‘ಕಣ್ಣಪ್ಪ’ 2ನೇ ಟೀಸರ್ ಬಿಡುಗಡೆ: ಇದು ಆಕ್ಷನ್ ಪ್ರಧಾನ ಸಿನಿಮಾ
Kannappa Teaser: ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾದ ಎರಡನೇ ಟೀಸರ್ ಬಿಡುಗಡೆ ಆಗಿದೆ. ಪೌರಾಣಿಕ ಪಾತ್ರವಾದ ಬೇಡರ ಕಣ್ಣಪ್ಪನ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಈಗ ಬಿಡುಗಡೆ ಆಗಿರುವ ಟೀಸರ್ ನೋಡಿದರೆ ‘ಕಣ್ಣಪ್ಪ’ ಭಕ್ತಿ ಪ್ರಧಾನ ಸಿನಿಮಾ ಅನಿಸುತ್ತಿಲ್ಲ ಬದಲಿಗೆ ಆಕ್ಷನ್ ಪ್ರಧಾನ ಸಿನಿಮಾ ಎನಿಸುತ್ತಿದೆ.

ಕನ್ನಡ ಚಿತ್ರರಂಗದ ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ‘ಬೇಡರ ಕಣ್ಣಪ್ಪ’ ಅತ್ಯುತ್ತಮ ಎನ್ನಬಹುದಾದ ಸಿನಿಮಾ. ‘ಬೇಡರ ಕಣ್ಣಪ್ಪ’ ಸಿನಿಮಾ ಬಿಡುಗಡೆ ಆಗಿ 70 ವರ್ಷಗಳಾಗಿದ್ದರೂ ಸಹ ಈಗಲೂ ಅದರ ಹಾಡುಗಳುವ ಜನಪ್ರಿಯ. ಇದೀಗ ಇದೇ ‘ಬೇಡರ ಕಣ್ಣಪ್ಪ’ ಕತೆಯನ್ನು ತೆಲುಗಿನಲ್ಲಿ ‘ಕಣ್ಣಪ್ಪ’ ಹೆಸರಿನಲ್ಲಿ ಸಿನಿಮಾ ಮಾಡಲಾಗುತ್ತಿದ್ದು, ಸಿನಿಮಾದ ಎರಡನೇ ಟೀಸರ್ ಬಿಡುಗಡೆ ಇಂದು (ಮಾರ್ಚ್ 1) ಬಿಡುಗಡೆ ಆಗಿದೆ.
‘ಕಣ್ಣಪ್ಪ’ ಸಿನಿಮಾದ ಹೊಸ ಟೀಸರ್ ನೋಡಿದರೆ ಇದು ಭಕ್ತಿ ಪ್ರಧಾನ ಸಿನಿಮಾ ಅಲ್ಲ ಬದಲಿಗೆ ಇದು ಆಕ್ಷನ್ ಪ್ರಧಾನ ಸಿನಿಮಾ ಅನಿಸುತ್ತಿದೆ. ಸಿನಿಮಾದಲ್ಲಿ ನಾಯಕ ಕಣ್ಣಪ್ಪ, ಬಾಹುಬಲಿ ರೀತಿ ಶತ್ರುಗಳನ್ನು ಹೊಡೆದು ಬಿಸಾಡುತ್ತಿದ್ದಾನೆ. ಗುಂಪುಗಳ ನಡುವೆ ದೊಡ್ಡ ಯುದ್ಧಗಳೇ ನಡೆಯುತ್ತಿವೆ. ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಂತೂ ಭಕ್ತಿರಸವುಳ್ಳ ದೃಶ್ಯಗಳು ಹುಡುಕಿದರೂ ಸಿಗುತ್ತಿಲ್ಲ. ಸಿನಿಮಾವನ್ನು ಆಕ್ಷನ್ ಪ್ರಧಾನ ಮಾಡಲೇಬೇಕು ಎಂಬ ಉದ್ದೇಶ ನಿರ್ದೇಶಕರಿಗೆ ಇದ್ದಂತಿದೆ.
ಸಿನಿಮಾದ ಟೀಸರ್ನ ಬಹುತೇಕ ಭಾಗ ಆಕ್ಷನ್ ದೃಶ್ಯಗಳಿಂದಲೇ ತುಂಬಿವೆ. ಸಿನಿಮಾದ ನಾಯಕ ಮಂಚು ವಿಷ್ಣು ಮಾಸ್ ಹೀರೋಗಳ ರೀತಿ ಭರ್ಜರಿ ಡೈಲಾಗ್ಗಳನ್ನು ಹೊಡೆಯುತ್ತಾ ಫೈಟಿಂಗ್ಗಳಲ್ಲಿ ನಿರತರಾಗಿರುವ ದೃಶ್ಯಗಳಿವೆ. ಅದರ ಜೊತೆಗೆ ಕೆಲವು ರೊಮ್ಯಾಂಟಿಕ್ ದೃಶ್ಯಗಳೂ ಸಹ ಇವೆ. ಸಿನಿಮಾದಲ್ಲಿ ನಟರಾದ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದು, ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ಎಲ್ಲರ ಪಾತ್ರದ ಝಲಕ್ ತೋರಿಸಲಾಗಿದೆ. ಕನ್ನಡದ ನಟ ದೇವರಾಜ್ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು ಟೀಸರ್ನಲ್ಲಿ ಅವರ ದೃಶ್ಯದ ತುಣುಕು ಸಹ ಇದೆ.
ಇದನ್ನೂ ಓದಿ:ವಿಡಿಯೋ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ: ಮಂಚು ವಿಷ್ಣು ಎಚ್ಚರಿಕೆ
‘ಕಣ್ಣಪ್ಪ’ ಸಿನಿಮಾವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನಟ ಮಂಚು ವಿಷ್ಣು ತಂದೆ ಮೋಹನ್ ಬಾಬು. ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರ್ಮಾಣ ಮಾಡಲಾಗಿದೆ. ಸಿನಿಮಾದ ಪ್ರಚಾರವನ್ನು ಸಹ ಜೋರಾಗಿಯೆ ಮಾಡಲಾಗುತ್ತಿದೆ. ಹೊಂಬಾಳೆ ಫಿಲಮ್ಸ್ನವರು ಕರ್ನಾಟಕದಲ್ಲಿ ಈ ಸಿನಿಮಾದ ವಿತರಣೆ ಮಾಡಲಿದ್ದಾರೆ. ಸಿನಿಮಾ, ಮಹಾಶಿವರಾತ್ರಿಗೆ ಬಿಡುಗಡೆ ಆಗಬೇಕಿತ್ತು ಆದರೆ ತುಸು ತಡವಾಗಿದ್ದು ಏಪ್ರಿಲ್ 25 ಕ್ಕೆ ಸಿನಿಮಾ ತೆರೆಗೆ ಬರಲಿದೆ.
ನಟ ಮಂಚು ವಿಷ್ಣು ವೃತ್ತಿ ಬದುಕಿಗೆ ಇದು ಮಹತ್ತರ ಸಿನಿಮಾ ಆಗಿರಲಿದ್ದು, ಸತತ ಪ್ಲಾಫ್ ಸಿನಿಮಾಗಳನ್ನೇ ನೀಡುತ್ತಾ ಬರುತ್ತಿರುವ ಮಂಚು ವಿಷ್ಣು, ಭಾರಿ ನಿರೀಕ್ಷೆ ಇರಿಸಿ ಭಾರಿ ದೊಡ್ಡ ಬಜೆಟ್ನಲ್ಲಿ ನಿರ್ಮಿಸಿರುವ ಸಿನಿಮಾ ಇದಾಗಿದೆ. ಹಾಗಾಗಿ ಪ್ರಚಾರಕ್ಕೆ ಅತಿಯಾದ ಒತ್ತನ್ನು ನೀಡಲಾಗುತ್ತಿದೆ. ಕೆಲ ದಿನದ ಹಿಂದೆಯಷ್ಟೆ ನಟ ಅಕ್ಷಯ್ ಕುಮಾರ್ ಅವರ ಜೊತೆಗೆ ಮುಂಬೈನಲ್ಲಿ ಪ್ರಚಾರ ಮಾಡಿದ್ದಾರೆ ಮಂಚು ವಿಷ್ಣು ಮತ್ತು ತಂಡ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ