120 ದೇಶಗಳಲ್ಲಿ ಬಿಡುಗಡೆ ಆಗಲಿದೆ ಮಹೇಶ್ ಬಾಬು-ರಾಜಮೌಳಿ ಸಿನಿಮಾ
Mahesh Babu-SS Rajamouli: ಮಹೇಶ್ ಬಾಬು ನಟಿಸಿ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಸಿನಿಮಾ ವಿಶ್ವ ಮಟ್ಟದಲ್ಲಿ ಅತ್ಯಂತ ನಿರೀಕ್ಷಿತ ಸಿನಿಮಾ. ಈ ಸಿನಿಮಾ ಮೂಲಕ ಭಾರತೀಯ ಸಿನಿಮಾ ಅನ್ನು ವಿಶ್ವಕ್ಕೆ ತಲುಪಿಸುವ ಪ್ರಯತ್ನವನ್ನು ರಾಜಮೌಳಿ ಮಾಡುತ್ತಿದ್ದಾರೆ. 120ಕ್ಕೂ ಹೆಚ್ಚು ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ರಾಜಮೌಳಿ (Rajamouli) ನಿರ್ದೇಶಿಸಿ ಮಹೇಶ್ ಬಾಬು (Mahesh Babu) ನಟಿಸಿರುವ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ವಿಶ್ವ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿರುವ ಸಿನಿಮಾಗಳಲ್ಲಿ ಇದು ಸಹ ಒಂದಾಗಿದ್ದು, ಈ ಸಿನಿಮಾ ಈ ವರೆಗಿನ ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಚಿತ್ರೀಕರಣ ಹೈದರಾಬಾದ್, ರಾಜಸ್ಥಾನಗಳ ಬಳಿಕ ಈಗ ಕೀನ್ಯಾನಲ್ಲಿ ನಡೆಯುತ್ತಿದ್ದು, ಇತ್ತೀಚೆಗಷ್ಟೆ ಕೀನ್ಯಾ ಅಧ್ಯಕ್ಷರನ್ನು ಸಹ ರಾಜಮೌಳಿ ಭೇಟಿ ಮಾಡಿದರು.
ಕೀನ್ಯಾದ ನಿಜ ಅರಣ್ಯದಲ್ಲಿ, ವನ್ಯ ಜೀವಿಗಳ ನಡುವೆ ರಾಜಮೌಳಿ, ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ಸಹ ನಟಿಸುತ್ತಿದ್ದು ಅವರೂ ಸಹ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಕೀನ್ಯಾದ ಶೂಟಿಂಗ್ ಶೆಡ್ಯೂಲ್ ಅನ್ನು ರಾಜಮೌಳಿ ಮತ್ತು ತಂಡ ಮುಗಿಸಿದೆ ಎನ್ನಲಾಗುತ್ತಿದೆ. ಅದರ ಬೆನ್ನಲ್ಲೆ ರಾಜಮೌಳಿ ಹಾಗೂ ಅವರ ಪುತ್ರ ಕಾರ್ತಿಕೇಯ ಅವರುಗಳು ಭೇಟಿ ಮಾಡಿದ್ದಾರೆ.
ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಭಾರತೀಯ ಭಾಷೆಗಳಲ್ಲಿ ಮಾತ್ರವೇ ಅಲ್ಲದೆ ಇಂಗ್ಲೀಷ್ನಲ್ಲಿಯೂ ನಿರ್ಮಾಣಗೊಳ್ಳಲಿದೆ ಹಾಗೂ ವಿಶ್ವದಾದ್ಯಂತ 120ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಅಲ್ಲಿಗೆ ವಿಶ್ವದ ಮುಕ್ಕಾಲುವಾಸಿ ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುವುದು ಬಹುತೇಕ ಖಾತ್ರಿ ಆಗಿದೆ.
ಇದನ್ನೂ ಓದಿ: ಬಾಲಿವುಡ್ ಮೇಲೆ ಮುನಿಸಿಕೊಂಡ ರಾಜಮೌಳಿ? ಕಾರಣ ಏನು?
‘ಬಾಹುಬಲಿ’, ‘ಆರ್ಆರ್ಆರ್’ ಸಿನಿಮಾಗಳು ಹಲವಾರು ಪ್ರಮುಖ ದೇಶಗಳಲ್ಲಿ ಬಿಡುಗಡೆ ಆಗಿದ್ದವು. ಈಗ ಮಹೇಶ್ ಬಾಬು-ರಾಜಮೌಳಿ ಕಾಂಬಿನೇಷನ್ನ ಸಿನಿಮಾ ಭಾರತೀಯ ಸಿನಿಮಾದ ರೀಚ್ ಅನ್ನು ಇನ್ನಷ್ಟು ವಿಸ್ತಾರ ಮಾಡಲು ಮುಂದಾಗಿದೆ. ‘ಬಾಹುಬಲಿ’ ಮೂಲಕ ಪ್ಯಾನ್ ಇಂಡಿಯಾ, ‘ಆರ್ಆರ್ಆರ್’ ಮೂಲಕ ಪ್ಯಾನ್ ವರ್ಲ್ಡ್ಗೆ ಸಿನಿಮಾ ಅನ್ನು ರೀಚ್ ಮಾಡಿಸಿದ್ದ ರಾಜಮೌಳಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇದರಿಂದ ಭಾರತೀಯ ಸಿನಿಮಾಗಳಿಗೆ ವಿಶ್ವ ಮಟ್ಟದಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.
ಮಹೇಶ್ ಬಾಬು ನಟಿಸಿ, ರಾಜಮೌಳಿ ನಿರ್ದೇಶನ ಮಾಡುತ್ತಿರುವ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಕೆಲ ಹೆಸರಾಂತ ಹಾಲಿವುಡ್ ನಟರೂ ಸಹ ಇದ್ದಾರೆ. ಕೆಲವು ಹೆಸರಾಂತ ಹಾಲಿವುಡ್ ತಂತ್ರಜ್ಞರು ಸಹ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಸಿನಿಮಾವು ಅಡ್ವೇಂಚರ್ ಆಕ್ಷನ್ ಥ್ರಿಲ್ಲರ್ ಜಾನರ್ಗೆ ಸೇರಿದ ಸಿನಿಮಾ ಆಗಿದೆ. ‘ಇಂಡಿಯಾನಾ ಜೋನ್ಸ್‘, ‘ಮಿಷನ್ ಇಂಪಾಸಿಬಲ್’ ಮಾದರಿಯಲ್ಲಿ ನಾಯಕ ಒಂದು ಮಿಷನ್ಗಾಗಿ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸುವ ಅಲ್ಲಿ ಎದುರಾಗುವ ಸಂಕಷ್ಟಗಳನ್ನು ಬುದ್ಧಿಬಲ, ತೋಳ್ಬಲಗಳಿಂದ ಎದುರಿಸಿ ಗೆದ್ದು ಬರುವ ಕತೆ ಸಿನಿಮಾನಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




