ಬಡ ಕುಟುಂಬದ ಮೆಡಿಕಲ್ ವಿದ್ಯಾರ್ಥಿನಿಗೆ ಆರ್ಥಿಕ ಸಹಾಯ ಮಾಡಿದ ಮಹೇಶ್ ಬಾಬು ಮಗಳು
ಮಹೇಶ್ ಬಾಬು ರೀತಿ ಅವರ ಮಕ್ಕಳು ಸಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ತಮ್ಮ ಜನ್ಮದಿನದ ಪ್ರಯುಕ್ತ ಸಿತಾರಾ ಘಟ್ಟಮನೇನಿ ಅವರು ಬಡ ಕುಟುಂಬದ ಮೆಡಿಕಲ್ ವಿದ್ಯಾರ್ಥಿನಿಗೆ ಸ್ಟೆಥಸ್ಕೋಪ್, ಲ್ಯಾಪ್ಟಾಪ್ ಹಾಗೂ 1.25 ಲಕ್ಷ ರೂಪಾಯಿ ನೀಡಿದ್ದಾರೆ. ಪೂರ್ತಿ ಶಿಕ್ಷಣದ ಖರ್ಚನ್ನು ‘ದಿ ಮಹೇಶ್ ಬಾಬು ಫೌಂಡೇಷನ್’ ಮೂಲಕ ಭರಿಸಲಾಗುತ್ತಿದೆ.
ನಟ ಮಹೇಶ್ ಬಾಬು ಅವರು ಸಿನಿಮಾಗಳಿಂದ ಮಾತ್ರವಲ್ಲದೇ ಸಮಾಜಮುಖ ಕಾರ್ಯಗಳ ಮೂಲಕವೂ ಜನರಿಗೆ ಹತ್ತಿರ ಆಗಿದ್ದಾರೆ. ಪ್ರತಿ ಸಿನಿಮಾಗೆ ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುವ ಅವರು ಆ ಹಣದ ಒಂದಷ್ಟು ಭಾಗವನ್ನು ಸಮಾಜಸೇವೆಗೆ ಮೀಸಲಿಡುತ್ತಾರೆ. ‘ದಿ ಮಹೇಶ್ ಬಾಬು ಫೌಂಡೇಷನ್’ ಮೂಲಕ ಅನೇಕ ಜನರಿಗೆ ಸಹಾಯ ಮಾಡಲಾಗುತ್ತಿದೆ. ಮಹೇಶ್ ಬಾಬು ಅವರ ಮಕ್ಕಳು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ ಅವರು ಈಗ ಮೆಡಿಕಲ್ ವಿದ್ಯಾರ್ಥಿಗೆ ಆರ್ಥಿಕ ಸಹಾಯ ಮಾಡಿ ಸುದ್ದಿ ಆಗಿದ್ದಾರೆ.
ಜುಲೈ 20ರಂದು ಸಿತಾರಾ ಘಟ್ಟಮನೇನಿ ಅವರು ಹುಟ್ಟುಹಬ್ಬ ಆಚರಿಸಿಕೊಂಡರು. ಕೇವಲ ಅದ್ದೂರಿಯಾಗಿ ಆಚರಣೆ ಮಾಡಿ ಅವರು ಸುಮ್ಮನಾಗಿಲ್ಲ. ಅದರ ಜೊತೆಗೆ ಜನಮೆಚ್ಚುವ ಒಂದು ಕಾರ್ಯವನ್ನು ಮಾಡಿದ್ದಾರೆ. ಮೆಡಿಕಲ್ ಓದುತ್ತಿರುವ ಬಡ ಕುಟುಂಬದ ನವ್ಯಶ್ರೀ ಎಂಬ ಯುವತಿಗೆ ಸಿತಾರಾ ಸಹಾಯ ಮಾಡಿದ್ದಾರೆ. 1,25,000 ರೂಪಾಯಿಯ ಚೆಕ್ ನೀಡಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಮಗಳು ಸಿತಾರಾ, ಪತ್ನಿ ನಮ್ರತಾ ಜತೆ ಬಂದು ಅನಂತ್ ಅಂಬಾನಿ ಮದುವೆಗೆ ಸಾಕ್ಷಿಯಾದ ಮಹೇಶ್ ಬಾಬು
ನವ್ಯಶ್ರೀ ಅವರು ನೀಟ್ ರ‍್ಯಾಂಕ್ ಪಡೆದಿದ್ದು, ಡಾಕ್ಟರ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇವರಿಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ಆರ್ಥಿಕ ನೆರವು ನೀಡುವುದರ ಜೊತೆ ಲ್ಯಾಪ್ಟಾಪ್ ಮತ್ತು ಸ್ಟೆಥಸ್ಕೋಪ್ ಉಡುಗೊರೆಯಾಗಿ ನೀಡಿದ್ದಾರೆ ಸಿತಾರಾ. ಅಷ್ಟೇ, ಅಲ್ಲದೇ, ನವ್ಯಶ್ರೀ ಅವರ ಸಂಪೂರ್ಣ ಮೆಡಿಕಲ್ ವಿದ್ಯಾಭ್ಯಾಸದ ಖರ್ಚಿನ ಜವಾಬ್ದಾರಿಯನ್ನು ‘ದಿ ಮಹೇಶ್ ಬಾಬು ಫೌಂಡೇಷನ್’ ವಹಿಸಿಕೊಂಡಿದೆ.
View this post on Instagram
ಮಹೇಶ್ ಬಾಬು ಅವರ ಕುಟುಂಬದ ಈ ಸಮಾಜಮುಖಿ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸಿತಾರಾ ಘಟ್ಟಮನೇನಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಅವರು ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭಕ್ಕೆ ತೆರಳಿದ್ದರು. ಅಲ್ಲಿ ಅನೇಕ ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸಿತಾರಾ ಅವರನ್ನು 20 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.