ನೆಚ್ಚಿನ ನಟನ ಹೊಸ ಸಿನಿಮಾದ ಇಂಟ್ರೊ ವಿಡಿಯೋ ಬಿಡುಗಡೆ ಮಾಡಲಿದ್ದಾರೆ ಸುದೀಪ್
Kamal Haasan-Sudeep: ಕಮಲ್ ಹಾಸನ್, ಸುದೀಪ್ರ ನೆಚ್ಚಿನ ನಟರಲ್ಲಿ ಪ್ರಮುಖರು. ತಮ್ಮ ನೆಚ್ಚಿನ ನಟನ ಹೊಸ ಸಿನಿಮಾ 'ಇಂಡಿಯನ್ 2'ದ ಇಂಟ್ರೊ ವಿಡಿಯೋವನ್ನು ಬಿಡುಗಡೆ ಮಾಡಲಿದ್ದಾರೆ ಸುದೀಪ್.
ವಯಸ್ಸಾದಂತೆ ಸ್ಟಾರ್ಗಿರಿ, ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದ್ದಾರೆ ಕಮಲ್ ಹಾಸನ್. ಅವರ ನಟನೆಯ ‘ವಿಕ್ರಂ‘ (Vikram) ಸಿನಿಮಾ ಅಭಿಮಾನಿಗಳಿಗೆ ಮೋಡಿ ಮಾಡಿದೆ. ಅದಾದ ಬಳಿಕ ಪ್ರಭಾಸ್ ಜೊತೆಗೆ ‘ಕಲ್ಕಿ’ ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾದಲ್ಲಿಯೂ ಅವರ ಪಾತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ. ಇದರ ನಡುವೆ ಕಮಲ್ ಹಾಸನ್ರ ಸೂಪರ್ ಹಿಟ್ ಸಿನಿಮಾ ‘ಇಂಡಿಯನ್’ ನ ಎರಡನೇ ಭಾಗ ತೆರೆಗೆ ಬರಲು ಸಜ್ಜಾಗಿದ್ದು, ಈ ಸಿನಿಮಾದ ಬಗ್ಗೆಯೂ ಸಿನಿಪ್ರೇಮಿಗಳು ದೊಡ್ಡ ಮಟ್ಟದ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಎಸ್ ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 1996 ರಲ್ಲಿ ಬಿಡುಗಡೆ ಆಗಿದ್ದ ‘ಇಂಡಿಯನ್’ ಸಿನಿಮಾವನ್ನು ಸಹ ಶಂಕರ್ ಅವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಇದೀಗ ಅದೇ ಸಿನಿಮಾದ ಮುಂದಿನ ಭಾಗವನ್ನು ಶಂಕರ್ ನಿರ್ದೇಶನ ಮಾಡಿದ್ದಾರೆ. ಇದೇ ಕಾರಣಕ್ಕೆ ಈ ಸಿನಿಮಾದ ಬಗೆಗಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ.
1996ರಲ್ಲಿ ಬಿಡುಗಡೆ ಆಗಿದ್ದ ‘ಇಂಡಿಯನ್’ ಸಿನಿಮಾದಲ್ಲಿ ಸೇನಾಪತಿ ಹಾಗೂ ಚಂದ್ರಭೋಸ್ ಪಾತ್ರದಲ್ಲಿ ಮಿಂಚಿದ್ದರು. ಆ ಸಿನಿಮಾದಲ್ಲಿ ಆಗಿನ ಕಾಲದ ಸೂಪರ್ ಸ್ಟಾರ್ ನಟಿಯರಾಗಿದ್ದ ಮನಿಷಾ ಕೊಯಿರಾಲಾ, ಊರ್ಮಿಳಾ ಮತೋಡ್ಕರ್ ಅವರುಗಳು ನಾಯಕಿಯರಾಗಿ ನಟಿಸಿದ್ದರು. ಆ ಸಿನಿಮಾದ ಮುಂದುವರೆದ ಭಾಗವಾಗಿರುವ ‘ಇಂಡಿಯನ್-2’ ಚಿತ್ರದ ಇಂಟ್ರೋ ವೀಡಿಯೋ ನವೆಂಬರ್ 3 ರಂದು ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳಿನಲ್ಲಿ ರಜನಿಕಾಂತ್, ಹಿಂದಿ ಆಮಿರ್ ಖಾನ್, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್ ಲಾಲ್ ಇಂಡಿಯನ್-2 ಸಿನಿಮಾದ ಇಂಟ್ರೋ ವಿಡಿಯೋ ಅನಾವರಣ ಮಾಡಲಿದ್ದಾರೆ.
ಇದನ್ನೂ ಓದಿ:ಕಮಲ್ ಹಾಸನ್ ಅವರನ್ನು ಭೇಟಿ ಆಗಿದ್ದೇಕೆ ಶಿವಣ್ಣ, ಒಟ್ಟಿಗೆ ಸಿನಿಮಾ ಮಾಡ್ತಿದ್ದಾರಾ? ಕೊಟ್ರಾ ಉತ್ತರ
ಕಮಲ್ ಹಾಸನ್, ಸುದೀಪ್ರ ನೆಚ್ಚಿನ ನಟ. ತಮ್ಮ ನೆಚ್ಚಿನ ನಟನ ಸಿನಿಮಾದ ಇಂಟ್ರೋ ವಿಡಿಯೋವನ್ನು ಬಿಡುಗಡೆ ಮಾಡುವುದು ಸ್ವತಃ ಸುದೀಪ್ಗೆ ಗೌರವದ ಕಾರ್ಯ. ಸುದೀಪ್ ಹಾಗೂ ಕಮಲ್ ಹಾಸನ್ ನಡುವೆ ಆತ್ಮೀಯ ಬಂಧವಿದೆ. ‘ಇಂಡಿಯನ್ 2’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಲೈಕಾ ಜೊತೆಗೂ ಸುದೀಪ್ಗೆ ಆತ್ಮೀಯ ಬಂಧವಿದೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಸುದೀಪ್ ಅವರು ಕಮಲ್ರ ಸಿನಿಮಾದ ಇಂಟ್ರೋ ವಿಡಿಯೋ ಬಿಡುಗಡೆ ಮಾಡುತ್ತಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ ‘ಇಂಡಿಯನ್ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಭ್ರಷ್ಟಾಚಾರ, ಅಪರಾಧ ಚಟುವಟಿಕೆಗಳ ವಿರುದ್ಧ ನಿಲ್ಲುವ ಕಥೆಯನ್ನು ‘ಇಂಡಿಯನ್ 2’ ಒಳಗೊಂಡಿದೆ. ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ನಟ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ಕೂಡ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಈ ಹಿಂದಿನ ‘ಇಂಡಿಯನ್’ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಆ ಸಿನಿಮಾದ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ರವಿವರ್ಮನ್ ಮತ್ತು ರತ್ನವೇಲು ಅವರ ಕ್ಯಾಮರಾ ವರ್ಕ್, ಎ. ಶ್ರೀಕರ್ ಪ್ರಸಾದ್ ಅವರ ಎಡಿಟಿಂಗ್ ಇರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ