರಸಾರ ಆಗುತ್ತಿದೆ. ಸಾರಿಕಾ ಜೊತೆಗೆ ಅರ್ಷದ್ ವಾರ್ಸಿ, ಚಿತ್ರಾಂಗದಾ ಸಿಂಗ್, ಫಾತಿಮಾ ಸನಾ ಶೇಖ್ ಕೂಡ ನಟಿಸಿದ್ದಾರೆ.
2004ರಲ್ಲಿ ಕಮಲ್ ಹಾಸನ್-ಸಾರಿಕಾ ವಿಚ್ಛೇದನ:
1988ರಲ್ಲಿ ಕಮಲ್ ಹಾಸನ್ ಮತ್ತು ಸಾರಿಕಾ ಅವರು ಮದುವೆ ಆದರು. ಅವರಿಗೆ ಅಕ್ಷರಾ ಹಾಸನ್ ಮತ್ತು ಶ್ರುತಿ ಹಾಸನ್ ಜನಿಸಿದರು. 2004ರಲ್ಲಿ ಈ ದಂಪತಿ ವಿಚ್ಛೇದನ ಪಡೆದುಕೊಂಡರು. ಅಕ್ಷರಾ ಹಾಸನ್ ಮತ್ತು ಶ್ರುತಿ ಹಾಸನ್ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಶ್ರುತಿ ಹಾಸನ್ ಗುರುತಿಸಿಕೊಂಡಿದ್ದಾರೆ. ಆದರೂ ಕೂಡ ಅವರ ತಾಯಿ ಸಾರಿಕಾ ಲಾಕ್ಡೌನ್ನಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಬೇಕಾಯಿತು ಎಂಬುದು ಅಚ್ಚರಿಯ ಸಂಗತಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.