Lata Mangeshkar Funeral Highlights: ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್

| Updated By: ganapathi bhat

Updated on: Feb 06, 2022 | 8:16 PM

ಲತಾ ಮಂಗೇಶ್ಕರ್ ಅಂತ್ಯಕ್ರಿಯೆ: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ನಿಧನ ಹೊಂದಿದ್ದಾರೆ. ದೇಶದಲ್ಲಿ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

Lata Mangeshkar Funeral Highlights: ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್
ಲತಾ ಮಂಗೇಶ್ಕರ್

ಭಾರತ ರತ್ನ ಲತಾ ಮಂಗೇಶ್ಕರ್ (Lata Mangeshkar) ಇಂದು ಮುಂಜಾನೆ 8.12ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಅವರು ನಮ್ಮನ್ನಗಲಿದ್ದಾರೆ ಎಂದು ಅವರ ಆರೋಗ್ಯದ ಉಸ್ತುವಾರಿ ಹೊತ್ತಿದ್ದ ಡಾ.ಪ್ರತಿತ್ ಸಮ್ದಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಲತಾ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ದೇಶದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆಯನ್ನು ಸರ್ಕಾರ ಘೋಷಿಸಿದ್ದು, ರಾಷ್ಟ್ರಧ್ವಜವು ಅರ್ಧ ಮಟ್ಟದಲ್ಲಿ ಹಾರಾಡಲಿದೆ. ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿಲಾಗಿದೆ.

LIVE NEWS & UPDATES

The liveblog has ended.
  • 06 Feb 2022 07:25 PM (IST)

    ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್

    ಗಾನ ಕೋಗಿಲೆ ಲತಾ ಮಂಗೇಶ್ಕರ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಗಾಯಕಿ ಲತಾ ಅಂತ್ಯಕ್ರಿಯೆ ನಡೆಸಲಾಗಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ನಿಧನರಾಗಿದ್ದ ಲತಾ ಮಂಗೇಶ್ಕರ್ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಲತಾ ಮಂಗೇಶ್ಕರ್ ವಿಧಿವಶರಾಗಿದ್ದರು.

  • 06 Feb 2022 06:41 PM (IST)

    ಧಾರವಾಡ: ಡಸ್ಟ್ ಆರ್ಟ್ ಮೂಲಕ ಲತಾ ಮಂಗೇಶ್ಕರ್​ಗೆ ಅಂತಿಮ ನಮನ

    ಧಾರವಾಡ: ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ ಹಿನ್ನೆಲೆ ಧಾರವಾಡದ ಕಲಾವಿದ ಒಬ್ಬರಿಂದ ವಿಭಿನ್ನ ರೀತಿಯಲ್ಲಿ ನಮನ ಸಲ್ಲಿಸಲಾಗಿದೆ. ಮಂಜುನಾಥ ಹಿರೇಮಠ ಎಂಬವರಿಂದ ಕಲಾ ನಮನ ಸಲ್ಲಿಕೆ ಮಾಡಲಾಗಿದೆ. ಧಾರವಾಡದ ಕೆಲಗೇರಿ ನಿವಾಸಿ ಮಂಜುನಾಥ ಎಂಬವರು ಡಸ್ಟ್ ಆರ್ಟ್ ಮೂಲಕ ನಮನ ಸಲ್ಲಿಸಿದ್ದಾರೆ. ವಾಹನದ ಗಾಜಿನ ಮೇಲೆ ಡಸ್ಟ್ ಆರ್ಟ್ ಬಿಡಿಸಿ, ಲತಾ ಭಾವಚಿತ್ರ ಚಿತ್ರಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.


  • 06 Feb 2022 06:38 PM (IST)

    ಕ್ರಿಕೆಟ್ ದಿಗ್ಗಜ ಸಚಿನ್, ಪತ್ನಿಯಿಂದ ಲತಾ ಮಂಗೇಶ್ಕರ್​ಗೆ ಅಂತಿಮ ನಮನ ಸಲ್ಲಿಕೆ

    ಕೆಲ ಹೊತ್ತಿನಲ್ಲೇ ಗಾಯಕಿ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ನಡೆಯಲಿದೆ. ಲತಾ ಮಂಗೇಶ್ಕರ್ ಪಾರ್ಥಿವ ಶರೀರಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಗಣ್ಯರಿಂದ ಅಂತಿಮ ನಮನ ಸಲ್ಲಿಕೆ ಮಾಡಲಾಗಿದೆ. ಬಾಲಿವುಡ್‌ನ ಹಲವು ನಟ, ನಟಿಯರಿಂದ ಅಂತಿಮ ನಮನ ಸಲ್ಲಿಸಲಾಗಿದೆ. ಕ್ರಿಕೆಟ್ ದಿಗ್ಗಜ ಸಚಿನ್, ಪತ್ನಿಯಿಂದ ಕೂಡ ಅಂತಿಮ ನಮನ ಸಲ್ಲಿಕೆ ಆಗಿದೆ.

  • 06 Feb 2022 06:04 PM (IST)

    ಲತಾ ಮಂಗೇಶ್ಕರ್ ನಿಧನಕ್ಕೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಶೋಕ ಸಂದೇಶ

    ಲತಾ ಮಂಗೇಶ್ಕರ್ ನಿಧನಕ್ಕೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಶೋಕ ಸಂದೇಶ ನೀಡಿದ್ದಾರೆ. ಸಂಗೀತ ಲೋಕದ ಗಾನಕೋಗಿಲೆ, ಭಾರತದ ಉದ್ದಗಲಕ್ಕೂ ತನ್ನ ಕಂಠ ಸಿರಿಯ ಮೂಲಕ ಕೋಟ್ಯಂತರ ಜನರ ಮನಸೂರೆಗೊಂಡಿದ್ದ, ಶ್ರೀಮತಿ ಲತಾ ಮಂಗೇಶ್ವರ್ ಅವರ ಅಗಲಿಕೆ ಭಾರತ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ತನ್ನ ಗಾಯನದ ಮೂಲಕ ಪ್ರಪಂಚದಾದ್ಯಂತ ಸ್ವರ ಸಾಮ್ರಾಜ್ಞಿಯಾಗಿ ಮೆರೆದ ಲತಾಜಿ ಅವರು ಮೌನಕ್ಕೆ ಸರಿದಿರುವ ಇಂದಿನ ದಿನ ಭಾರತದ ಚರಿತ್ರೆಯಲ್ಲಿ ಕರಾಳದಿನ. ಹಲವು ಪ್ರಶಸ್ತಿಗಳ ಮೇಲೆ ಅಧಿಪತ್ಯ ಸಾಧಿಸಿ ಆ ಪ್ರಶಸ್ತಿಗಳ ಮೌಲ್ಯ ಹೆಚ್ಚಿಸಿದ ಪ್ರತಿಭೆ ಲತಾಜೀ.

    ನಾನು ಮಹಾರಾಷ್ಟ್ರ ರಾಜ್ಯಪಾಲನಾಗಿದ್ದ ಸಮಯದಲ್ಲಿ ಅವರ ಗಾಯನವನ್ನು ಅತ್ಯಂತ ಸಮೀಪದಿಂದ ಅಸ್ವಾದಿಸಿದ ನನಗೆ ಅವರ ಅಗಲಿಕೆ ಅತೀವ ನೋವನ್ನು ಉಂಟಮಾಡಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಅವರ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದು ಎಸ್.ಎಂ. ಕೃಷ್ಣ ಹೇಳಿದ್ದಾರೆ.

  • 06 Feb 2022 05:51 PM (IST)

    ಮುಂಬೈನ ಶಿವಾಜಿ ಪಾರ್ಕ್ ತಲುಪಿದ ಲತಾ ಮಂಗೇಶ್ಕರ್ ಪಾರ್ಥಿವ ಶರೀರ

    ಲತಾ ಮಂಗೇಶ್ಕರ್ ಪಾರ್ಥಿವ ಶರೀರ ಮುಂಬೈನ ಶಿವಾಜಿ ಪಾರ್ಕ್ ತಲುಪಿದೆ. ಮುಂಬೈನ ಶಿವಾಜಿ ಪಾರ್ಕ್​​ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಕೂಡ ಭಾಗಿ ಆಗಲಿದ್ದಾರೆ ಎಂದು ತಿಳಿದುಬಂದಿದೆ.

  • 06 Feb 2022 05:49 PM (IST)

    ಲತಾ ಮಂಗೇಶ್ಕರ್ ನಿಧನಕ್ಕೆ ಕೇಂದ್ರ ಸಚಿವ ಜೋಶಿ ಸಂತಾಪ

    ಲತಾ ಮಂಗೇಶ್ಕರ್ ನಿಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಾಪ ಸೂಚಿಸಿದ್ದಾರೆ. ಗಾನಕೋಗಿಲೆ ಕಳೆದುಕೊಂಡು ಸಂಗೀತ ಲೋಕ ಬಡವಾಗಿದೆ. ಲತಾ ಅವರನ್ನ ಕಳೆದುಕೊಂಡು ದೇಶವೇ ಶೋಕಸಾಗರದಲ್ಲಿದೆ. ಲತಾ ಮಂಗೇಶ್ಕರ್​​ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಆ ಭಗವಂತ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಸಂತಾಪ ಸೂಚಿಸಿದ್ದಾರೆ.

  • 06 Feb 2022 05:47 PM (IST)

    ಲತಾ ಸಹೋದರಿ ಉಷಾ ಮಂಗೇಶ್ಕರ್​ಗೆ ಸಾಂತ್ವನ ಹೇಳಿದ ಸಿಎಂ ಬೊಮ್ಮಾಯಿ

    ಲತಾ ಮಂಗೇಶ್ಕರ್ ನಿಧನ ಹಿನ್ನೆಲೆ ಉಷಾ ಮಂಗೇಶ್ಕರ್​​ಗೆ ಕರೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ. ಲತಾ ಸಹೋದರಿ ಉಷಾ ಮಂಗೇಶ್ಕರ್​ ಜತೆ ಸಿಎಂ ಕರೆ ಮಾಡಿ ಮಾತಾಡಿದ್ದಾರೆ. ಲತಾ ಮಂಗೇಶ್ಕರ್ ಅವರು ಭಾರತದ ನೈಟಿಂಗೇಲ್. ಅವರು ಹಲವು ತಲೆಮಾರುಗಳ ಜನರ ಉಸಿರಿನ ಜೊತೆ ಜೀವಂತ ಆಗಿರುತ್ತಾರೆ. ದೇಶದ ಜನರ ಮನಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಅಂತಹ ಮಹಾನ್ ಗಾಯಕಿಯನ್ನು ಕಳೆದುಕೊಂಡಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

  • 06 Feb 2022 05:37 PM (IST)

    ಮುಂಬೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

    ಸಂಗೀತ ಲೋಕದ ಸರಸ್ವತಿ ಲತಾ ಮಂಗೇಶ್ಕರ್(92) ನಿಧನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮುಂಬೈಗೆ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಲತಾ ಮಂಗೇಶ್ಕರ್ ಅಂತಿಮ ದರ್ಶನ ಪಡೆಯಲಿದ್ದಾರೆ. ಶಿವಾಜಿ ಪಾರ್ಕ್​​ನಲ್ಲಿ ಅಂತಿಮ ದರ್ಶನ ಪಡೆಯಲಿದ್ದಾರೆ.

  • 06 Feb 2022 05:14 PM (IST)

    ಮುಂಬೈನ ಶಿವಾಜಿ ಪಾರ್ಕ್​​ನಲ್ಲಿ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ

    ಸಂಗೀತ ಲೋಕದ ಸರಸ್ವತಿ ಲತಾ ಮಂಗೇಶ್ಕರ್(92) ನಿಧನ ಹೊಂದಿದ್ದಾರೆ. ಸಂಜೆ 6.30 ಕ್ಕೆ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಮುಂಬೈನ ಶಿವಾಜಿ ಪಾರ್ಕ್​​ನಲ್ಲಿ ಸಂಜೆ 6.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. ಕೆಲ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಂತಿಮ ದರ್ಶನ ಪಡೆಯಲಿದ್ದಾರೆ. ದೆಹಲಿಯಿಂದ ಮುಂಬೈಗೆ ಆಗಮಿಸಲಿರುವ ಪ್ರಧಾನಿ ಮೋದಿ ಲತಾ ಮಂಗೇಶ್ಕರ್ ಅಂತಿಮ ದರ್ಶನ ಪಡೆಯಲಿದ್ದಾರೆ.

  • 06 Feb 2022 05:11 PM (IST)

    ಲತಾ ಮಂಗೇಶ್ಕರ್ ನಿಧನ: ಮೈಸೂರು ಅರಮನೆ ದೀಪಾಲಂಕಾರ ಹಾಗೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ರದ್ದು

    ಸಂಗೀತ ಲೋಕದ ಸರಸ್ವತಿ ಲತಾ ಮಂಗೇಶ್ಕರ್ (92) ನಿಧನ ಹಿನ್ನೆಲೆ ಇಂದು ಸಂಜೆ ಮೈಸೂರು ಅರಮನೆ ದೀಪಾಲಂಕಾರ ಹಾಗೂ ನಾಳೆ (ಫೆಬ್ರವರಿ 7) ನಡೆಯಬೇಕಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಮೈಸೂರು ಅರಮನೆಯ ಆಡಳಿತ ಮಂಡಳಿಯಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರವಾಸಿಗರಿಗೆ ಅರಮನೆ ವೀಕ್ಷಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಲಾಗಿದೆ.

  • 06 Feb 2022 05:10 PM (IST)

    ಬೆಂಗಳೂರು: ಅಗಲಿದ ಗಾನ ಕೋಗಿಲೆಗೆ ಬೆಂಗಳೂರಿನಲ್ಲಿ ವಿಭಿನ್ನ ಶ್ರದ್ದಾಂಜಲಿ

    ಅಗಲಿದ ಗಾನ ಕೋಗಿಲೆಗೆ ವಿಭಿನ್ನ ರೂಪದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಗಿದೆ. ಸಿಮೆಂಟ್‌ನಲ್ಲಿ ಲತಾ ಮಂಗೇಶ್ಕರ್ ಚಿತ್ರ ಬಿಡಿಸಿ ಕಲಾವಿದ ಬಾದಲ್ ನಂಜುಂಡಸ್ವಾಮಿ ವಿಭಿನ್ನ ರೂಪದಲ್ಲಿ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರಿನ ಆರ್​ಟಿ ನಗರದಲ್ಲಿ ಚಿತ್ರ ಬಿಡಿಸಲಾಗಿದೆ. ಕಟ್ಟಡ ನಿರ್ಮಾಣ ಮಾಡಲು ತರಿಸಲಾಗಿದ್ದ ಸಿಮೆಂಟ್ ಬಳಸಿ ರಸ್ತೆ ಬದಿಯ ಸಿಮೆಂಟ್‌ನಲ್ಲಿ ಗಾನ ಕೋಗಿಲೆಯ ಆಕರ್ಷಕ ಚಿತ್ರ ಬಿಡಿಸಲಾಗಿದೆ.

  • 06 Feb 2022 05:07 PM (IST)

    ಲತಾ ಮಂಗೇಶ್ಕರ್​ ನಿಧನಕ್ಕೆ ಇಳಯರಾಜರಿಂದ ಸಂತಾಪ

    ಲತಾ ಮಂಗೇಶ್ಕರ್​ ನಿಧನಕ್ಕೆ ಇಳಯರಾಜ ಸಂತಾಪ ವ್ಯಕ್ತಪಡಿಸಿದ್ದಾರೆ. ಲತಾ ಮಂಗೇಶ್ಕರ್ ಗಂಧರ್ವ ಧ್ವನಿ ಹೊಂದಿದ್ದ ಗಾಯಕಿ. ಲತಾ ಅವರ ಸಾವಿನ ಸುದ್ದಿ ಕೇಳಿ ನನಗೆ ನೋವಾಗಿದೆ. ಲತಾ ಅವರು ಇಲ್ಲ ಅನ್ನುವುದನ್ನು ನಂಬಲು ಆಗುವುದಿಲ್ಲ. ಲತಾ ಮಂಗೇಶ್ಕರ್​​ ಸಾವು ತುಂಬಲಾರದ ದೊಡ್ಡ ನಷ್ಟ. ಅವರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂಗೀತ ನಿರ್ದೇಶಕ ಇಳಯರಾಜ ಸಂತಾಪ ಸೂಚಿಸಿದ್ದಾರೆ.

  • 06 Feb 2022 04:15 PM (IST)

    ಪಶ್ಚಿಮ ಬಂಗಾಳದ ಸಾರ್ವಜನಿಕ ಸ್ಥಳಗಳಲ್ಲಿ ಲತಾ ಮಂಗೇಶ್ಕರ್ ಹಾಡು

    ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಹಾಡುಗಳನ್ನು ಪ್ರತಿ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ಹಾಗೂ ಟ್ರಾಫಿಕ್ ಸಿಗ್ನಲ್​ಗಳಲ್ಲಿ ಹಾಕುವಂತೆ ಪಶ್ಷಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶ ನೀಡಿದ್ದಾರೆ. ಮುಂದಿನ 15 ದಿನಗಳ ಕಾಲ ಹೀಗೆ ಮಾಡುವಂತೆ ಅವರು ತಿಳಿಸಿದ್ದಾರೆ.

  • 06 Feb 2022 04:03 PM (IST)

    ಲತಾ ನಿವಾಸದಿಂದ ಶಿವಾಜಿ ಪಾರ್ಕ್‌ನತ್ತ ಪಾರ್ಥಿವ ಶರೀರ

    ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ (92) ನಿಧನ ಹೊಂದಿದ್ದಾರೆ. ಇದೀಗ ಲತಾ ಮಂಗೇಶ್ಕರ್ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಗಿದೆ. ಲತಾ ನಿವಾಸದಿಂದ ಶಿವಾಜಿ ಪಾರ್ಕ್‌ನತ್ತ ಪಾರ್ಥಿವ ಶರೀರ ಸ್ಥಳಾಂತರಿಸಲಾಗಿದೆ.

  • 06 Feb 2022 04:01 PM (IST)

    ಲತಾ ಮಂಗೇಶ್ಕರ್ ನಿಧನ ಹಿನ್ನೆಲೆ; ಪಶ್ಚಿಮ ಬಂಗಾಳದಲ್ಲಿ ನಾಳೆ ಅರ್ಧ ದಿನ ಸರ್ಕಾರಿ ರಜೆ

    ಭಾರತ ರತ್ನ ಲತಾ ಮಂಗೇಶ್ಕರ್ ನಿಧನರಾದ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ನಾಳೆ ಅರ್ಧ ದಿನ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಲತಾ ಮಂಗೇಶ್ಕರ್ ಗೌರವಾರ್ಥ ರಜೆ ಘೋಷಿಸಲಾಗಿದೆ. ಭಾರತ ರತ್ನ ಲತಾ ಮಂಗೇಶ್ಕರ್ ನಿಧನರಾದ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಕೂಡ ನಾಳೆ ಸರ್ಕಾರಿ ರಜೆ ಘೋಷಿಸಿದೆ. ಲತಾ ಮಂಗೇಶ್ಕರ್ ಗೌರವಾರ್ಥ 1 ದಿನ ರಜೆ ಘೋಷಣೆ ಮಾಡಲಾಗಿದೆ.

  • 06 Feb 2022 03:53 PM (IST)

    ಮಹಾರಾಷ್ಟ್ರದಲ್ಲಿ ನಾಳೆ ಸರ್ಕಾರಿ ರಜೆ ಘೋಷಣೆ

    ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಲು ಮಹಾರಾಷ್ಟ್ರ ಸರ್ಕಾರ ನಾಳೆ (ಫೆಬ್ರವರಿ 7) ಸಾರ್ವಜನಿಕ ರಜೆ ಘೋಷಿಸಿದೆ. ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಹಂಚಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ನಾಳೆ ಮಧ್ಯಾಹ್ನದವರೆಗೆ ರಜೆ ಘೋಷಿಸಿ ಸಿಎಂ ಮಮತಾ ಬ್ಯಾನರ್ಜಿ ಆದೇಶ ಹೊರಡಿಸಿದ್ದಾರೆ.

  • 06 Feb 2022 03:36 PM (IST)

    ಲತಾ ಮಂಗೇಶ್ಕರ್ ಆತ್ಮಕ್ಕೆ ಶಾಂತಿ ಕೋರಿದ ನೇಪಾಳ ಪ್ರಧಾನಿ

    ನೇಪಾಳ ಪ್ರಧಾನಿ ಬಿದ್ಯ ದೇವಿ ಭಂಡಾರಿ ಲತಾ ಮಂಗೇಶ್ಕರ್ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

  • 06 Feb 2022 02:55 PM (IST)

    ಅಂತ್ಯಕ್ರಿಯೆಯ ಸಮಯದ ಕುರಿತು ಮಾಹಿತಿ ನೀಡಿದ ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್

    ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 5.45-6 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯುವ ಶಿವಾಜಿ ಪಾರ್ಕ್ ಅನ್ನು ತಲುಪಲಿದ್ದಾರೆ. 6.15-6.30ಯ ವೇಳೆ ಅಂತಿಮ ವಿಧಿವಿಧಾನಗಳು ನೆರವೇರಲಿವೆ ಎಂದು ಬೃಹನ್​ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಮಾಹಿತಿ ನೀಡಿದ್ದಾರೆ.

  • 06 Feb 2022 02:47 PM (IST)

    ಲತಾ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿರುವ ಬಾಲಿವುಡ್ ಕಲಾವಿದರು

    ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್, ಅನುಪಮ್ ಖೇರ್, ಸಾಹಿತಿ ಜಾವೇದ್ ಅಖ್ತರ್ ಮೊದಲಾದವರು ಲತಾ ಅವರ ನಿವಾಸ ‘ಪ್ರಭುಕುಂಜ್’ಗೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ. ನಟಿ ಶ್ರದ್ಧಾ ಕಪೂರ್, ಸಂಜಯ್ ಲೀಲಾ ಭನ್ಸಾಲಿ ಕೂಡ ನಿವಾಸಕ್ಕೆ ಆಗಮಿಸಿದ್ದಾರೆ.

  • 06 Feb 2022 02:42 PM (IST)

    ಬೀದರ್: ಲತಾ ಮಂಗೇಶ್ಕರ್ ತಂದೆ ಹೆಸರಿನ ಕಾಲೇಜಿನಲ್ಲಿ ಮಡುಗಟ್ಟಿದ ಶೋಕ

    ಬೀದರ್: ಭಾರತ ರತ್ನ ಪುರಸ್ಕೃತೆ ಲತಾ ಮಂಗೇಶ್ಕರ್ ಅವರ ತಂದೆ ದೀನನಾಂಥ ಮಂಗೇಶ್ಕರ್ ಅವರ ಹೆಸರಿನ ಕಾಲೇಜಿನಲ್ಲಿ ದುಃಖ ಮಡುಗಟ್ಟಿದೆ. ಮಾಸ್ಟರ್ ದಿನಾನಾಂಥ ಮಂಗೇಶ್ಕರ್ ಕಾಲೇಜು ಆಡಳಿತ ಮಂಡಳಿ ಶ್ರದ್ಧಾಂಜಲಿ ಸಲ್ಲಿಸಿದೆ. ಬೀದರ್​ನ ಶಹಜಾನಿ ಔರಾದ್ ಗ್ರಾಮದಲ್ಲಿ ಲತಾ ಮಂಗೇಶ್ಕರ್ ತಂದೆಯ ಹೆಸರಿನ ಕಾಲೇಜಿದೆ. 1972-1976 ರಲ್ಲಿ‌ ಲತಾ ಮಂಗೇಶ್ಕರ್ ಎರಡು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಆ ಹಣದಿಂದ ಲತಾ ಮಂಗೇಶ್ಕರ್ ತಂದೆಯ ಹೆಸರಿನಲ್ಲಿ ಕಾಲೇಜು ನಿರ್ಮಾಣ ಮಾಡಲಾಗಿದೆ. 1980ರಲ್ಲಿ ಮಾಸ್ಟರ್ ದಿನಾನಾಂಥ್ ಮಹಾವಿದ್ಯಾಲಯ ಆರಂಭವಾಗಿತ್ತು. ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮಕ್ಕೆ ಆಗಮಿಸಿ ಲತಾ ಮಂಗೇಶ್ಕರ್ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

  • 06 Feb 2022 02:37 PM (IST)

    ಲತಾ ನಿಧನಕ್ಕೆ ಕಂಬನಿ ಮಿಡಿದ ಪ್ರತಿಪಕ್ಷ ನಾಯಕರು

    ಲತಾ ಮಂಗೇಶ್ಕರ್ ನಿಧನಕ್ಕೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದು, ಲತಾ ಮಂಗೇಶ್ಕರ್ ನಿಧನದಿಂದ ಒಂದು ಯುಗ ಅಂತ್ಯವಾಗಿದೆ. ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದರು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಂಬನಿ ಮಿಡಿದಿದ್ದಾರೆ. ಲತಾ ಮಂಗೇಶ್ಕರ್ ನಿಧನಕ್ಕೆ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ದೇಶ ಕಂಡ ಅಪರೂಪದ ಗಾಯಕಿ ಲತಾ ಮಂಗೇಶ್ಕರ್. ಲತಾ ಮಂಗೇಶ್ಕರ್ ನಿಧನದಿಂದ ಚಲನಚಿತ್ರರಂಗ ಬಡವಾಗಿದೆ ಎಂದು ಹೇಳಿದ್ದಾರೆ.

  • 06 Feb 2022 02:02 PM (IST)

    ಲತಾಗೆ ಅಂತಿಮ ನಮನ ಸಲ್ಲಿಸಲಿರುವ ಪ್ರಧಾನಿ ಮೋದಿ

    ಪ್ರಧಾನಿ ಮೋದಿ ಇಂದು (ಭಾನುವಾರ) ಸಂಜೆ 4.15ಕ್ಕೆ ಮುಂಬೈ ತಲುಪಲಿದ್ದಾರೆ. ಲತಾ ಮಂಗೇಶ್ಕರ್​ಗೆ ಅವರು ಅಂತಿಮ ನಮನ ಸಲ್ಲಿಸಲಿದ್ದಾರೆ. ಪ್ರಸ್ತುತ ಲತಾ ಪಾರ್ಥಿವ ಶರೀರವನ್ನು ಅವರ ನಿವಾಸ ‘ಪ್ರಭುಕುಂಜ್​’ನಲ್ಲಿದೆ. ಸಂಜೆ 6.30ರ ನಂತರ ಶಿವಾಜಿ ಪಾರ್ಕ್​ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

  • 06 Feb 2022 01:54 PM (IST)

    ನೀವು ಎಲ್ಲೇ ಹೋದರೂ ಲತಾರನ್ನು ಇಷ್ಟ ಪಡುವ ವ್ಯಕ್ತಿಯನ್ನು ಎದುರುಗೊಳ್ಳುತ್ತೀರಿ: ಪ್ರಧಾನಿ ಮೋದಿ

    ಲತಾ ಮಂಗೇಶ್ಕರ್ ಸ್ವರ್ಗಕ್ಕೆ ತೆರಳಿದ್ದಾರೆ. ನನ್ನಂತಹ ಅನೇಕರಿಗೆ ಅವರ ಪರಿಚಯವಿರುವುದೇ ಒಂದು ಹೆಮ್ಮೆ. ನೀವು ಎಲ್ಲೇ ಹೋದರೂ ಲತಾರನ್ನು ಇಷ್ಟಪಡುವ ವ್ಯಕ್ತಿಯನ್ನು ಎದುರುಗೊಳ್ಳುತ್ತೀರಿ. ಅವರ ಮಾಧುರ್ಯಭರಿತ ಕಂಠ ಎಂದೆಂದಿಗೂ ನಮ್ಮೊಂದಿಗಿರುತ್ತದೆ. ಅವರಿಗೆ ಭಾರವಾದ ಹೃದಯದಿಂದ ಅಂತಿಮ ನಮನಗಳು ಎಂದು ಪ್ರಧಾನಿ ನರೇಂದ್ರ ಮೋದಿ ಜನ್ ಚೌಪಾಲ್​ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

  • 06 Feb 2022 01:49 PM (IST)

    ಲತಾ ನಿಧನಕ್ಕೆ ಬಾಲಿವುಡ್ ಚಿತ್ರರಂಗದ ಕಂಬನಿ

    ಲತಾ ಮಂಗೇಶ್ಕರ್​ ನಿಧನದಿಂದ ಇಡೀ ಬಾಲಿವುಡ್​ನಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಖ್ಯಾತ ಗಾಯಕಿಯ ಆತ್ಮಕ್ಕೆ ಎಲ್ಲರೂ ಶಾಂತಿ ಕೋರುತ್ತಿದ್ದಾರೆ. ಎ.ಆರ್​. ರೆಹಮಾನ್​, ಸೋನು ನಿಗಮ್​, ಕಂಗನಾ ರಣಾವತ್, ಅನಿಲ್​ ಕಪೂರ್​, ಅಕ್ಷಯ್​ ಕುಮಾರ್​, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಲತಾ ಮಂಗೇಶ್ಕರ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    ಪೂರ್ಣ ಬರಹ ಇಲ್ಲಿದೆ: ‘ನಮ್ಮ ಎದೆಯೊಳಗೆ ಲತಾಜೀ ಸದಾ ಜೀವಂತ’: ಲತಾ ಮಂಗೇಶ್ಕರ್​ ನಿಧನಕ್ಕೆ ಬಾಲಿವುಡ್​ ಸಂತಾಪ

  • 06 Feb 2022 01:41 PM (IST)

    ಕನ್ನಡದಲ್ಲೂ ಗಾನಸುಧೆ ಹರಿಸಿದ್ದ ಲತಾ ಮಂಗೇಶ್ಕರ್

  • 06 Feb 2022 01:27 PM (IST)

    ‘ಪ್ರಭುಕುಂಜ್’ ತಲುಪಿದ ಲತಾ ಪಾರ್ಥಿವ ಶರೀರ

    ಲತಾ ಅವರ ಪಾರ್ಥಿವ ಶರೀರವನ್ನು ಅವರ ನಿವಾಸವಾದ ‘ಪ್ರಭುಕುಂಜ್​’ಗೆ ತರಲಾಗಿದೆ. ಇಂದು ಸಂಜೆ ಶಿವಾಜಿ ಪಾರ್ಕ್​ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

    ಶಿವಾಜಿ ಪಾರ್ಕ್​ನಲ್ಲಿ ಅಂತ್ಯಕ್ರಿಯೆಗೆ ಭರದಿಂದ ಸಿದ್ಧತೆ ಸಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ.

  • 06 Feb 2022 01:17 PM (IST)

    ಸಂಗೀತಕ್ಕೆ ಜೀವನ ಮುಡಿಪಾಗಿಟ್ಟ ಲತಾ ಮಂಗೇಶ್ಕರ್ ಅವರ ಇಡೀ ಕುಟುಂಬ

    ಲತಾ ಮಂಗೇಶ್ಕರ್ ಹಿಂದಿ ಮಾತ್ರವಲ್ಲದೆ ಕನ್ನಡ, ಬೆಂಗಾಲಿ, ಕೊಂಕಣಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಅಸ್ಸಾಮೀಸ್, ಗುಜರಾತಿ ಹಾಡುಗಳಿಗೆ ಕೂಡ ಲತಾ ಮಂಗೇಶ್ಕರ್ ಧ್ವನಿಯಾಗಿದ್ದರು. ಬಾಲಿವುಡ್​ನ ಬಹುತೇಕ ಎಲ್ಲ ಸಂಗೀತ ನಿರ್ದೇಶಕರು, ಗಾಯಕರ ಜೊತೆ ಕೆಲಸ ಮಾಡಿದ ಹೆಗ್ಗಳಿಕೆಯೂ ಲತಾ ಮಂಗೇಶ್ಕರ್ ಅವರದ್ದು. ವಿಶೇಷವೆಂದರೆ ಲತಾ ಮಂಗೇಶ್ಕರ್ ಮಾತ್ರವಲ್ಲದೆ ಅವರ ಕುಟುಂಬವೇ ಸಂಗೀತ ಪರಂಪರೆಯಲ್ಲಿ ಬಹಳ ಮುಖ್ಯವಾದ ಸ್ಥಾನ ಪಡೆದಿದೆ. ಲತಾ ಮಂಗೇಶ್ಕರ್ ಅವರ ತಂದೆ, ತಂಗಿಯರು, ತಮ್ಮ ಎಲ್ಲರೂ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಈ ಕುರಿತ ಸಂಪೂರ್ಣ ಬರಹ ಇಲ್ಲಿದೆ: ‘ಲತಾ ಮಂಗೇಶ್ಕರ್ ಅವರ ಇಡೀ ಕುಟುಂಬವೇ ಸಂಗೀತಕ್ಕೆ ಮುಡಿಪಾಗಿತ್ತು’

  • 06 Feb 2022 01:14 PM (IST)

    ಲತಾ ಅಂತಿಮ ದರ್ಶನ ಪಡೆಯಲು ಆಗಮಿಸಿದ ಸಚಿನ್ ತೆಂಡೂಲ್ಕರ್

    ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನ ಪಡೆಯಲು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಲತಾ ಅವರ ಅಂತ್ಯಕ್ರಿಯೆ ಇಂದು ಸಂಜೆ ಶಿವಾಜಿ ಪಾರ್ಕ್​​ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.

  • 06 Feb 2022 01:10 PM (IST)

    ‘ಹೇಮಾ’- ಲತಾ ಮಂಗೇಶ್ಕರ್ ಆಗಿದ್ದು ಹೇಗೆ?

    ಲತಾ ಮಂಗೇಶ್ಕರ್ ಅವರ ಮೊದಲಿನ ಹೆಸರು ಹೇಮಾ. ಅವರಿಗೆ ನಂತರದಲ್ಲಿ ಪೋಷಕರು ಲತಾ ಎಂದು ಮರುನಾಮಕರಣ ಮಾಡಿದರು. ಈ ಕುರಿತ ಬರಹ ಇಲ್ಲಿದೆ: ಹೇಮಾ ಹೋಗಿ ಲತಾ ಆಗಿ ನೀವು ಇಂಥ ಸೂಪರ್ ಹಿಟ್ ಹಾಡುಗಳನ್ನು ಧಾರೆ ಎರೆದಿರಿ

  • 06 Feb 2022 01:04 PM (IST)

    ಲತಾಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ

    ಲತಾ ಜಿ ನಿಧನರಾದರು ಎಂಬ ನೋವಿನ ಸುದ್ದಿ ಕೇಳಿದೆ. ಹಲವು ದಶಕಗಳಿಂದಲೂ ಭಾರತದ ಅತ್ಯಂತ ಪ್ರೀತಿಯ ಧ್ವನಿಯಾಗಿ ಇದ್ದರು. ಲತಾ ಜೀ ಅವರ ಬಂಗಾರದಂಥ ಧ್ವನಿ ಸದಾ ಅಮರ. ಅವರ ಪ್ರತಿಯೊಬ್ಬ ಅಭಿಮಾನಿಯ ಹೃದಯಲ್ಲೂ ಅದು ಪ್ರತಿಧ್ವನಿಸುತ್ತಿರುತ್ತದೆ. ಲತಾ ಮಂಗೇಶ್ಕರ್​ ಅವರ ಕುಟುಂಬಕ್ಕೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ರಾಹುಲ್ ಗಾಂಧಿ ಕಂಬನಿ ಮಿಡಿದಿದ್ದಾರೆ.

    ಭಾರತೀಯ ಸಂಗೀತವೆಂಬ ಉದ್ಯಾನವನ್ನು ಅಲಂಕರಿಸಿದ್ದ ಲತಾ ಮಂಗೇಶ್ಕರ್​ ಜೀ ಇನ್ನಿಲ್ಲವೆಂಬ ಸುದ್ದಿ ಕೇಳಲ್ಪಟ್ಟೆ. ದೇಶದ ಕಲಾ ಪ್ರಪಂಚಕ್ಕೆ ಇದೊಂದು ಬಹುದೊಡ್ಡ, ತುಂಬಲಾರದ ನಷ್ಟ. ಅವರ ಆತ್ಮ ದೇವರಲ್ಲಿ ಲೀನವಾಗಲಿ. ಹಾಗೇ, ಲತಾ ಜೀ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ನೀಡಲಿ ಎಂದು ಪ್ರಿಯಾಂಕಾ ಗಾಂಧಿ ನುಡಿದಿದ್ದಾರೆ.

  • 06 Feb 2022 12:49 PM (IST)

    ಫೋಟೋಗ್ರಫಿ ಬಗ್ಗೆ ವಿಶೇಷ ಒಲವು ಹೊಂದಿದ್ದ ಲತಾ

    ಖ್ಯಾತ ಹಿಂದಿ ಚಲನಚಿತ್ರ ‘ರಂಗ್ ದೇ ಬಸಂತಿ’ ಚಿತ್ರದ ಸಮಯದಲ್ಲಿನ ಫೋಟೋವೊಂದನ್ನು ಚಿನ್ಮಯಿ ಶ್ರೀಪಾದ ಅವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಲತಾ ಮಂಗೇಶ್ಕರ್ ಅವರು ಮೊಬೈಲ್ ಕ್ಯಾಮೆರಾದಲ್ಲಿ ಎಎರ್​ ರೆಹಮಾನ್ ಮತ್ತು ಸಂಗಡಿಗರ ಫೋಟೋ ತೆಗೆಯುತ್ತಿರುವುದು ದಾಖಲಾಗಿದೆ. ಈ ಚಿತ್ರವನ್ನು ಹಂಚಿಕೊಂಡ ಚಿನ್ಮಯಿ, ‘‘ಬಹಳಷ್ಟು ಜನರಿಗೆ ಲತಾ ಅವರ ಫೋಟೋಗ್ರಫಿ ಆಸಕ್ತಿಯ ಬಗ್ಗೆ ತಿಳಿದಿಲ್ಲ. ವೃತ್ತಿಪರ ಕ್ಯಾಮೆರಾಗಳ ಸಂಗ್ರಹವೇ ಅವರಲ್ಲಿತ್ತು. ಅಂದೂ ಕೂಡ ಹೊಸ ಕ್ಯಾಮೆರಾದ ಬಗ್ಗೆ ಅವರು ಮಾತನಾಡುತ್ತಿದ್ದರು’’ ಎಂದು ಭಾವುಕ ಪೋಸ್ಟ್ ಬರೆದಿದ್ದಾರೆ.

  • 06 Feb 2022 12:42 PM (IST)

    ಅನನ್ಯ ಸಾಧಕಿ ಲತಾ ಮಂಗೇಶ್ಕರ್; ಜೀವನಯಾನದ ಮೆಲುಕು

    ತಮ್ಮ ವೃತ್ತಿ ಜೀವನದಲ್ಲಿ ಲತಾ ಅವರು ಜೀವ ತುಂಬಿದ್ದು ಸುಮಾರು 25,000ಕ್ಕೂ ಅಧಿಕ ಹಾಡುಗಳಿಗೆ. ದೇಶ ವಿದೇಶದ ಸುಮಾರು 36ಕ್ಕೂ ಅಧಿಕ ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಗಾಯನದ ಮೋಡಿ ಮಾಡಿದ್ದರು. ಇದೇ ಕಾರಣದಿಂದ ಅವರನ್ನು ಅಭಿಮಾನಿಗಳು ‘ಬಾಲಿವುಡ್ ನೈಟಿಂಗೇಲ್’, ‘ಕ್ವೀನ್ ಆಫ್ ದಿ ಮೆಲೋಡಿ’, ‘ವಾಯ್ಸ್ ಆಫ್ ದಿ ನೇಷನ್’, ‘ವಾಯ್ಸ್ ಆಫ್ ದಿ ಮಿಲೇನಿಯಮ್’ ಮೊದಲಾದ ವೈಶಿಷ್ಟ್ಯಪೂರ್ಣ ಬಿರುದುಗಳಿಂದ ಗುರುತಿಸಿ ಗೌರವಿಸಿದ್ದರು. ಹಿಂದಿ ಹಾಗೂ ಮರಾಠಿ ಚಿತ್ರಗಳ ಗೀತೆಗಳಿಗೆ ಲತಾ ಮಂಗೇಶ್ಕರ್ ಹೆಚ್ಚಾಗಿ ಗಾಯನ, ಸಂಗೀತ ಸಂಯೋಜನೆ ಮಾಡಿದ್ದರು. ಸುಮಾರು ಸಾವಿರಕ್ಕೂ ಅಧಿಕ ಬಾಲಿವುಡ್ ಚಿತ್ರಗಳಲ್ಲಿ ಹಾಡಿದ ಕೀರ್ತಿ ಲತಾ ಅವರದ್ದಾಗಿತ್ತು.

    ಲತಾ ಮಂಗೇಶ್ಕರ್ ಜೀವನಯಾನದ ಮೆಲುಕು ಇಲ್ಲಿದೆ:

    36 ಭಾಷೆಗಳಲ್ಲಿ ಗಾಯನದ ಮೋಡಿ ಮಾಡಿದ್ದ ‘ಬಾಲಿವುಡ್ ನೈಟಿಂಗೇಲ್’; ಅನನ್ಯ ಸಾಧಕಿ ಲತಾ ಮಂಗೇಶ್ಕರ್ ಜೀವನಯಾನದ ಮೆಲುಕು ಇಲ್ಲಿದೆ

  • 06 Feb 2022 12:38 PM (IST)

    ಲತಾ ಹಾಡಿದ ಕನ್ನಡ ಗೀತೆಗಳು ಇವು..

    ಲತಾ ಮಂಗೇಶ್ಕರ್ 36ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದ ಎರಡು ಗೀತೆಗೂ ಅವರು ಧ್ವನಿಯಾಗಿದ್ದಾರೆ. 1967ರಲ್ಲಿ ತೆರೆಕಂಡ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಎರಡು ಗೀತೆಗಳಿಗೆ ಲತಾ ಧ್ವನಿಯಾಗಿದ್ದರು. ಇವುಗಳಲ್ಲಿ ‘ಬೆಳ್ಳನೆ ಬೆಳಗಾಯಿತು’ ಗೀತೆ ಸಖತ್ ಫೇಮಸ್ ಆಗಿತ್ತು…

    ಪೂರ್ಣ ಬರಹ ಇಲ್ಲಿದೆ: ‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್​; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ

  • 06 Feb 2022 12:08 PM (IST)

    ಇಂದು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲಿರುವ ಭಾರತ ಕ್ರಿಕೆಟ್ ಆಟಗಾರರು

    ಲತಾ ಮಂಗೇಶ್ಕರ್ ಅವರಿಗೆ ಗೌರವಾರ್ಥವಾಗಿ ಇಂದು ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ದೇಶದ ಧ್ವಜವು ಅರ್ಧ ಮಟ್ಟದಲ್ಲಿ ಹಾರಾಡಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

  • 06 Feb 2022 12:03 PM (IST)

    ಲತಾ ನಿಧನಕ್ಕೆ ವಿರಾಟ್ ಕೊಹ್ಲಿ ಕಂಬನಿ

    ಖ್ಯಾತ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಲತಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದು, ‘ಎಲ್ಲಾ ನೆನಪುಗಳಿಗೆ ಧನ್ಯವಾದ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಬರೆದಿದ್ದಾರೆ.

  • 06 Feb 2022 11:54 AM (IST)

    ಲತಾ ಅವರ ನಿಧನಕ್ಕೆ ಕಂಬನಿ ಮಿಡಿದ ಸಿಎಂ ಬಸವರಾಜ ಬೊಮ್ಮಾಯಿ

  • 06 Feb 2022 11:52 AM (IST)

    ‘ಸ ರಿ ಗ ಮ ಪ ಲ ತ’- ರಮೇಶ್ ಅರವಿಂದ್ ಭಾವುಕ ನಮನ

    ಕನ್ನಡ ಚಿತ್ರರಂಗದ ನಟ ರಮೇಶ್ ಅರವಿಂದ್ ಗಾಯಕಿ ಲತಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಹಾಡುಗಳಿಂದ ಅವರು ಸಂಗೀತದ ಸ್ವರಗಳು ‘ಸ ರಿ ಗ ಮ ಪ ಲ ತ’ ಎನ್ನುವಂತಿದ್ದರು ಎಂದು ಅವರು ಟ್ವೀಟ್ ಮಾಡಿದ್ದಾರೆ.

  • 06 Feb 2022 11:50 AM (IST)

    ನೆಚ್ಚಿನ ಗಾಯಕಿಯ ನಿಧನಕ್ಕೆ ಕಂಬನಿ ಮಿಡಿದ ಶಿವರಾಜ್​ಕುಮಾರ್

    ಸ್ಯಾಂಡಲ್​ವುಡ್ ನಟ ಶಿವರಾಜ್​​ಕುಮಾರ್ ಲತಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘‘ನನ್ನ ಮೆಚ್ಚಿನ ಧ್ವನಿ. ಹಾಡಿನ ಮೂಲಕ ನಮ್ಮಲ್ಲಿ ಭಾವ ಸ್ಫುರಣೆಯಾಗುವಂತೆ ಮಾಡಿದ ನಿಮಗೆ ಧನ್ಯವಾದಗಳು’’ ಎಂದು ಶಿವರಾಜ್​ಕುಮಾರ್ ಟ್ವೀಟ್ ಮಾಡಿದ್ದಾರೆ.

  • 06 Feb 2022 11:47 AM (IST)

    ‘ಲತಾರಂತಹ ವ್ಯಕ್ತಿಗಳು ಸಾವಿರ ವರ್ಷಕ್ಕೊಮ್ಮೆ ಮಾತ್ರ ಜನ್ಮ ತಳೆಯುತ್ತಾರೆ’

    ಕೆಲವು ವ್ಯಕ್ತಿಗಳು ಸಾವಿರ ವರ್ಷಗಳಿಗೊಮ್ಮೆ ಮಾತ್ರ ಜನ್ಮ ಪಡೆಯುತ್ತಾರೆ. ಲತಾ ಅಂತಹ ವ್ಯಕ್ತಿತ್ವದವರಾಗಿದ್ದರು. ನಮ್ಮ ದೇಶದಲ್ಲಿ ಯಾವ ವ್ಯಕ್ತಿಯೂ ಅವರ ಸಂಗೀತವನ್ನು ಕೇಳದೇ ಉಳಿದಿಲ್ಲ. ಅವರ ಧ್ವನಿಗೆ ಪ್ರತಿಯೊಬ್ಬ ವ್ಯಕ್ತಿಯೂ ಮಾರುಹೋಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಕಂಬನಿ ಮಿಡಿದಿದ್ದಾರೆ.

    ಲತಾ ಅವರ ನಿಧನದಿಂದ ಅಪಾರ ದುಃಖವಾಗಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಂಬನಿ ಮಿಡಿದಿದ್ದಾರೆ.

  • 06 Feb 2022 11:40 AM (IST)

    ಲತಾ ಹಾಡಿರುವ 200ಕ್ಕೂ ಅಧಿಕ ಚಿತ್ರಗಳಲ್ಲಿ ಬಣ್ಣ ಹಚ್ಚಿರುವುದು ನನ್ನ ಅದೃಷ್ಟ: ಸಂಸದೆ ಹೇಮಾ ಮಾಲಿನಿ

    ‘‘ಲತಾ ಮಂಗೇಶ್ಕರ್ ಅಂತಹ ದೊಡ್ಡ ಕಲಾವಿದೆ ಮತ್ತು ವ್ಯಕ್ತಿತ್ವದ ಜತೆಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಹಾಡಿರುವ ಹಾಡಿಗೆ ನಾನು ನಟಿಸಿರುವುದು ನನ್ನ ಅದೃಷ್ಟ. ಅವರಂತೆ ಯಾರಿಗೂ ಹಾಡಲು ಸಾಧ್ಯವಿಲ್ಲ. ಅವರ ನಿಧನ ಬಹಳ ದುಃಖ ತಂದಿದೆ’’ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಕಂಬನಿ ಮಿಡಿದಿದ್ದಾರೆ.

  • 06 Feb 2022 11:11 AM (IST)

    ಇಂದು ಸಂಜೆ ಶಿವಾಜಿ ಪಾರ್ಕ್​ನಲ್ಲಿ ಲತಾ ಅಂತ್ಯಕ್ರಿಯೆ

    ಲತಾಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ಸುಮಾರು 12.30 ರ ವೇಳೆಗೆ ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು. ಇಂದು ಸಂಜೆ 6.30ಕ್ಕೆ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಎಎನ್​ಐ ತಿಳಿಸಿದೆ.

  • 06 Feb 2022 11:09 AM (IST)

    ಕೊವಿಡ್ ನಂತರದ ಆರೋಗ್ಯ ಸಮಸ್ಯೆಗಳು ಲತಾ ಅವರನ್ನು ಬಾಧಿಸಿದವು: ಎನ್​ ಶಾಂತಾರಾಮ್

    ‘ಲತಾ ಅವರು ಕೊವಿಡ್ ಸೋಂಕಿತರಾಗಿ ಆಸ್ಪತ್ರೆಗೆ ಆಗಮಿಸಿದ್ದರು. ಕೊವಿಡ್​ನಿಂದ ಗುಣಮುಖರೂ ಆದರು. ಆದರೆ ಕೊರೊನಾ ನಂತರದ ಆರೋಗ್ಯ ಸಮಸ್ಯೆಗಳಿಂದ ಅವರು ನಿಧನರಾದರು’ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಆಗಿರುವ ಎನ್.ಶಾಂತಾರಾಮ್ ತಿಳಿಸಿದ್ದಾರೆ.

  • 06 Feb 2022 11:06 AM (IST)

    ಶಿವಾಜಿ ಪಾರ್ಕ್​ನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

    ಮುಂಬೈ: ಲತಾ ಅವರ ದೇಹವನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಶಿವಾಜಿ ಪಾರ್ಕ್​ಗೆ ತೆಗೆದುಕೊಂಡು ಹೋಗಲು ಸಿದ್ಧತೆಗಳು ನಡೆಯುತ್ತಿವೆ. ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ.

  • 06 Feb 2022 10:56 AM (IST)

    2001ರಲ್ಲಿ ಭಾರತ ರತ್ನ ಪುರಸ್ಕೃತರಾಗಿದ್ದ ಲತಾ; ವಿಡಿಯೋ ಇಲ್ಲಿದೆ

  • 06 Feb 2022 10:49 AM (IST)

    ದೇಶದಲ್ಲಿ ಎರಡು ದಿನ ಶೋಕಾಚರಣೆ, ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ: ಸರ್ಕಾರದ ಘೋಷಣೆ

    ದೇಶದಲ್ಲಿ ಎರಡು ದಿನ ಶೋಕಾಚರಣೆಯನ್ನು ಸರ್ಕಾರ ಘೋಷಿಸಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.

  • 06 Feb 2022 10:45 AM (IST)

    ಲತಾ ಅವರ ಸಾಧನೆಗೆ ಸರಿಸಾಟಿಯಿಲ್ಲ; ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಸಂತಾಪ

    ಲತಾ ಮಂಗೇಶ್ಕರ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಂತಾಪ ಸೂಚಿಸಿದ್ದಾರೆ. ಅವರ ಸಾಧನೆಗೆ ಸರಿಸಾಟಿ ಇಲ್ಲ ಎಂದು ಅವರು ನುಡಿದಿದ್ದಾರೆ. ಲತಾ ಮಂಗೇಶ್ಕರ್ ಅವರ ನಿಧನದಿಂದ ದೇಶದಲ್ಲಿ ಖಾಲಿತನ ಉಂಟಾಗಿದೆ ಎಂದು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ಲತಾ ಅವರ ನಿಧನದಿಂದ ಸಂಗೀತ ಕ್ಷೇತ್ರಕ್ಕೆ ಆಗಿರುವ ನಷ್ಟವನ್ನು ಭರಿಸಲಾಗದು. ಅವರ ನಿಧನ ನನಗೆ ವೈಯಕ್ತಿಕವಾಗಿ ದೊಡ್ಡ ನಷ್ಟ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಂಬನಿ ಮಿಡಿದಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಸಂತಾಪ ಸೂಚಿಸಿದ್ದು, ಲತಾ ಅವರ ಧ್ವನಿ, ಹಾಡುಗಳನ್ನು ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುತ್ತದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ನುಡಿದಿದ್ದಾರೆ.

Published On - 10:39 am, Sun, 6 February 22

Follow us on