ಬಾಲಿವುಡ್ನಲ್ಲಿ ಇತ್ತೀಚೆಗೆ ತೆರೆಕಂಡಿದ್ದ ಅಮೀರ್ ಖಾನ್ (Aamir Khan) ಅಭಿನಯದ ಲಾಲ್ ಸಿಂಗ್ ಚಡ್ಡಾ (Laal Singh Chaddha) ಚಿತ್ರವು ಕೊನೆಗೂ 100 ಕೋಟಿ ಕ್ಲಬ್ ಸೇರಿಕೊಂಡಿದೆ. ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಅದರಲ್ಲೂ ಚಿತ್ರ ಬಿಡುಗಡೆಗೂ ಮುನ್ನ ಕೇಳಿ ಬಂದ ಬಾಯ್ಕಾಟ್ ಅಭಿಯಾನವು ಚಿತ್ರದ ಭರ್ಜರಿ ಓಪನಿಂಗ್ಗೆ ಭಾರೀ ಹೊಡೆತ ನೀಡಿತು. ಪರಿಣಾಮ ಮೊದಲ ದಿನವೇ ಪ್ರೇಕ್ಷಕರ ಕೊರತೆ ಎದುರಿಸಿತ್ತು. ಅಲ್ಲದೆ ಬಿಡುಗಡೆ ದಿನ ಬಾಕ್ಸಾಫೀಸ್ನಲ್ಲಿ (Laal Singh Chaddha box office collection) ಗಳಿಸಿದ್ದು ಕೇವಲ 11 ಕೋಟಿ ರೂ. ಮಾತ್ರ. ಇದೀಗ ಚಿತ್ರವು ನಿಧಾನಕ್ಕೆ ಸುಧಾರಿಸಿಕೊಳ್ಳುತ್ತಿದೆ. ಆದರೆ ಇದು ಭಾರತೀಯ ಬಾಕ್ಸಾಫೀಸ್ನಲ್ಲಿ ಅಲ್ಲ ಎಂಬುದು ವಿಶೇಷ.
ಅಂದರೆ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಭಾರತದಲ್ಲಿ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾದರೂ ಅಮೀರ್ ಖಾನ್ ಅಭಿನಯಕ್ಕೆ ವಿದೇಶದಿಂದ ಬಹುಪರಾಕ್ ಕೇಳಿ ಬರುತ್ತಿದೆ. ಪರಿಣಾಮ ಮೊದಲ 8 ದಿನಗಳಲ್ಲೇ ಚಿತ್ರದ ಕಲೆಕ್ಷನ್ 100 ಕೋಟಿಯನ್ನು ದಾಟಿದೆ.
ಭಾರತದಲ್ಲಿ ಮೊದಲ ವಾರದಲ್ಲಿ ಕೇವಲ 59.68 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರವು ವಿದೇಶದಲ್ಲಿ ಒಟ್ಟು 60 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಈ ಮೂಲಕ 8 ದಿನಗಳಲ್ಲಿ 115 ಕೋಟಿಗೂ ಅಧಿಕ ಮೊತ್ತ ಗಳಿಸಿಕೊಂಡಿದೆ.
ಆದರೆ ಅಮೀರ್ ಖಾನ್ ಚಿತ್ರಗಳಿಗೆ ಹೋಲಿಸಿದರೆ ಇದು ಅತ್ಯಂತ ನಿಧಾನಗತಿಯ ಗಳಿಕೆ ಕಾಣುತ್ತಿರುವ ಚಿತ್ರವಾಗಿದೆ. ಅದರಲ್ಲೂ 2000 ರ ಬಳಿಕ ಅಮೀರ್ ಖಾನ್ ಸಿನಿಮಾವೊಂದು ಬಾಕ್ಸಾಫೀಸ್ನಲ್ಲಿ ಕಲೆಕ್ಷನ್ನಲ್ಲಿ ಹಿಂದೆ ಉಳಿಯುತ್ತಿರುವುದು ಇದೇ ಮೊದಲು ಎಂದು ಬಾಲಿವುಡ್ ಪಂಡಿತರ ಅಭಿಪ್ರಾಯ.
ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಒಟ್ಟು 180 ಕೋಟಿ ರೂ. ಬಂಡವಾಳ ಹೂಡಲಾಗಿದ್ದು, ಇದಾಗ್ಯೂ 8 ದಿನಗಳಲ್ಲಿ ಚಿತ್ರವು ಬಾಕ್ಸಾಫೀಸ್ನಲ್ಲಿ ಕೇವಲ 115 ಕೋಟಿಗಳಿಸಲಷ್ಟೇ ಶಕ್ತವಾಗಿದೆ. ಹೀಗಾಗಿ ಅಮೀರ್ ಖಾನ್ ಚಿತ್ರವನ್ನು ಬಾಕ್ಸಾಫೀಸ್ನಲ್ಲಿ ಅಟ್ಟರ್ ಫ್ಲಾಪ್ ಎಂದು ವಿಶ್ಲೇಷಿಸಲಾಗುತ್ತಿದೆ.
ಏಕೆಂದರೆ ಅಮೀರ್ ಖಾನ್ ನಾಯಕನಾಗಿ ನಟಿಸಿದ್ದ ಈ ಹಿಂದಿನ ಚಿತ್ರಗಳಾದ ದಂಗಲ್ ಮೊದಲ ವಾರದಲ್ಲೇ 197.54 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೆಯೇ ಪಿಕೆ ಚಿತ್ರವು ಫಸ್ಟ್ ವೀಕ್ನಲ್ಲಿ 183.09 ಕೋಟಿ ಬಾಚಿಕೊಂಡಿತ್ತು. ಆದರೆ ಲಾಲ್ ಸಿಂಗ್ ಚಡ್ಡಾ ಚಿತ್ರದ ಒಟ್ಟಾರೆ ಕಲೆಕ್ಷನ್ ನೂರು ಕೋಟಿಯ ಅಸುಪಾಸಿನಲ್ಲೇ ಉಳಿದಿರುವ ಕಾರಣ ಈ ಸಿನಿಮಾವನ್ನು ಫ್ಲಾಪ್ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
Published On - 11:04 am, Sun, 21 August 22