ಸಿನಿಮಾ ಸೀಕ್ರೆಟ್ ಬಯಲು ಮಾಡಿದ್ದಕ್ಕೆ ಮಹೇಶ್ ಬಾಬುಗೆ ದಂಡ ಹಾಕಿದ ರಾಜಮೌಳಿ
‘ಎಸ್ಎಸ್ಎಂಬಿ 29’ ಸಿನಿಮಾದಿಂದ ಹೊಸ ಅಪ್ಡೇಟ್ ನೀಡಲು ರಾಜಮೌಳಿ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಚಿತ್ರತಂಡದ ಸದಸ್ಯರು ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಸಂಭಾಷಣೆ ನಡೆಸಿದ್ದಾರೆ. ಅತಿಯಾಗಿ ವ್ಯಂಗ್ಯ ಮಾಡಿದ ಮಹೇಶ್ ಬಾಬು ಅವರಿಗೆ ನಿರ್ದೇಶಕ ರಾಜಮೌಳಿ ದಂಡ ಹಾಕಲು ನಿರ್ಧರಿಸಿದ್ದಾರೆ.

ನಿರ್ದೇಶಕ ರಾಜಮೌಳಿ ಮತ್ತು ನಟ ಮಹೇಶ್ ಬಾಬು (Mahesh Babu) ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ‘ಎಸ್ಎಸ್ಎಂಬಿ 29’ (SSMB 29) ಎಂದು ಕರೆಯಲಾಗುತ್ತಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಎಲ್ಲರಿಗೂ ಗೊತ್ತಿರುವಂತೆ ರಾಜಮೌಳಿ ಅವರ ಸಿನಿಮಾ ಕೆಲಸಗಳು ಬಹಳ ತಡ ಆಗುತ್ತವೆ. ಅದರ ನಡುವೆ ಸಿನಿಮಾದ ಸೀಕ್ರೆಟ್ ಕಾಪಾಡಿಕೊಳ್ಳುವುದು ಸುಲಭ ಅಲ್ಲ. ಈಗ ನಟ ಮಹೇಶ್ ಬಾಬು ಅವರು ಈ ಸಿನಿಮಾದ ಕೆಲವು ಸೀಕ್ರೆಟ್ಗಳನ್ನು ಬಯಲು ಮಾಡಿದ್ದಾರೆ. ಅದಕ್ಕಾಗಿ ರಾಜಮೌಳಿ (SS Rajamouli) ಅವರು ದಂಡ ಹಾಕಿದ್ದಾರೆ!
‘ಎಸ್ಎಸ್ಎಂಬಿ 29’ ಸಿನಿಮಾದ ಬಗ್ಗೆ ನವೆಂಬರ್ನಲ್ಲಿ ಅಪ್ಡೇಟ್ ನೀಡುವುದಾಗಿ ಚಿತ್ರತಂಡ ತಿಳಿಸಿತ್ತು. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಅದೇ ವಿಚಾರ ಇಟ್ಟುಕೊಂಡು ಮಹೇಶ್ ಬಾಬು ಅವರು ಟ್ವಿಟರ್ನಲ್ಲಿ ರಾಜಮೌಳಿಯ ಕಾಲು ಎಳೆದಿದ್ದಾರೆ. ‘ಈಗಾಗಲೇ ನವೆಂಬರ್ ಬಂದಿದೆ’ ಎಂದು ಮಹೇಶ್ ಬಾಬು ಟ್ವೀಟ್ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಜಮೌಳಿ ಅವರು ‘ಈ ತಿಂಗಳು ನೀವು ಯಾವ ಸಿನಿಮಾದ ವಿಮರ್ಶೆ ಮಾಡಲು ಪ್ಲ್ಯಾನ್ ಹಾಕಿಕೊಂಡಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ಟ್ವಿಟರ್ನಲ್ಲಿ ಅವರಿಬ್ಬರ ಮಾತುಕತೆ ಮುಂದುವರಿಯಿತು. ‘ಈಗತಾನೆ ಶುರುವಾಗಿದೆ. ನಿಧಾನವಾಗಿ ಒಂದೊಂದಾಗಿಯೇ ಬಹಿರಂಗ ಮಾಡುತ್ತೇವೆ’ ಎಂದು ರಾಜಮೌಳಿ ಹೇಳಿದರು. ‘ಎಷ್ಟು ನಿಧಾನ ಸರ್? 2030ಕ್ಕೆ ಶುರು ಮಾಡೋಣವೇ? ನಿಮ್ಮ ಗಮನಕ್ಕೆ.. ಜನವರಿಯಿಂದ ಪ್ರಿಯಾಂಕಾ ಚೋಪ್ರಾ ಅವರು ಹೈದರಾಬಾದ್ನನ ಪ್ರತಿ ರಸ್ತೆಯನ್ನೂ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತೋರಿಸುತ್ತಿದ್ದಾರೆ’ ಎಂದು ಮಹೇಶ್ ಬಾಬು ಹೇಳಿದರು.
It’s November already @ssrajamouli 👀
— Mahesh Babu (@urstrulyMahesh) November 1, 2025
‘ನೀವು ಯಾಕೆ ಪ್ರಿಯಾಂಕಾ ಚೋಪ್ರಾ ಹೆಸರು ಬಹಿರಂಗ ಮಾಡಿದ್ರಿ? ನೀವು ಸರ್ಪೈಸ್ ಹಾಳು ಮಾಡಿದ್ರಿ’ ಎಂದು ರಾಜಮೌಳಿ ಹೇಳಿದರು. ‘ಸರ್ಪ್ರೈಸಾ? ಅಂದರೆ ಪೃಥ್ವಿರಾಜ್ ಸುಕುಮಾರನ್ ಇರುವುದು ಕೂಡ ಸರ್ಪೈಸ್ ಎಂಬುದು ನಿಮ್ಮ ಮಾತಿನ ಅರ್ಥವೇ’ ಎಂದು ಹೇಳುವ ಮೂಲಕ ಮಹೇಶ್ ಬಾಬು ಅವರು ಅದನ್ನೂ ಬಾಯಿ ಬಿಟ್ಟರು. ಹಾಗಂತ ಈ ಯಾವ ಹೆಸರುಗಳು ಕೂಡ ಗುಟ್ಟಾಗಿ ಉಳಿದಿರಲಿಲ್ಲ. ಆದರೆ ಚಿತ್ರತಂಡದವರು ಅಧಿಕೃತವಾಗಿ ಹೇಳಿರಲಿಲ್ಲ ಅಷ್ಟೇ.
Okay, deal. But penalty for excess sarcasm. 🤨 I’ve decided to delay the release of your first look. 😡😡😡😡😡
— rajamouli ss (@ssrajamouli) November 1, 2025
‘ನೀವು ಈಗ ಎಲ್ಲವನ್ನೂ ಹಾಳು ಮಾಡಿದ್ರಿ’ ಎಂದು ರಾಜಮೌಳಿ ಕೋಪ ಮಾಡಿಕೊಂಡರು. ಬಳಿಕ ಮಹೇಶ್ ಬಾಬು ಇನ್ನಷ್ಟು ವ್ಯಂಗ್ಯ ಮಾಡಿದರು. ‘ಎಲ್ಲರಿಗೂ ಗೊತ್ತಿರುವುದನ್ನೇ ನಾಳೆ ಬಹಿರಂಗ ಮಾಡಿ. ಅದನ್ನು ಕೂಡ ನೀವು ಸರ್ಪೈಸ್ ಎಂದು ಹೇಳಿಕೊಳ್ಳಬಹುದು’ ಎಂದು ಮಹೇಶ್ ಬಾಬು ಹೇಳಿದರು. ಇಷ್ಟೆಲ್ಲ ವ್ಯಂಗ್ಯ ಮಾಡಿದ್ದಕ್ಕೆ ಮಹೇಶ್ ಬಾಬುಗೆ ರಾಜಮೌಳಿ ದಂಡ ವಿಧಿಸಿದರು.
ಇದನ್ನೂ ಓದಿ: 120 ದೇಶಗಳಲ್ಲಿ ಬಿಡುಗಡೆ ಆಗಲಿದೆ ಮಹೇಶ್ ಬಾಬು-ರಾಜಮೌಳಿ ಸಿನಿಮಾ
‘ಓಕೆ ಡೀಲ್.. ಆದ್ರೆ ಅತಿಯಾಗಿ ವ್ಯಂಗ್ಯ ಮಾಡಿದ್ದಕ್ಕೆ ದಂಡ ಹಾಕುತ್ತೇನೆ. ನಿಮ್ಮ ಫಸ್ಟ್ ಲುಕ್ ಬಿಡುಗಡೆಯನ್ನು ವಿಳಂಬ ಮಾಡಲು ನಾನು ನಿರ್ಧರಿಸಿದ್ದೇನೆ’ ಎಂದು ರಾಜಮೌಳಿ ಅವರು ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಮಾತುಕಥೆ ಸಖತ್ ಫನ್ನಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




