ವಿಜಯ್ ಕೊನೆಯ ಸಿನಿಮಾ ಆಗಬೇಕಿದ್ದಿದ್ದು ‘ಜನ ನಾಯಗನ್’ ಅಲ್ಲ, ಮತ್ಯಾವುದು?
Thalapathy Vijay: ‘ಜನ ನಾಯಗನ್’ ಸಿನಿಮಾದ ಚಿತ್ರೀಕರಣಕ್ಕೆ ಮುಂಚೆಯೇ ವಿಜಯ್ ಅವರು, ‘ಇದು ನನ್ನ ಕೊನೆಯ ಸಿನಿಮಾ’ ಎಂದು ಘೋಷಿಸಿದ್ದರು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ತಮಿಳು ಚಿತ್ರರಂಗದ ನಿರ್ದೇಶಕ ಅಸಲಿಗೆ ‘ಜನ ನಾಯಗನ್’ ಅಲ್ಲ ವಿಜಯ್ ಅವರ ಕೊನೆಯ ಸಿನಿಮಾ ಆಗಬೇಕಿದ್ದಿದ್ದು ಈಗ ಸೂಪರ್ ಹಿಟ್ ಆಗಿರುವ ಬೇರೊಂದು ಸಿನಿಮಾ.

ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡಿನ ಸಿಎಂ ಆಗಿದ್ದಾರೆ. ಚುನಾವಣೆಗೆ ಮುಂಚೆ ಅವರ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ಆಗಬೇಕಿತ್ತು, ಆದರೆ ಇನ್ನೂ ಅದೂ ಬಿಡುಗಡೆ ಆಗಿಲ್ಲ. ‘ಜನ ನಾಯಗನ್’ ಸಿನಿಮಾದ ಚಿತ್ರೀಕರಣಕ್ಕೆ ಮುಂಚೆಯೇ ವಿಜಯ್ ಅವರು, ‘ಇದು ನನ್ನ ಕೊನೆಯ ಸಿನಿಮಾ’ ಎಂದು ಘೋಷಿಸಿದ್ದರು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ತಮಿಳು ಚಿತ್ರರಂಗದ ನಿರ್ದೇಶಕ ಅಸಲಿಗೆ ‘ಜನ ನಾಯಗನ್’ ಅಲ್ಲ ವಿಜಯ್ ಅವರ ಕೊನೆಯ ಸಿನಿಮಾ ಆಗಬೇಕಿದ್ದಿದ್ದು ‘ಕರುಪ್ಪು’ ಎಂದಿದ್ದಾರೆ.
ಸೂರ್ಯ ಮತ್ತು ತ್ರಿಷಾ ನಟನೆಯ ‘ಕರುಪ್ಪು’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ತಮಿಳುನಾಡಿನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದೆ. ಈಗಾಗಲೇ ಸಿನಿಮಾ 250 ಕೋಟಿ ಗಳಿಸಿದ್ದು, ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಸಿನಿಮಾ ಅನ್ನು ನಟ ಮತ್ತು ನಿರ್ದೇಶಕ ಎರಡೂ ಆಗಿರುವ ಆರ್ಜೆ ಬಾಲಾಜಿ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಾಲಾಜಿ, ‘ಅಸಲಿಗೆ ‘ಕರುಪ್ಪು’ ಸಿನಿಮಾ ವಿಜಯ್ ಅವರ ಕೊನೆಯ ಸಿನಿಮಾ ಆಗಬೇಕಿತ್ತು’ ಎಂದಿದ್ದಾರೆ.
ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಆರ್ಜೆ ಬಾಲಾಜಿ, ‘ಕರುಪ್ಪು’ ವಿಜಯ್ ಅವರ ಕೊನೆಯ ಸಿನಿಮಾ ಆಗಬೇಕಿತ್ತು. ವಿಜಯ್ ಅವರ ರಾಜಕೀಯ ಎಂಟ್ರಿ ಖಾತ್ರಿ ಆಗಿತ್ತು, ಹಾಗಾಗಿ ಅವರ ಕೊನೆಯ ಸಿನಿಮಾ ಆಗಿ ಯಾವುದು ಸೂಕ್ತ ಎಂಬ ಗೊಂದಲದಲ್ಲಿ ಅವರು ಇದ್ದರು. ನಾನು ಅವರಿಗೆ ‘ಕರುಪ್ಪು’ ಕತೆ ಹೇಳಿದೆ. ಆ ಬಳಿಕ ಎರಡು-ಮೂರು ಬಾರಿ ಭೇಟಿಯಾಗಿ ಕತೆಯ ಬಗ್ಗೆ ಚರ್ಚಿಸಿದೆವು. ಆದರೆ ಅವರಿಗೆ ಚುನಾವಣೆಗೆ ಮುಂಚೆ ‘ಕರುಪ್ಪು’ಗಿಂತಲೂ ‘ಜನ ನಾಯಗನ್’ ಕತೆ ಹೆಚ್ಚು ಸೂಕ್ತ ಎನಿಸಿ ಅವರು ಸಿನಿಮಾ ಕೈಬಿಟ್ಟರು’ ಎಂದಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಾತ್ರವಲ್ಲ ವಿಜಯ್ ದೇವರಕೊಂಡ ಸಹ ‘ತಾಳಿ’ ಕಟ್ಟಿಕೊಂಡಿದ್ದಾರಾ?
‘ಅವರು ಗೌರವಪೂರ್ವಕವಾಗಿಯೇ ಕತೆಯನ್ನು ಬೇಡ ಎಂದರು. ಇದಕ್ಕೆ ಮುಂಚೆಯೂ ಅವರಿಗೆ ಎರಡು ಕತೆ ಹೇಳಿದ್ದೆ. ಆದರೆ ಅದು ಅವರಿಗೆ ಸೂಟ್ ಆಗಿರಲಿಲ್ಲ. ಆಗಲೂ ಸಹ ಅವರು ಯಾವುದಾದರೂ ಸೂಕ್ತ ಎನಿಸಿದರೆ ಖಂಡಿತ ಒಟ್ಟಿಗೆ ಕೆಲಸ ಮಾಡುವ ಎಂದಿದ್ದರು. ಸಾಕಷ್ಟು ಗೌರವಪೂರ್ವಕವಾಗಿಯೇ ಅವರು ನನ್ನ ಕತೆಗಳನ್ನು ನಿರಾಕರಿಸಿದರಾದರೂ ನನ್ನ ಪ್ರತಿಭೆಯ ಬಗ್ಗೆ ಕ್ರಿಯಾತ್ಮಕತೆ ಬಗ್ಗೆ ಗೌರವ ಇರುವುದಾಗಿಯೂ ಹೇಳಿದ್ದರು’ ಎಂದಿದ್ದಾರೆ ಬಾಲಾಜಿ.
‘ಕರುಪ್ಪು’ ಕತೆಯನ್ನು ವಿಜಯ್ ನಿರಾಕರಿಸಿದ ಬಳಿಕ ನಾನು ಅದೇ ಕತೆಯನ್ನು ಸೂರ್ಯ ಅವರಿಗೆ ಹೇಳಿದೆ. ಸೂರ್ಯ ಅವರಿಗೆ ಕತೆ ಇಷ್ಟವಾಯ್ತು ಆದರೆ ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದರು. ಆ ಬದಲಾವಣೆಗಳು ಸಿನಿಮಾ ಇನ್ನಷ್ಟು ಉತ್ತಮಗೊಳ್ಳಲು ನೆರವಾದವು. ಕೊನೆಗೆ ಸಿನಿಮಾ ಬಿಡುಗಡೆ ಆಗಿ ಈಗ ಸೂಪರ್ ಹಿಟ್ ಆಗಿದೆ’ ಎಂದಿದ್ದಾರೆ ಬಾಲಾಜಿ. ‘ಕರುಪ್ಪು’ ಸಿನಿಮಾನಲ್ಲಿ ಸೂರ್ಯ ಜೊತೆಗೆ ನಟಿ ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Thu, 28 May 26





