ಕಮಲ್ ಹಾಸನ್ (Kamal haasan) ಸಿನಿಮಾ ‘ವಿಕ್ರಮ್’ (Vikram ) ವಿಶ್ವ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರ ಮೂರೇ ದಿನಕ್ಕೆ 175 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವಂತೆ ಕೆಲವರು ಕರೆ ನೀಡಿದ್ದರು. ಆದರೆ, ಚಿತ್ರದ ಮೇಲೆ ಇದು ಕಿಂಚಿತ್ತೂ ಪರಿಣಾಮ ಬೀರಿಲ್ಲ. ಕಮಲ್ ಹಾಸನ್ ಅವರ ಕಂಬ್ಯಾಕ್ ಸಿನಿಮಾ ಸಖತ್ ಮೋಡಿ ಮಾಡುತ್ತಿದೆ. ಈ ಚಿತ್ರ ಕರ್ನಾಟಕದಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ.
ತಮಿಳು ಹಾಗೂ ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆ ಇದೆ ಎಂಬುದು ಈ ಮೊದಲೇ ಸಾಬೀತಾಗಿದೆ. ‘ವಿಕ್ರಮ್’ ಸಿನಿಮಾದಲ್ಲಿ ಈ ಟ್ರೆಂಡ್ ಮುಂದುವರಿದಿದೆ. ಬೆಂಗಳೂರು ಸೇರಿ ಕರ್ನಾಟಕದ ಅನೇಕ ಕಡೆಗಳಲ್ಲಿ ‘ವಿಕ್ರಮ್’ ಸಿನಿಮಾ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಕರ್ನಾಟಕದ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಸಿನಿಮಾ ಎನ್ನುವ ಖ್ಯಾತಿ ‘ವಿಕ್ರಮ್’ಗೆ ಸಿಕ್ಕಿದೆ.
ಜೂನ್ 3ರಂದು ‘ವಿಕ್ರಮ್’ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ಚಿತ್ರಕ್ಕೆ ಯಾವ ರೀತಿ ವಿಮರ್ಶೆ ಸಿಗುತ್ತದೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಸಿನಿಮಾ ಉತ್ತಮವಾಗಿದ್ದರೆ ಬಾಯಿ ಮಾತಿನಿಂದ ಪ್ರಚಾರ ಸಿಗುತ್ತದೆ. ಈಗ ‘ವಿಕ್ರಮ್’ ಸಿನಿಮಾಗೂ ದೊಡ್ಡ ಪ್ರಚಾರ ಸಿಗುತ್ತಿದೆ. ವೀಕೆಂಡ್ನಲ್ಲಿ ಚಿತ್ರವನ್ನು ಮುಗಿಬಿದ್ದು ಪ್ರೇಕ್ಷಕರು ವೀಕ್ಷಿಸಿದ್ದಾರೆ. ಸೋಮವಾರದ (ಜೂನ್ 6) ಪರೀಕ್ಷೆಯಲ್ಲೂ ಸಿನಿಮಾ ಪಾಸ್ ಆಗಿದೆ.
#Vikram is the highest grossing Tamil movie in #Karnataka in 2022..
— Ramesh Bala (@rameshlaus) June 7, 2022
ಇತ್ತೀಚೆಗೆ ತೆರೆಗೆ ಬಂದ ತಮಿಳಿನ ಯಾವ ಸಿನಿಮಾ ಕೂಡ ಈ ಮಟ್ಟಕ್ಕೆ ಕಲೆಕ್ಷನ್ ಮಾಡಿರಲಿಲ್ಲ. ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಅಬ್ಬರ ಮೊದಲ ದಿನಕ್ಕೆ ಮಾತ್ರ ಸೀಮಿತವಾಯಿತು. ‘ವಲಿಮೈ’ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಹೀಗಾಗಿ, ತಮಿಳು ಮಂದಿ ‘ವಿಕ್ರಮ್’ ಚಿತ್ರವನ್ನು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಜತೆಗೆ ಫಹಾದ್ ಫಾಸಿಲ್, ವಿಜಯ್ ಸೇತುಪತಿ ಹಾಗೂ ಸೂರ್ಯ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: ‘ವಿಕ್ರಮ್’ ಚಿತ್ರಕ್ಕೆ ಭರ್ಜರಿ ಓಪನಿಂಗ್; ಮೊದಲ ದಿನ ಕಮಲ್ ಹಾಸನ್ ಸಿನಿಮಾ ಗಳಿಸಿದ್ದೆಷ್ಟು?
ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 175 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಬಗ್ಗೆ ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಮಾಹಿತಿ ನೀಡಿದ್ದಾರೆ. ಅನೇಕ ಕಡೆಗಳಲ್ಲಿ ಹಿಂದಿಯ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಬದಲು ‘ವಿಕ್ರಮ್’ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂದು ವರದಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Tue, 7 June 22