‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್ ರಿಲೀಸ್ಗೂ ಮುನ್ನ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು. ಟ್ರೇಲರ್ ನೋಡಿದ ಅನೇಕರು ‘ಈ ವೆಬ್ ಸೀರಿಸ್ನಲ್ಲಿ ತಮಿಳರನ್ನು ಉಗ್ರರನ್ನಾಗಿ ಬಿಂಬಿಸಲಾಗಿದೆ’ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಅಲ್ಲದೆ, ಶೇಮ್ ಆನ್ ಯೂ ಸಮಂತಾ ಎಂದು ಕಿಡಿಕಾರಿದ್ದರು. ವೆಬ್ ಸೀರಿಸ್ ಉದ್ದಗಲಕ್ಕೂ ಆ ರೀತಿ ಯಾವುದೇ ವಿಚಾರ ಉಲ್ಲೇಖವಿಲ್ಲ. ತುಂಬಾನೇ ಬ್ಯಾಲೆನ್ಸಿಂಗ್ ಆಗಿ ಕಥೆಯನ್ನು ಹೆಣೆದ ಖ್ಯಾತಿ ನಿರ್ದೇಶಕರಾದ ರಾಜ್ ಮತ್ತು ಡಿಕೆಗೆ ಸಲ್ಲುತ್ತದೆ.
ಶ್ರೀಕಾಂತ್ ತಿವಾರಿ (ಮನೋಜ್ ಬಾಜ್ಪೇಯಿ) T.A.S.C ಕೆಲಸ ತೊರೆದು ಐಟಿ ಜಾಬ್ ಸೇರುತ್ತಾನೆ. ಪತ್ನಿ (ಪ್ರಿಯಾಮಣಿ) ಹಾಗೂ ಮಕ್ಕಳ ಜತೆ ಹೆಚ್ಚು ಸಮಯ ಕಳೆಯಬೇಕು ಎನ್ನುವುದು ಆತನ ಉದ್ದೇಶ. ದೇಶ ಕಾಯುವ ಶ್ರೀಕಾಂತ್ಗೆ ಐಟಿ ಕೆಲಸ ಬೇಸರ ತರಿಸಿಬಿಡುತ್ತದೆ. ಇದೇ ಸಮಯಕ್ಕೆ ಮಿಷನ್ ಒಂದು ಶುರುವಾಗುತ್ತದೆ. ಐಟಿ ಕೆಲಸಕ್ಕೆ ರಾಜೀನಾಮೆ ನೀಡುವ ಶ್ರೀಕಾಂತ್ ಮತ್ತೆ T.A.S.C ಸೇರಿಕೊಳ್ಳುತ್ತಾನೆ. ಅಲ್ಲಿಂದ ಕಥೆ ತೆರೆದುಕೊಳ್ಳುತ್ತದೆ.
ಮೊದಲ ಸೀಸನ್ ಹಿಟ್ ಆದ್ದರಿಂದ 2ನೇ ಸೀಸನ್ ಮೇಲೆ ವೀಕ್ಷಕರು ಹೆಚ್ಚಿನ ನಿರೀಕ್ಷೆ ಹೊಂದಿದ್ದರು. ಆ ನಿರೀಕ್ಷೆಯನ್ನು ರಾಜ್ ಮತ್ತು ಡಿಕೆ ಹುಸಿ ಮಾಡಿಲ್ಲ. 9 ಎಪಿಸೋಡ್ಗಳು ವೀಕ್ಷಕರನ್ನು ನೋಡಿಸಿಕೊಂಡು ಹೋಗುತ್ತದೆ. ಈ ಮೂಲಕ ರಾಜ್ ಮತ್ತು ಡಿಕೆ ಸೀಸನ್ 2 ಮೂಲಕ ಮತ್ತೆ ಯಶಸ್ಸು ಕಂಡಿದ್ದಾರೆ. ಮೊದಲ ಸೀಸನ್ನಲ್ಲಿ ಬರುವ ಕೆಲ ಪ್ರಮುಖ ಪಾತ್ರಗಳು ಸೀಸನ್ 2ನಲ್ಲೂ ಮುಂದುವರಿದಿವೆ. ಜತೆಗೆ ಲಿಂಕ್ ಕೂಡ. ಪಾಕ್ನ ಐಎಸ್ಐ ವಿಚಾರವನ್ನು ಪ್ರಸ್ತಾಪ ಮಾಡೋಕೆ ನಿರ್ದೇಶಕರು ಮರೆತಿಲ್ಲ.
ಸೀಸನ್ 2 ರಿಲೀಸ್ಗೂ ಮೊದಲೇ ಸಮಂತಾ ಅಕ್ಕಿನೇನಿ ಸಾಕಷ್ಟು ಸುದ್ದಿಯಲ್ಲಿದ್ದರು. ಅವರು ರಾಜಲಕ್ಷ್ಮಿ ಚಂದ್ರನ್ (ರಾಜಿ) ಆಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಬಾರಿ ಗ್ಲಾಮರ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಂತಾ ಈ ಬಾರಿ ಅವತಾರ ಬದಲಿಸಿದ್ದಾರೆ. ಚೆನ್ನೈನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ರಾಜಿ (ಸಮಂತಾ) ತುಂಬಾನೇ ಮುಗ್ಧೆ. ಸಾರ್ವಜನಿಕವಾಗಿಯೇ ಲೈಂಗಿಕ ದೌರ್ಜನ್ಯ ನಡೆದರೂ ಆಕೆ ವಿರೋಧಿಸುವುದಿಲ್ಲ. ಆದರೆ, ಕೆಲವೇ ನಿಮಿಷಗಳಲ್ಲಿ ಚಿತ್ರಣ ಬದಲಾಗುತ್ತದೆ. ರಾಜಿಯ ನಿಜವಾದ ಮುಖ ಬಯಲಾಗುತ್ತದೆ.
ಈ ರಾಜಿಗೆ ಒಂದು ಹಿನ್ನೆಲೆ ಇದೆ. ಈಕೆ ರೆಬೆಲ್ ಗುಂಪಿನ ಪ್ರಮುಖ ಸದಸ್ಯೆ. ದೇಶದ ಪ್ರಧಾನಿಯ ಹತ್ಯೆ ಮಾಡೋಕೆ ರೂಪಿಸುವ ಸಂಚಿನಲ್ಲಿ ರಾಜಿ ಪ್ರಮುಖ ರೂವಾರಿ. ಈ ರಾಜಿ ಕೆಲವು ದೃಶ್ಯಗಳಲ್ಲಿ ನಿಮ್ಮನ್ನು ಬೆಚ್ಚಿಬೀಳಿಸೋದು ಗ್ಯಾರಂಟಿ. ಅವಳಿಗೆ ಕೊಲೆ ಮಾಡೋದು ನೀರು ಕುಡಿದಷ್ಟೇ ಸುಲಭ. ವೆಬ್ ಸೀರಿಸ್ನಲ್ಲಿ ಅವರು ಒಂದು ಕ್ಷಣವೂ ನಗುವುದಿಲ್ಲ! ಸಂತೋಷ ಎಂಬುದು ರಾಜಿ ಮುಖದಲ್ಲಿ ಹುಡುಕಿದರೂ ನಿಮಗೆ ಸಿಗೋದಿಲ್ಲ. ಸಮಂತಾ ಈ ಪಾತ್ರವನ್ನು ಒಪ್ಪಿಕೊಂಡು, ಅದಕ್ಕೆ ತಕ್ಕ ನ್ಯಾಯ ಒದಗಿಸಿದ್ದು ನಿಜಕ್ಕೂ ಗ್ರೇಟ್ ಎನ್ನಬಹುದು. ಹಿಂದೆ ಅವರು ಮಾಡಿದ್ದ ಪಾತ್ರಕ್ಕಿಂತ ಇದು ತುಂಬಾನೇ ಭಿನ್ನವಾಗಿದೆ.
ಇನ್ನು, ಶ್ರೀಕಾಂತ್ (ಮನೋಜ್ ಬಾಜ್ಪೇಯಿ) T.A.S.C. ಹಿರಿಯ ಅಧಿಕಾರಿ. ಇಡೀ ವೆಬ್ ಸೀರಿಸ್ನಲ್ಲಿ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರ ನಟನೆ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಸೀಸನ್ ಒಂದರಲ್ಲಿ ಕುಟುಂಬಕ್ಕೆ ಹೆಚ್ಚು ಗಮನ ನೀಡದ ಶ್ರೀಕಾಂತ್, ಸೀಸನ್ 2ನಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಅವರ ನಟನೆ ಬಗ್ಗೆ ಹೇಳಿದರೆ ನಿಮಗೆ ಕಲ್ಪನೆಗೆ ಬರುವುದು ಸ್ವಲ್ಪ ಕಷ್ಟವಾಗಬಹುದು. ಹೀಗಾಗಿ, ನೋಡಿಯೇ ಕಣ್ತುಂಬಿಕೊಳ್ಳಬೇಕಷ್ಟೆ. ಕಾಮಿಡಿಯನ್ನು ತುಂಬಾನೇ ಅದ್ಭುತವಾಗಿ ತೋರಿಸಲಾಗಿದೆ. ಎಲ್ಟಿಟಿಇ ವಿಚಾರವನ್ನು ನಿರ್ದೇಶಕರು ಎಲ್ಲಿಯೂ ನೇರವಾಗಿ ಉಲ್ಲೇಖಿಸದೇ ಎಚ್ಚರಿಕೆಯಿಂದ ಕಥೆ ಹೆಣೆದಿರುವುದು ಸ್ಪಷ್ಟವಾಗುತ್ತದೆ.
ಇನ್ನು, ವೆಬ್ ಸೀರಿಸ್ನಲ್ಲಿ ಬುರವ ಪ್ರತಿ ಪಾತ್ರಗಳು ಅನವಶ್ಯಕ ಎನಿಸುವುದಿಲ್ಲ. ಜೆಕೆ (ಶರಿಬ್ ಹಶ್ಮಿ) ಸುಚಿತ್ರಾ (ಪ್ರಿಯಾಮಣಿ), ಸಾಜಿದ್ (ಶಹಾಬ್ ಅಲಿ), ಮೇಜರ್ ಸಮೀರ್ (ದರ್ಶನ್ ಕುಮಾರ್) ಸೇರಿ ಅನೇಕ ಪಾತ್ರಗಳು ಮುಖ್ಯ ಎನಿಸುತ್ತವೆ. ಇನ್ನು, ಹಿನ್ನೆಲೆ ಸಂಗೀತ, ವೆಬ್ ಸೀರಿಸ್ ಕಟ್ಟಿಕೊಟ್ಟ ರೀತಿ ವೀಕ್ಷಕರಿಗೆ ಇಷ್ಟವಾಗಲಿದೆ. ಕೆಲ ದೃಶ್ಯಗಳು ನಿಮ್ಮನ್ನು ಕೌತಕದ ತುದಿಗೆ ಕೊಂಡಯ್ಯಬಹುದು. ವೆಬ್ ಸೀರಿಸ್ನಲ್ಲಿ ನಿಮಗೆ ನಗುವುದಕ್ಕೂ ಸಾಕಷ್ಟು ದೃಶ್ಯಗಳನ್ನು ಪೊಣಿಸಲಾಗಿದೆ. ಸುಮೀತ್ ಕೋಟಿಲಾ ಎಡಿಟಿಂಗ್ ಮೆಚ್ಚುವಂತದ್ದು. ಕೆಮರೂನ್ ಎರಿಕ್ ಛಾಯಾಗ್ರಹಣದಲ್ಲಿ ಹೆಚ್ಚು ಅಂಕ ಗಿಟ್ಟಿಸಿಕೊಂಡಿದ್ದಾರೆ. ಕಥೆ ಕೇವಲ ಚೆನ್ನೈಗೆ ಸೀಮಿತವಾಗಿರದೇ ಆಗಾಗ ಮುಂಬೈ, ಶ್ರೀಲಂಕಾ, ಲಂಡನ್, ಫ್ರಾನ್ಸ್ಗೂ ಹೋಗುತ್ತದೆ.
ವಿಶ್ವಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಇದು ಚೀನಾದವರ ಕುತಂತ್ರ ಎನ್ನುವ ಸುದ್ದಿಯೂ ಇದೆ. ಇದೇ ವಿಚಾರ ಇಟ್ಟುಕೊಂಡು ದಿ ಫ್ಯಾಮಿಲಿ ಮ್ಯಾನ್ 3 ಸೀಸನ್ ಬರುವ ಸೂಚನೆ ಸಿಕ್ಕಿದೆ. ಸೀಸನ್ 2 ಕೊನೆಯಲ್ಲಿ ಹೀಗೊಂದು ಸೂಚನೆ ಸಿಗುತ್ತದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: ಹೇಗಿದೆ ‘ದಿ ಫ್ಯಾಮಿಲಿ ಮ್ಯಾನ್ 2’? ಮೊದಲ ದಿನವೇ ವೆಬ್ ಸಿರೀಸ್ ನೋಡಿ ಫ್ಯಾನ್ಸ್ ಹೇಳಿದ್ದು ಒಂದೇ ಮಾತು