
ನಟಿ ಖುಷ್ಬೂ ಸುಂದರ್ ಅವರ ಪರಿಚಯ ಕನ್ನಡದವರಿಗೂ ಇದೆ. ಕನ್ನಡದಲ್ಲೂ ಸಿನಿಮಾಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಅವರು ಈಗ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರ ಪತಿ ಸುಂದರ್ ಅವರು ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಈಗ ಖುಷ್ಬೂ (Khushboo Sundar) ಅವರು ಚಿತ್ರರಂಗದ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾಗಳಲ್ಲಿ ಖಾನ್‌ಗಳ ಪಾರುಪತ್ಯವೇ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಹೋಲಿಸಿದರೆ ಪುರುಷ ಪ್ರಧಾನ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡುತ್ತವೆ. ಹೀರೋಗಳ ಆರಾಧನೆ ಇಲ್ಲಿ ಹೆಚ್ಚು. ಇದು ಬದಲಾಗಬೇಕು ಎಂಬುದು ಖುಷ್ಬೂ ಸುಂದರ್ ಅಭಿಪ್ರಾಯ. ಇದು ಬದಲಾಗಲು ಸಾಕಷ್ಟು ಸಮಯ ಬೇಕಿದೆ ಎಂಬ ಅಭಿಪ್ರಾಯವನ್ನು ಅವರು ಹೊರಹಾಕಿದ್ದಾರೆ.
‘ಮಹಿಳಾ ಪ್ರಧಾನ ಸಿನಿಮಾಗಳು ಹಿಟ್ ಆಗಲು ಅವಕಾಶವಿಲ್ಲ. ಕಾಲ ಬದಲಾಗಿದೆ ಎಂದು ಹೇಳಲು ನಾನು ಸಿದ್ಧನಿಲ್ಲ. ನಾವು ವಿಚಾರಗಳನ್ನು ಒಪ್ಪಿಕೊಲ್ಳಬೇಕು. ‘ಅರಮನೈ 4’, ‘ಮೂಗುತ್ತಿ ಅಮ್ಮ 2’ ರೀತಿಯ ಮಹಿಳಾ ಪ್ರಧಾನ ಸಿನಿಮಾಗಳು ಎಲ್ಲೋ ಅಪರೂಪಕ್ಕೊಮ್ಮೆ ಬರುತ್ತವೆ’ ಎಂದು ಅವರು ಹೇಳಿದ್ದಾರೆ.
‘ಬೆಳ್ಳಿಪರದೆ ಅನ್ನೋದು ಖಾನ್, ಸೂಪರ್ಸ್ಟಾರ್ಗಳದ್ದು. ನಾವು ಇನ್ನೂ ಸಾಕಷ್ಟು ಕಾಯಬೇಕಿದೆ’ ಎಂದು ಖುಷ್ಬೂ ಹೇಳಿದ್ದಾರೆ. ಈ ಮೂಲಕ ಮಹಿಳಾ ಪ್ರಧಾನ ಸಿನಿಮಾಗಳು ರಿಲೀಸ್ ಆಗಿ ಸೂಪರ್ ಹಿಟ್ ಆಗಲು ಇನ್ನೂ ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ‘ಆ ರೀತಿಯ ಸಿನಿಮಾಗಳಿಗೆ ದಕ್ಷಿಣದಲ್ಲಿ ಬೇಡಿಕೆಯೇ ಇಲ್ಲ’; ಖುಷ್ಬೂ ಸುಂದರ್
ಮಹಿಳಾ ಪ್ರಧಾನ ಸಿನಿಮಾಗಳು ಈಗ ಒಟಿಟಿಯಲ್ಲಿ ರಿಲೀಸ್ ಆಗಿ ಯಶಸ್ಸು ಕಾಣಲು ಅವಕಾಶ ಇದೆ. ಈ ವಿಚಾರವಾಗಿ ಖುಷ್ಬೂ ಮಾತನಾಡಿದ್ದಾರೆ. ‘ಡಿಂಪಲ್ ಕಪಾಡಿಯಾ ಅವರು ವಿವಿಧ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಮಹಿಳೆಯರಿಗೆ ಅನ್ವೇಷಿಸಲು ಒಟಿಟಿ ಪ್ಲಾಟ್ಫಾರ್ಮ್ ಇದೆ. ಡಾರ್ಲಿಂಗ್ಸ್, ಸಿಟಿ ಆಫ್ ಡ್ರೀಮ್ಸ್, ಡಬ್ಬಾ ಕಾರ್ಟೆಲ್ ರೀತಿಯ ಪ್ರಾಜೆಕ್ಟ್ಗಳು ಬರುತ್ತಿವೆ. ದೂರುತ್ತಾ ಕೂರುವ ಬದಲು ಸಮದೂಗಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಹುಡುಕಬೇಕು’ ಎಂದಿದ್ದಾರೆ ಖುಷ್ಬೂ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Sat, 8 March 25