ಎರಡೆರಡು ಲಾಕ್ಡೌನ್ ಕಾರಣದಿಂದಾಗಿ ಅನೇಕ ಸಿನಿಮಾಗಳ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು. ಆದರೆ ಕೊರೊನಾ ಹಾವಳಿ ಕಮ್ಮಿ ಆದ ಬಳಿಕ ಚಿತ್ರರಂಗದ ಪರಿಸ್ಥಿತಿ ಸುಧಾರಿಸಿತು. ಚಿತ್ರಮಂದಿರದಲ್ಲಿ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ನೀಡಿದ ಬಳಿಕ ಹಲವು ಸಿನಿಮಾಗಳು ಬಿಡುಗಡೆ ಆಗಲು ಆರಂಭಿಸಿದವು. ಕನ್ನಡ ಮಾತ್ರವಲ್ಲದೇ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವರ್ಷವೇ ತೆರೆಕಾಣಬೇಕು ಎಂದು ಹಠಹಿಡಿದು ಬರುತ್ತಿರುವ ಚಿತ್ರಗಳು ಹಲವು. ಹಾಗಾಗಿ ಬಹುನಿರೀಕ್ಷಿತ 10ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅನೇಕ ಸ್ಟಾರ್ ಹೀರೋ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿವೆ. ಅವುಗಳನ್ನು ಸ್ವಾಗತಿಸಲು ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಡಿಸೆಂಬರ್ನಲ್ಲಿ ಧೂಳೆಬ್ಬಿಸಲಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್..
ನಿರೀಕ್ಷೆ ಹುಟ್ಟಿಸಿದ ಕನ್ನಡ ಸಿನಿಮಾಗಳು
ಡಿ.3ರಂದು ಕನ್ನಡದ ಬಹುನಿರೀಕ್ಷಿತ ‘ಮದಗಜ’ ಸಿನಿಮಾ ತೆರೆಕಾಣಲಿದೆ. ಈ ಚಿತ್ರದಲ್ಲಿ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಜೋಡಿಯಾಗಿ ಅಭಿನಯಿಸಿದ್ದಾರೆ. ‘ಅಯೋಗ್ಯ’ ಖ್ಯಾತಿಯ ಮಹೇಶ್ ನಿರ್ದೇಶನ ಮಾಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಅವರು ಬಂಡವಾಳ ಹೂಡಿದ್ದಾರೆ. ಅತ್ಯುತ್ತಮ ಗುಣಮಟ್ಟದ ಮೇಕಿಂಗ್ನಿಂದಾಗಿ ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ.
ಡಿ.10 ಕೂಡ ಸ್ಯಾಂಡಲ್ವುಡ್ ಪಾಲಿಗೆ ಬಿಗ್ ಡೇ. ಅಂದು ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’ ಹಾಗೂ ರವಿಚಂದ್ರನ್ ಅಭಿನಯದ ‘ದೃಶ್ಯ 2’ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ‘ಅವತಾರ ಪುರುಷ’ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಆಶಿಕಾ ರಂಗನಾಥ್ ಮತ್ತು ಶರಣ್ ಜತೆಗೆ ಅನೇಕ ಅನುಭವಿ ಕಲಾವಿದರು ನಟಿಸಿದ್ದಾರೆ.
‘ದೃಶ್ಯ’ ಚಿತ್ರದ ಮುಂದುವರಿದ ಭಾಗವಾಗಿ ‘ದೃಶ್ಯ 2’ ಮೂಡಿಬಂದಿದೆ. ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಈ ಬಾರಿ ಏನೆಲ್ಲ ಹೊಸ ತಂತ್ರ ರೂಪಿಸಿದ್ದಾನೆ ಎಂಬುದನ್ನು ತಿಳಿಸಲು ಫ್ಯಾನ್ಸ್ ಕಾತರರಾಗಿದ್ದಾರೆ. ಈ ಚಿತ್ರಕ್ಕೆ ಪಿ. ವಾಸು ನಿರ್ದೇಶನ ಮಾಡಿದ್ದಾರೆ. ಹಾಗಾಗಿ ‘ದೃಶ್ಯ 2’ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಡಿ.24ಕ್ಕೆ ಡಾಲಿ ಧನಂಜಯ ನಟನೆಯ ‘ಬಡವ ರಾಸ್ಕಲ್’, ನಿಖಿಲ್ ಕುಮಾರ್ ಅಭಿನಯದ ‘ರೈಡರ್’, ಡಿ.31ಕ್ಕೆ ‘ಲವ್ ಯೂ ರಚ್ಚು’ ಮತ್ತು ‘ಒಂಭತ್ತನೇ ದಿಕ್ಕು’ ರಿಲೀಸ್ ಆಗುತ್ತಿದೆ.
ಅಬ್ಬರಿಸಲಿರುವ ‘ಪುಷ್ಪ’ ಚಿತ್ರ:
ತೆಲುಗಿನಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಸಿನಿಮಾ ಡಿ.17ರಂದು ತೆರೆಕಾಣಲಿದೆ. ಆ ಚಿತ್ರ ಕನ್ನಡಕ್ಕೂ ಡಬ್ ಆಗಿದ್ದು, ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಹಾಡುಗಳು ಸಖತ್ ಸೌಂಡು ಮಾಡಿವೆ. ಡಿಫರೆಂಟ್ ಗೆಟಪ್ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ವಿಶೇಷ ಹಾಡಿನಲ್ಲಿ ಸಮಂತಾ ಡ್ಯಾನ್ಸ್ ಮಾಡಲಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಪುಷ್ಪ’ ಮೇಲೆ ನಿರೀಕ್ಷೆ ಹೆಚ್ಚಿದೆ. ಸಾಯಿ ಪಲ್ಲವಿ ಮತ್ತು ನಾನಿ ನಟನೆಯ ‘ಶಾಮ್ ಸಿಂಗ್ ರಾಯ್’ ಚಿತ್ರ ಡಿ.24ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ.
ಹಾಲಿವುಡ್ನಲ್ಲಿ ‘ಸ್ಪೈಡರ್ ಮ್ಯಾನ್’ ಹವಾ:
ಜಗತ್ತಿನಾದ್ಯಂತ ನಿರೀಕ್ಷೆ ಸೃಷ್ಟಿ ಮಾಡಿರುವ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಸಿನಿಮಾ ಕೂಡ ಡಿ.17ರಂದು ಅದ್ದೂರಿಯಾಗಿ ತೆರೆಕಾಣುತ್ತಿದೆ. ಈ ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಟಾಮ್ ಹಾಲೆಂಡ್ ಜತೆಗೆ ಟಾಬಿ ಮಗ್ವಾಯರ್ ಮತ್ತು ಆ್ಯಂಡ್ರೀವ್ ಗಾರ್ಫೀಲ್ಡ್ ಕೂಡ ನಟಿಸಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ಪ್ರಿಯರಿಗಾಗಿ ‘83’ ಆಗಮನ:
ಕ್ರಿಕೆಟ್ ಮತ್ತು ಸಿನಿಮಾ ಪ್ರಿಯರು ‘83’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 1983ರಲ್ಲಿ ಭಾರತದ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಕಬೀರ್ ಖಾನ್ ನಿರ್ದೇಶನ ಮಾಡಿದ್ದು, ಕನ್ನಡದಲ್ಲಿ ಈ ಚಿತ್ರವನ್ನು ಕಿಚ್ಚ ಸುದೀಪ್ ಅರ್ಪಿಸುತ್ತಿದ್ದಾರೆ. ‘83’ ಚಿತ್ರ ಡಿ.24ರಂದು ರಿಲೀಸ್ ಆಗುತ್ತಿದೆ.
ಇದನ್ನೂ ಓದಿ:
ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್ ಸಿರೀಸ್
ಕ್ರಿಕೆಟ್, ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್; ‘83’ ಟೀಮ್ ಜತೆ ಸೇರಿಕೊಂಡ ಕಿಚ್ಚ ಸುದೀಪ್