
ಕಮಲ್ ಹಾಸನ್ (Kamal Haasan) ನಟಿಸಿರುವ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಇನ್ನು ಮೂರು ದಿನಗಳಷ್ಟೆ ಬಾಕಿ ಉಳಿದಿವೆ. ಕರ್ನಾಟಕದಲ್ಲಿ ‘ಥಗ್ ಲೈಫ್’ ಬಿಡುಗಡೆ ಆಗುವುದು ಬಹುತೇಕ ಅನುಮಾನವಾಗಿದೆ. ಸಿನಿಮಾ ವಿತರಕರು ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡದೇ ಇರಲು ನಿರ್ಧಾರ ಮಾಡಿರುವ ಸುದ್ದಿ ಹರಿದಾಡುತ್ತಿದೆ. ಕನ್ನಡಪರ ಸಂಘಟನೆಗಳಂತೂ, ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿವೆ. ಕರ್ನಾಟಕದಲ್ಲಿ ತೀವ್ರ ಹಿನ್ನೆಡೆ ಖಾತ್ರಿ ಆಗುತ್ತಿದ್ದಂತೆ ಕಮಲ್ ಹಾಸನ್ ತಮಿಳುನಾಡು ಸರ್ಕಾರದ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
‘ಥಗ್ ಲೈಫ್’ ಸಿನಿಮಾ ಜೂನ್ 5 ರಂದು ಬಿಡುಗಡೆ ಆಗಲಿದೆ. ಇದೀಗ ತಮಿಳುನಾಡು ಸರ್ಕಾರದ ಬಳಿ ಮನವಿ ಮಾಡಿರುವ ಕಮಲ್ ಹಾಸನ್, ಸಿನಿಮಾ ಟಿಕೆಟ್ ದರಗಳನ್ನು ಕಡಿಮೆ ಮಾಡುವಂತೆ ವಿನಂತಿಸಿದ್ದಾರೆ. ಇತ್ತೀಚೆಗಷ್ಟೆ ತಮಿಳುನಾಡಿನ ಸ್ಟಾಲಿನ್ ಸರ್ಕಾರ, ಲೋಕಲ್ ಬಾಡಿ ಎಂಟರ್ಟೈನ್ಮೆಂಟ್ ಟ್ಯಾಕ್ಸ್ (ಸ್ಥಳೀಯ ಮನೊರಂಜನಾ ತೆರಿಗೆ)ಯನ್ನು 4 ರಿಂದ 8.6% ಹೆಚ್ಚಿಸಿದೆ. ಇದರಿಂದಾಗಿ ಸಿನಿಮಾದ ಟಿಕೆಟ್ ಬೆಲೆಗಳು ತಮಿಳುನಾಡು ರಾಜ್ಯದಾದ್ಯಂತ ಹೆಚ್ಚಳ ಆಗಿದೆ. ಈ ತೆರಿಗೆಯನ್ನು ಕಡಿಮೆ ಮಾಡುವಂತೆ ಕಮಲ್ ಹಾಸನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕಮಲ್ ಹಾಸನ್ ವಿವಾದ, ಬಂದ್ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
‘ಕೋವಿಡ್ ಬಳಿಕ ತಮಿಳು ಸಿನಿಮಾ ರಂಗವು ಸಾಕಷ್ಟು ನಷ್ಟವನ್ನು ಅನುಭವಿಸಿದ್ದು, ಈಗ ಟಿಕೆಟ್ ಬೆಲೆಯೂ ಹೆಚ್ಚಾದರೆ ಚಿತ್ರರಂಗಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿ ಟಿಕೆಟ್ ದರಗಳನ್ನು ಕಡಿಮೆ ಮಾಡಬೇಕು’ ಎಂದು ಕಮಲ್ ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಯಾವುದೇ ಪ್ರತಿಕ್ರಿಯೆಯನ್ನು ಈ ವರೆಗೆ ನೀಡಿಲ್ಲ. ತಮಿಳುನಾಡು ಸರ್ಕಾರದೊಟ್ಟಿಗೆ ಆತ್ಮೀಯ ಬಂಧವನ್ನು ಕಮಲ್ ಹಾಸನ್ ಹೊಂದಿದ್ದು, ಆಡಳಿತ ಪಕ್ಷವಾದ ಡಿಎಂಕೆ ಬೆಂಬಲದಿಂದ ರಾಜ್ಯಸಭೆಗೆ ಕಮಲ್ ಕಾಲಿಡುತ್ತಿದ್ದಾರೆ.
ಚೆನ್ನೈನಲ್ಲಿ ‘ಥಗ್ ಲೈಫ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭಗೊಂಡಿದ್ದು, ಯಾವೊಂದು ಚಿತ್ರಮಂದಿರದ ಟಿಕೆಟ್ ಬೆಲೆಯೂ 200 ರೂಪಾಯಿಗಳಿಗಿಂತಲೂ ಹೆಚ್ಚಿಲ್ಲ. 190 ರೂಪಾಯಿಯೇ ದುಬಾರಿ ಟಿಕೆಟ್ ಬೆಲೆ. ಹಾಗಿದ್ದರೂ ಸಹ ಕಮಲ್ ಹಾಸನ್ ಅವರು ಟಿಕೆಟ್ ಬೆಲೆ ಇಳಿಕೆ ಮಾಡುವಂತೆ ಬೇಡಿಕೆ ಇರಿಸಿದ್ದಾರೆ.
‘ತಮಿಳು ಭಾಷೆಯಿಂದ ಕನ್ನಡದ ಉಗಮವಾಗಿದೆ’ ಎಂಬ ಕಮಲ್ ಹಾಸನ್ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಮಲ್ ಹೇಳಿಕೆಯನ್ನು ವಿರೋಧಿಸಿ ಅವರ ನಟನೆಯ ‘ಥಗ್ ಲೈಫ್’ ಸಿನಿಮಾದ ವಿರುದ್ಧ ಕನ್ನಡಪರ ಸಂಘಟನೆಗಳು, ಫಿಲಂ ಚೇಂಬರ್ ನಿಷೇಧ ಪ್ರಟಿಸಿವೆ. ‘ಥಗ್ ಲೈಫ್’ ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಸಿಂಭು, ಅಭಿರಾಮಿ, ತ್ರಿಷಾ ಇನ್ನಿತರರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ