ಕಲಾವಿದರಿಗೆ ಭಾಷೆಯ ಗಡಿ ಇಲ್ಲ. ಪ್ರತಿಭೆ ಇದ್ದವರು ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಗುರುತಿಸಿಕೊಂಡು ಯಶಸ್ಸು ಪಡೆದ ನೂರಾರು ಉದಾಹರಣೆಗಳು ಸಿಗುತ್ತವೆ. ಕನ್ನಡಿಗ ಪ್ರಕಾಶ್ ರೈ ಅವರು ಬಹುಭಾಷೆಯಲ್ಲಿ ಬೇಡಿಕೆ ಹೊಂದಿದ್ದಾರೆ. ಹಾಗೆಯೇ ಜನಪ್ರಿಯ ನಟರಾದ ಅರ್ಜುನ್ ಸರ್ಜಾ, ಚರಣ್ ರಾಜ್, ರಜನಿಕಾಂತ್ ಅವರು ಕೂಡ ಕರುನಾಡಿನಿಂದ ಕಾಲಿವುಡ್ (Kollywood) ಕಡೆಗೆ ಪಯಣ ಬೆಳೆಸಿ ಯಶಸ್ಸು ಪಡೆದಿದ್ದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಇಂದಿಗೂ ಕೂಡ ಕನ್ನಡದ ಅನೇಕ ಯುವ ಪ್ರತಿಭೆಗಳು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆ ಪೈಕಿ ಕನ್ನಡಿಗ ಅನಿಲ್ ಸಿದ್ದು (Anil Siddhu) ಕೂಡ ಕಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಸ್ಯಾಂಡಲ್ವುಡ್ನಲ್ಲಿ ವಿಲನ್ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸಿನಿಪ್ರಿಯರಿಗೆ ಪರಿಚಿತರಾಗಿದ್ದಾರೆ. ಹೀರೋ ಆಗಿಯೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅವರನ್ನು ಈಗ ತಮಿಳು ಚಿತ್ರರಂಗ ಕೈ ಬೀಸಿ ಕರೆದಿದೆ. ಹೊಸ ಚಿತ್ರದಲ್ಲಿ ಅನಿಲ್ ಸಿದ್ದು ಅವರು ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಬಿಂದಾಸ್’ ಸಿನಿಮಾದಲ್ಲಿ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರಿಗೆ ಹನ್ಸಿಕಾ ಮೋಟ್ವಾನಿ ಜೋಡಿ ಆಗಿದ್ದರು. ಈಗ ಹನ್ಸಿಕಾ ಮತ್ತು ಅನಿಲ್ ಸಿದ್ದು ಒಟ್ಟಿಗೆ ಅಭಿನಯಿಸುತ್ತಿದ್ದಾರೆ.
ಕಾಲಿವುಡ್ನ ಪ್ರತಿಭಾವಂತ ಕಲಾವಿದರಾದ ವಿಕ್ರಂ, ಸಿಂಬು, ವಿಜಯ್ ಸೇತುಪತಿ ಮುಂತಾದವರಿಗೆ ನಿರ್ದೇಶನ ಮಾಡಿ ಅನುಭವ ಹೊಂದಿರುವ ವಿಜಯ ಚಂದರ್ ಈಗ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಅವರ ನಿರ್ಮಾಣದ ಹೊಸ ಸಿನಿಮಾದಲ್ಲಿ ಅನಿಲ್ ಸಿದ್ದು ಅವರಿಗೆ ಒಂದು ಮುಖ್ಯ ಪಾತ್ರವನ್ನು ನೀಡಲಾಗಿದೆ. ಕಂಪನಿಯೊಂದರ ಸಿಇಓ ಪಾತ್ರದಲ್ಲಿ ಅನಿಲ್ ಸಿದ್ದು ನಟಿಸುತ್ತಿದ್ದರೆ, ಅವರ ಸಹೋದ್ಯೋಗಿ ಆಗಿ ಹನ್ಸಿಕಾ ಮೋಟ್ವಾನಿ ಕಾಣಿಸಿಕೊಳ್ಳಲಿದ್ದಾರೆ.
ಕೆ.ಎಸ್. ರವಿಕುಮಾರ್ ಅವರ ಮಕ್ಕಳಾದ ಶರವಣ-ಶಬರಿ ಜಂಟಿಯಾಗಿ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅನೇಕ ಹೆಸರಾಂತ ತಂತ್ರಜ್ಞರು ಈ ಚಿತ್ರದ ತೆರೆ ಹಿಂದೆ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅನಿಲ್ ಸಿದ್ದು ಅವರ ಕಾಲಿವುಡ್ ಪಯಣಕ್ಕೆ ಹೊಸ ಮೈಲೇಜ್ ಸಿಗುವ ನಿರೀಕ್ಷೆ ಇದೆ. ಈ ಸಿನಿಮಾಗೆ ಈಗಾಗಲೇ ಒಂದು ಹಂತದ ಶೂಟಿಂಗ್ ಮುಕ್ತಾಯಗೊಂಡಿದೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಲಿದೆ.
ಅನಿಲ್ ಸಿದ್ದು ಅವರಿಗೆ ಇದು ಕಾಲಿವುಡ್ನಲ್ಲಿ ಮೊದಲ ಸಿನಿಮಾ ಅಲ್ಲ. ಈಗಾಗಲೇ ತಮಿಳಿನ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಪ್ರಖ್ಯಾತ ಡೈರೆಕ್ಟರ್ ಶಂಕರ್ ನಿರ್ದೇಶನದ ‘ಐ’, ಎ.ಆರ್. ಮುರುಗದಾಸ್ ನಿರ್ದೇಶನದ ‘ಕತ್ತಿ’ ಮುಂತಾದ ಚಿತ್ರಗಳಲ್ಲಿ ಅವರು ಸಣ್ಣ-ಪುಟ್ಟ ಪಾತ್ರಗಳನ್ನು ನಿಭಾಯಿಸಿದ್ದುಂಟು. ಈಗ ಹೆಚ್ಚಿನ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಕಾಲೇಜು ದಿನಗಳಲ್ಲೇ ಅನಿಲ್ ಸಿದ್ದು ಅವರು ಮಾಡೆಲಿಂಗ್ ಮಾಡುತ್ತಿದ್ದರು. ಅದರ ಪರಿಣಾಮವಾಗಿ ಎಂಬಿಎ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಕನ್ನಡದ ‘ಮುಮ್ತಾಜ್’, ‘ಸಿಲಿಕಾನ್ ಸಿಟಿ’, ‘ಪಡ್ಡೆ ಹುಲಿ’ ಮುಂತಾದ ಸಿನಿಮಾಗಳ ನೆಗೆಟಿವ್ ಪಾತ್ರದಲ್ಲಿ ಅವರು ಕಾಣಿಸಿಕೊಂಡರು. ವಿನೋದ್ ಪ್ರಭಾಕರ್ ನಟನೆಯ ‘ವರದ’ ಚಿತ್ರದಲ್ಲೂ ಒಂದು ನೆಗೆಟಿವ್ ಶೇಡ್ ಪಾತ್ರ ಮಾಡಿ ಗುರುತಿಸಿಕೊಂಡರು. ‘ಎ+’ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದರು. ಆ ಚಿತ್ರ ಸಾಧಾರಣ ಯಶಸ್ಸು ಕಂಡಿತು. ‘ವಿರಾಟ ಪರ್ವ’ ಸಿನಿಮಾದಲ್ಲೂ ಅವರು ಬಣ್ಣ ಹಚ್ಚಿದ್ದು, ಆ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ.
ಇದನ್ನೂ ಓದಿ:
ಬಿಡುಗಡೆಗೆ ಸಿದ್ಧವಾಗಿದೆ ‘ಸ್ಕೂಲ್ ಲವ್ ಸ್ಟೋರಿ’; ಏನು ಈ ಕನ್ನಡ ಸಿನಿಮಾದ ಕಥೆ?
ಆಸ್ಕರ್ ಕೃಷ್ಣ ‘ಕೃತ್ಯ’ಕ್ಕೆ ಸಾಥ್ ನೀಡಿದ ನಟ ಶ್ರೀಮುರಳಿ; ಪೋಸ್ಟರ್ ಬಿಡುಗಡೆ ಮಾಡಿದ ‘ರೋರಿಂಗ್ ಸ್ಟಾರ್’