ಕಲಾ ನಿರ್ದೇಶಕ ರಾಜು ಸಾಪ್ತೆ ನೇಣಿಗೆ ಶರಣು; ಸಾಯುವ ಮುನ್ನ ವಿಡಿಯೋದಲ್ಲಿ ಹೇಳಿದ್ದೇನು?
Raju Sapte: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಕೇಶ್ ಮೌರ್ಯ ಎಂಬ ವ್ಯಕ್ತಿಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪ್ರಸ್ತುತ ಈ ಬಗ್ಗೆ ತನಿಖೆ ಜಾರಿಯಲ್ಲಿದೆ.

ಹಲವು ಸಿನಿಮಾಗಳಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಾಜು ಸಾಪ್ತೆ ಅವರು ನೇಣಿಗೆ ಶರಣಾಗಿದ್ದಾರೆ. ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಹಾಕಿಕೊಳ್ಳುವುದಕ್ಕೂ ಮುನ್ನ ಅವರು ಒಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ತಮ್ಮ ಸಾವಿಗೆ ಕಾರಣ ಏನೆಂದು ವಿವರಿಸಿದ್ದಾರೆ. ಆತ್ಯಹತ್ಯೆ ಮಾಡಿಕೊಳ್ಳಲು ಓರ್ವ ವ್ಯಕ್ತಿ ನೀಡಿದ ಕಿರುಕುಳವೇ ಕಾರಣ ಎಂದು ತಿಳಿಸಿರುವ ಅವರು, ಆ ವ್ಯಕ್ತಿ ಹೆಸರನ್ನು ಕೂಡ ಬಹಿರಂಗ ಪಡಿಸಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಂತರ ಅವರು ನೇಣು ಬಿಗಿದುಕೊಂಡಿದ್ದಾರೆ.
ಹಲವು ಮರಾಠಿ ಸಿನಿಮಾ ಹಾಗೂ ಕಿರುತೆರೆ ಕಾರ್ಯಕ್ರಮಗಳಿಗೆ ಕಲಾ ನಿರ್ದೇಶಕರಾಗಿ ರಾಜು ಸಾಪ್ತೆ ಕೆಲಸ ಮಾಡಿದ್ದರು. ‘ನಾನು ಯಾವುದೇ ಅಮಲಿನಿಂದ ಈ ಮಾತು ಹೇಳುತ್ತಿಲ್ಲ. ಕಾರ್ಮಿಕ ಸಂಘಟನೆಯ ರಾಕೇಶ್ ಮೌರ್ಯ ಎಂಬ ವ್ಯಕ್ತಿ ನನಗೆ ಕಳೆದ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದಾನೆ. ಎಲ್ಲ ಕಾರ್ಮಿಕರಿಗೆ ನಾನು ಸಂಬಳ ನೀಡಿದ್ದೇನೆ. ಆದರೆ ಕಾರ್ಮಿಕರನ್ನು ನನ್ನ ವಿರುದ್ಧ ರಾಕೇಶ್ ಮೌರ್ಯ ಎತ್ತಿಕಟ್ಟುತ್ತಿದ್ದಾನೆ. ಇದರಿಂದ ನನ್ನ ಹಲವು ಪ್ರಾಜೆಕ್ಟ್ಗಳು ನಿಲ್ಲುವಂತಾಗಿವೆ’ ಎಂದು ರಾಜು ಸಾಪ್ತೆ ಹೇಳಿದ್ದಾರೆ.
‘ಈಗ ನನ್ನ ಬಳಿ 5 ಪ್ರಾಜೆಕ್ಟ್ಗಳಿವೆ. ಆದರೆ ರಾಕೇಶ್ ಮೌರ್ಯ ನನಗೆ ಕಿರುಕುಳ ನೀಡುತ್ತಿರುವುದರಿಂದ ನಾನು ಯಾವುದೇ ಕೆಲಸ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ನಾನು ಇತ್ತೀಚೆಗೆ ಒಂದು ಪ್ರಾಜೆಕ್ಟ್ನಿಂದ ಹೊರಬರಬೇಕಾಯಿತು. ಈ ಕಿರುಕುಳದ ವಿರುದ್ಧ ಹೋರಾಡಲು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ವಿಡಿಯೋದಲ್ಲಿ ರಾಜು ಸಾಪ್ತೆ ವಿವರಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಕೇಶ್ ಮೌರ್ಯ ಎಂಬ ವ್ಯಕ್ತಿಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪ್ರಸ್ತುತ ಈ ಬಗ್ಗೆ ತನಿಖೆ ಜಾರಿಯಲ್ಲಿದೆ. ರಾಜು ಸಾಪ್ತೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಡೆತ್ ನೋಟ್ ವಿಡಿಯೋ ವೈರಲ್ ಆಗಿದೆ. ಏನೇ ಕಷ್ಟ ಇದ್ದರೂ ಅವರು ಈ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಜನರ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನಲ್ಲಿ 12 ವರ್ಷದ ಬಾಲಕ ಆತ್ಮಹತ್ಯೆಗೆ ಶರಣು; ಡೆತ್ ನೋಟ್ನಲ್ಲಿ ಮತ್ತೊಬ್ಬ ಬಾಲಕ ಕಾರಣವೆಂದು ಉಲ್ಲೇಖ
‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ನಟಿಸಿದ್ದ ಈ ನಟ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ವಿಚಿತ್ರ