
ಪದ್ಮಶ್ರೀ ಪ್ರಶಸ್ತಿ ವಿಜೇತ ಎಂಎಸ್ ಸತ್ಯು ಬಗ್ಗೆ ಅನೇಕರಿಗೆ ತಿಳಿದಿದೆ. ಅವರು ಜುಲೈ 6ರಂದು 96ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ‘ಕೊರಗಜ್ಜ’ ಚಿತ್ರಕ್ಕೆ (Koragajja Movie) ಅವರು ವಸ್ತ್ರವಿನ್ಯಾಸ ವಿಭಾಗಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಈ ವಯಸ್ಸಿನಲ್ಲೂ ಸಿನಿಮಾ ಕೃಷಿ ಮಾಡುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ಚಿತ್ರಕ್ಕೆ ಸುಧೀರ್ ಅತ್ತಾವರ್ ನಿರ್ದೇಶನ ಇದೆ. ಇದು ಪ್ಯಾನ್ ಇಂಡಿಯಾ ಚಿತ್ರ ಆಗಿದ್ದು, ಶೀಘ್ರವೇ ತೆರೆಮೇಲೆ ಬರಲಿದೆ.
ಸತ್ಯು ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಕಲಾವಿನ್ಯಾಸಗಾರ, ರಂಗ ಕರ್ಮಿ ಹಾಗೂ ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದಾರೆ. ಸತ್ಯು ಮಾಡಿದ ಕಲಾ ವಿನ್ಯಾಸ ಲಂಡನ್ನ ಶೇಕ್ಸ್ ಪಿಯರ್ ಮ್ಯೂಸಿಯಂನಲ್ಲಿ ಇಡಲಾಗಿದೆ ಅನ್ನೋದು ವಿಶೇಷ. ಅವರು ‘ಕೊರಗಜ್ಜ’ ಚಿತ್ರಕ್ಕೆ ವಸ್ತ್ರವಿನ್ಯಾಸಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಇವರನ್ನು ಚಿತ್ರತಂಡದವರು ಕಾಸ್ಟ್ಯೂಮ್ ಡಿಸೈನರ್ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರ 800 ವರ್ಷಗಳ ಹಿಂದಿನ ಕಥೆಯನ್ನು ಹೊಂದಿದೆ. ಇಷ್ಟು ಹಿಂದಿನ ಚಿತ್ರಕ್ಕೆ ವಸ್ತ್ರವಿನ್ಯಾಸ ಮಾಡೋದು ದೊಡ್ಡ ಚಾಲೆಂಜ್. ಅದನ್ನು ಮಾಡಲು ಅಪಾರ ಅನುಭವ ಬೇಕು. ಈ ಕಾರಣದಿಂದಲೇ ಸತ್ಯು ಇದಕ್ಕೆ ಸೂಕ್ತ ಎಂದು ಚಿತ್ರತಂಡ ನಿರ್ಧರಿಸಿ, ಅವರ ಸಲಹೆ ಮೇರೆಗೆ ಕೆಲಸ ಮಾಡಿದೆ.
ವಸ್ತ್ರವಿನ್ಯಾಸ ಮಾಡುವಗ ಚಿತ್ರತಂಡಕ್ಕೆ ಸಾಕಷ್ಟು ಅಡೆತಡೆಗಳು ಎದುರಾದವು. ಆಗ ಸತ್ಯು ಅವರ ಅನುಭವ ಕೆಲಸಕ್ಕೆ ಬಂದಿದೆ. ಈ ಚಿತ್ರಕ್ಕೆ ನಿರ್ದೇಶಕ ಸುಧೀರ್ ಅವರು ಸತ್ಯ ಅವರ ಮಾರ್ಗದರ್ಶನದಲ್ಲಿ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಸತ್ಯು ಅವರ ಮಾರ್ಗದರ್ಶನ ಪಡೆದು ಈ ಸಾಹಸಕ್ಕೆ ಅವರು ಕೈ ಹಾಕಿದರು. ಸುಧೀರ್ ಹಾಗೂ ಸತ್ಯು ಈ ಮೊದಲು ಸಿನಿಮಾ, ರಂಗಭೂಮಿ ಮತ್ತು ಟಿವಿ ಮಾಧ್ಯಮದಲ್ಲಿ ಸುಮರು 10 ವರ್ಷಗಳ ಕಾಲ ಒಟ್ಟಾಗಿ ಕೆಲಸ ಮಾಡಿದ್ದರು.
ಈ ಚಿತ್ರದಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ಅವರು ಉದ್ಯಾವರ ಅರಸರ ಪಾತ್ರ ನಿಭಾಯಿಸಿದ್ದಾರೆ. ಅವರು ಈ ಸಿನಿಮಾದ ವಸ್ತ್ರವಿನ್ಯಾಸವನ್ನು ಬಹಳವಾಗಿ ಮೆಚ್ಚಿಕೊಂಡಿದ್ದು, ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: ‘ಕೊರಗಜ್ಜ’ ಸಿನಿಮಾ ಹಾಡುಗಳಿಗೆ ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಧ್ವನಿ
‘ಕೊರಗಜ್ಜ’ ಚಿತ್ರವನ್ನು ತ್ರಿವಿಕ್ರಮ ಸಪಲ್ಯ ನಿರ್ಮಿಸಿದ್ದಾರೆ. ಗೋಪಿ ಸುಂದರ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಈ ಸಿನಿಮಾಗೆ ಶ್ರೇಯಾ ಘೋಷಾಲ್, ಶಂಕರ್ ಮಹದೇವನ್, ಸುನಿಧಿ ಚೌಹಾನ್, ಜಾವೆದ್ ಆಲಿ, ಸ್ವರೂಪ್ ಖಾನ್, ಶರೋನ್ ಪ್ರಭಾಕರ್, ಅರ್ಮನ್ ಮಲಿಕ್ ಜೊತೆಗೆ ದಕ್ಷಿಣ ಭಾರತದ ಪ್ರತಿಭೆಗಳಾದ ರಮೇಶ್ ಚಂದ್ರ, ಸನ್ನಿದಾನಂದನಮ್, ಅನಿಲ ರಾಜಿವ್, ವಿಜೇಶ್ ಗೋಪಾಲ್, ಪ್ರತಿಮ ಭಟ್, ಕಾಂಜನ ಮೊದಲಾದವರು ಹಾಡಿದ್ದಾರೆ. ಚಿತ್ರಕ್ಕೆ ಮನೋಜ್ ಪಿಳ್ಳೈ ಮತ್ತು ಪವನ್ ಛಾಯಾಗ್ರಹಣ, ವಿದ್ಯಾಧರ್ ಶೆಟ್ಟಿ ಮತ್ತು ಜಿತ್ ಜೋಶ್ ಸಂಕಲನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:43 pm, Wed, 2 July 25