ಹೇಳದೇ ಕೇಳದೇ ಅಂಬರೀಶ್ ಮನೆಗೆ ಬಂದಿದ್ದ ನಟ ವಿವೇಕ್; ವಿಶೇಷ ಘಟನೆ ನೆನಪಿಸಿಕೊಂಡ ಸುಮಲತಾ

ಹೇಳದೇ ಕೇಳದೇ ಅಂಬರೀಶ್ ಮನೆಗೆ ಬಂದಿದ್ದ ನಟ ವಿವೇಕ್; ವಿಶೇಷ ಘಟನೆ ನೆನಪಿಸಿಕೊಂಡ ಸುಮಲತಾ
ವಿವೇಕ್​ - ಸುಮಲತಾ ಅಂಬರೀಷ್​

Actor Vivek Death: ಕಾಲಿವುಡ್ನ ಜನಪ್ರಿಯ ನಟ ವಿವೇಕ್ ಹೃದಯಾಘಾತದಿಂದ ಶನಿವಾರ (ಏ.17) ನಿಧನರಾದರು. ಅವರಿಗೆ ನಟಿ ಸುಮಲತಾ ಅಂಬರೀಷ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಒಂದು ಹಳೇ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

Madan Kumar

| Edited By: Rajesh Duggumane

Apr 17, 2021 | 3:52 PM

ಜನಪ್ರಿಯ ನಟ ವಿವೇಕ್​ ಅವರು ನಿಧನರಾದ ಸುದ್ದಿ ಕೇಳಿ ಇಡೀ ಚಿತ್ರರಂಗಕ್ಕೆ ಆಘಾತ ಆಗಿದೆ. ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ವಿವೇಕ್​ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರಿಗೆ ವಿವೇಕ್​ ಜೊತೆ ಒಡನಾಟ ಇತ್ತು. ನಟಿ ಸುಮಲತಾ ಅಂಬರೀಷ್​ ಅವರು ಸಹ ವಿವೇಕ್​ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಅವರ ವ್ಯಕ್ತಿತ್ವವನ್ನು ಬಣ್ಣಿಸಿದ್ದಾರೆ.

ಕನ್ನಡದ ದಿಗ್ಗಜ ನಟರಲ್ಲಿ ಒಬ್ಬರಾದ ರೆಬಲ್​ ಸ್ಟಾರ್​ ಅಂಬರೀಷ್​ ಬಗ್ಗೆ ವಿವೇಕ್​ ಅವರಿಗೆ ಅಪಾರ ಅಭಿಮಾನವಿತ್ತು. ತಮ್ಮ ಅಭಿಮಾನವನ್ನು ಅಭಿವ್ಯಕ್ತಿಸುವ ಸಲುವಾಗಿ ನೇರವಾಗಿ ಅಂಬಿ ಮನೆಗೆ ಬಂದಿದ್ದರಂತೆ ವಿವೇಕ್​! ಅದು ಕೂಡ ಹೇಳದೇ ಕೇಳದೇ. ಆ ಘಟನೆಯನ್ನು ಸುಮಲತಾ ಅವರು ಈಗ ಮೆಲುಕು ಹಾಕಿದ್ದಾರೆ. ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಟ್ವೀಟ್​ ಮಾಡಿರುವ ಸುಮಲತಾ ಆ ವಿಶೇಷ ಘಟನೆಯ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.

‘ಒಂದು ದಿನ ವಿವೇಕ್​ ಅವರು ಹೇಳದೇ ಕೇಳದೇ ನಮ್ಮ ಮನೆಗೆ ಬಂದಿದ್ದು ಈಗ ನೆನಪಾಗುತ್ತಿದೆ. ಅಂಬರೀಷ್​ ಅವರ ಉದಾರತೆ ಮತ್ತು ಹೃದಯ ವೈಶಾಲ್ಯತೆಯ ಬಗ್ಗೆ ಕೇಳಿ ತಿಳಿದುಕೊಂಡು, ಆ ಬಗ್ಗೆ ಮೆಚ್ಚುಗೆ ಸೂಚಿಸುವ ಸಲುವಾಗಿ ನೇರವಾಗಿ ಅವರು ನಮ್ಮ ಮನೆಗೆ ಬಂದಿದ್ದರು. ಅದರಿಂದ ನಮ್ಮಿಬ್ಬರಿಗೆ ಅಚ್ಚರಿ ಮತ್ತು ಖುಷಿ ಆಗಿತ್ತು.  ಯಾಕೆಂದರೆ ನಾವಿಬ್ಬರೂ ಅವರ ಪ್ರತಿಭೆಗೆ ಅಭಿಮಾನಿಗಳಾಗಿದ್ದೆವು’ ಎಂದು ಸುಮಲತಾ ಟ್ವೀಟ್​ ಮಾಡಿದ್ದಾರೆ.

‘ನಟ ವಿವೇಕ್​ ನಿಧನದ ಸುದ್ದಿ ಕೇಳಿ ಆಘಾತ ಆಗಿದೆ. ಅವರನ್ನು ಕೇವಲ ನಟ ಎಂದು ಕರೆದರೆ ಅವರ ಪ್ರತಿಭೆ, ಸಾಮಾಜಿಕ ಕಾರ್ಯ, ಬುದ್ಧಿವಂತಿಕೆಯನ್ನು ಕಡೆಗಣಿಸಿದಂತೆ ಆಗುತ್ತದೆ. ಅವರ ನಿಧನದಿಂದಾದ ನಷ್ಟವನ್ನು ಭರಿಸಲು ಸಾಧ್ಯವಿಲ್ಲ’ ಎಂದು ಸುಮಲತಾ ಅಂಬರೀಷ್​ ಕಂಬನಿ ಮಿಡಿದಿದ್ದಾರೆ. ನಟ ಪುನೀತ್​ ರಾಜ್​ಕುಮಾರ್​ ಕೂಡ ಟ್ವೀಟ್​ ಮಾಡಿದ್ದು, ‘ವಿವೇಕ್​ ಸರ್​ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ನಮ್ಮ ಕಾಲದ ಅತಿ ನಲ್ಮೆಯ ಕಾಮಿಡಿ ನಟ ಅವರಾಗಿದ್ದರು’ ಎಂದು ಸ್ಮರಿಸಿಕೊಂಡಿದ್ದಾರೆ.

ಇದನ್ನೂ ಓದಿ: Vivek: ತಮಿಳು ನಟ ವಿವೇಕ್​ ನಿಧನಕ್ಕೆ ಕಂಬನಿ ಮಿಡಿದ ಪುನೀತ್​, ರಜನಿಕಾಂತ್​, ಪ್ರಕಾಶ್​ ರೈ, ರೆಹಮಾನ್​

Follow us on

Related Stories

Most Read Stories

Click on your DTH Provider to Add TV9 Kannada