Dr Rajkumar ಡಾ.ರಾಜ್​ಕುಮಾರ್​ ಬಿಡುಗಡೆಗೆ ಕರ್ನಾಟಕ ಸರ್ಕಾರದಿಂದ ವೀರಪ್ಪನ್​ಗೆ ಪಾವತಿಯಾಗಿತ್ತು ₹15 ಕೋಟಿ! ಪುಸ್ತಕ ಬಿಚ್ಚಿಟ್ಟ ಸತ್ಯ

Dr Rajkumar ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಡಲು ಕೋರಿ ಕರ್ನಾಟಕ ಸರ್ಕಾರ ವೀರಪ್ಪನ್​ಗೆ ₹ 15 ಕೋಟಿ ನೀಡಿದೆ. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದ ರಾಜಕಾರಣಿಯೊಬ್ಬರು ಹಣಕಾಸಿನ ವಿಚಾರವಾಗಿ ವೀರಪ್ಪನ್​ ಜೊತೆ ಮಾತುಕತೆ ನಡೆಸಿದ್ದರು.

Dr Rajkumar ಡಾ.ರಾಜ್​ಕುಮಾರ್​ ಬಿಡುಗಡೆಗೆ ಕರ್ನಾಟಕ ಸರ್ಕಾರದಿಂದ ವೀರಪ್ಪನ್​ಗೆ ಪಾವತಿಯಾಗಿತ್ತು ₹15 ಕೋಟಿ! ಪುಸ್ತಕ ಬಿಚ್ಚಿಟ್ಟ ಸತ್ಯ
ಡಾ.ರಾಜ್​ಕುಮಾರ್​ ಅವರನ್ನು ಬಂಧಿಸಿದ್ದ ಕಾಡುಗಳ್ಳ ವೀರಪ್ಪನ್​ ಸಂಗ್ರಹ ಚಿತ್ರ
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 08, 2021 | 7:24 PM

ಸುಮಾರು ಎರಡು ದಶಕಗಳ ಹಿಂದೆ ಕರ್ನಾಟಕದಲ್ಲಿ ಕಾಡುಗಳ್ಳ ವೀರಪ್ಪನ್ (Veerappan)​ ಸೃಷ್ಟಿಸಿದ ಅವಾಂತರ ಅಂತಿಂಥದ್ದಲ್ಲ. ವರನಟ ಡಾ.ರಾಜ್​ಕುಮಾರ್​ (Dr Rajkumar) ಅವರನ್ನು ಅಪಹರಿಸಿ ನೂರು ದಿನಕ್ಕೂ ಹೆಚ್ಚುಕಾಲ ಬಂಧನದಲ್ಲಿರಿಸಿ ಇಡೀ ಕರುನಾಡನ್ನೇ ಬೆಚ್ಚಿಬೀಳಿಸಿದ್ದ. ಈ ಘಟನೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ತಲೆನೋವು ತಂದಿತ್ತಲ್ಲದೇ. ರಾಜ್​ಕುಮಾರ್​ ಅವರನ್ನು ಕ್ಷೇಮವಾಗಿ ಕರೆದುಕೊಂಡು ಬರಲು ಎರಡೂ ಸರ್ಕಾರಗಳು ನಿರಂತರವಾಗಿ ಶ್ರಮವಹಿಸಿದ್ದವು. ಈ ಘಟನೆ ನಡೆದು ಎರಡು ದಶಕಗಳೇ ಕಳೆದಿವೆ. ಆದರೆ, ಈ ಹೊತ್ತಿನಲ್ಲಿ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದ್ದು, ಡಾ.ರಾಜ್​ಕುಮಾರ್​ ಬಿಡುಗಡೆಗಾಗಿ ಕಾಡುಗಳ್ಳ ವೀರಪ್ಪನ್​ಗೆ ಕರ್ನಾಟಕ ಸರ್ಕಾರದಿಂದ (Karnataka Government) ಸುಮಾರು ₹15 ಕೋಟಿ ಪಾವತಿಯಾಗಿತ್ತು ಎಂಬ ಸುದ್ದಿ ಹೊರಬಿದ್ದಿದೆ.

ಎರಡು ದಶಕಗಳ ನಂತರ ಈ ವಿಷಯವನ್ನು ತಮ್ಮ ಪುಸ್ತಕದ ಮೂಲಕ ವ್ಯಕ್ತಪಡಿಸಿರುವ ಹಿರಿಯ ಪತ್ರಕರ್ತ ಪಿ.ಶಿವಸುಬ್ರಮಣಿಯನ್​ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕಳೆದ ಶನಿವಾರ ಬಿಡುಗಡೆಯಾದ ‘ವೀರಪ್ಪನ್​ ವಾಳ್ತದುಂ ವೀಳ್ತದುಂ’ (ವೀರಪ್ಪನ್​ ಬದುಕಿನ ಏಳು-ಬೀಳು) ಪುಸ್ತಕದಲ್ಲಿ ಡಾ.ರಾಜ್​ಕುಮಾರ್​ ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಡಲು ಕೋರಿ ಕರ್ನಾಟಕ ಸರ್ಕಾರ ವೀರಪ್ಪನ್​ಗೆ ₹ 15 ಕೋಟಿ ನೀಡಿದೆ. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದ ರಾಜಕಾರಣಿಯೊಬ್ಬರು ಹಣಕಾಸಿನ ವಿಚಾರವಾಗಿ ವೀರಪ್ಪನ್​ ಜೊತೆ ಮಾತುಕತೆ ನಡೆಸಿದ್ದರು ಎಂದು ತಿಳಿಸಿದ್ದಾರೆ.

ಇದೇ ಪುಸ್ತಕದ ಮೊದಲ ಭಾಗ ಕಳೆದ ವರ್ಷ ಬಿಡುಗಡೆಯಾಗಿದ್ದು, ಈಗ ಎರಡನೇ ಭಾಗದಲ್ಲಿ ಹಲವು ಗುಟ್ಟಿನ ಸಂಗತಿಗಳನ್ನು ಹೊರಹಾಕಿದ್ದಾರೆ. ಪಿ.ಶಿವಸುಬ್ರಮಣಿಯನ್ ವೀರಪ್ಪನ್​ ಅವರನ್ನು ಭೇಟಿ ಮಾಡಿದ ಮೊದಲ ಪತ್ರಕರ್ತರಾಗಿದ್ದು, ಆತನ ಭಾವಚಿತ್ರವನ್ನು ಮೊದಲು ಜಗತ್ತಿಗೆ ತೋರಿಸಿದವರು ಎಂಬ ಹಿರಿಮೆ ಹೊಂದಿದ್ದಾರೆ. ತನ್ನ ಪುಸ್ತಕದ ಕುರಿತು ಮಾತನಾಡಿರುವ ಅವರು, ಕರ್ನಾಟಕ ಮತ್ತು ತಮಿಳುನಾಡಿನ ಜನರು ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಅಧಿಕಾರ ಹೊಂದಿದ್ದಾರೆ.

ಕರ್ನಾಟಕ ಸರ್ಕಾರದಿಂದ ವೀರಪ್ಪನ್ ₹ 15.22 ಕೋಟಿ ಹಣವನ್ನು ಪಡೆದಿರುವುದು ನಿಜ. ಈ ಹಣವನ್ನು ಎರಡು ಕಂತುಗಳಲ್ಲಿ ಪಾವತಿಸಲಾಗಿದ್ದು, ಮೊದಲು ₹ 10ಕೋಟಿ ನೀಡಿ, ನಂತರ ₹ 5.22 ಕೋಟಿ ತಲುಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈ ಹಣವನ್ನು ಪತ್ರಕರ್ತ ನಕ್ಕೀರನ್​ ಗೋಪಾಲ್ ಮೂಲಕ ವೀರಪ್ಪನ್​ಗೆ ತಲುಪಿಸಲಾಗಿದೆ. 2000 ನೇ ಇಸವಿಯ ನವೆಂಬರ್​13ರಂದು ಡಾ.ರಾಜ್​ಕುಮಾರ್​ ಅವರನ್ನು ಬಿಡುಗಡೆ ಮಾಡುವ ವೇಳೆಯಲ್ಲೇ ಎರಡನೇ ಕಂತಿನ ಹಣ ತಲುಪಿಸಲಾಗಿದೆ ಎಂದು ಹಂಚಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಮಿಳುನಾಡು ಸರ್ಕಾರವೂ ಸುಮಾರು ₹ 10 ಲಕ್ಷ ಖರ್ಚು ಮಾಡಿದೆ. ಆದರೆ, ಮೊದಲು ವೀರಪ್ಪನ್​ ₹ 1,000 ಕೋಟಿಗೆ ಬೇಡಿಕೆ ಇಟ್ಟಿದ್ದ ಅದರಲ್ಲಿ ₹ 10ಕೋಟಿ ಹಣದ ರೂಪದಲ್ಲಿ ಮತ್ತು ₹ 90ಕೋಟಿ ಚಿನ್ನದ ರೂಪದಲ್ಲಿ ನೀಡಲು ಹೇಳಿದ್ದ. ನಂತರ ಹಲವು ಸುತ್ತಿನ ಮಾತುಕತೆ ನಡೆದು ₹ 10 ಕೋಟಿಗೆ ಒಪ್ಪಿಸಲಾಗಿತ್ತು ಎಂದು ಹೇಳಿದ್ದಾರೆ.

ಡಾ.ರಾಜ್​ಕುಮಾರ್​ ಬಿಡುಗಡೆಗೆ ಹಣ ಪಾವತಿಸಿದ್ದು ಸುಳ್ಳು! ಈ ಬೆಳವಣಿಗೆಗಳ ಬೆನ್ನಲ್ಲೇ ನಕ್ಕೀರನ್ ಪತ್ರಿಕೆಯ ಗೋಪಾಲ್ ಪ್ರತಿಕ್ರಿಯೆ ನೀಡಿದ್ದು, ವಿಷಯವನ್ನು ನಿರಾಕರಿಸಿದ್ದಾರೆ. ಡಾ.ರಾಜ್​ಕುಮಾರ್​ ಅವರನ್ನು ಮಾತುಕತೆ ನಡೆಸಿ ಬಿಡಿಸಿಕೊಳ್ಳಲಾಯಿತೇ ವಿನಃ ಅದಕ್ಕಾಗಿ ಯಾವುದೇ ಹಣ ಪಾವತಿಯಾಗಿಲ್ಲ. ಪಿ.ಶಿವಸುಬ್ರಮಣಿಯನ್ ಈಗ ನಮ್ಮ ಪತ್ರಿಕೆಯ ಭಾಗವಾಗಿ ಉಳಿದಿಲ್ಲ. ಅವರು ತಮ್ಮ ಊಹೆ ಮತ್ತು ಕಲ್ಪನೆಗಳನ್ನು ಆಧರಿಸಿ ಪುಸ್ತಕ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಇದೇ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ DVK ಪಕ್ಷದ ಕಾರ್ಯದರ್ಶಿ ಕೊಳತ್ತೂರ್​ ಮಣಿ, ವೀರಪ್ಪನ್​ ₹ 10 ಕೋಟಿ ಪಡೆದಿರುವ ಬಗ್ಗೆ ಮಾಹಿತಿ ಇದೆ. ಆದರೆ, ಬಾಕಿ ₹ 5.22ಕೋಟಿ ಬಗ್ಗೆ ಅರಿವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಾವು ಡಾ.ರಾಜ್​ಕುಮಾರ್ ಅವರ ಬಿಡುಗಡೆ ವಿಚಾರದಲ್ಲಿ ಭಾಗವಾಗಿದ್ದೆವೇ ಹೊರತು ಹಣಕಾಸು ವ್ಯವಹಾರಕ್ಕೆ ಕೈ ಹಾಕಿರಲಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಈ ವಿಚಾರ ಕರ್ನಾಟಕ ಮತ್ತು ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕರ್ನಾಟಕದ ಪುಸ್ತಕ ಏನು ಹೇಳುತ್ತದೆ? ಡಾ.ರಾಜ್​ಕುಮಾರ್​ ಅಪಹರಣ ಸಂದರ್ಭದಲ್ಲಿ ಪೊಲೀಸ್ ಮಹಾ ನಿರ್ದೇಶಕರಾಗದ್ದ ಸಿ.ದಿನಕರ್ ನಂತರದ ದಿನಗಳಲ್ಲಿ ವೀರಪ್ಪನ್ಸ್​ ಪ್ರೈಜ್​ ಕ್ಯಾಚ್​: ರಾಜ್​ಕುಮಾರ್​ ಎಂಬ ಪುಸ್ತಕ ಬರೆದಿದ್ದರು. ಈ ಪುಸ್ತಕದಲ್ಲಿ ಹಣದ ವಿಚಾರವನ್ನೂ ಪ್ರಸ್ತಾಪಿಸಲಾಗಿದ್ದು, ಕರ್ನಾಟಕದ ಹಲವು ಪ್ರಮುಖ ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಿದ್ದರು. ಆ ದಿನಗಳಲ್ಲಿ ಬಹಳ ದೊಡ್ಡಮಟ್ಟದ ಸಂಚಲನ ಮೂಡಿಸಿದ್ದ ಆ ಪುಸ್ತಕ ಹಲವು ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅದೇ ಕಾರಣಕ್ಕಾಗಿ ಮಾಜಿ ಪೊಲೀಸ್ ನಿರ್ದೇಶಕ ಸಿ.ದಿನಕರ್​ ಅವರ ಮೇಲೆ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಲಾಗಿತ್ತು ಎಂಬುದು ಗಮನಾರ್ಹ ಸಂಗತಿ.

ಹೊಸ ಪುಸ್ತಕ Middle Class, Media and Modi | ಮಧ್ಯಮ ವರ್ಗ, ಮಾಧ್ಯಮವನ್ನು ಮೋದಿ ಆವರಿಸಿಕೊಂಡ ಪರಿಯಿದು