ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ

ದಯವಿಟ್ಟು ಕಾರ್ತಿಕ್ರನ್ನು ಬಿಟ್ಟುಬಿಡಿ. ಸುಶಾಂತ್ ರೀತಿ ಅವರ ಬೆನ್ನುಹತ್ತಬೇಡಿ. ನೇಣು ಹಾಕಿಕೊಳ್ಳುವಂತೆ ಒತ್ತಾಯ ಮಾಡಬೇಡಿ ಎಂದು ಕಂಗನಾ ರಣಾವತ್ ಅವರು ನೆಪೋಟಿಸಂ ಗ್ಯಾಂಗ್ಗೆ ಛಾಟಿ ಬೀಸಿದ್ದಾರೆ.

ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ
ಕಂಗನಾ ರಣಾವತ್​, ಕಾರ್ತಿಕ್​ ಆರ್ಯನ್​, ಕರಣ್​ ಜೋಹರ್​

ಬಾಲಿವುಡ್​ನಲ್ಲಿ ನೆಪೋಟಿಸಂ ಬಿರುಗಾಳಿ ಮತ್ತೆ ಬೀಸುತ್ತಿದೆ. ನಿರ್ಮಾಪಕ ಕರಣ್​ ಜೋಹರ್​ ವಿರುದ್ಧ ನಟಿ ಕಂಗನಾ ರಣಾವತ್ ಮತ್ತೆ ಕಿಡಿಕಾರಲು ಆರಂಭಿಸಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ನಟ ಕಾರ್ತಿಕ್​ ಆರ್ಯನ್​ ಅವರನ್ನು ದೋಸ್ತಾನಾ 2 ಸಿನಿಮಾದಿಂದ ಹೊರದಬ್ಬಿರುವುದು. ಬಹುನಿರೀಕ್ಷಿತ ದೋಸ್ತಾನಾ 2 ಸಿನಿಮಾಗೆ ಕರಣ್​ ಜೋಹರ್​ ನಿರ್ಮಾಕರು. ಆ ಚಿತ್ರಕ್ಕೆ ಮೊದಲು ಹೀರೋ ಆಗಿ ಕಾರ್ತಿಕ್​ ಆಯ್ಕೆ ಆಗಿದ್ದರು. ಆದರೆ ಕೆಲವೇ ದಿನಗಳ ಹಿಂದೆ ಕರಣ್​ ಜೋಹರ್​ ಮತ್ತು ಕಾರ್ತಿಕ್​ ಆರ್ಯನ್​ ನಡುವೆ ಕಿರಿಕ್​ ಆಗಿದೆ. ಅದರ ಪರಿಣಾಮವಾಗಿ ಕಾರ್ತಿಕ್​ ಆರ್ಯನ್​ಗೆ ಕರಣ್​ ಜೋಹರ್​ ಬಹಿಷ್ಕಾರ ಹಾಕಿದ್ದಾರೆ. ಭವಿಷ್ಯದಲ್ಲಿ ಇನ್ನೆಂದೂ ಕಾರ್ತಿಕ್​ಗೆ ಕೆಲಸ ನೀಡುವುದಿಲ್ಲ ಎಂದು ಕರಣ್​ ಹೇಳಿದ್ದಾರೆ ಎಂಬ ಸುದ್ದಿ ಹರಡಿದೆ.

ಈ ಘಟನೆ ನಡೆದ ಬಳಿಕ ನಟಿ ಕಂಗನಾ ರಣಾವತ್​ ಸಿಟ್ಟಾಗಿದ್ದಾರೆ. ಕರಣ್ ಜೋಹರ್​ ವಿರುದ್ಧ ಅವರು ಸರಣಿ ಟ್ವೀಟ್​ ಮೂಲಕ ಗುಡುಗಲು ಆರಂಭಿಸಿದ್ದಾರೆ. ಈ ಹಿಂದೆ ಸುಶಾಂತ್​ ಸಿಂಗ್​ ರಜಪೂತ್​ ಇದೇ ರೀತಿ ಬಹಿಷ್ಕಾರಕ್ಕೆ ಒಳಗಾಗಿದ್ದರು. ನಂತರ ಅವರ ಮೇಲೆ ಅನೇಕ ಆರೋಪಗಳನ್ನು ಹೊರಿಸಲಾಯಿತು. ಅಂತಿಮವಾಗಿ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡರು. ಈಗ ಕಾರ್ತಿಕ್​ ಆರ್ಯನ್​ ಅವರಿಗೂ ಇದೇ ಪರಿಸ್ಥಿತಿ ಬಾರದಿರಲಿ ಎಂದು ಕಂಗನಾ ಆಶಿಸಿದ್ದಾರೆ.

‘ಕಾರ್ತಿಕ್​ ಸ್ವಂತವಾಗಿ ಇಲ್ಲಿಯವರಗೆ ಬೆಳೆದುಬಂದಿದ್ದಾರೆ. ಅದೇ ರೀತಿ ಅವರು ಮುಂದುವರಿಯಲಿದ್ದಾರೆ. ಕರಣ್​ ಜೋಹರ್​ ಮತ್ತು ಆತನ ನೆಪೋಟಿಸಂ ಗ್ಯಾಂಗ್​ಗೆ ನನ್ನದೊಂದು ಮನವಿ ಏನೆಂದರೆ, ದಯವಿಟ್ಟು ಕಾರ್ತಿಕ್​ರನ್ನು ಬಿಟ್ಟುಬಿಡಿ. ಸುಶಾಂತ್​ ರೀತಿ ಅವರ ಬೆನ್ನುಹತ್ತಬೇಡಿ. ನೇಣು ಹಾಕಿಕೊಳ್ಳುವಂತೆ ಒತ್ತಾಯ ಮಾಡಬೇಡಿ’ ಎಂದು ಕಂಗನಾ ಟ್ವೀಟ್​ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಟ ಕಾರ್ತಿಕ್​​ಗೆ ಕಂಗನಾ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ‘ಕಾರ್ತಿಕ್​ ಅವರೇ ನೀವು ಈ ಚಿಲ್ಲರೆಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಕೆಟ್ಟ ಲೇಖನಗಳನ್ನು ಮಾಡಿದ ಬಳಿಕ, ನಿಮ್ಮ ಆಟಿಟ್ಯೂಡ್​ನಿಂದಾಗಿ ಇಷ್ಟೆಲ್ಲ ಆಯಿತು ಎಂದು ಪ್ರಕಟಣೆ ಹೊರಡಿಸುತ್ತಾರೆ. ನಂತರ ಈ ಮೂರ್ಖ ಮೌನ ವಹಿಸುತ್ತಾನೆ. ವೃತ್ತಿಪರತೆಯ ಕೊರತೆ ಮತ್ತು ಡ್ರಗ್​ ಅಡಿಕ್ಷನ್​ನ ವದಂತಿ ಹರಡಿಸುತ್ತಾರೆ. ಸುಶಾಂತ್​ಗೆ ಹೀಗೇ ಮಾಡಿದ್ದರು’ ಎಂದು ಕಂಗನಾ ಟ್ವೀಟ್​ ಮಾಡಿದ್ದಾರೆ.

‘ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮ ಬೆಳವಣಿಗೆಗೆ ಯಾರು ಕಾರಣ ಆಗುವುದಿಲ್ಲವೋ ಅವರು ನಿಮ್ಮನ್ನು ತುಳಿಯಲು ಕೂಡ ಸಾಧ್ಯವಿಲ್ಲ. ಇಂದು ನಿಮಗೆ ಒಂಟಿತನ ಕಾಡಬಹುದು. ಎಲ್ಲ ಮೂಲೆಗಳಿಂದಲೂ ನಿಮ್ಮನ್ನು ಟಾರ್ಗೆಟ್​ ಮಾಡಬಹುದು. ಆ ರೀತಿ ನೀವು ಅಂದುಕೊಳ್ಳುವುದು ಬೇಡ. ಕರಣ್​ ಜೋಹರ್​ ಡ್ರಾಮಾ ಬಗ್ಗೆ ಎಲ್ಲರಿಗೂ ಗೊತ್ತು. ನೀವು ಚೆನ್ನಾಗಿ ಮುಂದುವರಿಯುತ್ತೀರಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಲಿ ಮತ್ತು ಶಿಸ್ತಿನಿಂದಿರಿ’ ಎಂದು ಕಾರ್ತಿಕ್​ಗೆ ಕಂಗನಾ ಬುದ್ಧಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?

Click on your DTH Provider to Add TV9 Kannada