ಸೋತು ಗೆದ್ದವರ ಕಥೆಗಳೇ ಹೀಗೆ. ಕಟ್ಟಾ ಕ್ರಿಕೆಟ್ ಮತ್ತು ಆರ್ಸಿಬಿ (RCB) ಪ್ರೇಮಿಯಾದವರಿಗೆ ನಿನ್ನೆಯ ಗೆಲುವು ಇನ್ನೂ ಕಾಡುತ್ತಿದೆ . ಎಲ್ಲೋ ಒಂದು ಕಡೆ vent out ಆಗಬೇಕೆಂದು ಕೂತು ಇಷ್ಟುದ್ದ ಬರೆದಿದ್ದೇನೆ. ಜಾಸ್ತಿ ಸಮಯವಿದ್ದವರು ಓದಿಕೊಳ್ಳಿ. One Match , Many emotions. ಮೊದಲಿಗೆ ಹದಿನಾರು ವರ್ಷದಿಂದ ಒಮ್ಮೆಯೂ ಕಪ್ ಎತ್ತದ ವಿಷಾದದ ನೋವು . ಅದೊಂದು ರೀತಿ ಕೈಗೆಟುಕದ ಪ್ರೀತಿಯಂತೆ , ಅದನ್ನೇ ನೆನೆಸಿಕೊಂಡು ನೋಯುತ್ತಾ ಕ್ರಮೇಣ ಆ ನೋವೇ ಚಟವಾಗಿ ಅದನ್ನೇ ಪ್ರೀತಿಸೋಕೆ ಶುರು ಮಾಡಿದ RCBian ಮನಸ್ಥಿತಿ. ಎರಡನೇಯದು , ಹೊಸ ಅಧ್ಯಾಯ ಎಂದು ಅದೇನೋ ಸಣ್ಣ ಭರವಸೆ ಹುಟ್ಟಿಸಿದ ಬೆನ್ನಲ್ಲೇ ಮೊದಲ ಪಂದ್ಯವುಳಿದು ಸತತ ಏಳು ಪಂದ್ಯಗಳ ಸೋಲು, ಇವರಿಷ್ಟೇ… ನಮ್ಮ ಅಭಿಮಾನಕ್ಕೆ ಬೆಲೆಯಿಲ್ಲ ಎಂಬ ಸಂಕಟ. ಸೋಲು ಅಭ್ಯಾಸವಾದಗಿನದೊಂದು ನಿರ್ಲಿಪ್ತ ಆಧ್ಯಾತ್ಮಿಕತೆ , ನಮ್ಮನ್ನೇ ನಾವು ಕಾಲೆಳೆದುಕೊಳ್ಳುವ ಟ್ರೋಲ್ಗಳು
ಅದರ ನಡುವೆಯೂ ಕಿಂಗ್ ಈಸ್ ಆಲ್ವೇಸ್ ಕಿಂಗ್ ಎಂಬಂತೇ ಕೊಹ್ಲಿ ಎಂಬ ರಣ ಹೋರಾಟಗಾರ , ಸುಲಭವಾಗಿ ಯಾವುದೋ ಬೇರೊಂದು ಟೀಮಿಗೆ ಎಂದೋ ಸೇರಿಕೊಂಡು ಬಿಡಬಹುದಾದರೂ ಅಭಿಮಾನದ ಋಣ ಎನ್ನುತ್ತಾ ಫ್ಯಾನ್ಸ್ ರೀತಿಯೆ ಹುಚ್ಚು ಪ್ರೀತಿ ನೆತ್ತಿಗೇರಿಸಿಕೊಂಡು ಈ ತಂಡ ಬಿಟ್ಟರೇ ಬೇರೆ ತಂಡಕ್ಕೆ ಆಡುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾ ಒಂದು ಪಾಸಿಟಿವ್ ಇಮೋಶನಲ್ ಬ್ಲ್ಯಾಕ್ ಮೇಲ್ ಮಾಡುತ್ತಾನೆ . ಹಾಗಂತ ಅವನ ಪ್ರದರ್ಶನ ವಿಷಯದಲ್ಲಿ ಯಾವ ರಿಯಾಯಿತಿಯನ್ನು ಬೇಡದೇ ಏಳು ಸೋಲಲ್ಲೂ , ಅಬ್ಬರಿಸಿ ಬೊಬ್ಬಿರಿವ ಹೊಡಿಬಡಿಯ ಯುವ ಆಟಗಾರರೆಲ್ಲರನ್ನು ಮೀರಿಸಿ ಆರೆಂಜ್ ಕ್ಯಾಪ್ ಒಡೆಯನಾಗಿದ್ದು ಸತತ ಏಳು ಸೋಲುಗಳ ನಂತರ ಸತತ ಐದು ಪಂದ್ಯಗಳನ್ನು ಗೆದ್ದು ನಾವ್ ವೇಸ್ಟ್ ಬಾಡೀಸ್ ಅಲ್ಲಾ ಕಣ್ರೋ , ಕ್ಷಮಿಸಿ… ನಿಮ್ಮ ನಿರೀಕ್ಷೆಗೆ ನೋವುಂಟು ಮಾಡಿದ್ದೇವೆ . ಇನ್ನು ಸೋಲೋದಿಲ್ಲಾ ಸಪೋರ್ಟ್ ಮಾಡೋದು ಬಿಡಬೇಡಿ ” ಎನ್ನುವಂತೆ ಗಾಯಗೊಂಡ ಹುಲಿಯಂತೆ ತಿರುಗಿ ಬಿದ್ದು ಸತತ ಐದು ಗೆಲುವುಗಳನ್ನು ಗಳಿಸಿದ ರೀತಿಗೆ ಮತ್ತೆ ರಿಟೈರ್ಡ್ ಹರ್ಟ್ ಆಗಿದ್ದ ಅಭಿಮಾನಿಗಳನ್ನು ವಾಪಾಸು ಟೀವಿ ಪರದೆಗೆ ಕಣ್ಣು ಕಚ್ಚಿಸಿ ಕೂರುವಂತೆ ಮಾಡಿದ್ದು.
ಇನ್ನು ಈ ಸೀಸನ್ ಕಥೆ ಮುಗೀತು , ಪ್ಲೇ ಆಫ್ಸ್ ಸಾಧ್ಯವೇ ಇಲ್ಲಾ ಅಂದುಕೊಂಡಾಗ ಕಷ್ಟಪಟ್ಟು ಹೋರಾಡುತ್ತಾ ಬಿದ್ದ ಪಾತಾಳದಿಂದ ಒಂದೊಂದೇ ಮೆಟ್ಟಿಲು ಮೇಲೇರುತ್ತಾ ಇನ್ನೊಂದು ಚೂರು ಬೆಂಬಲ ಕೊಟ್ಟರೇ ಮೇಲೆ ಬಂದು ಬಿಡುತ್ತೀವಿ ಅನ್ನೋ ರೀತಿಯಲ್ಲಿ ಕೊನೆಯ ಸ್ಥಾನದಲ್ಲಿ ಇದ್ದವರು ಏಳನೇ ಸ್ದಾನಕ್ಕೆ ಬಂದು ನಿಂತಿದ್ದು . ಅದು ಹಾಗಾದರೇ, ಇದು ಹೀಗಾದರೇ ನಾವು ಪ್ಲೇ ಆಫ್ಸ್ ಗೇ ಬರಬಹುದು ಎಂಬ ಸಣ್ಣ ಆಸೆಯ ಎಳೆಯೊಂದನ್ನು ಚಿಗುರಿಸಿದ್ದು. ಕೊನೆಯಲ್ಲಿ ಮಣಿಸಬೇಕಾಗಿದ್ದು ಐದು ಬಾರಿಯ ಚಾಂಪಿಯನ್ , ಜೀವಂತ ದಂತಕತೆ ಧೋನಿಯ , ನಮ್ಮಂತೆ ಹುಚ್ಚು ಫಾಲೋಯಿಂಗ್ ಹೊಂದಿದ , ನಮ್ಮ ದಾಯಾದಿ ಸಹೋದರರಂತೇ ಲವ್ ,ಹೇಟ್ ರಿಲೇಶನ್ಶಿಪ್ ಇರುವ ಈವರೆಗಿನ ಅಂಕಿಅಂಶಗಳಲ್ಲಿ ನಮಗಿಂತ ಬಲಿಷ್ಠವೇ ಆಗಿರುವ ಅದರಲ್ಲೂ ನಿರ್ಣಾಯಕ ಪಂದ್ಯಗಳೆಂದರೆ ರಣರಾಕ್ಷಸರಾಗಿ ಬಿಡುವ ಜಾಯಮಾನದ ಚೆನ್ನೈ ತಂಡವನ್ನು .
ಅದೂ ಅದೊಂದು ಚಾಂಪಿಯನ್ ತಂಡವನ್ನ ಕೇವಲ ಮಣಿಸಿದರೆ ಸಾಲದು , ಹದಿನೆಂಟು ರನ್ ಗಳಿಂದ ಅಥವಾ ಹನ್ನೊಂದು ಎಸೆತ ಉಳಿದಿರುವಂತೇ ಸೋಲಿಸಬೇಕು. ಐಪಿಎಲ್ ಮ್ಯಾಚ್ಗಳೆಂದರೇ ಇಪ್ಪತ್ತು ಓವರ್ಗಳಲ್ಲಿ 250 ಸ್ಕೋರ್ ಮಾಡಿದರೂ ಸೇಫಲ್ಲ ಎನ್ನುವ ಹಂತಕ್ಕೆ ಬಂದಿರುವ ಹೊತ್ತಲ್ಲಿ, ಬಹುತೇಕ ಒಂದೆರಡು ರನ್ನಿನಲ್ಲಿ , ಕೊನೆಯ ಎಸೆತದಲ್ಲಿ ಫಲಿತಾಂಶ ನಿರ್ಣಯವಾಗುವ ಜಿದ್ದಾಜಿದ್ದಿನ ಪರಿಪಾಠದ ರಣಕಣದಲ್ಲಿ ಇಷ್ಟು ದೊಡ್ಡ ಅಂತರದ ಗೆಲುವು ಒಂದು ರೀತಿ ಅಸಾಧ್ಯದ ಅಕ್ಕಪಕ್ಕವೇ ಇರುವಂತ ಟಾಸ್ಕ್ ಆಗಿದ್ದಿದ್ದು ಪಂದ್ಯ ಶುರುವಿಗೂ ಮೊದಲು ನಿರ್ಣಾಯಕವಾದ ಟಾಸ್ ಸೋಲು , ಎದುರಾಳಿಯ ದಾಳಕ್ಕೆ ನಾವು ಆಡಬೇಕಾದ ಸ್ಥಿತಿ.
ಇದನ್ನೂ ಓದಿ: RR vs RCB: ಪ್ಲೇ ಆಫ್ ಪಂದ್ಯಗಳಿಗೆ ವೇದಿಕೆ ಸಜ್ಜು: ಎಲಿಮಿನೇಟರ್ನಲ್ಲಿ ಆರ್ಸಿಬಿಗೆ ಈ ತಂಡ ಎದುರಾಳಿ
ಪಂದ್ಯ ಶುರುವಾದ ಮೊದಲ ಮೂರು ಓವರ್ ಕನಸಿನ ಆರಂಭ . ಆರಂಭದಲ್ಲಿ ಸ್ವಲ್ಪ ಲೆಕ್ಕಾಚಾರದಲ್ಲಿ ಆಡುವ ಕೊಹ್ಲಿ ಇಂದು ಅದೊಂದು ಟ್ರಾನ್ಫ್ರಾರ್ಮೇಶನ್ ಗೆ ಒಳಗಾದಂತೆ ಸಿಕ್ಸರ್ ಗಳಲ್ಲೇ ಮಾತಾಡಲು ಶುರು ಹಚ್ಚಿದ್ದು , ಮೂರು ಓವರ್ ಆಗುವಷ್ಟರಲ್ಲಿ ಮೂವತ್ತು ಫ್ಲಸ್ ರನ್ . ನಿರ್ಣಾಯಕ ಪಂದ್ಯದಲ್ಲಿ ಆರಂಭದಲ್ಲೇ ತಡಬಡಾಯಿಸುವ ತಂಡ ಇಂದು ಅದೊಂದು ಅತೀವ ಆತ್ಮವಿಶ್ವಾಸದ ಆಟದಿಂದ ಆರಂಭಿಸಿದ ರೀತಿಗೆ ಇದೇನೋ ನಿಜವೋ , ಅಥವಾ ಯಾವುದೋ ಹಿಂದಿನ ಹೈಲೈಟ್ಸ್ ತೋರಿಸುತ್ತಿದ್ದಾರೋ ಎಂಬ ಗೊಂದಲ.
ನಂತರ ಮಳೆರಾಯನ ಮದ್ಯಪ್ರವೇಶ . ಮಳೆ ಬರಲಿ ಮಳೆ ಬರಲಿ ಎಂದು ಬೆಂದು ಬಸವಳಿದು ಹಂಬಲಿಸಿ ಮೇಲೆ ಕೆಲವು ದಿನಗಳಿಂದ ಬರುತ್ತಿದ್ದ ಮಳೆಯನ್ನು ಧನ್ಯತಾ ಭಾವದಲ್ಲಿ ನೋಡುತ್ತಿದ್ದವರು , ಕ್ಷಣದಲ್ಲೇ ಅಯ್ಯೋ ಇವತ್ತೊಂದು ಮಧ್ಯರಾತ್ರಿವರೆಗೆ , ಇದೊಂದು ಚಿನ್ನಸ್ವಾಮಿ ಕ್ರೀಡಾಂಗಣದ ಇಷ್ಟಗಲ ಹೊರತು ಪಡಿಸಿ ಬರಬಾರದಿತ್ತಾ ಎಂದು ಬೇಡುತ್ತಾ ಗೊಣಗುವಂತೆ ಮಾಡಿದ್ದು . ಅತ್ಯುತ್ತಮ ಲಯದಲ್ಲಿ ನಡೆಯುತ್ತಿದ್ದ ಬ್ಯಾಟಿಂಗಿಗೆ ಇಂತಾ ಅನಿರೀಕ್ಷಿತ ವಿರಾಮಗಳು ಕಂಟಕವಾಗುವ ಸಾಧ್ಯತೆ ನೆನೆದು ಚಿಂತೆ ಶುರುವಾಗಿದ್ದು.
ನಮ್ಮಂತವರ ಗೋಳು ನೋಡಲಾಗದೆ ಮಳೆ ನಿಂತು, ಅಂತೂ ಇಂತೂ ಪಂದ್ಯ ಶುರುವಾಯಿತೆಂದು ನಿಟ್ಟುಸಿರು ಬಿಟ್ಟಾಗಲೆ ನಿಜವಾದ ಸಂಕಟ ಶುರುವಾಗಿದ್ದು . ಮಳೆಯಿಂದ ವಾತಾವಾರಣ ತೇವಗೊಂಡಿದ್ದನ್ನು ಗಮನಿಸಿ ಚೆನ್ನೈ ಸ್ಪಿನ್ನರ್ ಗಳನ್ನು ಕಣಕ್ಕಿಳಿಸಿದರೆ ಚೆಂಡು ನೆಲಕ್ಕೆ ಗ್ರಿಪ್ ಆಗುತ್ತಾ , ಹಚ್ಚಿ ಬಿಟ್ಟಾಗ ತಿರುಗುವ ಭೂಚಕ್ರದಂತೆ ವರ್ತಿಸಲು ಶುರುವಾಗಿದ್ದು .ಆ ತನಕ ಚೆನ್ನಾಗಿ ಬ್ಯಾಟಿಗೆ ಬರುತ್ತಿದ್ದ ಚೆಂಡು, ಈಗ ಅಂದಾಜಿಗೆ ಸಿಗದಂತೆ ಎಲ್ಲೆಲ್ಲೋ ತಿರುಗಲು ಶುರುವಾಗಿ ರನ್ ಮಾಡುವುದಿರಲಿ , ಈ ಗ್ಯಾಪಲ್ಲಿ ಮೂರ್ನಾಲ್ಕು ವಿಕೆಟ್ ಗಳು ಪಟಪಟನೆ ಉರುಳುವುದು ಗ್ಯಾರಂಟಿ ಎಂಬ ಆತಂಕ ತಂದು ಇನ್ನು ಕಥೆ ಮುಗೀತು ಅನಿಸಿದ್ದು.
ಆದರೆ ನಮ್ಮ ಆತಂಕವನ್ನು ಮೀರಿ ಅನುಭವಿಗಳಾದ ಕೊಹ್ಲಿ ಮತ್ತು ಡುಪ್ಲೆಸಿಸ್ ಅದು ಹೇಗೋ ಹೆಣಗಾಡುತ್ತಾ ಮೈ ಕೈ ತಾಗಿಸಿಕೊಂಡು ಆ ಹಂತದಲ್ಲಿ ಒಂದೂ ವಿಕೆಟ್ ಉರುಳದಂತೆ ನೋಡಿಕೊಂಡಿದ್ದೆ ನನ್ನ ಪ್ರಕಾರ ಇಡೀ ಬ್ಯಾಟಿಂಗಿನ ಹೈಲೈಟ್. ಅಲ್ಲಿ ಒಂದೆರೆಡು ವಿಕೆಟ್ ಬಿದ್ದಿದ್ದರೆ ಖಂಡಿತಾ ಮುಂದಿನ ಚಿತ್ರಣ ಬೇರೆಯೆ ಇರುತ್ತಿತ್ತು. ಅದ್ಭುತವಾಗಿ ಆಡುತ್ತಿದ್ದ ಆಡುತ್ತಿದ್ದ ಫಾಪ್ ದುರಾದೃಷ್ಟಕರ ರೀತಿಯಲ್ಲಿ ರನೌಟ್ ಆಗಿದ್ದು. ಪಾಟೀದಾರ್ , ಗ್ರೀನ್ ಹೊಡಿಬಡಿಯ ಜೊತೆಯಾಟ ಮತ್ತೆ ಸುಸ್ಥಿತಿಗೆ ತಂದಿದ್ದು. ಆಮೇಲೆ ಬಂದ ಡಿಕೆ , ಮ್ಯಾಕ್ಸಿ ತಮ್ಮ ಪಾಲಿನ ಕೆಲವು ಫೋರ್ , ಸಿಕ್ಸರ್ ಗಳನ್ನು ಬಾರಿಸಿ ಎಲ್ಲು ರನ್ ರೇಟ್ ಡ್ರಾಪ್ ಆಗದಂತೆ ನೋಡಿಕೊಂಡಿದ್ದು . ಅದೇನೋ ಹೇಳಿ ಮಾಡಿಸಿದಂತೆ ಎಕ್ಸಟ್ರಾ ಹದಿನೆಂಟು ರನ್ಗಳನ್ನು ಆಚೆಗಿಟ್ಟು 200ರ ಗಡಿ ದಾಟಿಸಿ 201ರ ಟಾರ್ಗೆಟ್ ನೀಡಿದ್ದು ಒಂದು ಮಾನಸಿಕ ಮೇಲುಗೈ ಒದಗಿಸಿದ್ದು.
ಇದನ್ನೂ ಓದಿ: RCB vs CSK: ಆರ್ಸಿಬಿ ಪ್ಲೇ ಆಫ್ಗೇರಲು ಕಾರಣವಾಗಿದ್ದೇ ಧೋನಿ ಸಿಡಿಸಿದ ಆ 110 ಮೀ. ಸಿಕ್ಸ್: ಹೇಗೆ ಗೊತ್ತೇ?
ಆಗಷ್ಟೇ ತನ್ನ ಆಸ್ಟ್ರೇಲಿಯಾ ತಂಡಕ್ಕೆ ಅಮೋಘ ಬ್ಯಾಟಿಂಗ್ ನಿಂದ ವರ್ಲ್ಡ್ ಕಪ್ ಗೆದ್ದುಕೊಟ್ಟಿದ್ದ ವಿಶ್ವದ ಅತ್ಯಂತ ವಿನಾಶಕಾರಿ ಬ್ಯಾಟ್ಸ್ ಮನ್ ಮ್ಯಾಕ್ಸ್ವೆಲ್ ನಮಗೂ ಈ ಬಾರಿ ಕಪ್ ಗೆದ್ದುಕೊಡುತ್ತಾನೆ ಎಂದು ಆರಂಭದಲ್ಲಿ ಅಂದುಕೊಂಡಿದ್ದಾಗ ಬ್ಯಾಟಿಂಗೇ ಮರೆತವನಂತೆ ಬಂದ ಕೂಡಲೇ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಔಟಾಗಿ ಹೋಗುವುದನ್ನು ಅಭ್ಯಾಸ ಮಾಡಿಕೊಂಡು ಕೊನೆಗೆ ತಂಡದಿಂದ ಹೊರದಬ್ಬಿಸಿಕೊಂಡು ಬೆಂಚ್ ಕಾಯಿಸುತ್ತಿದ್ದವನು ಬ್ಯಾಟಿಂಗಲ್ಲಿ ಒಂದು ಮಟ್ಟಿಗೆ ಚಿಕ್ಕದಾದರೂ ಒಳ್ಳೆಯ ಕಾಣಿಕೆಯನ್ನೇ ನೀಡಿ ಮತ್ತೆ ಭರವಸೆ ಮೂಡಿಸಿದ್ದರ ಜೊತೆಯಲ್ಲೇ ಮೊದಲ ಎಸೆತದಲ್ಲೇ ಎದುರಾಳಿ ತಂಡದ ನಾಯಕ ಮತ್ತು ಈ ತನಕ ಅತ್ಯಂತ ಹೆಚ್ಚು ರನ್ ಪೇರಿಸಿದ ಋತುರಾಜ್ ಗಾಯಕ್ವಾಡ್ ವಿಕೆಟ್ ಕಿತ್ತು ಪರ್ಫೆಕ್ಟ್ ಸ್ಟಾರ್ಟ್ ಕೊಟ್ಟಿದ್ದು . ಆ ತಂಡದ ಅತ್ಯಂತ ಅಗ್ರೆಸಿವ್ ಹಿಟ್ಟರ್ ಡರೆಲ್ ಮಿಚೆಲ್ ಕೂಡಾ ಬೇಗನೆ ಔಟಾಗಿ, ಬಿಡು ಇನ್ನು ಗೆಲುವು ನಮ್ಮದೇ ಅಂತಾ ರಿಲ್ಯಾಕ್ಸ್ ಮಾಡಿಸಿದ್ದು.
ಒಂದು ರೀತಿಯ ಕೋಲ್ಡ್ ಡಿಸ್ಟ್ರಾಯರ್ ಗಳಾದ ರಹಾನೆ ಮತ್ತು ರಚಿನ್ ರವೀಂದ್ರ ಒಂದೊಳ್ಳೆ ಪಾರ್ಟ್ನರ್ಶಿಪ್ ಮಾಡಿ ಮತ್ತೆ ತಮ್ಮ ತಂಡವನ್ನು ಒಂದು ಸುಸ್ಥಿತಿಗೆ ತಂದು ಅಟ್ಯಾಕ್ ಮಾಡಲು ಶುರುಮಾಡಿದಾಗ , ಟೆಕ್ನಿಕಲೀ ಸ್ಟ್ರಾಂಗ್ ಮತ್ತು ಕೂಲ್ ಹೆಡೆಡ್ ಗಳಾದ ಇವರನ್ನು ಔಟ್ ಮಾಡುವ ಎಸೆತವೇ ಇಲ್ಲವೇನೋ ಅನಿಸುತ್ತಿದ್ದಾಗ ಅವರೇ ತೀರಾ ಶಾಲಾ ಮಕ್ಕಳ ಮಟ್ಟದ ಕನ್ಫ್ಯೂಷನ್ ಗೆ ಸಿಲುಕಿ ರಚಿನ್ ರನೌಟಾಗಿ ಕಂಟಕಪ್ರಾಯವಾಗಿದ್ದ ಜೊತೆಯಾಟ ಕೊನೆಯಾಗಿದ್ದು. ನೆಗೆದು ಎತ್ತರದಲ್ಲಿದ್ದ ಹಣ್ಣು ಕಿತ್ತಂತೆ ಅದ್ಭುತ ಕ್ಯಾಚ್ ಹಿಡಿದು ವ್ಹಾವ್ ಎಂಬ ಉದ್ಘಾರದೊಂದಿಗೆ ತಂಡವನ್ನಷ್ಟೇ ಅಲ್ಲದೇ ನೋಡುಗರನ್ನು ಕುಳಿತಲ್ಲಿಂದ ಜಿಗಿಸಿ ಎನರ್ಜಿ ತುಂಬಿದ ಫಾಫ್ ಫೀಲ್ಡಿಂಗ್. ಕೊನೆಗೆ ಮತ್ತದೇ ಸಿಂಹಸ್ವಪ್ನದಂತ ಜೋಡಿ ಕ್ರೀಸಿನಲ್ಲಿ.
ಇಂತಹಾ ಹಲವಾರು ಸಂದರ್ಭಗಳಲ್ಲಿ ಅಲುಗಾಡದೆ ನಿಂತು ಭಾರತ ತಂಡಕ್ಕೆ ಹತ್ತಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಅತ್ಯಂತ ಅನುಭವಿ ಧೋನಿ – ಜಡೇಜಾ ಡೈನಾಮಿಕ್ ಜೋಡಿ. ಆ ಹಂತದಲ್ಲಿ ಆಟವಾಡಲು ಇದಕ್ಕಿಂತ ಇನ್ನೊಂದು ಒಳ್ಳೇ ಆಪ್ಶನ್ ಪ್ರಪಂಚದಲ್ಲೇ ಇಲ್ಲಾ ಎಂದರೂ ತಪ್ಪಾಗದ ಜೋಡಿ. ಹಿಂದೆ ಹೀಗೇ ಒಂದೆರೆಡು ಬಾರಿ ನಿರ್ಣಾಯಕ ಪಂದ್ಯಗಳಲ್ಲಿ ಅಧಿಕಾರಯುತವಾಗಿ ಆಡಿ ಈ ಜೋಡಿ ನಮ್ಮಿಂದ ಗೆಲುವು ಕಸಿದುಕೊಂಡ ಕಹಿನೆನಪು ಮರುಕಳಿಸುವದೇನೋ ಎಂದು ಆತಂಕ ಹೆಚ್ಚಾಗುವಂತೇ ಜಡೇಜಾ ಮತ್ತು ಧೋನಿ ಜೋಡಿ ಬ್ಯಾಟ್ ಬೀಸಲು ಆರಂಭಿಸಿದ್ದು. ಕೊನೆಯ ಮೂರ್ನಾಲ್ಕು ಓವರ್ಗಳಲ್ಲಿ ಎದುರಾಳಿಗೆ 15 ರನ್ ರೇಟ್ ಪ್ರತಿ ಓವರಿಗೆ ಬೇಕಾಗಿದ್ದಾಗ ನಮ್ಮ ಬೌಲರ್ಗಳು ಪ್ರತಿ ಓವರಿನ ಮೊದಲನೇ ಎಸೆತವನ್ನು ಸಿಕ್ಸರ್ ಹೊಡೆಯಲು ಆಹ್ವಾನ ನೀಡುವಂತೆ ತಪ್ಪು ಲೈನ್ ಎಂಡ್ ಲೆಂತಲ್ಲಿ ಎಸೆದು ಆರು ರನ್ ಗಳನ್ನು ನೀಡಿ ಹತಾಶೆ ಹೆಚ್ಚಿಸುತ್ತಲೇ ಹೋಗಿದ್ದು. ಆದರೂ ನಂತರದ ಎಸೆತಗಳಲ್ಲೀ ಬಿಗಿಯಾಗೀ ಬೌಲಿಂಗ್ ಮಾಡಿ ಸ್ವಲ್ಪ ಮಟ್ಟಿಗೆ ನಿಯಂತ್ರಿಸಿ ಪಂದ್ಯ ಪೂರ್ತಿಯಾಗಿ ಕೈ ತಪ್ಪದಂತೆ ತೂಗೂಯ್ಯಾಲೆಯಲ್ಲಿಟ್ಟಿದ್ದು.
ಇದನ್ನೂ ಓದಿ: IPL 2024: ಆರ್ಸಿಬಿ ಅಭಿಮಾನಿಗಳ ವಿರುದ್ಧ ಆರೋಪಗಳ ಸುರಿಮಳೆಗೈದ ಸಿಎಸ್ಕೆ ಫ್ಯಾನ್ಸ್
ಕೊನೆಯ ಓವರನ್ನು ಎಸೆಯಲು ಅನುಭವಿ ಅಂತರಾಷ್ಟ್ರೀಯ ಬೌಲರ್ಗಳಾದ ಸಿರಾಜ್ , ಪರ್ಗ್ಯೂಸನ್ , ಗ್ರೀನ್ ಬದಲು ಯಶ್ ದಯಾಳ್ ಬಂದಾಗ ಭಾರತ – ಪಾಕ್ ಟಿ 20 ವರ್ಲ್ಡ್ ಕಪ್ ಪೈನಲ್ ಅಲ್ಲಿ ಕೊನೆಯ ಓವರಲ್ಲಿ ಜೋಗಿಂದರ್ ಶರ್ಮ ಬೌಲಿಂಗಿಗೇ ಬಂದು ಗೆಲ್ಲಿಸಿದ್ದು ನೆನಪಾಗಿದ್ದು. ಕೊನೆಯ ಓವರಿನ ಮೊದಲ ಎಸೆತವನ್ನೇ ಧೋನಿ ಸ್ಟೇಡಿಯಂ ಇಂದ ಹೊರಗಟ್ಟಿದಾಗ ಮ್ಯಾಚ್ ಮುಗಿದೇ ಹೋಯಿತು ಎಂಬ ಹತಾಶೆ , ಆಗ blessing in disguise ಎನ್ನುವಂತೆ ವೆಟ್ ಬಾಲ್ ಬದಲು ಹೊಸ ಒಣಗಿದ ಬಾಲ್ ಕೈಗೆ ಸಿಕ್ಕಿ ಯಶ್ ದಯಾಳಿಗೆ ಚೆನ್ನಾಗಿ ಬಾಲ್ ಗ್ರಿಪ್ ಮಾಡಲು ಸಾಧ್ಯವಾಗಿ ಮುಂದಿನ ಎಸೆತವನ್ನು ವೇಗ ಕಡಿತಗೊಳಿಸಿ ನಿಖರವಾಗಿ ಎಸೆಯಲು ಸಾಧ್ಯವಾದಾಗ ಮತ್ತದೇ ರೀತಿಯ ಶಾಟ್ ಆಡಲು ಹೋದ ಧೋನಿ ಔಟಾಗಿ , ಹೋದ ಜೀವ ಮರಳೀ ಬಂದಂತಾಗಿದ್ದು.
ಆದರೂ ಕೊನೆ ಓವರ್ ಸ್ಪೆಶಲಿಸ್ಟ್ ಜಡೇಜಾ ಇನ್ನೊಂದು ತುದಿಯಲ್ಲಿ ಇದ್ದಿದ್ದು , ಗೆಲುವಿನ್ನು ಅವರ ಕಡೆಯೇ ಇದೇ ಅನ್ನುವಂತೆ ಮಾಡಿದ್ದು. ಯಶ್ ದಯಾಳ್ ತನ್ನ ಅತ್ಯಂತ ನಿಖರ ಸ್ಲೋ ಡೆಲಿವರಿಗಳಿಂದ ಜಡೇಜಾ ಬೀಸುವಿಕೆಗೆ ಚೆಂಡು ಸಿಗದಂತೆ ಮಾಡಿ ಗೆಲುವು ತಂದಿದ್ದು. ಎಲ್ಲಾ ಒಟ್ಟಾಗಿ ಕೊನೆಗೆ ಒಂದು ಅತಿಶಯದ ಗೆಲುವಿಗೆ ಗಂಟಲುಬ್ಬಿ ಬಂದಿದ್ದು , ಆ ಸೆಲೆಬ್ರೇಶನ್, ಭಾವುಕ ಕೊಹ್ಲಿ. ಖುಷಿಗೆ ನಿದ್ದೆ ಬರದೇ ಆಗಾಗ ಫೋನ್ ತೆಗೆದು points table ನೋಡುವ ಪುಳಕ. ಕೊನೆಮಾತು: ಇದೇನು ಇಷ್ಟು ಕ್ರಿಕೆಟ್ ಹುಚ್ಚಾ ಅಂದರೇ… ಹೌದು, ನೂರಾರು ಜಂಜಡದ ಜಗದಲ್ಲಿ ಬದುಕಲು ಒಂದೆರೆಡಾದರೂ ತೀವ್ರವಾದ ಹುಚ್ಚಿರಲೇಬೇಕು . ಬರೀ ಪ್ಲೇ ಆಫ್ಸ್ ಗೆ ಬಂದಿದ್ದಕ್ಕೇ ಹೀಗೆ , ಇನ್ನು ಈ ಸಲ ಕಪ್ ನಮ್ದಾದ್ರೇ ಹೆಂಗೋ?
ಬರಹ: ಕವಿರಾಜ್
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:54 pm, Mon, 20 May 24