
ದಕ್ಷಿಣ ಭಾರತದ ಖ್ಯಾತ ನಟಿ, ‘ಮಹಾನಟಿ’ ಕೀರ್ತಿ ಸುರೇಶ್ ತಮ್ಮ ಅದ್ಭುತ ಅಭಿನಯದ ಜೊತೆಗೆ ಫಿಟ್‌ನೆಸ್ ವಿಷಯದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ‘ದಿ ಪ್ಯಾರಡೈಸ್’ ಚಿತ್ರದ ವಿಶೇಷ ಹಾಡಿನಲ್ಲಿ ಸದ್ದು ಮಾಡಲು ಸಜ್ಜಾಗಿರುವ ಅವರು, ತಮ್ಮ ಸೀಕ್ರೆಟ್ ಫಿಟ್‌ನೆಸ್ ಹಾಗೂ ತೂಕ ಇಳಿಕೆಯ ದಿನಚರಿಯಿಂದ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಸಿನಿಮಾ ಒಂದರ ಪಾತ್ರಕ್ಕಾಗಿ ಯಾವುದೇ ಶಾರ್ಟ್‌ಕಟ್ ಬಳಸದೆ ರೂಪಾಂತರ ಹೊಂದಿದ್ದ ಕೀರ್ತಿ, ಸುಮಾರು 9 ಕೆಜಿ ತೂಕ ಇಳಿಸಿಕೊಂಡು ಎಲ್ಲರನ್ನೂ ಬೆರಗುಗೊಳಿಸಿದ್ದರು.
ಕೀರ್ತಿ ಸುರೇಶ್ ಅವರ ಈ ತೂಕ ಇಳಿಕೆಯ ಪಯಣದಲ್ಲಿ ಯಾವುದೇ ಕಟ್ಟುನಿಟ್ಟಾದ ಆಹಾರ ನಿಯಮಗಳು ಅಥವಾ ಕ್ರ್ಯಾಶ್ ಡಯಟ್‌ಗಳಿರಲಿಲ್ಲ. ಆರಂಭದಲ್ಲಿ ಕ್ಯಾಲೊರಿ ಕರಗಿಸಲು ಸಂಪೂರ್ಣವಾಗಿ ಕಾರ್ಡಿಯೋ ವ್ಯಾಯಾಮಗಳನ್ನೇ ನೆಚ್ಚಿಕೊಂಡಿದ್ದ ಅವರು, ಇದರಿಂದ ಸ್ನಾಯುಗಳ ಶಕ್ತಿ ಕಡಿಮೆಯಾಗುವುದನ್ನು ಗಮನಿಸಿ ತಕ್ಷಣ ತಮ್ಮ ವರ್ಕೌಟ್ ಶೈಲಿಯನ್ನು ಬದಲಾಯಿಸಿಕೊಂಡರು. ಪ್ರಸ್ತುತ ಅವರು ಕಾರ್ಡಿಯೋ ಜೊತೆಗೆ ವೇಟ್ ಟ್ರೇನಿಂಗ್ ಹಾಗೂ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದು ಅವರ ದೇಹಕ್ಕೆ ಉತ್ತಮ ಶಕ್ತಿ ಮತ್ತು ನಮ್ಯತೆಯನ್ನು ನೀಡಿದೆ.
ಡಯಟ್ ವಿಷಯಕ್ಕೆ ಬಂದರೆ, ಕೀರ್ತಿ ‘ಕೀಟೋ’ದಂತಹ ಯಾವುದೇ ತೀವ್ರ ಸ್ವರೂಪದ ಪದ್ಧತಿಗಳನ್ನು ಅನುಸರಿಸಲಿಲ್ಲ. ಬದಲಾಗಿ ನೈಸರ್ಗಿಕವಾಗಿ ಸಿಗುವ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರಗಳನ್ನು ಆಯ್ಕೆ ಮಾಡಿಕೊಂಡರು. ಯಾವುದೇ ರೀತಿಯ ಕೃತಕ ಪ್ರೋಟೀನ್ ಶೇಕ್ ಅಥವಾ ಸಪ್ಲಿಮೆಂಟ್ಸ್‌ಗಳನ್ನು ಬಳಸದೆ, ಕೇವಲ ನೈಸರ್ಗಿಕ ಆಹಾರ ಪದಾರ್ಥಗಳಿಂದಲೇ ಪ್ರೋಟೀನ್ ಪಡೆಯುವುದು ಅವರ ಮುಖ್ಯ ಆದ್ಯತೆಯಾಗಿತ್ತು.
ಅವರ ದಿನನಿತ್ಯದ ಆಹಾರದಲ್ಲಿ ಪ್ರೋಟೀನ್ ಪಡೆಯಲು 6 ರಿಂದ 7 ಮೊಟ್ಟೆಯ ಬಿಳಿಭಾಗವನ್ನು ಸೇವಿಸುತ್ತಿದ್ದರು. ಇದರೊಂದಿಗೆ ಪನೀರ್, ಟೋಫು, ಸೋಯಾ ಹಾಗೂ ಕಡಲೆಯಂತಹ ಸಸ್ಯಹಾರಿ ಪ್ರೋಟೀನ್ ಮೂಲಗಳನ್ನು ಯಥೇಚ್ಛವಾಗಿ ಸೇರಿಸಿಕೊಂಡಿದ್ದರು. ಸಂಸ್ಕರಿಸಿದ ಆಹಾರ (ಪ್ರೊಸೆಸ್ಡ್ ಫುಡ್), ಸಕ್ಕರೆ ಮತ್ತು ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಪದಾರ್ಥಗಳಿಂದ ಸಂಪೂರ್ಣ ದೂರವಿದ್ದು ನೈಸರ್ಗಿಕ ಪೋಷಕಾಂಶಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು.
ನೆಚ್ಚಿನ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ ಎಂಬುದು ಕೀರ್ತಿ ಅವರ ಸರಳ ಸೂತ್ರ. ನಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಸರಿಯಾದ ಪೌಷ್ಟಿಕ ಆಹಾರ ಸೇವಿಸುತ್ತಾ, ನಿರಂತರ ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ಅತ್ಯಂತ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಬಹುದು ಎಂಬುದನ್ನು ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಐಟಂ ಹಾಡಿಗೆ ಸೊಂಟ ಕುಣಿಸಲಿರುವ ನಟಿ ಕೀರ್ತಿ ಸುರೇಶ್
ವಿಶೇಷ ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಫಿಟ್‌ನೆಸ್ ಹಾಗೂ ಡಯಟ್ ಸಂಬಂಧಿತ ಮಾಹಿತಿಗಳು ಸಂಪೂರ್ಣವಾಗಿ ಮಾಹಿತಿ ಉದ್ದೇಶಕ್ಕಾಗಿ ಮಾತ್ರವೇ ಹೊರತು, ಇವು ಯಾವುದೇ ರೀತಿಯ ವೃತ್ತಿಪರ ವೈದ್ಯಕೀಯ ಅಥವಾ ಫಿಟ್‌ನೆಸ್ ಉಸ್ತುವಾರಿಗೆ ಪರ್ಯಾಯವಲ್ಲ. ಪ್ರತಿಯೊಬ್ಬರ ದೇಹದ ಪ್ರಕೃತಿ, ಆರೋಗ್ಯ ಸ್ಥಿತಿ ಹಾಗೂ ಚಯಾಪಚಯ ಕ್ರಿಯೆ (ಮೈಟಾಬಾಲಿಸಂ) ಭಿನ್ನವಾಗಿರುವುದರಿಂದ ಕೀರ್ತಿ ಸುರೇಶ್ ಅವರ ಈ ಡಯಟ್ ಅಥವಾ ವರ್ಕೌಟ್ ಪದ್ಧತಿಯನ್ನು ಯಥಾವತ್ತಾಗಿ ಅನುಸರಿಸುವುದು ಸೂಕ್ತವಲ್ಲ. ಆದ್ದರಿಂದ ಯಾವುದೇ ರೀತಿಯ ತೀವ್ರತರವಾದ ಆಹಾರ ಪದ್ಧತಿ (ಡಯಟ್) ಅಥವಾ ತೂಕ ಇಳಿಕೆಯ ವ್ಯಾಯಾಮಗಳನ್ನು ಪ್ರಾರಂಭಿಸುವ ಮುನ್ನ ನಿಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ಪ್ರಮಾಣೀಕೃತ ವೈದ್ಯರು ಅಥವಾ ಪೌಷ್ಟಿಕತಜ್ಞರ (ನ್ಯೂಟ್ರಿಷನಿಸ್ಟ್) ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆಯುವುದು ಕಡ್ಡಾಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.