ಭಾರ್ಗವಿ ನಾರಾಯಣ | Bhargavi Narayan : ರೈಲ್ವೆ ಸ್ಟೇಷನ್‌ನಲ್ಲಿ ಒಂದು ರೈಲು ನಿಂತಿತ್ತು. ಅದರಲ್ಲಿ ಹೋಗಿ ಮತ್ತೆಲ್ಲೋ ರೈಲು ಬದಲಾಯಿಸಿದರೆ ಕನ್ಯಾಕುಮಾರಿ ತಲುಪಬಹುದೆಂದು ಯಾರೋ ಹೇಳಿದರು. ಇನ್ನೇನು ರೈಲು ಹೊರಡುವುದರಲ್ಲಿತ್ತು. ಹೋಗಿ ಟಿಕೆಟ್ ಖರೀದಿಸಿ ರೈಲಿನಲ್ಲಿ ಕುಳಿತೆವು. ಹೆಚ್ಚಿಗೆ ಜನ ಇರಲಿಲ್ಲ. ಆ ರೈಲು ಅಷ್ಟೊಂದು ಜನಪ್ರಿಯತೆ ಹೊಂದಿರಲಿಲ್ಲವೆಂದು ಕಾಣುತ್ತದೆ. ಹೊರಟಿತು – ನಾವು ಯಾವುದೋ ಘನಕಾರ್ಯ ಸಾಧಿಸಲು ಹೊರಟ ಸಾಹಸಿಗಳಂತೆ ಬೀಗುತ್ತಾ ಕುಳಿತಿದ್ದೆವು. ಮಧ್ಯಾಹ್ನದ ವೇಳೆಗೆ ಯಾವುದೋ ಸ್ಟೇಷನ್‌ನಲ್ಲಿ ನಿಂತಿತು. ನಾವು ಕುಳಿತಿದ್ದ ಬೋಗಿ ಪೂರಾ ಖಾಲಿ ಆಯಿತು. ಆ ರೈಲಿಗೆಲ್ಲಾ ನಾವೇ ಎಂದು ಹಿಗ್ಗುತ್ತಾ ಕುಳಿತಿದ್ದಾಗ, ಇನ್ಯಾರೋ ಪುಣ್ಯಾತ್ಮ ಬಂದು ಹೇಳಿದ, “ಈ ರೈಲು ಇಲ್ಲೇ ನಿಲ್ಲುತ್ತದೆ. ಇದೇ ಕಡೆ ಸ್ಟೇಷನ್, ನೀವು ಕನ್ಯಾಕುಮಾರಿಗೆ ಹೋಗಬೇಕಿದ್ದರೆ ಆ ಪಕ್ಕದ ಲೇನಿನಲ್ಲಿ ನಿಂತಿರುವ ರೈಲು ಹತ್ತಬೇಕು” ಎಂದು. ನಾವು ಕುಳಿತಿದ್ದ ಬೋಗಿ ಸ್ಟೇಷನ್ನಿಂದ ದೂರ ಇತ್ತು ಫ್ಲಾಟ್ ಫಾರ್ಮ್‌ವರೆಗೂ ಹೋಗಿ ಆ ಇನ್ನೊಂದು ರೈಲನ್ನು ಹತ್ತುವಷ್ಟು ಸಮಯಾವಕಾಶ ಇದ್ದಂತೆ ಇರಲಿಲ್ಲ, ನಾವು ಕುಳಿತಿದ್ದ ಬೋಗಿಯಿಂದ ಹೇಗೋ ಕಷ್ಟಪಟ್ಟು ಎಲ್ಲರೂ ಕೆಳಗೆ ಧುಮುಕಿ, ಪಕ್ಕದಲ್ಲಿ ನಿಂತಿದ್ದ ರೈಲು ಹತ್ತಲು ಉಪಕ್ರಮಿಸಿದಿವಿ.
(ಭಾಗ 2)
ಈ ರೈಲು ಹೊರಡುವ ತಯಾರಿಯಲ್ಲಿದ್ದುದರಿಂದ ನಾವುಗಳು ಹೇಗೊ ಸಾಹಸದಿಂದ ರೈಲು ಹತ್ತಿದಿವಿ, ಆದರೆ ವಸು ತೀರ ಕುಳ್ಳಿ, 4 ಅಡಿ ಇದ್ದಿರಬಹುದು ಹೆಚ್ಚೆಂದರೆ, ಅವಳ ಮಗನೂ ಅವಳ ಎತ್ತರವೇ, ಅವರಿಬ್ಬರನ್ನೂ ನಾವು ಮೊದಲು ರೈಲು ಹತ್ತಿದವರು ಮೇಲಕ್ಕೆ ಎಳೆದುಕೊಳ್ಳುವುದಕ್ಕೂ ರೈಲು ಹೊರಡುವುದಕ್ಕೂ ಸರಿಯಾಯಿತು. ಮದುವೆಯ ಮನೆಯಿಂದ ತಂದಿದ್ದ ಬಾಳೆಹಣ್ಣು, ಲಾಡು, ಚಕ್ಕುಲಿ ತಿಂದು ನೀರು ಕುಡಿದು ನಮ್ಮ ಮಧ್ಯಾಹ್ನದ ಊಟವನ್ನು ಪೂರೈಸಿದೆವು, ಸಂಜೆಯ ವೇಳೆಗೆ ಕನ್ಯಾಕುಮಾರಿ ತಲುಪಿದೆವು. ಅಲ್ಲೇ ಹತ್ತಿರದಲ್ಲೇ ಇದ್ದ ಒಂದು ಸಾಧಾರಣವಾದ ಹೋಟೆಲಿನಲ್ಲಿ ರೂಮು ಪಡೆದು, ಕಾಫಿ ಕುಡಿದು, ದೇವಸ್ಥಾನ, ಸಮುದ್ರ ಎಲ್ಲಾ ನೋಡಿಬಂದೆವು. ಒಂದಷ್ಟು ಚಪಾತಿ, ಮೊಸರನ್ನ ತರಿಸಿಕೊಂಡು ತಿಂದು ಮಲಗಿದೆವು. ಬರೀ ಹೆಂಗಸರೇ ಬಂದು ಹೋಟಲಿನಲ್ಲಿ ರೂಂ ಅನ್ನು ಬಾಡಿಗೆ ಪಡೆದಿದ್ದು, ಜೊತೆಯಲ್ಲಿ ಯಾರೂ ಗಂಡಸರು ಇಲ್ಲದಿರುವುದೂ – ಎಲ್ಲರಲ್ಲಿ ಒಂದು ರೀತಿಯ ಕೆಟ್ಟ ಕುತೂಹಲವನ್ನು ಹುಟ್ಟಿಸಿತ್ತು. ವಿಚಿತ್ರವಾಗಿ ನೋಡುತ್ತಿದ್ದರು – ಆ ಹೋಟೆಲಿನವರೂ ಸಹ. ಹೋಟೆಲಿನವರಾದರೆ ಏನು – ಪಾಪ, ಅವರೂ ಹುಲುಮನುಜರೇ ತಾನೇ, ನಾನೇ ಹಿರಿಯಳು. ನನಗೇ 49 ವರ್ಷ, ಲೀಲಾಳಿಗೆ 42, ಸುಧಾ 22, ಅನು 14, ವಸು 36, ಅವಳ ಮಗ 13.
ಸುಂದರವಾದ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದ ಮ್ಯಾಡಮ್ ಇರಬಹುದೇನೋ ನಾನು ಅನ್ನೋ ಅನುಮಾನ ಬಂದಿರಬಹುದು ಪಾಪ ಆ ಜನಕ್ಕೆ ಏನೂ ಇಲ್ಲದ ನೆಪ ಮಾಡಿಕೊಂಡು ಬಂದು ಹೋಟೆಲ್ ರೂಮ್ ಬಾಗಿಲು ಬಡಿಯೋದು, ಸರಿರಾತ್ರಿ ಆದ್ರೂನೂ ಇಡೀ ರಾತ್ರಿ ನಾನು, ಲೀಲ ಎದ್ದು ಕೂತಿದ್ದಿವಿ – ಬೆಳಗಾದ್ರೆ ಸಾಕೂಂತ. ಬೆಳಗಾಗ್ತಿದ್ದ ಹಾಗೆ ಇಡ್ಲಿ ತಿಂದು, ಕಾಫಿ ಕುಡಿದು ದೇವಸ್ಥಾನಕ್ಕೆ ಹೋಗಿ ಬಂದಿವಿ. ರಾತ್ರಿ ಎಲ್ಲಾ ಪಟ್ಟಪಾಡು ಸಾರ್ಥಕ ಅನ್ನಿಸ್ತು ಬೆಳಗಾಗಿದ್ದ ಹಾಗೆ ಅಮ್ಮನವರ ಮುಖ ನೋಡಿದಾಗ, ಏನು ಲಕ್ಷ್ಮಣ ಕನ್ಯಾಕುಮಾರಿ ಅಮ್ಮನ ಮುಖದಲ್ಲಿ.
ಅಲ್ಲಿಂದ ವಿವೇಕಾನಂದ ರಾಕ್ ನೋಡೋದಿಕ್ಕೆ ಬೋಟಿನಲ್ಲಿ ಹೋದಿವಿ. ಆ ಬಂಡೇಲಿ ಮೇಲೆ ಕೂತು ಸುತ್ತುವರಿದಿರೋ ಸಮುದ್ರದ ನೀರನ್ನು ನೋಡಿದ್ರೆ, ಆ ಭವ್ಯವಾದ ಪ್ರಕೃತಿಯ ಮುಂದೆ ನಾವು ಎಂತಹ ಅಬ್ಬರು ಅನ್ನೋದು ಎಂತಹ ಮೂಢಮನುಷ್ಯರಿಗೂ ಅರಿವಾಗುತ್ತೆ. ಧ್ಯಾನಮಂದಿರದಲ್ಲಿ ಕೂತು ಆ ಆನಂದ, ನೆಮ್ಮದಿಯನ್ನು ಮನಸಾರೆ ಅನುಭವಿಸಿದಿವಿ. ಅಲ್ಲಿಂದ ಹೊರಟು ಬಂದು ಆ ಹೋಟೆಲಿನವನು ಕೊಟ್ಟ ಅಧ್ವಾನದ ಊಟವನ್ನು ಮಾಡಿ ಅಲ್ಲಿನ ಲೆಕ್ಕ ಚುಕ್ತಾ ಮಾಡಿ ಹೊರಟೆವು. ಮತ್ತು ತಿರುಚ್ಚಿಗೆ ಬಂದು ಬೆಂಗಳೂರಿಗೆ ಹಿಂದಿರುಗುವ ಇರಾದೆ ಇತ್ತು, ಮೊದಲು ನಾವು ತಿರುಚ್ಚಿಯಿಂದ ಹೊರಟಾಗ.
ಆದರೆ ಅಲ್ಲಿ ಕನ್ಯಾಕುಮಾರಿಯಲ್ಲಿ ಇದ್ದಕ್ಕಿದ್ದಂತೆ ಇನ್ನೊಂದು Brain-Wave. ಇಷ್ಟು ದೂರ ಬದವರು ಕೋವಲಂ ಬೀಚ್ ನ್ನು ಯಾಕೆ ನೂಡಿ ಬರಬಾರದೆಂಬುದು ಆ ಅದ್ಭುತವಾದ ಐಡಿಯಾ ಬಂದು ಟ್ಯಾಕ್ಸಿಯವನನ್ನು ವಿಚಾರಿಸಿದೆವು. ಕರೆದುಕೊಂಡು ಹೋಗಲು ಒಪ್ಪಿ ಬಂದ. ಎಲ್ಲರ ಕುತೂಹಲದಿಂದ ದೃಷ್ಟಿಯನ್ನು ಎದುರಿಸಿ ನಮ್ಮ ಗ್ಯಾಂಗ್ ಟ್ಯಾಕ್ಸಿಯಲ್ಲಿ ಕೋವಲಂ ಬೀಚಿಗೆ ಹೊರಟಿತು.
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)
ಹಿಂದಿನ ಭಾಗ : Bhargavi Narayan Birthday : ‘ಯಾವ ರೈಲು ಹೇಗೆ ಹೋಗುವುದು ಗೊತ್ತಿಲ್ಲ, ನಾವೈದೂ ಹೆಣ್ಣುಮಕ್ಕಳು ಹತ್ತಿಬಿಟ್ಟೆವು!’