ನಾಯಕಿ ಮುಖಕ್ಕೆ ಏನಾಯ್ತು, ಆಘಾತಕಾರಿ ವಿಷಯ ಹಂಚಿಕೊಂಡ ನಟಿ
ತೆಲುಗಿನ ಜನಪ್ರಿಯ ನಟಿ ಮಂಚು ಲಕ್ಷ್ಮಿ ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು, ವಿಡಿಯೋದಲ್ಲಿ ಅವರ ತುಟಿಗಳಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಅಷ್ಟಕ್ಕೂ ನಟಿಗೆ ಏನಾಗಿತ್ತು? ಈಗ ಹೇಗಿದ್ದಾರೆ ಮಂಚು ಲಕ್ಷ್ಮಿ?

ತೆಲುಗು ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಮಂಚು ಲಕ್ಷ್ಮಿ ಇತ್ತಿಚೆಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅವರ ಆ ವಿಡಿಯೋ ನೋಡಿ ಅಭಿಮಾನಿಗಳು ಗಾಬರಿಯಾಗಿದ್ದರು. ಮಂಚು ಲಕ್ಷ್ಮಿ ಬಾಯಿ, ತುಟಿಗೆ ಬ್ಯಾಂಡೇಜ್ ಹಾಕಲಾಗಿತ್ತು. ನಟಿಗೆ ಒದಗಿದ ಸ್ಥಿತಿ ಕಂಡು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಸ್ವತಃ ಮಂಚು ಲಕ್ಷ್ಮಿ ಅವರೇ ತಮಗೆ ಏನಾಗಿತ್ತು ಎಂಬುದನ್ನು ಹೇಳಿಕೊಂಡಿದ್ದರು. ಅಂದಹಾಗೆ ಮಂಚು ಲಕ್ಷ್ಮಿ ಈಗ ಆರೋಗ್ಯವಾಗಿದ್ದಾರೆ. ಆದರೆ ಅವರಿಗೆ ಆಗಿದ್ದ ಸಮಸ್ಯೆ ತುಸು ಅಪರೂಪವಾದುದು.
ಇತ್ತೀಚೆಗೆ ನಟಿ ಮಂಚು ಲಕ್ಷ್ಮಿ ಅಮೆರಿಕಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಪ್ರವಾಸಕ್ಕೆ ಹೋದಾಗ ಅಲ್ಲಿ ಅವರಿಗೆ ಜ್ವರ ಕಾಣಿಸಿಕೊಂಡಿತಂತೆ. ಜ್ವರವೇ ಅಲ್ಲವೆ ಎಂದು ಎರಡು ಜ್ವರದ ಮಾತ್ರೆಗಳನ್ನು ಅವರು ತೆಗೆದುಕೊಂಡಿದ್ದಾರೆ. ಕೂಡಲೇ ಅವರ ತುಟಿಗಳು ಊದಿಕೊಳ್ಳಲು ಆರಂಭಿಸಿವೆ. ಬಳಿಕ ಮಂಚು ಲಕ್ಷ್ಮಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಊದಿಕೊಂಡ ತುಟಿ ಸಾಮಾನ್ಯ ಸ್ಥಿತಿಗೆ ಮರಳಲು ಎರಡು ದಿನಗಳು ತೆಗೆದುಕೊಂಡಿತಂತೆ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗಳನ್ನು ತೆಗೆದುಕೊಂಡ ಬಳಿಕ ಅವರು ಈಗ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ:ರಿಯಾಗೆ ಬೆಂಬಲಕ್ಕೆ ವಿದ್ಯಾಬಾಲನ್ ಮತ್ತು ಲಕ್ಷ್ಮಿಮಂಚು
ಮಂಚು ಲಕ್ಷ್ಮಿ ಹೇಳಿರುವಂತೆ, ಅವರಿಗೆ ಡ್ರಗ್ ಅಲರ್ಜಿ ಆಗಿತ್ತಂತೆ. ಸಾಮಾನ್ಯ ಜ್ವರವೆಂದು ತೆಗೆದುಕೊಂಡ ಮಾತ್ರೆಗಳು ಅವರ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ಕಾರಣ ಅವರಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಸೂಕ್ತ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದೇ ಹೋಗಿದ್ದಿದ್ದರೆ ಇಡೀ ದೇಹಕ್ಕೆ ಅಲರ್ಜಿ ವ್ಯಾಪಿಸುವ ಅಪಾಯ ಇತ್ತೆಂದು ನಟಿ ಹೇಳಿಕೊಂಡಿದ್ದಾರೆ. ಮುಂದುವರೆದು, ನಮ್ಮ ದೇಹದ ಬಗ್ಗೆ ನಮಗೆ ಚೆನ್ನಾಗಿ ಅರಿವಿರುವುದು ಬಹಳ ಮುಖ್ಯ, ನಮ್ಮ ದೇಹಕ್ಕೆ ಯಾವುದು ಸರಿ ಹೊಂದುತ್ತದೆ? ಯಾವುದು ಸರಿ ಹೊಂದುವುದಿಲ್ಲ? ಯಾವ ವಸ್ತುವಿಗೆ ನಮ್ಮ ದೇಹ ಹೇಗೆ ರಿಯಾಕ್ಟ್ ಮಾಡುತ್ತದೆ ಎಂಬುದರ ಅರಿವು ನಮಗೆ ಇರಬೇಕು ಎಂದು ನಟಿ ಮಂಚು ಲಕ್ಷ್ಮಿ ಹೇಳಿಕೊಂಡಿದ್ದಾರೆ.
ಮಂಚು ಲಕ್ಷ್ಮಿ, ತೆಲುಗಿನ ಜನಪ್ರಿಯ ಹಿರಿಯ ನಟ ಮತ್ತು ರಾಜಕಾರಣಿ ಮೋಹನ್ ಬಾಬು ಅವರ ಪುತ್ರಿ. ತೆಲುಗಿನ ಹಲವು ಸಿನಿಮಾಗಳಲ್ಲಿ ಮಂಚು ಲಕ್ಷ್ಮಿ ನಟಿಸಿದ್ದಾರೆ. ಇದೀಗ ಅವಕಾಶಗಳನ್ನು ಅರಸಿ ಬಾಲಿವುಡ್ನತ್ತ ಬಂದಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವಕಾಶಗಳ ಹುಡುಕಾಟದಲ್ಲಿ ಮಂಚು ಲಕ್ಷ್ಮಿ ಇದ್ದು, ಕೆಲವು ವೆಬ್ ಸರಣಿಗಳಲ್ಲಿ ಮಂಚು ಲಕ್ಷ್ಮಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ತೆಲುಗು ಚಿತ್ರರಂಗದ ಜನಪ್ರಿಯ ನಾಯಕ ನಟರಾದ ಮಂಚು ವಿಷ್ಣು ಹಾಗೂ ಮಂಚು ಮನೋಜ್ ಅವರ ಸಹೋದರಿ ಮಂಚು ಲಕ್ಷ್ಮಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




